ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತ್ಯ ಎಸಗಿದವರ ಬಂಧನಕ್ಕೆ ಕ್ರಮ:ಎಸ್ಪಿ

ಚಿಕ್ಕಮಗಳೂರು ಐಡಿ ಪೀಠ: ಹಿಂದೂ–ಮುಸ್ಲಿಂ ಮುಖಂಡರ ಸಭೆ
Last Updated 7 ಡಿಸೆಂಬರ್ 2017, 7:24 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ದತ್ತ ಜಯಂತಿ ಯಂದು ಇನಾಂ ದತ್ತಾತ್ರೇಯ ಪೀಠ ಬಾಬಾಬುಡನ್‌ಸ್ವಾಮಿ ದರ್ಗಾ ಆವರಣ ಮತ್ತು ನಗರದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಲಾಗುವುದು. ಮುಂದಿನ ಬಾರಿ ಇಂಥವು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಹೇಳಿದರು.

ಇನಾಂ ದತ್ತಾತ್ರೇಯ ಪೀಠ ಬಾಬಾಬುಡನ್‌ಸ್ವಾಮಿ ದರ್ಗಾ ಆವರಣದಲ್ಲಿ ಬುಧವಾರ ಮುಸ್ಲಿಂ ಮತ್ತು ಹಿಂದೂ ಮುಖಂಡರ ಸಭೆಯಲ್ಲಿ ಮಾತನಾಡಿದರು. ಬೇಲಿ ಏರಿ ಜಿಗಿದು ಭಗವಾಧ್ವಜ ನೆಟ್ಟಿದ್ದು, ಗೋರಿ ನಾಮಫಲಕ ಹಾನಿ, ನಗರದಲ್ಲಿ ಕಲ್ಲು ತೂರಾಟ, ಹಲ್ಲೆಗೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಲಾಗಿದೆ. ಕೃತ್ಯಗಳಿಗೆ ಪ್ರಚೋದನೆ ನೀಡಿದವರನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ತಿಳಿಸಿದರು.

ದತ್ತ ಜಯಂತಿ ನಿಟ್ಟಿನಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಜನರು ಬಂದಿದ್ದರು. ಬೇಲಿಯ ತಂತಿ ಹರಿದು ಏಳೆಂಟು ಮಂದಿ ಒಳನುಗ್ಗಿ ಗೋರಿಯೊಂದರ ನಾಮಫಲಕವನ್ನು ಭಾಗಶಃ ಉರುಳಿಸಿದ್ದಾರೆ. ಅಷ್ಟೊರೊಳಗೆ ಪೊಲೀಸರು ಕಾರ್ಯಪ್ರವೃತರಾಗಿ ಅವರನ್ನು ಹೊರಹಾಕಿದ್ದಾರೆ. ತಂತಿ ಜಿಗಿದು ಭಗಧ್ವಜ ನೆಟ್ಟವರೊಬ್ಬರನ್ನು ಎಳೆದೊಯ್ದು ಹೊರಹಾಕಿದ್ದಾರೆ. ಗೋರಿಯ ನಾಮಫಲಕನ್ನು ನಿಲ್ಲಿಸಿ ಸರಿಪಡಿಸಲಾಗಿದೆ. ಎರಡೂ ಸಮುದಾಯಗಳ ಮುಖಂಡರು ವಸ್ತುಸ್ಥಿತಿಯನ್ನು ನೋಡಲಿ ಎಂದು ಇಲ್ಲಿಗೆ ಕರೆತಂದಿದ್ದೇವೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೈರಲ್‌ಗಳಿಗೆ ಕಿವಿಗೊಡಬಾರದು. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಹಕರಿಸಬೇಕು. ಕೃತ್ಯಗಳನ್ನು ಎಸಗಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಬಂಧಿಸಿ ಕ್ರಮ ಜರುಗಿಸಲಾಗುವುದು. ವಾರದೊಳಗೆ ಎಲ್ಲರನ್ನು ಬಂಧಿಸುತ್ತೇವೆ ಎಂದು ಹೇಳಿದರು.

ಕೆಲವೇ ಕೆಲವರು ಕೃತ್ಯಗಳನ್ನು ಎಸಗಿದ್ದಾರೆ. ಸಮುದಾಯದವರೆಲ್ಲ ಒಗ್ಗೂಡಿ ಮಾಡಿಲ್ಲ. ಮುಖಂಡರಾದ ವರಸಿದ್ಧಿ ವೇಣುಗೋಪಾಲ್‌, ಎಚ್‌.ಡಿ.ತಮ್ಮಯ್ಯ, ಯೋಗೀಶ್‌ರಾಜ್‌ ಅರಸ್‌ ಇವರೆಲ್ಲರೂ ಅಂದು ಪರಿಸ್ಥಿತಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸಹಕರಿಸಿದರು. ಒಂದು ಹಂತದಲ್ಲಿ ಅವರೇ ಮುಂದೆ ನಿಂತು ಗುಂಪನ್ನು ಚದುರಿಸಿದರು. ಗೋರಿ ಸ್ಥಳದಲ್ಲಿ ಸಂಜೆವರೆಗೂ ಇದ್ದೂ ಆ ಕಡೆ ಯಾರೂ ಸುಳಿಯದಂತೆ ಎಚ್ಚರ ವಹಿಸಿದರು ಎಂದು ಹೇಳಿದರು.

ಈ ಬಾರಿ ಚಿತ್ರದುರ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಿಂದ ಬಂದವರು ಗಲಾಟೆ ಮಾಡಿದ್ದಾರೆ. ಮುಂದಿನ ಬಾರಿಯಿಂದ ಈ ಜಿಲ್ಲೆಗಳಿಂದ ಬರುವವರ ಬಗ್ಗೆಯೂ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುವುದು. ಗೋರಿ ಸ್ಥಳದಲ್ಲಿ ಹೊಸದಾಗಿ ತಂತಿ ಬೇಲಿ ಅಳವಡಿಸಲು ಕ್ರಮ ವಹಿಸಲಾಗುವುದು. ಅಲ್ಲದೇ ಈ ಸ್ಥಳದಲ್ಲಿ ಮುಂದಿನ ಬಾರಿಯಿಂದ ಹೆಚ್ಚಿನ ಭದ್ರತೆ ಒದಗಿಸಲಾಗುವುದು. ಈ ಬಾರಿ ಆಗಿರುವ ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡು, ಮುಂದಿನ ಬಾರಿ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದರು.

ಕಾಫಿ ಬೆಳೆಗಾರ, ಉದ್ಯಮಿ ಸಯ್ಯದ್‌ ಮುನೀರ್‌ ಅಹಮದ್‌ ಮಾತನಾಡಿ, ‘ಗೋರಿ ಹಾನಿಯಲ್ಲಿ ತೊಡಗಿದ್ದವರನ್ನು ತಡೆದು ಧೈರ್ಯ, ಸಮಯ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆ ಮೆರೆದಿರುವ ಇಬ್ಬರು ಪೊಲೀಸರಿಗೆ ತಲಾ ₹ 5,000 ನಗದು ಇನಾಮು ಕೊಡುತ್ತೇನೆ’ ಎಂದು ತಿಳಿಸಿದರು.

ದತ್ತ ಜಯಂತಿ ಮತ್ತು ಈದ್‌ ಮಿಲಾದ್‌ ಆಚರಣೆಯಂದು ಶಾಂತಿಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರು ಕೈಗೊಂಡ ಕ್ರಮಗಳನ್ನು ಮುಖಂಡರು ಶ್ಲಾಘಿಸಿದರು.

ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ ಭಾಗೀರಥಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಚ್‌.ಜಗದೀಶ್‌, ಡಿವೈಎಸ್ಪಿ ಕೆ.ತಿಲಕ್‌ಚಂದ್ರ ವೇದಿಕೆಯಲ್ಲಿ ಇದ್ದರು. ಮುಖಂಡರಾದ ನಜೀರ್‌ ಅಹಮದ್‌, ಜಮ್‌ಶೀದ್‌ ಖಾನ್‌, ನಿಸಾರ್‌ ಅಹಮದ್‌, ಸಯ್ಯದ್‌ ಹನೀಫ್‌, ಉಮೇಶ್‌ಕುಮಾರ್‌, ದಂಟರಮಕ್ಕಿ ಶ್ರೀನಿವಾಸ್‌, ಮೌಸಿನ್‌, ನಾಸಿರ್‌, ಗೌಸ್‌ ಮೊಹಿಯುದ್ದೀನ್‌, ವರಸಿದ್ಧಿ ವೇಣುಗೋಪಾಲ್‌, ಎಚ್‌.ಡಿ.ತಮ್ಮಯ್ಯ, ಯೋಗೀಶ್‌ರಾಜ್‌ ಅರಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT