ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರಿ ತಪ್ಪಿದ ಆನೆಗಳ ಓಡಿಸಲು ಹರಸಾಹಸ

ಎರಡು ದಿನಗಳಲ್ಲಿ ಮೂವರಿಗೆ ಗಾಯ l ಆತಂಕದಲ್ಲಿ ದಿನ ಕಳೆದ ಗ್ರಾಮಸ್ಥರು
Last Updated 7 ಡಿಸೆಂಬರ್ 2017, 8:40 IST
ಅಕ್ಷರ ಗಾತ್ರ

‌ಚಿತ್ರದುರ್ಗ: ಎರಡು ದಿನಗಳಿಂದ ಮೊಳಕಾಲ್ಮುರು, ಚಳ್ಳಕೆರೆ ತಾಲ್ಲೂಕಿನ ಹಳ್ಳಿಗಳಲ್ಲಿ ಆತಂಕ ಸೃಷ್ಟಿಸಿ, ಒಬ್ಬನನ್ನು ಗಾಯಗೊ­­­ಳಿ­ಸಿದ್ದ ಎರಡು ಆನೆಗಳು ಬುಧವಾರ ಮುಂಜಾನೆ ತಾಲ್ಲೂಕಿನ ಮಾಡನಾಯಕನಹಳ್ಳಿ, ಚಿಕ್ಕಪ್ಪನಹಳ್ಳಿ ಸುತ್ತಲಿನ ಜಮೀನಿನಲ್ಲಿ ಪ್ರತ್ಯಕ್ಷವಾಗಿ ಮತ್ತಿಬ್ಬರನ್ನು ತೀವ್ರವಾಗಿ ಗಾಯಗೊಳಿಸಿವೆ.

’ನಮ್ ಕಡೆ ಆನೆ ಎಲ್ಲಿ ಬರುತ್ತದೆ’ ಎನ್ನುತ್ತಾ ಹೊಲಕ್ಕೆ ಬಂದಿದ್ದ ಆಯ್ತೋಳಿನ ಸಿ.ಕಾಟಪ್ಪ (65) ಮತ್ತು ಆನೆಗಳನ್ನು ನೋಡುವುದಕ್ಕಾಗಿ ಹೋಗಿದ್ದ ಪಾಪೇನಹಳ್ಳಿಯ ರುದ್ರೇಶ (30) ಅವರನ್ನು ಆನೆಗಳು ಸೊಂಡಲಿನಿಂದ ಹೊಡೆದು ಗಾಯಗೊಳಿಸಿವೆ.

ಆತಂಕದಿಂದ ದಿನ ಕಳೆದವರು: ಜಮೀನುಗಳಲ್ಲಿ ಆನೆಗಳು ಓಡಾಡುತ್ತಿವೆ ಎಂಬ ಸುದ್ದಿ ಕೇಳಿಯೇ ಚಿಕ್ಕಪ್ಪನಹಳ್ಳಿ, ರಾಯನಹಳ್ಳಿ, ಪಾಪೇನಹಳ್ಳಿ ಸುತ್ತಲಿನ ಗ್ರಾಮಸ್ಥರು ಭೀತರಾದರು. ಆನೆ ವಿಷಯ ಒಬ್ಬರಿಂದ ಒಬ್ಬರಿಗೆ ರವಾನೆಯಾಗುತ್ತಿದ್ದಂತೆ, ಹೊಲದಲ್ಲಿ ಬೆಳೆ ಕೊಯ್ಯುತ್ತಿದ್ದವರು, ಬೆಳೆಗಳಿಗೆ ನೀರು ಹಾಯಿಸುತ್ತಿದ್ದವರು ತಮ್ಮ ತಮ್ಮ ಗ್ರಾಮಗಳತ್ತ ಓಡಿದರು.

‘ಏ ಬರ್ರಪ್ಪ. ಬಿಳೇಕಳ್ಳಿಯತ್ರ ಆನೆ ಬಂದವಂತೆ. ನಮ್ಕಡೆಗೂ ಬಂದಾವು’ ಎನ್ನುತ್ತಾ ಚಿಕ್ಕಪ್ಪನಹಳ್ಳಿಯ 70ರ ಹರೆಯದ ಬಸಕ್ಕ, ತನ್ನ ಪತಿ ಹಾಗೂ ಮಕ್ಕಳನ್ನು ಆತಂಕದಿಂದ ಕೂಗುತ್ತಿದ್ದರು. ಅಲ್ಲಲ್ಲೇ ಗುಂಪು ಗುಂಪಾಗಿ ನಿಂತಿದ್ದವರ ಬಾಯಲ್ಲಿ ಆನೆಗಳ ದಾಳಿ ಸುದ್ದಿಯೇ ಹರಿದಾಡುತ್ತಿತ್ತು.

ಬೆಳಿಗ್ಗೆ ಪ್ರತ್ಯಕ್ಷವಾಗಿದ್ದ ಸಲಗಗಳು: ಮಂಗಳವಾರ ರಾತ್ರಿ ಚಳ್ಳಕೆರೆ ತಾಲ್ಲೂಕು ಕೆರೆಯಾಗಳ ಹಳ್ಳಿಯಿಂದ ಹೊರಟ ಆನೆಗಳು ಕೂಡ್ಲಿಗೆ ಕಡೆಗೆ ಹೋಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಆನೆಗಳು ರಾತ್ರಿಯೇ ದಾರಿ ಬದಲಿಸಿ, ನಾಯಕನಹಟ್ಟಿ, ಡಿಆರ್‌ಡಿಒ ಸಂಸ್ಥೆಯ ಕಾಂಪೌಂಡ್ ಹಾರಿ, ತುರುನೂವರು, ಬಂಗಾರಕ್ಕನಹಳ್ಳಿಯತ್ತ ಹೊರಟಿವೆ. ಬುಧವಾರ ಮುಂಜಾನೆ 5.30 ಸುಮಾರಿಗೆ ಬಂಗಾರಕ್ಕನ­ಹಳ್ಳಿ­ ಮೂಲಕ ರಾಷ್ಟ್ರೀಯ ಹೆದ್ದಾರಿ 13ನ್ನು ದಾಟಿ ಮಾಡನಾಯಕನಹಳ್ಳಿ, ಚಿಕ್ಕಪ್ಪನಹಳ್ಳಿಯ ಬಾಳೆ, ಅಡಿಕೆ ತೋಟ
ಗಳಿಗೆ ನುಗ್ಗಿವೆ. ‘ಬೆಳಿಗ್ಗೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ಗ್ರಾಮದ ಮಲ್ಲಿಕಾರ್ಜುನ್‌ಗೆ ಆನೆಗಳು ಕಂಡಿವೆ. ಮುಂದೆ ಪಾಪೇನಹಳ್ಳಿಯತ್ತ ಹೊರಟಿವೆ’ ಎಂದು ಸ್ಥಳಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ಗೆ ಮಾಡನಾಯಕನ ಹಳ್ಳಿಯ ಸುಂದರ್ ರಾಜ್, ದಿವಾಕರ್, ಹೇಮಣ್ಣ, ರವೀಂದ್ರ, ತಿಪ್ಪೇಸ್ವಾಮಿ ಮಾಹಿತಿ ನೀಡಿದರು.

ಜನರಿಂದಾಗಿಯೇ ಕಾರ್ಯಾಚರಣೆಗೆ ಅಡ್ಡಿ: ‘ಆನೆಗಳನ್ನು ಏಕೆ ಓಡಿಸುತ್ತಿಲ್ಲ? ಪಟಾಕಿ ಹೊಡೆದು ಮುಂದಿನ ಊರಿಗೆ ಓಡಿಸಿ. ಇಲ್ಲಾಂದ್ರೆ ಇಷ್ಟೊಂದು ಜನ ಯಾಕೆ ಬಂದಿದ್ದೀರಿ. ಸುಮ್ನೆ ಫೋಟೊ ತೆಗೆಯೋಕೆ ಬಂದಿದ್ದೀರಾ?’ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯವರನ್ನು ತರಾಟೆಗೆ ತೆಗೆದುಕೊಂಡರು.

ಪಟಾಕಿ (ಸಿಡಿಮದ್ದಿನ) ಹೊಗೆಯ ವಾಸನೆ ಅವುಗಳಿಗೆ ಅಲರ್ಜಿ ಉಂಟು ಮಾಡುತ್ತದೆ. ಪಟಾಕಿ ಶಬ್ದ, ಘಾಟಿನಿಂದ ರೊಚ್ಚಿಗೆದ್ದರೆ ಸಂಭಾಳಿಸುವುದು ಕಷ್ಟ. ಹಾಗಾಗಿ ಸಂಜೆವರೆಗೂ ಸುಮ್ಮನಿದ್ದು, ಅವು ಯಾವ ದಿಕ್ಕಿನಲ್ಲಿ ಹೋಗುತ್ತವೋ ಅದೇ ದಿಕ್ಕಿನೆಡೆಗೆ ಓಡಿಸುವುದಷ್ಟೇ ಪರಿಹಾರ’ ಎಂದು ಡಿಎಫ್‌ಒ ಮಂಜುನಾಥ ಸುದ್ದಿಗಾರರಿಗೆ ಉತ್ತರ ನೀಡಿದರು.

‘ಆನೆಗಳನ್ನು ಪಾಪೇನಹಳ್ಳಿ, ಬೀರಾವರ ಕ್ರಾಸ್ ಮೂಲಕ ಸಿರಿಗೆರೆಗೆ ಕಳುಹಿಸಿ, ಅಲ್ಲಿಂದ ಅವು ತಮ್ಮ ಮೂಲ ದಾರಿಯನ್ನು ಹುಡುಕಿಕೊಳ್ಳುತ್ತವೆ. ಈ ಮಾರ್ಗದಲ್ಲಿರುವ ಗ್ರಾಮಗಳ ಜನರ ಸಹಕಾರ ಬೇಕಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಾಚರಣೆ ಸ್ಥಳಕ್ಕೆ ತಹಶೀಲ್ದಾರ್ ಮಲ್ಲಿಕಾರ್ಜುನ್ ಭೇಟಿ ನೀಡಿದ್ದರು. ಎಸಿಎಫ್ ಶ್ರೀನಿವಾಸ್, ಅರಣ್ಯಾಧಿಕಾರಿಗಳಾದ ಮಾವಿನ ಹೊಳಿ, ಪ್ರದೀಪ್ ಹಾಗೂ ವಿವಿಧ ತಾಲ್ಲೂಕುಗಳ ಸಹಾಯಕ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

**

‘ಒಂದು ದಿನ ಹೊಲಗಳಲ್ಲಿ ಅಡ್ಡಾಡಬೇಡಿ’

ಆನೆಗಳ ಮೂಲ ದಾರಿ ತಪ್ಪಿಸಿದ್ದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ಮೂಲ ದಾರಿ ಬಿಟ್ಟು ಹೊಸ ಜಾಗಕ್ಕೆ ಬಂದಿರುವುದರಿಂದ ಆನೆಗಳೂ ಗೊಂದಲದಲ್ಲಿರುತ್ತವೆ. ಹಾಗಾಗಿ ಬಹಳ ಸಂಯಮದಿಂದ ಕಾರ್ಯಾಚರಣೆ ನಡೆಸಬೇಕಿದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ.ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.

‘ಜನರು ಆನೆಗಳನ್ನು ನೋಡಲು ಮುಗಿಬೀಳುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿತ್ತು. ಈಗ ಅವು ಸರಿಯಾದ ಮಾರ್ಗದತ್ತ ಹೆಜ್ಜೆ ಹಾಕುತ್ತಿವೆ. ಬುಧವಾರ ರಾತ್ರಿ ಸಂಚರಿಸುವ ಆನೆಗಳು ಸಿರಿಗೆರೆ–ಹೊಳಲ್ಕೆರೆ–ಚನ್ನಗಿರಿ ಮಾರ್ಗವಾಗಿ ಭದ್ರಾ ಅರಣ್ಯ ಸೇರುವುದು ಖಚಿತವಾಗಿದೆ. ಹೀಗಾಗಿ ಆ ಮಾರ್ಗದ ಜನರು ಜಮೀನುಗಳಿಗೆ ತೆರಳಬಾರದು. ಕಣಗಳಲ್ಲಿ ಮಲಗಬಾರದು’ ಎಂದು ಅವರು ಎಚ್ಚರಿಸಿದ್ದಾರೆ.

‘ಆನೆಗಳು ಸಂಚರಿಸುವ ದಾರಿಯಲ್ಲಿ ಡಂಗುರ ಸಾರಿಸಿ ಮಾಹಿತಿ ನೀಡುತ್ತಿದ್ದೇವೆ’ ಎಂದು  ತಿಳಿಸಿದ್ದಾರೆ.

**

ಆನೆ ದಾಳಿಯಿಂದ ಗಾಯಗೊಂಡವರಿಗೆ ಅರಣ್ಯ ಇಲಾಖೆ ಚಿಕಿತ್ಸೆ ನೀಡಲಿದೆ. ಬೆಳೆ ನಷ್ಟವಾಗಿದ್ದರೆ, ನಿಯಮಾನುಸಾರ ಪರಿಹಾರ ಕೊಡಿಸಲಾಗುತ್ತದೆ‌.

-ಕೆ.ಬಿ.ಮಂಜುನಾಥ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT