ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಸಭೆ ಬಹಿಷ್ಕಾರಕ್ಕೆ ನಿರ್ಧಾರ?

Last Updated 7 ಡಿಸೆಂಬರ್ 2017, 7:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರು ಗುರುವಾರ (ಡಿ.7) ಕರೆದಿರುವ ಸಾಮಾನ್ಯ ಸಭೆಯನ್ನು ಆಡಳಿತಾರೂಢ ಕಾಂಗ್ರೆಸ್‌ನ 21 ಸದಸ್ಯರ ಪೈಕಿ 14 ಬಂಡಾಯ ಸದಸ್ಯರು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.

ಕಳೆದ ಜುಲೈನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಕೇಶವರೆಡ್ಡಿ ಅವರು ನವೆಂಬರ್ ಮುಗಿಯುವುದರೊಳಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ ಈವರೆಗೆ ಅವರು ರಾಜೀನಾಮೆ ನೀಡಿಲ್ಲ ಎನ್ನುವ ವಿಚಾರ ಇದೀಗ ಪುನಃ ‘ಕೈ’ ಪಾಳೆಯದಲ್ಲಿ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

ಕೇಶವರೆಡ್ಡಿ ಅವರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪ್ರತಿಯೊಂದರಲ್ಲೂ ಏಕಪಕ್ಷೀಯ ನಿರ್ಧಾರ ತೆಗೆದು
ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದವರು ಸೇರಿದಂತೆ ಸದಸ್ಯರೆಲ್ಲರೂ ಕಳೆದ ಫೆಬ್ರುವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕರೆದ ಸಾಮಾನ್ಯ ಸಭೆಗಳನ್ನು ಬಹಿಷ್ಕರಿಸಿದ್ದರು.

ಈ ಬೆಳವಣಿಗೆ ನಂತರ ಪಕ್ಷದ ವರಿಷ್ಠರು ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಸದಸ್ಯರನ್ನು ಕರೆದು ಚರ್ಚಿಸಿ, ‘ಕೇಶವರೆಡ್ಡಿ ಅವರು ನವೆಂಬರ್‌ನಲ್ಲಿ ರಾಜೀನಾಮೆ’ ನೀಡುತ್ತಾರೆ ಎಂದು ‘ರಾಜೀ ಸಂಧಾನ’ ನಡೆಸಿ ಮುನಿಸು ತಣಿಸಿದ್ದರು. ವರಿಷ್ಠರು ನೀಡಿದ ‘ವಾಗ್ದಾನ’ದಂತೆ ಕೇಶವರೆಡ್ಡಿ ಅವರು ನಡೆದುಕೊಂಡಿಲ್ಲ ಎಂದು ಕೆರಳಿರುವ ಸದಸ್ಯರು, ಸಾಮಾನ್ಯ ಸಭೆ ಬಹಿಷ್ಕರಿಸುವ ಮೂಲಕ ವರಿಷ್ಠರ ಗಮನ ಸೆಳೆಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮತ್ತೆ ಮುಖ್ಯಮಂತ್ರಿಗೆ ದೂರು: ಆಡಳಿತ ಪಕ್ಷದ ನಾಯಕನ ವಿರುದ್ಧವೇ ತಿರುಗಿ ಬಿದ್ದಿರುವ ‘ಬಂಡಾಯ’ ಸದಸ್ಯರ ಪೈಕಿ 12 ಸದಸ್ಯರು ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಅವರನ್ನು ಭೇಟಿ ಮಾಡಿ ತಮ್ಮೊಳಗಿನ ‘ಅತೃಪ್ತಿ’ ಹೊರಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದಸ್ಯರ ಅಹವಾಲು ಆಲಿಸಿದ ಇಬ್ಬರು ವರಿಷ್ಠರು ಕೇಶವರೆಡ್ಡಿ ಅವರನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸುವ ‘ಭರವಸೆ’ ನೀಡಿದ್ದಾರೆ ಎನ್ನಲಾಗಿದೆ.

‘ಕೇಶವರೆಡ್ಡಿ ಅವರು ಈ ಹಿಂದೆ ನಡೆದ ವರಿಷ್ಠರ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಗಡುವಿನೊಳಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಈ ವಿಚಾರದಲ್ಲಿ ಈವರೆಗೆ ಪಕ್ಷದ ವರಿಷ್ಠರು ನಮ್ಮನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿಲ್ಲ. ಆದ್ದರಿಂದ ನಾವು 14 ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಅಂಟಿಕೊಂಡಿದ್ದೇವೆ’ ಎಂದು ಗೌರಿಬಿದನೂರಿನ ಹೊಸೂರು ಕ್ಷೇತ್ರದ ಸದಸ್ಯ ಎಚ್.ವಿ.ಮಂಜುನಾಥ್ ತಿಳಿಸಿದರು.

‘ನವೆಂಬರ್ ಮುಗಿಯುವುದರೊಳಗೆ ಕೇಶವರೆಡ್ಡಿ ಅವರು ರಾಜೀನಾಮೆ ಕೊಡಬೇಕಿತ್ತು. ಆದರೆ ಅವರು ಮಾತಿಗೆ ತಪ್ಪಿದ್ದಾರೆ. ಆದ್ದರಿಂದ ಬೆಲೆ ಸಿಗದ ಕಡೆ ನಾವು ಹೋಗಬಾರದು ಎಂದು ತೀರ್ಮಾನಿಸಿದ್ದೇವೆ. ಕೇಶವರೆಡ್ಡಿ ರಾಜೀನಾಮೆ ಕೊಡುವವರೆಗೂ ನಾವು ಜಿ.ಪಂ ಸಭೆಯಲ್ಲಿ ಭಾಗವಹಿಸುವುದಿಲ್ಲ’ ಎಂದು ಚಿಂತಾಮಣಿಯ ಸದಸ್ಯ ಶಿವಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT