ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್ವೆಂಟ್‌ ಮಾದರಿಯಲ್ಲಿ ಅಂಗನವಾಡಿಗಳ ಅಭಿವೃದ್ಧಿ

ಕೆಡಿಪಿ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಹೇಳಿಕೆ; ಶಿಕ್ಷಣ ಸಂಸ್ಥೆಗಳ ವಿರುದ್ಧ ಆಕ್ರೋಶ
Last Updated 7 ಡಿಸೆಂಬರ್ 2017, 11:44 IST
ಅಕ್ಷರ ಗಾತ್ರ

ಕೋಲಾರ: ‘ಶಿಕ್ಷಣ ವ್ಯವಸ್ಥೆ ಸುಧಾರಿಸುವ ಉದ್ದೇಶಕ್ಕಾಗಿ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳನ್ನು ಕಾನ್ವೆಂಟ್‌ಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪಣ ತೊಡಲಾಗಿದೆ. ಇದಕ್ಕೆ ಪೂರಕವಾಗಿ ಶೀಘ್ರವೇ ಪಠ್ಯಕ್ರಮ ಸಿದ್ಧಪಡಿಸಿ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಬುಧವಾರ ನಡೆದ ತಾ.ಪಂ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ವ್ಯಾಪಾರೀಕರಣ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಪೋಷಕರ ವ್ಯಾಮೋಹ ಹೆಚ್ಚಿದೆ. ಶಿಕ್ಷಣ ಕ್ರಾಂತಿಯ ಮನೋಭಾವದಲ್ಲಿ ಅಂಗನವಾಡಿ ಕೇಂದ್ರಗಳನ್ನು ಕಾನ್ವೆಂಟ್‌ಗಳ ಮಟ್ಟಕ್ಕೆ ಅಭಿವೃದ್ಧಿಪಡಿಸುವುದು ತುರ್ತು ಅಗತ್ಯವಾಗಿದೆ. ಪ್ರಿಕೆಜಿ, ಎಲ್‌ಕೆಜಿ ಹಾಗೂ ಯುಕೆಜಿ ಪಠ್ಯಕ್ರಮವನ್ನು ಈಗಿನ ಪಠ್ಯಕ್ರಮಕ್ಕೆ ಸೇರಿಸಿ ನೀಡಲು ಶಿಕ್ಷಣ ಇಲಾಖೆ ಶೀಘ್ರವೇ ಸಮಿತಿ ರಚಿಸಬೇಕು. ಈ ತಿಂಗಳ ಅಂತ್ಯದೊಳಗೆ ಪಠ್ಯಪುಸ್ತಕ ಮುದ್ರಣವಾಗಬೇಕು ಎಂದು ಆದೇಶಿಸಿದರು.

ಅಂಗನವಾಡಿಗಳು ಮಕ್ಕಳು ಬಂದು, ತಿಂದು, ಮಲಗಿ ಮನೆಗೆ ಹೋಗುವುದಕ್ಕೆ ಸೀಮಿತವಾಗಿವೆ. ಗ್ರಾಮೀಣ ಪ್ರದೇಶದ ಅಂಗನವಾಡಿಗಳಲ್ಲೂ ಖಾಸಗಿ ಶಾಲೆಗಳಂತೆ ಧ್ವನಿ ಮೊಳಗಿದರೆ ಶಿಕ್ಷಣ ಸುಧಾರಣೆ ಸಾಧ್ಯ. ಅದಕ್ಕೆ ಪೂರಕವಾಗಿ ಬೋಧನಾ ಕ್ರಮಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ 457 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು 2ರಂದು ಕೋಲಾರದ ಅಂಬೇಡ್ಕರ್ ಭವನದಲ್ಲಿ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.

ಸೇವೆ ಸಿಗುತ್ತಿಲ್ಲ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಸೇವಾ ಮನೋಭಾವದಿಂದ ಜಿಲ್ಲೆಯಲ್ಲಿ ಆರಂಭಿಸಿರುವ ಕೃಷಿ ಯಂತ್ರಧಾರೆ ಸೇವಾ ಕೇಂದ್ರಗಳು ಉತ್ತಮವಾಗಿವೆ. ಆದರೆ, ರಾಜ್ಯ ಸರ್ಕಾರವು ಯಾವುದೋ ಸಂಸ್ಥೆಯ ಮೂಲಕ ಆರಂಭಿಸಿರುವ ಸೇವಾ ಕೇಂದ್ರಗಳು ಲಾಭದ ಮುಖ ನೋಡುತ್ತಿರುವುದರಿಂದ ರೈತರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಸಮರ್ಪಕ ಸೇವೆ ಸಿಗದಿದ್ದರೆ ರೈತರು ದೂರು ನೀಡಬಹುದು. ಈ ಬಗ್ಗೆ ರೈತರಿಗೆ ಕರಪತ್ರಗಳನ್ನು ವಿತರಿಸಿ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಶೀಘ್ರವೇ ಸಹಾಯಧನ: ‘ಕೃಷಿ ಹೊಂಡಗಳ ನಿರ್ಮಾಣಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿಲ್ಲ. ಸರ್ಕಾರದಿಂದ ಈಗಾಗಲೇ ₹ 1.80 ಕೋಟಿ ಬಿಡುಗಡೆಯಾಗಿದ್ದು, ಫಲಾನುಭವಿಗಳಿಗೆ ಶೀಘ್ರವೇ ಸಹಾಯಧನ ವಿತರಿಸಲಾಗುವುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಂಗಸ್ವಾಮಿ
ಹೇಳಿದರು.

ಕೃಷಿ ಹೊಂಡಗಳ ಸುತ್ತ ತಂತಿಬೇಲಿ ನಿರ್ಮಿಸುವಂತೆ ರೈತರಿಗೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೆ, ಬೆರಳೆಣಿಕೆ ರೈತರು ತಂತಿಬೇಲಿ ನಿರ್ಮಿಸಿದ್ದಾರೆ. ತಂತಿಬೇಲಿ ಹಾಕದಿದ್ದರೆ ಅನಾಹುತದ ಸಾಧ್ಯತೆ ಹೆಚ್ಚು ಎಂದರು.

ಹನಿ ನೀರಾವರಿಗೆ ₹ 2.93 ಕೋಟಿ ಅನುದಾನ ಬಿಡುಗಡೆಯಾಗಿದ್ದು, ₹ 62 ಲಕ್ಷ ಖರ್ಚು ಮಾಡಲಾಗಿದೆ. ಪರಿಶಿಷ್ಟ ಜಾತಿಯವರಿಗೆ ₹ 88 ಲಕ್ಷ, ಪರಿಶಿಷ್ಟ ಪಂಗಡದವರಿಗೆ ₹ 19.60 ಲಕ್ಷ ಹಾಗೂ ಸಾಮಾನ್ಯ ವರ್ಗದವರಿಗೆ ₹ 1.90 ಕೋಟಿ ಮೀಸಲಿರಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವಾರೆಡ್ಡಿ ಮಾಹಿತಿ ನೀಡಿದರು.

ಪಾಲಿಹೌಸ್ ಸಹಾಯಧನ ಹಂಚಿಕೆಯಲ್ಲಿ ನಡೆದ ಅಕ್ರಮದ ಸಂಬಂಧ ಅಧಿಕಾರಿಯೊಬ್ಬರು ಅಮಾನತು ಆಗಿದ್ದಾರೆ. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಧೋಗತಿಗೆ ತಲುಪಿವೆ. ದಲ್ಲಾಳಿಗಳೇ ಅಧಿಕಾರ ನಡೆಸುವ ವ್ಯವಸ್ಥೆಯಿದೆ. 2012ರಿಂದ ಈವರೆಗೆ ಹನಿ ನೀರಾವರಿಗೆ ಆಯ್ಕೆಯಾಗಿರುವ ಫಲಾನುಭವಿಗಳು ಮತ್ತು ಅನುದಾನದ ಸಮಗ್ರ ಮಾಹಿತಿಯನ್ನು ಡಿ.11ರೊಳಗೆ ಕೊಡಿ ಎಂದು ಆಂಜಿನಪ್ಪ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT