ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಣ್ಣಿನ ಸಂರಕ್ಷಣೆ ಅತ್ಯಗತ್ಯ’

ಕೂರಿಗೆ ಬಿತ್ತನೆ ಭತ್ತದ ಕ್ಷೇತ್ರೋತ್ಸವ, ವಿಶ್ವ ಮಣ್ಣು ದಿನಾಚರಣೆ
Last Updated 7 ಡಿಸೆಂಬರ್ 2017, 6:40 IST
ಅಕ್ಷರ ಗಾತ್ರ

ಬಳ್ಳಾರಿ: ‘ಅತಿಯಾದ ನೀರು ಬಳಸಿ ಭತ್ತ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕುಸಿಯುತ್ತದೆ. ಕಡಿಮೆ ನೀರು, ರಸಗೊಬ್ಬರ, ಕೀಟನಾಶಕ ಬಯಸುವ ಕೂರಿಗೆ ಬಿತ್ತನೆ ಪದ್ಧತಿಯನ್ನು ರೈತರು ಅಳವಡಿಸಿಕೊಂಡು ಮಣ್ಣು ರಕ್ಷಿಸಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷೆ ಪಿ.ದೀನಾ ಹೇಳಿದರು.

ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಬುಧವಾರ ಕೃಷಿ ಇಲಾಖೆ ಮತ್ತು ಬಳ್ಳಾರಿ ರೈತ ಸಂಪರ್ಕ ಕೇಂದ್ರವು ಜಂಟಿಯಾಗಿ ಆಯೋಜಿಸಿದ್ದ ಕೂರಿಗೆ ಬಿತ್ತನೆ ಭತ್ತದ ಕ್ಷೇತ್ರೋತ್ಸವ ಮತ್ತು ವಿಶ್ವ ಮಣ್ಣು ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ನೀರಿನ ಕೊರತೆಯ ಸನ್ನಿವೇಶದಲ್ಲಿ ಪರ್ಯಾಯ ಕೃಷಿ ಪದ್ಧತಿಗಳು ಮಾತ್ರ ರೈತರನ್ನು ರಕ್ಷಿಸಬಲ್ಲವು’ ಎಂದು ಪ್ರತಿಪಾದಿಸಿದರು.

‘ಕೂರಿಗೆಯಲ್ಲಿ ಭತ್ತದ ಬಿತ್ತನೆ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿಯೇ ಉತ್ತಮ ಇಳುವರಿ ಪಡೆಯಬಹುದು’ ಎಂದು ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಹೇಳಿದರು.

‘ಮಣ್ಣು ನೈಸರ್ಗಿಕ ಸಂಪನ್ಮೂಲವಾಗಿದ್ದು ಒಂದು ಸಾವಿರ ವರ್ಷಕ್ಕೊಮ್ಮೆ ಒಂದು ಇಂಚು ಫಲವತ್ತಾದ ಮಣ್ಣು ಬೆಳೆಯುತ್ತದೆ. ಮಣ್ಣಿಗೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ರೈತರು ಕೃಷಿಯಲ್ಲಿ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣಿನ ಸಂರಕ್ಷಣೆ ಮಾಡಬೇಕು’ ಎಂದರು.

ಕೂರಿಗೆ ಬಿತ್ತನೆ ಮಾಡಿರುವ ರೈತ ಜನಾರ್ಧನ ರೆಡ್ಡಿ ಮಾತನಾಡಿ, ‘ನಾಟಿ ಪದ್ಧತಿಯಲ್ಲಿ ಭೂಮಿ ಹದವಾಗಿಸಲು ಮತ್ತು ಸಸಿಮಡಿ ತಯಾರಿಸಲು ಹೆಚ್ಚು ಹಣ ಖರ್ಚು ಮಾಡಬೇಕು. ಆದರೆ ಕೂರಿಗೆ ಬಿತ್ತನೆ ಮಾಡಿದರೆ ಆ ಹಣ ಉಳಿಯುತ್ತದೆ. ಕಡಿಮೆ ರಸಗೊಬ್ಬರ ಬಳಸಿದ್ದರಿಂದ ಉತ್ತಮ ಫಸಲು ದೊರಕಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಇಲಾಖೆಯ ಉಪನಿರ್ದೇಶಕ ಶಿವನಗೌಡ ಎಸ್‌.ಪಾಟೀಲ್‌, ಸಹಾಯಕ ನಿರ್ದೇಶಕ ಹುಸೇನ್ ಸಾಬ್, ಕೃಷಿ ವಿಜ್ಞಾನಿಗಳಾದ ಆನಂದ, ರವಿಶಂಕರ್, ತಾಲ್ಲೂಕು ಪಂಚಾಯಿತಿ ಸದಸ್ಯ ಭೋಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಹುಲೇಪ್ಪ, ಗ್ರಾಮದಲ್ಲಿ 130 ಎಕರೆಯಲ್ಲಿ ಕೂರಿಗೆ ಬಿತ್ತನೆ ಮಾಡಿರುವ ರೈತರಾದ ಪರಶುರಾಮ, ನಾಗರಾಜ, ಶ್ರೀನಿವಾಸ, ವೀರೇಶ್‌, ವೀರನಗೌಡ, ಬಸವನಗೌಡ ಉಪಸ್ಥಿತರಿದ್ದರು.

ಅವ್ಯವಸ್ಥೆ: ಕ್ಷೇತ್ರೋತ್ಸವ ಸ್ಥಳದಲ್ಲಿ ಕುಡಿಯುವ ನೀರಿನ ಕ್ಯಾನ್‌ಗಳಿದ್ದರೂ, ಲೋಟಗಳಿಲ್ಲದ ಕಾರಣ ರೈತರು ನೀರು ಕುಡಿಯಲು ತೊಂದರೆ ಎದುರಿಸಿದರು. ಕೆಲವರು ಕ್ಯಾನ್‌ಗಳನ್ನೇ ಎತ್ತಿಕೊಂಡು ನೀರು ಕುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT