ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಷರ್‌ ಅನುಮತಿ ರದ್ದುಪಡಿಸಲು ಆಗ್ರಹ

ಹೊಸದುರ್ಗ ತಾಲ್ಲೂಕಿನ ಕೆ.ಕೆ.ಹಟ್ಟಿ, ಚನ್ನಸಮುದ್ರ ಗ್ರಾಮದ ರೈತರ ಮನವಿ
Last Updated 7 ಡಿಸೆಂಬರ್ 2017, 8:47 IST
ಅಕ್ಷರ ಗಾತ್ರ

ಹೊಸದುರ್ಗ: ತಾಲ್ಲೂಕಿನ ಬೋಕಿಕೆರೆ ಸರ್ವೆ ನಂ.34ರಲ್ಲಿ ಇರುವ ಸರ್ಕಾರಿ ಗುಡ್ಡದಲ್ಲಿ ಕಲ್ಲಿನ ಗಣಿಗಾರಿಕೆಗೆ ನೀಡಿರುವ ಅನುಮತಿ ರದ್ದುಪಡಿಸಬೇಕು ಎಂದು ಆ ಗುಡ್ಡದ ಪಕ್ಕದಲ್ಲಿರುವ ಕೆ.ಕೆ.ಹಟ್ಟಿ, ಚನ್ನಸಮುದ್ರ ಗ್ರಾಮದ ರೈತರು ಒತ್ತಾಯಿಸಿದ್ದಾರೆ.

ಈ ಗುಡ್ಡಕ್ಕೆ ಹೊಂದಿಕೊಂಡಂತೆ ಇರುವ ಸರ್ವೆ ನಂ.54ರಲ್ಲಿ ಕೆ.ಕೆ.ಹಟ್ಟಿ ಹಾಗೂ ಚನ್ನಸಮುದ್ರ ಗ್ರಾಮದ ಹಲವು ರೈತರ ಜಮೀನುಗಳಿಗೆ ತೊಂದರೆಯಾಗಿದೆ. ಈ ರೈತರೆಲ್ಲರೂ ಬಡವರಾಗಿದ್ದು ಲಕ್ಷಾಂತರ ರೂಪಾಯಿ ಸಾಲಮಾಡಿ ಬೋರ್‌ವೆಲ್‌ ಕೊರೆಸಿದ್ದಾರೆ. ಕಷ್ಟಪಟ್ಟು ತೆಂಗಿನ ತೋಟ ಬೆಳೆಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಇಲ್ಲಿನ ಗುಡ್ಡದಲ್ಲಿರುವ ಕಲ್ಲನ್ನು ಸ್ಫೋಟ ಮಾಡಿ, ಕ್ರಷರ್‌ ನಡೆಸುವುದರಿಂದ ರೈತರಿಗೆ ತೀವ್ರ ತೊಂದರೆ ಆಗುತ್ತದೆ ಎಂದು ಕೆ.ಕೆ.ಹಟ್ಟಿ ಗ್ರಾಮದ ರೈತ ಗೋವಿಂದಪ್ಪನ ಪುತ್ರ ರಮೇಶ್‌ ‘ಪ್ರಜಾವಾಣಿ’ ಜತೆಗೆ ಅಳಲು ತೋಡಿಕೊಂಡರು.

ಕ್ರಷರ್‌ ನಡೆಸಲು ಜಿಲ್ಲಾಧಿಕಾರಿ ನಿಗದಿ ಮಾಡಿದ ಸ್ಥಳವನ್ನು ಬಿಟ್ಟು ರೈತರ ಜಮೀನಿನ ಪಕ್ಕದಲ್ಲಿಯೇ ಕಲ್ಲು ಸ್ಫೋಟಿಸಲು ಮುಂದಾಗಿದ್ದಾರೆ. ನಿಯಮಾನುಸಾರ ರೈತರ ಜಮೀನಿನಿಂದ 500 ಮೀಟರ್‌ ಅಂತರದಲ್ಲಿ ಕ್ರಷರ್‌ ನಡೆಸಬೇಕು. ಆದರೆ ಈ ನಿಯಮ ಉಲ್ಲಂಘಿಸಿ ರೈತರ ಜಮೀನಿಗೆ ಸುಮಾರು 15 ಮೀಟರ್‌ ದೂರದಲ್ಲಿ ಕ್ರಷರ್‌ ನಡೆಸಲು ಉದ್ದೇಶಿಸಿರುವುದು ಸರಿಯಲ್ಲ. ಇದನ್ನು ಪ್ರಶ್ನಿಸಲು ಹೋದ ರೈತರ ಮೇಲೆ ಕ್ರಷರ್‌ ನಡೆಸುವ ಮಾಲೀಕರು ದೌರ್ಜನ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದರೂ ಏನು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಕ್ರಷರ್‌ ನಡೆಸುವುದರಿಂದ ನಮ್ಮ ಜಮೀನುಗಳಲ್ಲಿ ವ್ಯವಸಾಯ ಮಾಡಲು ಸಾಧ್ಯವಾಗುವುದಿಲ್ಲ. ಜಾನುವಾರು, ಕುರಿ, ಮೇಕೆಗಳನ್ನು ಗುಡ್ಡದಲ್ಲಿ ಮೇಯಿಸಲು ಆಗುವುದಿಲ್ಲ. ಪರಿಸರಕ್ಕೂ ಹಾನಿ ಆಗುತ್ತದೆ. ಅಂತರ್ಜಲಕ್ಕೂ ತೊಂದರೆ ಆಗಬಹುದು. ಇದರಿಂದ ನೀರಿನ ಸಮಸ್ಯೆ ಉಂಟಾಗಬಹುದು. ಅಷ್ಟೇ ಅಲ್ಲದೆ ಕಲ್ಲು ಬ್ಲಾಸ್ಟ್‌ ಮಾಡುವ, ಕ್ರಷರ್‌ ನಡೆಸುವ ಶಬ್ದದಿಂದ ಸಮೀಪ ಗ್ರಾಮದ ಜನರಿಗೆ ತೊಂದರೆಯಾಗುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಸಿರುವ ತೆಂಗಿನ ತೋಟಕ್ಕೆ ಹಾನಿಯಾದರೆ ಹಲವು ರೈತ ಕುಟುಂಬಗಳು ಬೀದಿ ಪಾಲಾಗಬೇಕಾಗುತ್ತದೆ ಎನ್ನುತ್ತಾರೆ ರೈತ ಗೋವಿಂದಪ್ಪ.

ಹಾಗಾಗಿ ರೈತರು ಹಾಗೂ ಜಾನುವಾರು ಹಿತ ಕಾಪಾಡಲು ತಾಲ್ಲೂಕು ಆಡಳಿತ ಮುಂದಾಗಬೇಕು. ಇಲ್ಲದಿದ್ದರೆ ತಾಲ್ಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಬೇಕಾಗುತ್ತದೆ ಎಂದು ಕೆ.ಕೆ.ಹಟ್ಟಿ, ಚನ್ನಸಮುದ್ರ ಗ್ರಾಮದ ರೈತರು ಎಚ್ಚರಿಸಿದ್ದಾರೆ.

-ಎಸ್‌.ಸುರೇಶ್‌ ನೀರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT