ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಿ ಕೋಳಿ ಸಾಕಾಣಿಕೆಗೆ ಹೆಚ್ಚಿದ ಒಲವು

ವೇಗ ಪಡೆದುಕೊಂಡ ನಾಟಿ ಕೋಳಿ ಸಾಕಾಣಿಕೆ; ಬಿತ್ತನೆ ಕೋಳಿ ಖರೀದಿಗೆ ಮುಗಿಬಿದ್ದ ರೈತರು
Last Updated 7 ಡಿಸೆಂಬರ್ 2017, 11:48 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ನಾಟಿ ಕೋಳಿ ಸಾಕಾಣಿಕೆ ವೇಗ ಪಡೆದುಕೊಂಡಿದ್ದು, ರೈತರು ಉತ್ತಮ ಗುಣಮಟ್ಟದ ಬಿತ್ತನೆ ಕೋಳಿಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ.

ನಾಟಿ ಕೋಳಿ ಸಾಕಾಣಿಕೆ ಕೃಷಿಕರ ಒಂದು ಉಪಕಸುಬು. ಸಾಮಾನ್ಯವಾಗಿ ಸುಗ್ಗಿ ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಾಟಿ ಕೋಳಿಗಳ ಸಂಖ್ಯೆ ಹೆಚ್ಚುತ್ತದೆ. ಮಣ್ಣು ಸೇರಿದ ರಾಗಿ, ಹಿಂದಕ್ಕೆ ಬಿದ್ದ ಕಾಳು ಕೋಳಿಗೆ ಹಾಕಿ ಸಾಕಲಾಗುತ್ತದೆ. ಬಯಲಿನ ಮೇಲೆ ಮೇಯ್ದು ಬಂದು ಮೊಟ್ಟೆ ಇಡುವ ಹಾಗೂ ಮರಿ ಮಾಡುವ ಕೋಳಿಗಳಿಗೆ ಈಗ ಲೆಕ್ಕವಿಲ್ಲದಾಗಿದೆ.

ಈ ಬಾರಿ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ. ರಾಗಿ ರೈತರ ಕಣಜ ತುಂಬಿದೆ. ಜಿನುಗು ರಾಗಿಯೂ ಸಾಕಷ್ಟಿದೆ. ಇದು ಕೋಳಿ ಮೇವಿಗೆ ಪೂರಕವಾಗಿದ್ದು, ಸಾಕಾಣಿಕೆ ಗರಿಗೆದರಿದೆ.

ನೆರೆಯ ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಬಿತ್ತನೆ ಕೋಳಿ ತಂದಿರುವ ವ್ಯಾಪಾರಿಗಳು, ಒಂದು ಜೊತೆ ಕೋಳಿಗೆ ₹ 350 ರಂತೆ ಮಾರಾಟ ಮಾಡುತ್ತಿದ್ದಾರೆ. ಆಸಕ್ತ ರೈತರು ಹುಂಜ, ಕೋಳಿ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಬಿತ್ತನೆ ಗೌಜುಗಳ ವ್ಯಾಪಾರವೂ ಜೋರಾಗಿ ನಡೆಯುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ನಾಟಿ ಕೋಳಿ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಕೊಬ್ಬಿನ ಅಂಶ ತೀರಾ ಕಡಿಮೆ ಇರುವ ಈ ಕೋಳಿಯನ್ನು ಮಾಂಸಪ್ರಿಯರು ಹೆಚ್ಚು ಇಷ್ಟಪಡುತ್ತಾರೆ. ಆದ್ದರಿಂದಲೇ ನಾಟಿ ಕೋಳಿ ಬೆಲೆ ಕೆಜಿಯೊಂದಕ್ಕೆ ₹ 250 ರಿಂದ 300 ಇದೆ. ಆದರೂ ಬೇಡಿಕೆ ಮಾತ್ರ
ಕುಸಿದಿಲ್ಲ.

ಕೋಳಿ ಪಂದ್ಯ ಕಾನೂನು ಬಾಹಿರವಾದರೂ, ಕದ್ದು ಮುಚ್ಚಿ ಪಂದ್ಯ ಆಡುವುದುಂಟು. ಅಂತಹ ಪಂದ್ಯಗಳಲ್ಲಿ ಬಳಸುವ ಜಾತಿ ಹುಂಜಗಳ ಬೆಲೆ ₹ 2,000 ದಿಂದ 5,000 ದವರೆಗೆ ಇರುತ್ತದೆ. ಪಂದ್ಯಗಾರರು ಇಚ್ಛಿಸುವ ಬಣ್ಣದ ಹುಂಜವಾದರೆ ಅದರ ಬೆಲೆ ಇನ್ನೂ ಹೆಚ್ಚು. ನಾಟಿ ಮೊಟ್ಟೆಯ ಬೆಲೆಯೂ ಗಗನಕ್ಕೇರಿದೆ. ಬಿತ್ತನೆ ಮೊಟ್ಟೆಯೊಂದು ₹ 25 ರಿಂದ 30ರವರೆಗೆ ಮಾರಾಟವಾಗುತ್ತಿದೆ.

ಬಾಯ್ಲರ್‌ ಕೋಳಿಗಳಿಗೆ
ನೀಡುವಂತೆ ನಾಟಿ ಕೋಳಿಗೆ ಯಾವುದೇ ಔಷಧ ಅಥವಾ ಲಸಿಕೆ ನೀಡುವುದಿಲ್ಲ. ಇದೂ ಸಹ ಅಧಿಕ ಬೇಡಿಕೆಗೆ ಕಾರಣವಾಗಿದೆ. ಮಾಂಸದ ಹೋಟೆಲ್‌, ಡಾಬಾ ಅಥವಾ ಮೆಸ್‌ಗಳಲ್ಲಿ ಈಗ ನಾಟಿ ಕೋಳಿ ಸಾರು ಸಾಮಾನ್ಯವಾಗಿ ಸಿಗುತ್ತದೆ. ಈ ಹಿಂದೆ ಇದಕ್ಕೆ ಅಷ್ಟು ಮಾನ್ಯತೆ ಇರಲಿಲ್ಲ. ಈಗ ಎಲ್ಲಿಲ್ಲದ ಮಾನ್ಯತೆ ಬಂದಿದೆ. ‘ನಾಟಿ ಕೋಳಿ ಊಟ ಹಾಕಿಸ್ತೀರಾ?’ ಎಂದು ಕೇಳುವುದು ಈಗ ಫ್ಯಾಷನ್‌ ಆಗಿ
ಪರಿಣಮಿಸಿದೆ.

ಅಲ್ಲಲ್ಲಿ ನಾಟಿ ಕೋಳಿ ಫಾರಂಗಳು ತಲೆಯೆತ್ತಿವೆ. ವೈಜ್ಞಾನಿಕ ವಿಧಾನದಲ್ಲಿ ನಾಟಿ ಕೋಳಿ ಸಾಕಾಣಿಕೆ ನಡೆದಿದೆ. ಬಾಯ್ಲರ್‌ ಕೋಳಿ ಬೆಲೆಗೆ ಹೋಲಿಸಿದರೆ, ನಾಟಿ ಕೋಳಿ ಬೆಲೆ ಹೆಚ್ಚೆಂಬ ಮಾತು ಕೇಳಿಬರುತ್ತಿದೆ. ಆದರೂ ಖರೀದಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.

-ಆರ್‌.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT