ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ್ಯಧಿಪತಿಗಳ ನಡುವೆ ಒಬ್ಬ ಕುಚೇಲ!

Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಜುನಾಗಡ (ಗುಜರಾತ್): ಗುಜರಾತ್ ರಾಜ್ಯ ಶ್ರೀಮಂತರ ಕಾಶಿ. ದೇಶದ ಅತಿ ಶ್ರೀಮಂತರಲ್ಲಿ ಬಹುಪಾಲು ಮಂದಿ ಈ ರಾಜ್ಯದಲ್ಲಿಯೇ ಇದ್ದಾರೆ. ಈಗ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿಯೂ ಸಾಕಷ್ಟು ಮಂದಿ ಕೋಟ್ಯಧಿಪತಿಗಳು ಸ್ಪರ್ಧಿಸಿದ್ದಾರೆ.

ಡಿ.9ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಸ್ಪರ್ಧಿಸಿರುವ 997 ಅಭ್ಯರ್ಥಿಗಳ ಪೈಕಿ198 ಮಂದಿ ಕೋಟ್ಯಧಿಪತಿಗಳಿದ್ದಾರೆ. ₹141.22 ಕೋಟಿ ಆಸ್ತಿ ಘೋಷಿಸಿಕೊಂಡಿರುವ ರಾಜಕೋಟ್‌ನ ಕಾಂಗ್ರೆಸ್ ಅಭ್ಯರ್ಥಿ ಇಂದ್ರನೀಲ ರಾಜಗುರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ ಬೋತಾಡ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಹಣಕಾಸು ಸಚಿವ ಸೌರಭ್ ಪಟೇಲ್ ₹123.78 ಕೋಟಿ ಆಸ್ತಿ ಘೋಷಿಸಿಕೊಂಡು ಎರಡನೇ ಸ್ಥಾನದಲ್ಲಿದ್ದಾರೆ.

₹113.47 ಕೋಟಿ ಆಸ್ತಿ ಘೋಷಿಸಿಕೊಂಡಿರುವ ವಾಧ್ವಾನ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಧನಜಿಭಾಯಿ ಪಟೇಲ್ ಮೂರನೇ ಸ್ಥಾನದಲ್ಲಿದ್ದಾರೆ.

ಈ ಎಲ್ಲ ಕೋಟ್ಯಧಿಪತಿಗಳ ನಡುವೆ ಜುನಾಗಡ ಕ್ಷೇತ್ರದಲ್ಲಿ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಮಹೇಂದ್ರ ಮಶ್ರು ತಮ್ಮ ಸರಳತೆಯಿಂದಲೇ ಗಮನ ಸೆಳೆದಿದ್ದಾರೆ.

₹2.5 ಲಕ್ಷದ ಮನೆ ಮತ್ತು ಬ್ಯಾಂಕ್ ಖಾತೆಯಲ್ಲಿ ₹ 10,000 ಬಿಟ್ಟರೆ ಬೇರೇನೂ ಇಲ್ಲ ಎಂದು ಅವರು ಘೋಷಿಸಿಕೊಂಡಿದ್ದಾರೆ. ಇವರ ಬಳಿ ವಾಹನ ಇಲ್ಲ. ಜುನಾಗಡದಿಂದ ಗಾಂಧಿ ನಗರಕ್ಕೆ ಇವರು ಸರ್ಕಾರಿ ಬಸ್ ನಲ್ಲಿಯೇ ಪ್ರಯಾಣಿಸುತ್ತಾರೆ. ಉಳಿದಂತೆ ಕ್ಷೇತ್ರದಲ್ಲಿ ಇವರದ್ದು ‘ನಟರಾಜ ಸರ್ವಿಸ್’.

(ಮಹೇಂದ್ರ ಮಶ್ರು)

ಎಲ್ಲ ಕಡೆ ನಡೆದೇ ಹೋಗುವ ಇವರು ತೀರಾ ಅವಸರ ಇದ್ದರೆ ಸೈಕಲ್ ಬಳಸುತ್ತಾರೆ. ಜುನಾಗಡ ಕ್ಷೇತ್ರದಿಂದ ಎರಡು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಮಶ್ರು ಕಳೆದ ನಾಲ್ಕು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಈಗ ಏಳನೇ ಬಾರಿಗೆ ಸ್ಪರ್ಧಿಸಿದ್ದಾರೆ.

‘ಈ ಬಾರಿ ಚುನಾವಣೆಗೆ ನನ್ನ ಹಣ ಖರ್ಚಾಗುವುದು ಹೆಚ್ಚೆಂದರೆ ₹ 1500. ಉಳಿದಂತೆ ಅಗತ್ಯಕ್ಕೆ ಬೇಕಾದಷ್ಟು ಹಣವನ್ನು ಪಕ್ಷ ವೆಚ್ಚ ಮಾಡುತ್ತದೆ. ದುಂದು ವೆಚ್ಚಕ್ಕೆ ಇಲ್ಲಿ ಅವಕಾಶವೇ ಇಲ್ಲ’ ಎಂದು ಅವರು ಹೇಳುತ್ತಾರೆ.

ಸರ್ವೋದಯ ಬ್ಲಡ್ ಬ್ಯಾಂಕ್ ಮೂಲಕ ಸಾರ್ವಜನಿಕ ಸೇವೆಗೆ ತೊಡಗಿದ ಮಶ್ರು ಈವರೆಗೆ 2.5 ಲಕ್ಷ ರಕ್ತ ದಾನಿಗಳನ್ನು ನೋಂದಾಯಿಸಿದ್ದಾರೆ.

ಜುನಾಗಡದಲ್ಲಿರುವ ಎಲ್ಲ ಭಿಕ್ಷುಕರು, ಬಡವರ ಚಿಕಿತ್ಸಾ ವೆಚ್ಚವನ್ನು ನೋಡಿಕೊಳ್ಳುವ ಅವರು ಈಗಲೂ ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲಿಯೇ ಕಳೆಯುತ್ತಾರೆ. ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಊಟದ ವ್ಯವಸ್ಥೆಯನ್ನೂ ಮಾಡುತ್ತಾರೆ.

ಜುನಾಗಡ ಜಿಲ್ಲಾ ಸಹಕಾರಿ ಬ್ಯಾಂಕ್ ನಲ್ಲಿ ಗುಮಾಸ್ತರಾಗಿದ್ದ ಮಶ್ರು 2013ರಲ್ಲಿ ನಿವೃತ್ತರಾಗಿದ್ದಾರೆ. ಶಾಸಕರಾಗಿದ್ದಾಗಲೂ ಅವರು ಬ್ಯಾಂಕ್ ಗುಮಾಸ್ತನ ಕೆಲಸವನ್ನು ಬಿಟ್ಟಿರಲಿಲ್ಲ.

ಗುಮಾಸ್ತನ ಸಂಬಳ ಬಿಟ್ಟರೆ ಶಾಸಕ ಸ್ಥಾನಕ್ಕೆ ನೀಡುವ ವೇತನ, ಭತ್ಯೆಗಳನ್ನು ಪಡೆಯುತ್ತಿರಲಿಲ್ಲ. ಈಗ ನಿವೃತ್ತಿ ವೇತನವೇ ಅವರ ಆಸರೆ. ಈಗಲೂ ಅವರು ಶಾಸಕನ ಸಂಬಳ ಪಡೆಯುತ್ತಿಲ್ಲ. ಶಾಸಕರಿಗೆ ಸರ್ಕಾರವೇ ನೀಡುವ ಆಪ್ತ ಸಹಾಯಕನ ಸೌಲಭ್ಯವನ್ನೂ ಅವರು ತಿರಸ್ಕರಿಸಿದ್ದಾರೆ.

‘ಚಹ, ಕಾಫಿ, ಹಾಲು ಕುಡಿಯದ ಅವರು ದಿನಕ್ಕೆ ಒಮ್ಮೆ ಮಾತ್ರ ಊಟ ಮಾಡುತ್ತಾರೆ. 45 ಕೆ.ಜಿ ತೂಕದ ಅವರು ನೋಡಲು ಸಣಕಲಿನಂತೆ ಕಂಡರೂ ಮಾನಸಿಕವಾಗಿ ಬಹಳ ಗಟ್ಟಿ.

ಹಿಡಿದ ಕೆಲಸವನ್ನು ಸಾಧಿಸುವ ತನಕ ಬಿಡುವುದಿಲ್ಲ. ಜನ ಸೇವೆಗೆ ಬಳಲಿಕೆ ಎನ್ನುವುದೇ ಇಲ್ಲ.

ಪ್ರಧಾನಿ ನರೇಂದ್ರ ಮೋದಿ ಕೂಡ ಇವರಿಗೆ ಅತ್ಯಂತ ಗೌರವ ನೀಡುತ್ತಾರೆ. ಮೋದಿಯೇ ಇವರನ್ನು ಹುಡುಕಿಕೊಂಡು ಬರಬೇಕೇ ವಿನಾ ಯಾವತ್ತೂ ಇವರು ಮೋದಿಯನ್ನು ಹುಡುಕಿಕೊಂಡು ಹೋಗಿಲ್ಲ’ ಎಂದು ಜುನಾಗಡ ಬಿಜೆಪಿ ಪ್ರಧಾನ ಕಾರ್ಯದರ್ಶಿ ಭರತ್ ಸಿಂಗಾಳ ಹೇಳುತ್ತಾರೆ.

‘ಚುನಾವಣೆ ಪ್ರಚಾರದ ಭರಾಟೆ ಅವರಿಗೆ ತಟ್ಟಿಯೇ ಇಲ್ಲ. ಈಗಲೂ ಅವರು ಬಡರೋಗಿಗಳ ಸೇವೆಯಲ್ಲಿಯೇ ತೊಡಗಿಕೊಂಡಿದ್ದಾರೆ. ಈಗಲೂ ಯಾವುದೋ ರೋಗಿಗೆ ರಕ್ತ ಬೇಕು ಎಂದು ಗೊತ್ತಾದರೆ ಅವರು ಪ್ರಚಾರ ಕಾರ್ಯವನ್ನು ಬಿಟ್ಟು ಅಲ್ಲಿಗೇ ತೆರಳುತ್ತಾರೆ’ ಎಂದು ಅವರು ಹೇಳಿದರು.

‘ಅವರ ಜೊತೆ ದಾರಿಯಲ್ಲಿ ಸಾಗುವಾಗ ರಸ್ತೆಯಲ್ಲಿ ಯಾವುದಾದರೂ ಜಾನುವಾರು ಅಥವಾ ನಾಯಿ ಸತ್ತು ಬಿದ್ದಿದ್ದರೆ ನಿಮ್ಮ ಗತಿ ಅಷ್ಟೆ. ಅವುಗಳ ಸಂಸ್ಕಾರ ಆಗುವ ತನಕ ನಿಮ್ಮನ್ನೂ ಬಿಡಲ್ಲ. ಅವರೂ ಬೇರೆ ಕೆಲಸ ಮಾಡಲ್ಲ’ ಎಂದು ಉಪ ಮೇಯರ್ ಗಿರೀಶ್ ಕೊಟೆಜಾ ಹೇಳಿದರು.

‘ಜುನಾಗಡ ನಗರ ಪಾಲಿಕೆಯ ಮೇಯರ್ ಆಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಆಗಲೂ ಅವರು ನಗರ ಪಾಲಿಕೆಯ ಯಾವುದೇ ಸೌಲಭ್ಯವನ್ನು ಬಳಸಿಕೊಳ್ಳಲಿಲ್ಲ. ಜೆರಾಕ್ಸ್ ಮಾಡಿಸಲೂ ಅವರು ಪಾಲಿಕೆ ಹಣ ಬಳಸುತ್ತಿರಲಿಲ್ಲ. ಮೇಯರ್‌ಗೆ ಮೀಸಲಿಟ್ಟ ಕಾರು ಬಳಸಲಿಲ್ಲ. ಅವರು ಮೇಯರ್ ಆಗಿದ್ದಾಗ ನಾನು ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದೆ.

ನಾನು ಕಾರಿನಲ್ಲಿ ಬರುತ್ತಿದ್ದೆ. ಅವರು ನಡೆದುಕೊಂಡೇ ಬರುತ್ತಿದ್ದರು. ಇದು ನನಗೆ ಬಹಳ ಮುಜುಗರ ಉಂಟು ಮಾಡುತ್ತಿತ್ತು. ಆರು ಬಾರಿ ಶಾಸಕರಾಗಿದ್ದ ಅವರನ್ನು ಸಚಿವರನ್ನಾಗಿ ಮಾಡಲು ಬಯಸಿದಾಗಲೂ ಅವರು ಅದನ್ನು ನಿರಾಕರಿಸಿದರು. ಇದಕ್ಕೆ ಮುಖ್ಯ ಕಾರಣ, ಸಚಿವರಾದರೆ ಸೌಲಭ್ಯ ಪಡೆಯಬೇಕು. ನಿರಾಕರಿಸಿದರೆ ಇತರ ಸಚಿವರಿಗೆ ಮುಜುಗರವಾಗುತ್ತದೆ ಎನ್ನುವುದೇ ಆಗಿತ್ತು’ ಎಂದು ಈಗ ಜುನಾಗಡ ಬಿಜೆಪಿ ಅಧ್ಯಕ್ಷರಾಗಿರುವ ಶಶಿಕಾಂತ್ ಭೀಮಾನಿ ಅವರು ಹೇಳಿದರು.

ಇಡೀ ಗುಜರಾತಿನಲ್ಲಿ ಮುಸ್ಲಿಂ ಸಮುದಾಯದವರು ಸ್ವಯಂ ಪ್ರೇರಣೆಯಿಂದ ಬಿಜೆಪಿಗೆ ಮತ ಹಾಕುವುದು ಈ ಕ್ಷೇತ್ರದಲ್ಲಿ ಮಾತ್ರ. ಯಾಕೆಂದರೆ ಮಶ್ರು ಅವರಿಗೆ ಮುಸ್ಲಿಂ, ಹಿಂದೂ ಎಂಬ ಭೇದವಿಲ್ಲ. ಎಲ್ಲರೂ ಒಂದೆ. ಈ ಕ್ಷೇತ್ರದಲ್ಲಿ ಸುಮಾರು28,000 ಮುಸ್ಲಿಂ ಮತದಾರರಿದ್ದಾರೆ. ಬಹುತೇಕರು ಮಶ್ರು ಅವರನ್ನೇ ಬೆಂಬಲಿಸುತ್ತಾರೆ ಎಂದು ಮಶ್ರು ಪರ ಪ್ರಚಾರದಲ್ಲಿ ತೊಡಗಿದ್ದ ದಿಲಾವರ್ ಖಾನ್ ಪಠಾಣ್ ಹೇಳಿದರು.

ಇಲ್ಲಿಯೇ ಪಕ್ಕದಲ್ಲಿರುವ ಗಿರ್ನಾರ್ ಬೆಟ್ಟವನ್ನು ಅವರು ಪ್ರತಿ ದಿನ ಹತ್ತುತ್ತಾರೆ. ಪ್ರತಿ ವರ್ಷ ನಡೆಯುವ ಗಿರ್ನಾರ್ ಉತ್ಸವದಲ್ಲಿ ಸ್ವಚ್ಛತಾ ಕಾರ್ಯವನ್ನು ಸ್ವತಃ ನಡೆಸುತ್ತಾರೆ. ಅವರಿಗೆ ಚಳಿ, ಮಳೆ, ಬಿಸಿಲು ಎಲ್ಲ ಒಂದೆ. ಅವರು ಛತ್ರಿ, ಸ್ವೆಟರ್ ಬಳಸಲ್ಲ.

ಮಹಾತ್ಮಾ ಗಾಂಧಿ ಅವರಂತೆಯೇ ಎಡಗೈ, ಬಲಗೈ ಎರಡರಲ್ಲಿಯೂ ಬರೆಯುತ್ತಾರೆ. ಗಾಂಧಿನಗರದ ವಿಧಾನಸೌಧದಿಂದ ಶಾಸಕರ ಭವನಕ್ಕೆ 5 ಕಿಮೀ ದೂರ ನಡೆದುಕೊಂಡೇ ಹೋಗುತ್ತಾರೆ. ಶಾಸಕರ ಭವನದ ಕೋಣೆ ಎ.ಸಿ ಕೊಟ್ಟರೂ ಅವರು ತಿರಸ್ಕರಿಸಿದ್ದಾರೆ ಎಂದು ಒಮ್ಮೆ ಜುನಾಗಡದ ಜಿಲ್ಲಾಧಿಕಾರಿಯೂ ಆಗಿದ್ದ ನಿವೃತ್ತ ಐಎಎಸ್ ಅಧಿಕಾರಿ ರಮೇಶ ಚಂದ್ ಮೀನಾ ಅಭಿಮಾನದಿಂದ ಹೇಳುತ್ತಾರೆ.ರಾಜಸ್ತಾನದವರಾದ ಮೀನಾ ಅವರು ಮಿಶ್ರು ಅವರ ಮೇಲಿನ ಅಭಿಮಾನಕ್ಕೆ ಈ ಬಾರಿ ಅವರ ಪರ ಪ್ರಚಾರಕ್ಕೆ ಬಂದಿದ್ದಾರೆ.

ಆಸ್ಪತ್ರೆಯಲ್ಲಿ ರೋಗಿಗಳ ಸೇವೆಯಲ್ಲಿದ್ದ ಮಶ್ರು ಅವರನ್ನು ಭೇಟಿ ಮಾಡಿದಾಗ ‘ಜನ ಸೇವೆ ಮಾಡಲು ಯಾವ ಸೌಕರ್ಯವೂ ಬೇಡ. ಪ್ರಾಮಾಣಿಕವಾಗಿ ಸೇವೆ ಮಾಡುತ್ತಾ ಹೋದರೆ ಎಲ್ಲವನ್ನೂ ಜನರೇ ಕೊಡುತ್ತಾರೆ’ ಎಂದು ಸಂತನಂತೆ ಕೈಮುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT