ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರೀಯತೆ, ಹಿಂದುತ್ವದ ಹೆಸರಲ್ಲಿ ಹೊಸ ಮೌಢ್ಯ’

ಬೆಳಗಾವಿ: ಸ್ಮಶಾನದಲ್ಲಿ ನಡೆದ ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆಯಲ್ಲಿ ಚಿತ್ರನಟ ಪ್ರಕಾಶ್‌ ರೈ ಕಟು ಟೀಕೆ
Last Updated 7 ಡಿಸೆಂಬರ್ 2017, 6:14 IST
ಅಕ್ಷರ ಗಾತ್ರ

ಬೆಳಗಾವಿ: ‘ರಾಷ್ಟ್ರೀಯತೆ ಮತ್ತು ಹಿಂದುತ್ವ ಎರಡೂ ಒಂದೇ ಎನ್ನುವ ಮೌಢ್ಯವನ್ನು ಬೆಳೆಸಲು ಕೇಂದ್ರ ಸಚಿವರೊಬ್ಬರು ಯತ್ನಿಸುತ್ತಿದ್ದಾರೆ’ ಎಂದು ಚಿತ್ರನಟ ಪ್ರಕಾಶ್‌ ರೈ ಟೀಕಿಸಿದರು.

ಮಾನವ ಬಂಧುತ್ವ ವೇದಿಕೆ ವತಿಯಿಂದ ಇಲ್ಲಿನ ಸದಾಶಿವನಗರದ ಸ್ಮಶಾನದಲ್ಲಿ ಬುಧವಾರ ಆಯೋಜಿಸಿದ್ದ ಮೌಢ್ಯ ವಿರೋಧಿ ಸಂಕಲ್ಪ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಷ್ಟು ದಿನಗಳ ಕಾಲ ಬಡತನ, ಅನಕ್ಷರತೆ, ಜಾತಿ, ಧರ್ಮಗಳ ಹೆಸರಿನಲ್ಲಿ ಮೌಢ್ಯವನ್ನು ಬಿತ್ತಲಾಗಿತ್ತು. ಆದರೆ, ಈಗ ರಾಷ್ಟ್ರೀಯತೆ ಹಾಗೂ ಹಿಂದುತ್ವದ ಹೆಸರಿನಲ್ಲಿ ಮೌಢ್ಯ ಬಿತ್ತಲು ಹೊರಟಿದ್ದಾರೆ. ವೈವಿಧ್ಯದ ಸಮಾಜವನ್ನು ತುಳಿದು, ಒಂದು ಧರ್ಮದ ಸಮಾಜವನ್ನು ಕಟ್ಟಲು ಹೊರಟಿದ್ದಾರೆ’ ಎಂದು ಅವರು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೆಸರನ್ನು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು.

‘ನಮ್ಮ ಮುಗ್ಧತೆಯನ್ನು ಬಳಸಿಕೊಂಡು ಇವರು ಹತ್ತಾರು ಸುಳ್ಳು ಹೇಳುತ್ತಾರೆ. ಅದರ ಮೂಲಕ ಮೌಢ್ಯವನ್ನು ಬೆಳೆಸುತ್ತಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ವಿಚಾರಧಾರೆಗಳನ್ನು ಅನುಸರಿಸುವ ಮೂಲಕ ಇವರಿಗೆ ಉತ್ತರ ನೀಡಬೇಕಾಗಿದೆ. ಅಂಬೇಡ್ಕರ್‌ ಅವರ ಚಿಂತನೆಗಳನ್ನು ರಕ್ತಬೀಜಾಸುರನ ರೀತಿಯಲ್ಲಿ ಲಕ್ಷಾಂತರ ಜನರು ಅಳವಡಿಸಿಕೊಳ್ಳಬೇಕಾಗಿದೆ’ ಎಂದರು.

ನನಗೂ ಬೆದರಿಕೆ ಇದೆ: ‘ಮುಕ್ತವಾಗಿ ನಾನು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವುದನ್ನು ಸಹಿಸದ ಕೆಲವು ಶಕ್ತಿಗಳು ಬೆದರಿಕೆಯೊಡ್ಡುತ್ತಿವೆ. ನನ್ನನ್ನು ಹಿಂಬಾಲಿಸುತ್ತಿದ್ದಾರೆ. ನಾನು ಜನರ ಮಧ್ಯದಲ್ಲಿದ್ದೇನೆ. ನನಗೇನೂ ಮಾಡಲಿಕ್ಕಾಗದು. ಅವರು ಕಳ್ಳರು, ಅಂಜುಬುರುಕರು, ಹೇಡಿಗಳು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನವದೆಹಲಿಯ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ತಲೆತಲಾಂತರದಿಂದ ದನಿಯಡಗಿದ್ದ ಸಮುದಾಯಗಳಿಗೆ ಸ್ವಾಭಿಮಾನದ ಬದುಕು ನೀಡಿದ್ದು ಅಂಬೇಡ್ಕರ್‌ ರಚಿಸಿದ ಸಂವಿಧಾನ. ಇದರ ವಿರುದ್ಧ ಧರ್ಮ ಸಂಸತ್‌ನಲ್ಲಿ ಪ್ರಶ್ನೆಗಳು ಎದ್ದಿವೆ. ಇವು ಬಂದಿರುವುದು ದೆಹಲಿಯಿಂದ ಅಲ್ಲ, ನಾಗ್ಪುರದಿಂದ’ ಎಂದ ಅವರು, ಸಂವಿಧಾನವನ್ನು ರಕ್ಷಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮುಂದೆ ಇದೆ ಎಂದು ಹೇಳಿದರು.

ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ‘ಅಹಿಂಸಾ ಪರಮೋಧರ್ಮ ಎನ್ನುವ ಜೈನ ಧರ್ಮಕ್ಕೆ ಸೇರಿದ ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರು ಗಲಾಟೆ, ದಂಗೆ ಮಾಡಿಸುವಂತೆ ಹೇಳುತ್ತಾರೆ. ಬಾಂಬ್‌ ಎಸೆಯಿರಿ, ಲಾಠಿ ಚಾರ್ಜ್‌ ಆಗಲಿ ಎನ್ನುತ್ತಾರೆ. ಇಲ್ಲಿರುವ ಸಂಸದರು ಅದನ್ನು ಕಾರ್ಯರೂಪಕ್ಕೆ ತರಲು ಹೊರಟಿದ್ದಾರೆ. ದಕ್ಷಿಣ ಭಾರತದಲ್ಲಿ ಹಲವು ವೈಚಾರಿಕ ಚಳವಳಿಗಳು ನಡೆದಿರುವ ಪರಿಣಾಮ ಇವರ ಪ್ರಯತ್ನ ಕೈಗೂಡದು. ಎಡಪಂಥೀಯ ಚಳುವಳಿಗಳು ಸಕ್ರಿಯ ವಾಗಿದ್ದ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ’ ಎಂದರು.

ಅಥಣಿಯ ಪ್ರಭುಚನ್ನಬಸವ ಸ್ವಾಮೀಜಿ ಹಾಗೂ ಶರಣ ಬಸವ ಸ್ವಾಮೀಜಿ ಭಾಗವಹಿಸಿದ್ದರು. ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್‌, ವಿಲ್ಫ್ರೆಡ್‌ ಡಿಸೋಜಾ ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT