ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾರ್ಟ್‌ಮೆಂಟ್‌ ಕಾರುಬಾರು

Last Updated 16 ಜೂನ್ 2018, 11:09 IST
ಅಕ್ಷರ ಗಾತ್ರ

‘ಯಶವಂತಪುರ ಯಾರ್ರೀ...?’ ಅದು ಕಚೇರಿ ಸಮಯ. ಕಂಡಕ್ಟರ್‌ ಹೀಗೆಂದು ಕೂಗಿದ್ದೇ ತಡ, ಕಲಬುರ್ಗಿಯಿಂದ ಬರುತ್ತಿದ್ದ ಬಸ್‌ನಲ್ಲಿದ್ದ ಅರ್ಧದಷ್ಟು ಜನ ಇಳಿದರು. ಹಾಗೆ ಇಳಿದವರ ಪೈಕಿ ಒಂದಿಷ್ಟು ಜನ ಮೆಟ್ರೊ ನಿಲ್ದಾಣದತ್ತ, ಇನ್ನೊಂದಷ್ಟು ಜನ ರೈಲು ನಿಲ್ದಾಣದತ್ತ, ಮತ್ತೊಂದಷ್ಟು ಜನ ಬಿಎಂಟಿಸಿ ನಿಲ್ದಾಣದತ್ತ ಲಗುಬುಗನೇ ಓಡಿದರು.

ಯಶವಂತಪುರದ ವೈಶಿಷ್ಟ್ಯವೇ ಇದು. ಬೆಂಗಳೂರಿನ ಯಾವುದೇ ಮೂಲೆಗೆ ತ್ವರಿತವಾಗಿ ತಲುಪಲು ನೆರವಾಗುವ ಸಾರ್ವಜನಿಕ ಸಾರಿಗೆ ಇಲ್ಲಿದೆ. ಒಂದು ಕಾಲಕ್ಕೆ ‘ಬೆಂಗಳೂರಿನ ಹೊರವಲಯ’ ಎನಿಸಿಕೊಂಡಿದ್ದ ಯಶವಂತಪುರ ಇಂದು ಮಧ್ಯಮ ವರ್ಗದ ನೆಚ್ಚಿನ ತಾಣವಾಗಿ ಬೆಳೆದಿದೆ. ರಸ್ತೆಗಳಲ್ಲಿ ಸದಾ ಜನಜಂಗುಳಿ.

ಮುಖ್ಯರಸ್ತೆಗಳಲ್ಲಿ ಬ್ಯಾಂಕು, ಕಚೇರಿ, ಹೋಟೆಲ್‌ಗಳು ಕಾಣಿಸುತ್ತವೆ. ತುಸು ಒಳ ನಡೆದರೆ ಎಲ್ಲೆಲ್ಲೂ ಮನೆಗಳೇ ಮನೆಗಳು. ಮಾಲೀಕರೋ ಮಹಡಿ ಮೇಲೆ ಮಹಡಿ ನಿರ್ಮಿಸುತ್ತಾ ಬಾಡಿಗೆಗೆ ನೀಡುತ್ತಿದ್ದಾರೆ. ರಿಯಲ್‌ ಎಸ್ಟೇಟ್‌ ಉದ್ಯಮದ ಹೆಸರಾಂತ ಬಿಲ್ಡರ್‌ಗಳು ಇಲ್ಲಿ ಪ್ರಾಜೆಕ್ಟ್‌ಗಳನ್ನು ನಿರ್ವಹಿಸುತ್ತಿದ್ದಾರೆ.

ಮಲ್ಲೇಶ್ವರ, ರಾಜಾಜಿನಗರ, ಮತ್ತಿಕೆರೆ, ಪೀಣ್ಯ, ಜಾಲಹಳ್ಳಿ, ಮಹಾಲಕ್ಷ್ಮಿ ಬಡಾವಣೆ, ನಂದಿನಿ ಬಡಾವಣೆ ಹೀಗೆ ಬೆಂಗಳೂರಿನ ಜನಪ್ರಿಯ ಪ್ರದೇಶಗಳ ಮಧ್ಯದಲ್ಲಿ ಯಶವಂತಪುರವಿದೆ. ಕಮಲಾ ನೆಹರು ಎಕ್ಸ್‌ಟೆನ್ಶನ್‌, ಗೋಕುಲ ಎಕ್ಸ್‌ಟೆನ್ಶನ್‌, ಎಲ್‌.ಎನ್‌. ಕಾಲೊನಿ, ಮಾಡೆಲ್‌ ಕಾಲೊನಿ, ಬಿ.ಕೆ. ನಗರ, ಸುಭೇದಾರಪಾಳ್ಯ, ಸುಂದರ ನಗರ, ಮುತ್ಯಾಲನಗರಗಳು ಯಶವಂತಪುರದೊಳಗೆ ಸೇರಿಕೊಂಡಿವೆ.

ನಗರದ ಹೃದಯಭಾಗವಾದ ಮೆಜೆಸ್ಟಿಕ್‌ನಿಂದ ಯಶವಂತಪುರದ ದೂರ 8 ಕಿ.ಮೀ. ಯಶವಂತಪುರದಿಂದ 8ನೇ ಮೈಲಿಗೆ (ತುಮಕೂರು ರಸ್ತೆ) ಕೇವಲ 4.5 ಕಿ.ಮೀ. ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಎಂಟನೇ ಮೈಲಿಗೆ ಹೆಚ್ಚೂಕಡಿಮೆ ಮುಕ್ತಾಯ. ಯಶವಂತಪುರದಿಂದ ಹೆಬ್ಬಾಳ, ವೈಟ್‌ಫೀಲ್ಡ್‌ ತಲುಪುವುದೂ ಸುಲಭ. ರಿಂಗ್‌ರೋಡ್‌ ಮಾರ್ಗವಾಗಿ ತೆರಳಿದರೆ ಮೈಸೂರಿಗೂ ಸಂಪರ್ಕ ಸಾಧಿಸಬಹುದು. ಯಲಹಂಕ ಆ ಮೂಲಕ ಹಿಂದೂಪುರ–ಅನಂತಪುರಗಳ ದಾರಿಯೂ ಸರಳ.

ಉತ್ತರ ಕರ್ನಾಟಕ ಮತ್ತು ಉತ್ತರ ಭಾರತವನ್ನು ಸಂಪರ್ಕಿಸುವ ಬಹುತೇಕ ರೈಲುಗಳು ಯಶವಂತಪುರ ಮಾರ್ಗವಾಗಿ ಸಂಚರಿಸುತ್ತವೆ. ನಗರದ ನಾಲ್ಕೂ ದಿಕ್ಕುಗಳಲ್ಲಿನ ಪ್ರಮುಖ ಪ್ರದೇಶಗಳನ್ನು ಬೆಸೆಯುವ ಮೆಟ್ರೊ ಸಂಪರ್ಕ ಬಂದಿರುವುದು ಡಬಲ್‌ ಧಮಾಕಾ. ಇಲ್ಲಿಂದ ನಗರದ ಯಾವುದೇ ಮೂಲೆಗೇ ತಲುಪಬೇಕು ಎಂದರೆ ಬೇಕಾದಷ್ಟು ಬಸ್‌ಗಳಿವೆ.

ಪೀಣ್ಯದಲ್ಲಿರುವ ‘ಬಸವೇಶ್ವರ ಬಸ್‌ ನಿಲ್ದಾಣ’ ಯಶವಂತಪುರದಿಂದ ಕೇವಲ 4 ಕಿ.ಮೀ. ದೂರದಲ್ಲಿದೆ. ಯಶವಂತಪುರಕ್ಕೆ ಹೊಂದಿಕೊಂಡತೆಯೇ ರಾಷ್ಟ್ರೀಯ ಹೆದ್ದಾರಿ 4 ಇದೆ. ಹಲವು ಮಾಲ್‌ಗಳು, ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗಳು, ಖ್ಯಾತ ಶಿಕ್ಷಣ ಸಂಸ್ಥೆಗಳು ಇಲ್ಲಿವೆ.

ಯಶವಂತಪುರ ಜನಪ್ರಿಯವಾಗಲು ಇನ್ನೂ ಹಲವು ಕಾರಣಗಳಿವೆ. ಈ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇಲ್ಲ. ಅಂತರ್ಜಲ ಶ್ರೀಮಂತವಾಗಿದ್ದು, ನೀರಿನ ಗಡಸುತನವೂ ಕಡಿಮೆ. ಸುತ್ತಮುತ್ತಲೂ ಕೈಗಾರಿಕೆ ಪ್ರದೇಶ ಇರುವುದರಿಂದ ವಿದ್ಯುತ್ ಕಡಿತದ ಸಮಸ್ಯೆಯೂ ಇಲ್ಲ. ವಾಯುಪಡೆಯ ನೆಲೆಯೂ ಸಮೀಪ ಇರುವುದರಿಂದ ಭದ್ರತೆಯ ಭಯವಿಲ್ಲ.

ಮುಖ್ಯರಸ್ತೆಯಿಂದ 15 ಕಿ.ಮೀ. ಒಳಗೆ ಸಾಗಿದರೆ ಹಸಿರು ತುಂಬಿದ ಹೆಸರಘಟ್ಟ ಪ್ರದೇಶ ಕಾಣಿಸುತ್ತದೆ. ‘ಶಾಪಿಂಗ್ ಮಾಡಲು ಮಾಲ್, ಕಡಿಮೆ ದರಕ್ಕೆ ತರಕಾರಿ ಸಿಗುವ ಎಪಿಎಂಸಿ, ದುಬಾರಿ ಎನಿಸದ ಮನೆಬಾಡಿಗೆ ದರ ಯಶವಂತಪುರ ಜನಪ್ರಿಯವಾಗಲು ಕಾರಣಗಳಾಗಿವೆ’ ಎನ್ನುತ್ತಾರೆ ಸುಭೇದಾರ್‌ಪಾಳ್ಯ ನಿವಾಸಿ ಚೇತನಾ.

‘ಯಶವಂತಪುರ ಮೊದಲಿನಂತಿಲ್ಲ. ಅವಶ್ಯಕ ಮೂಲಸೌಕರ್ಯಗಳೆಲ್ಲವೂ ಕೈಯಳತೆ ದೂರದಲ್ಲಿಯೇ ಇದೆ. ನೋಟು ರದ್ದತಿ ಹಾಗೂ ರೇರಾ ಬಂದ ನಂತರ ರಿಯಲ್‌ ಎಸ್ಟೇಟ್‌ ತುಸು ಕಳಾಹೀನವಾಗಿತ್ತು. ಬೆಲೆ ಕಡಿಮೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಜನರು ಹಣ ಹೂಡಿಕೆ ಮಾಡುವುದನ್ನು ನಿಲ್ಲಿಸಿದ್ದರು. ರಿಯಲ್‌ ಎಸ್ಟೇಟ್ ಈಗ ಮತ್ತೆ ಚಿಗುರಿದೆ. ಮಧ್ಯವಯಸ್ಸಿನವರು ಅಪಾರ್ಟ್‌ಮೆಂಟ್‌ಗಳ ಮೇಲೆ ಹೆಚ್ಚು ಹಣ ಹೂಡುತ್ತಿದ್ದಾರೆ.

ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ನಮ್ಮಲ್ಲಿ 50 ಅಂತಸ್ತಿನ ಕಟ್ಟಡ ನಿರ್ಮಾಣ ಪ್ರಾರಂಭವಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಯಶವಂತಪುರ ಮುಖ್ಯರಸ್ತೆ ಬಳಿ ಇರುವ ಗೋಲ್ಡನ್‌ ಗ್ರಾಂಡ್‌ನ ಪ್ರಾಪರ್ಟಿ ಮ್ಯಾನೇಜರ್‌ ಅಮಿತ್‌.

ಯಶವಂತಪುರ ಈಗಾಗಲೇ ಸಾಕಷ್ಟು ಬೆಳೆದಿರುವುದರಿಂದ ನಿವೇಶನಗಳ ಬೆಲೆಯನ್ನು ಕೇಳುವಂತೆಯೇ ಇಲ್ಲ. ವಿಲ್ಲಾಗಳಿಗೆ ಬೇಡಿಕೆ ಇಲ್ಲ. ಅಪಾರ್ಟ್‌ಮೆಂಟ್‌ಗಳಿಗೆ ಹೆಚ್ಚು ಬೇಡಿಕೆ ಇರುವ ಕಾರಣ, ಬಿಲ್ಡರ್‌ಗಳು ಅಪಾರ್ಟ್‌ಮೆಂಟ್‌ ನಿರ್ಮಾಣದತ್ತ ಮನಸು ಹರಿಸಿದ್ದಾರೆ. ನಗರದ ಹೊರಭಾಗಗಳಲ್ಲಿ ಸ್ವಂತಮನೆ ಹೊಂದಿರುವ ಅನೇಕರು ಹೂಡಿಕೆಗೆಂದು ಅಪಾರ್ಟ್‌ಮೆಂಟ್‌ ಕೊಳ್ಳುತ್ತಿದ್ದಾರೆ.

ಕೈಗಾರಿಕಾ ಪ್ರದೇಶವಾಗಿರುವ ದಾಬಸ್‌ಪೇಟೆಯಲ್ಲಿ ವಿದೇಶಿಗರು ಹಾಗೂ ಅನಿವಾಸಿ ಭಾರತೀಯರು ಹೆಚ್ಚಿನ ಬಂಡವಾಳ ಹೂಡುತ್ತಿದ್ದಾರೆ. ಸುಲಭ ಸಂಪರ್ಕದ ಕಾರಣದಿಂದ ಇಂಥವರ ನೆಚ್ಚಿನ ತಾಣವಾಗುತ್ತಿದೆ ಯಶವಂತಪುರ.

ಹಲವಾರು ಸಕಾರಾತ್ಮಕ ಅಂಶಗಳ ಜೊತೆಗೆ ಕೆಲವು ಇಲ್ಲಗಳೂ ಇಲ್ಲಿ ಕಾಡುತ್ತಿವೆ. ‘ಯಶವಂತಪುರ ಸುತ್ತಮುತ್ತ ಕೈಗಾರಿಕಾ ಪ್ರದೇಶಗಳಿವೆ. ಆದರೆ ಬಹುರಾಷ್ಟ್ರೀಯ ಕಂಪೆನಿಗಳು ಹೆಚ್ಚು ಇಲ್ಲ. ಬೆಂಗಳೂರಿನ ಇತರ ಸ್ಥಳಗಳಲ್ಲಿ ಇರುವ ಕಂಪೆನಿಗಳು ನೀಡುವ ಸಂಬಳಕ್ಕೆ ಹೋಲಿಸಿದರೆ, ಇಲ್ಲಿ ಕಾರ್ಮಿಕರಿಗೆ ಸಿಗುವ ಸಂಬಳದ ಪ್ರಮಾಣ ಕಡಿಮೆ. ಇದೇ ಕಾರಣಕ್ಕೆ ಈ ಪ್ರದೇಶದಲ್ಲಿ ಭೂಮಿಯ ಮೌಲ್ಯ ಹೆಚ್ಚುತ್ತಿಲ್ಲ.

*


12 ವರ್ಷಗಳಲ್ಲಿ ಸಾಕಷ್ಟು ಬೆಳೆದಿದೆ
ನಾವು ಯಶವಂತಪುರದಲ್ಲಿ ಮೊದಲ ಬಾರಿಗೆ (2009ರಲ್ಲಿ) ’ರತ್ನಂ’ ಯೋಜನೆ ಮಾಡಿದೆವು. ಅದಾದ ಮೇಲೆ ವೈಷ್ಣವಿ ನಕ್ಷತ್ರ, ವೈಷ್ಣವಿ ಸಫೈರ್‌ ಮಾಡಿದ್ದೇವೆ. ಸದ್ಯ ವೈಷ್ಣವಿ ಗಾರ್ಡೇನಿಯಾ ಜಾಲಹಳ್ಳಿಯಲ್ಲಿ ನಿರ್ಮಾಣವಾಗುತ್ತಿದೆ. ಯಶವಂತಪುರದಲ್ಲಿ ಮೂಲಸೌಕರ್ಯ ಸಮಗ್ರವಾಗಿ ಬೆಳೆದ ಕಾರಣ ಬಿಲ್ಡರ್‌ಗಳ ಗಮನ ಅತ್ತ ತಿರುಗಿತು. ಕಳೆದ ನಾಲ್ಕು ವರ್ಷಗಳಲ್ಲಿ ಯಶವಂತಪುರದಲ್ಲಿ ಭೂಮಿಯ ಬೆಲೆ ಶೇ 45ರಷ್ಟು ಹೆಚ್ಚಾಗಿದೆ.

ವಸತಿಗಾಗಿ ಎಲ್ಲ ವಯೋಮಾನದವರೂ ಯಶವಂತಪುರವನ್ನು ಆಯ್ದುಕೊಳ್ಳುತ್ತಿದ್ದಾರೆ. ಉದ್ಯಮಿಗಳು, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುವವರು, ಹಿರಿಯ ನಾಗರಿಕರು ಯಶವಂತಪುರದಲ್ಲಿ ಹಣ ಹೂಡಲು ಮನಸು ಮಾಡುತ್ತಿದ್ದಾರೆ. ಯಶವಂತಪುರದಲ್ಲಿ ಚದರ ಅಡಿಗೆ ₹5000ದಿಂದ ₹9000ವರೆಗೆ ಬೆಲೆ ಇದೆ.
–ದರ್ಶನ್‌ ಗೋವಿಂದರಾಜು, ವೈಷ್ಣವಿ ಗ್ರೂಪ್‌ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT