ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಒಡೆಯುವ ಕಾರ್ಯ ಬಿಟ್ಟು ಚರ್ಚೆಗೆ ಬನ್ನಿ

ಬಿ.ಎಸ್‌.ಯಡಿಯೂರಪ್ಪಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು
Last Updated 7 ಡಿಸೆಂಬರ್ 2017, 11:22 IST
ಅಕ್ಷರ ಗಾತ್ರ

ಕಾರವಾರ: ‘ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕಾರ್ಯವನ್ನು ಮೊದಲು ಬಿಡಿ, ನಿಮಗೆ ತಾಕತ್ತಿದ್ದರೆ ಚರ್ಚೆಗೆ ಬನ್ನಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಯ ಬಿ.ಎಸ್.ಯಡಿಯೂರಪ್ಪಗೆ ಸವಾಲು ಹಾಕಿದರು.

ಕಾರವಾರ–ಅಂಕೋಲಾ ವಿಧಾನ ಸಭಾ ಕ್ಷೇತ್ರದಲ್ಲಿ ₹ 707 ಕೋಟಿ ಮೊತ್ತದ 67 ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

‘ನಾವು ಜಾತಿ, ಧರ್ಮದ ಆಧಾರ ದಲ್ಲಿ ಮತ ಕೇಳೋದಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುತ್ತೇವೆ. ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಷಾ ಪ್ರಚಾರಕ್ಕೆ ಬಂದರೂ ಕೂಡ ಬಿಜೆಪಿ ಅಧಿಕಾರಕ್ಕೆ ಬರಲ್ಲ’ ಎಂದು ಹೇಳಿದರು.

‘ಗುಂಡ್ಲುಪೇಟೆ ಹಾಗೂ ನಂಜನ ಗೂಡು ಉಪ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ಬಳಿಕ ಯಡಿಯೂರಪ್ಪ ಹತಾಶರಾಗಿದ್ದಾರೆ. ಇದರಿಂದಾಗಿ ಅವರ ‘ಮಿಷನ್ 150’ ಠುಸ್ ಆಗಿದೆ. ಇದೀಗ ಪರಿವರ್ತನಾ ಯಾತ್ರೆ ಮಾಡಿ, ಎಲ್ಲರಿಗೂ ಬೈಯ್ಯುತ್ತಾ, ಏಕವಚನದಲ್ಲಿ ಟೀಕಿಸುತ್ತಾ ತಿರುಗುತ್ತಿದ್ದಾರೆ. ಜಾತಿ, ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುವ, ಜನರನ್ನು ಒಡೆಯುವ ನೀವು ಮೊದಲು ಪರಿವರ್ತನೆಯಾಗಬೇಕು. ಧರ್ಮದ ಹೆಸರಿನಲ್ಲಿ ಜನರನ್ನು ಪ್ರಚೋದಿಸಿ, ಅವರ ಭಾವನೆಗಳನ್ನು ಕೆರಳಿಸಿ ಅಧಿಕಾರ ಹಿಡಿಯ ಬಯಸುವ ನಿಮ್ಮ ಹುನ್ನಾರದಿಂದ ರಾಜ್ಯ ಉದ್ಧಾರ ಆಗಲ್ಲ’ ಎಂದರು.

‘ವಿರೋಧ ಪಕ್ಷದವರಿಗೆ ನಮ್ಮ ಪಕ್ಷದ ವಿರುದ್ಧ ಅಪಪ್ರಚಾರ ಮಾಡಲು ಯಾವುದೇ ವಿಷಯ ಸಿಕ್ಕಿಲ್ಲ. ಹೀಗಾಗಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ದಲಿತರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿಗರಿಗೆ ಈಗ ದಲಿತರ ನೆನಪಾಗಿದೆ. ಬಿಜೆಪಿಗಿಂತಲೂ ಹೆಚ್ಚು ಅಭಿವೃದ್ಧಿ ಕೆಲಸ ಕಾಂಗ್ರೆಸ್‌ನಿದಾಗಿದೆ. ಬಂಡವಾಳ ಹೂಡಿಕೆ ವಿಷಯದಲ್ಲಿ 11ನೇ ಸ್ಥಾನದಲ್ಲಿದ್ದ ಕರ್ನಾಟಕ ಈಗ 1ನೇ ಸ್ಥಾನಕ್ಕೆ ಬಂದಿದೆ. ನಮ್ಮಲ್ಲಿ ಹೂಡಿಕೆ ಆದ ಅರ್ಧದಷ್ಟು ಬಂಡವಾಳವೂ ಗುಜರಾತ್‌ನಲ್ಲಿ ಹೂಡಿಕೆಯಾಗಿಲ್ಲ’ ಎಂದರು.

‘ಅನಂತಕುಮಾರ ಹೆಗಡೆ 5 ಬಾರಿ ಸಂಸದರಾದರೂ ಸಾಧನೆ ಮಾತ್ರ ಸೊನ್ನೆ. ಪ್ರತಿ ಬಾರಿಯೂ ಧರ್ಮದ ಹೆಸರಿನಲ್ಲಿ ಜನರ ಭಾವನೆ ಕೆರಳಿಸಿ, ಗೆಲ್ಲುವ ಅವರ ಮಾತಿಗೆ ಜನ ದಾರಿ ತಪ್ಪಬಾರದು. ಹುಣಸೂರಿನಲ್ಲಿ ಹನುಮ ಜಯಂತಿ ಮಾಡಬೇಡಿ ಅಂತ ಹೇಳಿಲ್ಲ. ಆದರೆ ಬಿಜೆಪಿ ಅವರು ಅದನ್ನು ಗುತ್ತಿಗೆ ತೆಗೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ನಾನು ಕೂಡ ಹಿಂದೂ. ನನ್ನ ಹೆಸರಲ್ಲೂ ರಾಮ ಇದ್ದಾನೆ’ ಎಂದು ಹೇಳಿದರು.

**

ಇನ್ನೂ 6 ವೈದ್ಯ ಕಾಲೇಜು ಮಂಜೂರು

‘2014 ಪೂರ್ವದಲ್ಲಿ ರಾಜ್ಯದಲ್ಲಿ ಮೈಸೂರು, ಬಳ್ಳಾರಿ, ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದವು. ನನ್ನ ಅವಧಿಯಲ್ಲಿ 6 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿ, ಅದನ್ನು ಉದ್ಘಾಟನೆ ಮಾಡಿದ್ದೇನೆ. ಇನ್ನೂ 6 ವೈದ್ಯಕೀಯ ಕಾಲೇಜುಗಳನ್ನು ಮಂಜೂರು ಮಾಡಿದ್ದೇನೆ. ಗ್ರಾಮೀಣ ಜನರ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾಗಬೇಕು ಎಂಬುದು ನಮ್ಮ ಬಯಕೆ. ಬಿಜೆಪಿ ಸರ್ಕಾರ ಇದ್ದಾಗ ಒಂದಾದರೂ ವೈದ್ಯಕೀಯ ಕಾಲೇಜನ್ನು ತಂದಿದ್ದಾರಾ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

**

ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನರು ನಮಗೆ ಆಶೀರ್ವದಿಸಲಿದ್ದಾರೆ. ಕರ್ನಾಟಕವನ್ನು ದೇಶದಲ್ಲಿ ಮಾದರಿ ರಾಜ್ಯವನ್ನಾಗಿ ಮಾಡಲಾಗುವುದು.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT