ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಸೀದಿ ಧ್ವಂಸ ಭಾರತೀಯತೆ ಮೇಲೆ ನಡೆದ ದಾಳಿ’

ಸಿಪಿಎಂ, ಸಿಪಿಐ ಸಂಘಟನೆಯಿಂದ ಕರಾಳ ದಿನಾಚರಣೆ
Last Updated 7 ಡಿಸೆಂಬರ್ 2017, 9:48 IST
ಅಕ್ಷರ ಗಾತ್ರ

ಸಿಂಧನೂರು: ಅಯೋಧ್ಯೆಯ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ 25 ವರ್ಷ ಗತಿಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 6ರ ದಿನವಾದ ಬುಧವಾರ ಸಿಪಿಐಎಂ ಮತ್ತು ಸಿಪಿಐ ಜಂಟಿ ಸಂಘಟನೆಗಳ ತಾಲ್ಲೂಕು ಘಟಕದ ಪದಾಧಿಕಾರಿಗಳು ಕರಾಳದಿನ ಆಚರಿಸಿ ಇಲ್ಲಿನ ಮಿನಿವಿಧಾನಸೌಧ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪ್ರಾರಂಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 61ನೇ ಪರಿನಿರ್ವಾಣ ದಿನದ ಅಂಗವಾಗಿ ಬಾಬಾಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಂತರ ಸಿಪಿಎಂ ರಾಜ್ಯ ಘಟಕದ ಸದಸ್ಯ ನಿತ್ಯಾನಂದಸ್ವಾಮಿ ಮಾತನಾಡಿ, ‘1992 ಡಿಸೆಂಬರ್‌ 6 ದೇಶದ ಇತಿಹಾಸದಲ್ಲೇ ಕರಾಳ ದಿನವಾಗಿದ್ದು, ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಸುಮಾರು 400 ವರ್ಷಗಳಿಗಿಂತ ಹಳೆಯದಾದ ಬಾಬರಿ ಮಸೀದಿಯನ್ನು ಕೆಲ ದುಷ್ಟಶಕ್ತಿಗಳು ಕೆಡವಿದರು. ಈ ಘಟನೆಯಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗದ ಸಾವಿರಾರು ಅಮಾಯಕ ಯುವಕರು ಬಲಿಯಾದರು. ಇದೊಂದು ಭಾರತೀಯತೆಯ ಮೇಲೆ ನಡೆದ ದಾಳಿಯಾಗಿದೆ. ಈ ನಿಟ್ಟಿನಲ್ಲಿ ಘಟನೆ ಕುರಿತು ತನಿಖೆ ನಡೆಸಿದ ಲಿಬರ್ಹಾನ್ ವರದಿಯಲ್ಲಿ ಸಂಚುಕೋರರನ್ನು ಸ್ಪಷ್ಟವಾಗಿ ತಿಳಿಸಿದೆ. ಆದರೆ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಕೂಡಲೇ ಸರ್ಕಾರ ಲಿಬರ್ಹಾನ್ ವರದಿ ಜಾರಿ ಮಾಡಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು. ಬಾಬರಿ ಮಸೀದಿ ಕೆಡವಿದ ಜಾಗದಲ್ಲಿ ಮಸೀದಿಯನ್ನು ಪುನರ್ ನಿರ್ಮಾಣ ಮಾಡಬೇಕು’ ಎಂದು ಆಗ್ರಹಿಸಿದರು.

ಬಾಬರಿ ಮಸೀದಿ ಧ್ವಂಸವು ಸಂಘ ಪರಿವಾರ ಮತ್ತು ಬಿಜೆಪಿ ಸೇರಿ ಮಾಡಿವೆ. ಈ ಘಟನೆ ನಂತರ ಬಿಜೆಪಿ ಮುಸಲ್ಮಾನರನ್ನು ತೋರಿಸಿ ಹಿಂದೂ ಓಟುಗಳನ್ನು ಕ್ರೋಢೀಕರಿಸುವ ಸುಲಭ ಉಪಾಯವನ್ನು ಕಂಡುಕೊಂಡಿತು. ಈವರೆಗೂ ರಾಮ ಮಂದಿರ ಕಟ್ಟುವ ಅಜೆಂಡಾ ಪ್ರತಿ ಚುನಾವಣೆಯಲ್ಲೂ ಬಳಸಿ ಮತದಾರರನ್ನು ಮಂಗ ಮಾಡುವ ಚಳಕವನ್ನು ಮೈಗೂಡಿಸಿಕೊಂಡು ಇಡೀ ದೇಶವನ್ನೇ ಕೋಮು ದ್ವೇಷದಿಂದ ತತ್ತರಿಸುವಂತೆ ಮಾಡಿದೆ ಎಂದು ಆರೋಪಿಸಿದರು.

‘ ಬಾಬರಿ ಮಸೀದಿ ಈ ದೇಶದ ಅಸ್ಮಿತೆ ಮತ್ತು ಈ ನೆಲದ ಅಮೂಲ್ಯ ಸ್ವತ್ತು. ಅದನ್ನು ಧ್ವಂಸ ಮಾಡುವುದೆಂದರೆ ದೇಶಕ್ಕೆ ಮಾಡುವ ನಷ್ಟ ಮತ್ತು ಅಪಚಾರ. ಇಂತಹ ಕೆಲಸ ಮಾಡಿ ಈಗಲೂ ಅದನ್ನು ಸಮರ್ಥಿಸಿಕೊಳ್ಳುತ್ತಾ ವಿಜೃಂಭಿಸುತಿರುವುದು ಹಿಂದೂತ್ವವಾದಿಗಳ ಹೀನ ಕೃತ್ಯವಾಗಿದೆ’ ಎಂದು ನಿತ್ಯಾನಂದಸ್ವಾಮಿ ದೂರಿದರು.

ಸಿಪಿಐ ತಾಲ್ಲೂಕು ಘಟಕದ ಕಾರ್ಯದರ್ಶಿ ಬಾಷುಮಿಯಾ ಮಾತನಾಡಿ, ‘ಪವಿತ್ರ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿರುವ ಫ್ಯಾಸಿಸ್ಟ್ ವರ್ಗ ರಾಮ ಜನ್ಮಭೂಮಿ ಹೆಸರೆತ್ತಿ ಕಟ್ಟುಕಥೆ ಹೆಣೆಯುತ್ತಿದೆ. ಈ ದೇಶದ ಮುಸ್ಲಿಮರ ಅಭಿಮಾನದ ಪ್ರತೀಕವಾದ ಬಾಬರಿ ಮಸೀದಿಯನ್ನು ಒಂದಲ್ಲ ಒಂದು ದಿನ ಅದೇ ಸ್ಥಳದಲ್ಲಿಯೇ ನಿರ್ಮಿಸಬೇಕಿದೆ’ ಎಂದರು.

ಸಿಪಿಐ ಸದಸ್ಯ ಎಸ್.ದೇವೇಂದ್ರಗೌಡ ಮಾತನಾಡಿ, ‘ಬಾಬ್ರಿ ಮಸೀದಿ ಧ್ವಂಸದ ನಂತರ ಹೆಚ್ಚು ಧೈರ್ಯ ಬಂದ ಹಿಂದುತ್ವ ಪಡೆಗಳಿಗೆ ಈಗ ಅಧಿಕಾರಸ್ಥ ಬಿಜೆಪಿಯ ಕೃಪಾಘೋಷಣೆಯಿಂದ ತಾವು ಹೇಳಿದ್ದೆ ಕಾನೂನು ಎಂಬಂತೆ ವರ್ತಿಸುತ್ತಿವೆ’ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದೂಸಾಬ ಮುಳ್ಳೂರು, ಜೆಡಿಎಸ್ ಮುಖಂಡರಾದ ಕೆ.ಜಿಲಾನಿಪಾಷಾ, ಜಹೀರುಲ್ಲಾ ಹಸನ್, ನಗರಸಭೆ ಸದಸ್ಯ ಹಾಜಿಮಸ್ತಾನ್, ಮನುಜಮತ ಬಳಗದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ ದಢೇಸುಗೂರು ಮಾತನಾಡಿದರು.

ನಂತರ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ನೀಡಲಾಯಿತು. ಕೋಮು ಸೌಹಾರ್ದ ವೇದಿಕೆಯ ಕಾರ್ಯದರ್ಶಿ ಸಮ್ಮದ್ ಚೌದ್ರಿ, ಸಿಪಿಐ ಸದಸ್ಯರಾದ ವೆಂಕನಗೌಡ ಗದ್ರಟಗಿ, ಡಿ.ಎಚ್.ಕಂಬಳಿ, ಹನುಮಂತಪ್ಪ, ಆದಪ್ಪ ಬಿರಾದರ್, ತಿಪ್ಪಯ್ಯಶೆಟ್ಟಿ, ಶರಣಪ್ಪ ಗೊರೇಬಾಳ, ಮೊಹಿನುದ್ದೀನ್, ಸಿಪಿಐಎಂ ತಾಲ್ಲೂಕು ಘಟಕದ ಕಾರ್ಯದರ್ಶಿ ಯಂಕಪ್ಪ ಕೆಂಗಲ್, ಪ್ರಾಂತ ಕೃಷಿ ಕೂಲಿಕಾರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಡಿ.ವೀರನಗೌಡ, ಕಾರ್ಮಿಕ ಮುಖಂಡ ನಾರಾಯಣ ಕಿಲ್ಲೇದ್, ದಲಿತ ಮುಖಂಡ ಆರ್.ಬೋನ್‌ವೆಂಚರ್, ಪ್ರಗತಿಪರ ಮುಖಂಡ ಎಂ.ಎಸ್.ರಾಜಶೇಖರ, ಸದಸ್ಯರಾದ ಶೇಕ್ಷಾಖಾದ್ರಿ, ಅಪ್ಪಣ್ಣ ಕಾಂಬಳೆ, ಮುರ್ತುಜಾ, ಮಹಿಬೂಬಸಾಬ ಸೈಕಲ್‌ಶಾಫ್, ಅಂಗನವಾಡಿ ಕಾರ್ಯಕರ್ತೆಯರಾದ ಯಮನಮ್ಮ, ರತ್ನಾ ದೇವರಗುಡಿ, ಲಾಲಬಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT