ಸ್ಥಳೀಯ ಸಂಸ್ಥೆಗಳ ಚುನಾವಣೆ

ಬಿಜೆಪಿ ಗೆದ್ದದ್ದು ಕಡಿಮೆ ಸೋತದ್ದೇ ಹೆಚ್ಚು

ಇತ್ತೀಚೆಗೆ ಜರುಗಿದ ಉತ್ತರಪ್ರದೇಶ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಾನು ಜಯಭೇರಿ ಬಾರಿಸಿರುವುದಾಗಿ ಭಾರತೀಯ ಜನತಾ ಪಕ್ಷ ಸಂಭ್ರಮಿಸಿದೆ. ಗುಜರಾತಿನ ವಿಧಾನಸಭೆ ಚುನಾವಣೆಗಳಲ್ಲಿಯೂ ಇದೇ ಫಲಿತಾಂಶಗಳು ಬರಲಿವೆ ಎಂದು ಪಕ್ಷದ ಅಧ್ಯಕ್ಷ ಅಮಿತ್ ಷಾ ಭವಿಷ್ಯವನ್ನೂ ನುಡಿದರು.

ಬಿಜೆಪಿ ಗೆದ್ದದ್ದು ಕಡಿಮೆ ಸೋತದ್ದೇ ಹೆಚ್ಚು

ನವದೆಹಲಿ: ಇತ್ತೀಚೆಗೆ ಜರುಗಿದ ಉತ್ತರಪ್ರದೇಶ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಾನು ಜಯಭೇರಿ ಬಾರಿಸಿರುವುದಾಗಿ ಭಾರತೀಯ ಜನತಾ ಪಕ್ಷ ಸಂಭ್ರಮಿಸಿದೆ. ಗುಜರಾತಿನ ವಿಧಾನಸಭೆ ಚುನಾವಣೆಗಳಲ್ಲಿಯೂ ಇದೇ ಫಲಿತಾಂಶಗಳು ಬರಲಿವೆ ಎಂದು ಪಕ್ಷದ ಅಧ್ಯಕ್ಷ ಅಮಿತ್ ಷಾ ಭವಿಷ್ಯವನ್ನೂ ನುಡಿದರು.

ನೋಟು ರದ್ದು ಮತ್ತು ಜಿ.ಎಸ್.ಟಿ.ಗೆ ಜನಬೆಂಬಲ ಉಂಟೆಂದು ಹೇಳಲು ಇನ್ನೇನು ರುಜುವಾತು ಬೇಕು ಎಂದೆಲ್ಲ ಪ್ರಶ್ನಿಸಿತು. ಬಹುತೇಕ ಸಮೂಹ ಮಾಧ್ಯಮಗಳು ಬಿಜೆಪಿಯ ಭಾರೀ ಗೆಲುವನ್ನು ಕೊಂಡಾಡಿದವು.

ಆದರೆ ನಿಜವಾಗಿ ನಡೆದಿರುವುದೇನು? ಬಿಜೆಪಿ ಭಾರೀ ಗೆಲುವು ಸಾಧಿಸಿರುವುದು ಹೌದೇ?

ಭಾರೀ ಗೆಲುವು ಎಂಬ ಬಣ್ಣನೆ ಅರ್ಧಸತ್ಯದ ಮಾತು. ಆದರೆ ‘ಈ ಭಾರೀ ಗೆಲುವಿನ’ ಅಡಿಯಲ್ಲಿ ಭಾರೀ ಸೋಲು ಅಡಗಿದೆ. ಹದಿನಾರು ಮಹಾನಗರಪಾಲಿಕೆಗಳ ಪೈಕಿ 14ನ್ನು ಗೆದ್ದ ಬಿಜೆಪಿ ಗೆದ್ದಿರುವುದು ವಾಸ್ತವ. ಉಳಿದ ಎರಡನ್ನು ಬಹುಜನ ಸಮಾಜ ಪಾರ್ಟಿ ಗೆದ್ದಿದೆ. ಆದರೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೆಂದರೆ ಕೇವಲ ಮಹಾನಗರಪಾಲಿಕೆಗಳಿಗೆ ಸೀಮಿತ ಅಲ್ಲ. ಪುರಸಭೆಗಳು ಮತ್ತು ನಗರಸಭೆಗಳು ಎಂಬ ಇನ್ನೂ ಎರಡು ಹಂತಗಳು ಉಂಟು.

ಎಲ್ಲ ಮೂರು ಹಂತಗಳ ಪೂರ್ಣ ಫಲಿತಾಂಶಗಳು ಹೊರಬೀಳುವ ಮುನ್ನವೇ ತನ್ನದು ಅಭೂತಪೂರ್ವ ಗೆಲುವು ಎಂದು ಬಿಜೆಪಿ ಘೋಷಿಸಿತು. ಮೇಯರ್ ಸ್ಥಾನಗಳ ಗೆಲುವನ್ನು ಮಾತ್ರವೇ ಲೆಕ್ಕ ಹಿಡಿದರೆ ಬಿಜೆಪಿಯದು ಭಾರೀ ಗೆಲುವು ಎಂದು ಒಪ್ಪಿಕೊಂಡು ಬಿಡಬಹುದು.

ಮೇಯರ್ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಇದೇ ಮೊದಲೇನೂ ಅಲ್ಲ. ಮೋದಿ ಮತ್ತು ಯೋಗಿ ಅವರ ರಂಗಪ್ರವೇಶಕ್ಕೆ ಮುನ್ನ 2012ರಲ್ಲಿಯೂ 12ಮೇಯರ್ ಸ್ಥಾನಗಳಲ್ಲಿ ಹತ್ತನ್ನು ಗೆದ್ದಿತ್ತು. ಆದರೆ ಮೇಯರ್ ಚುನಾವಣೆಗಳು ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳ ಒಂದು ಸಣ್ಣ ಭಾಗ ಮಾತ್ರ.

ಚುನಾವಣಾ ಆಯೋಗ ನೀಡಿರುವ ಫಲಿತಾಂಶಗಳ ಈ ಅಂಕಿ ಅಂಶಗಳು ಬೇರೆಯೇ ಕತೆ ಹೇಳುತ್ತವೆ.

ತಾನು ಗೆದ್ದಿರುವುದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಠೇವಣಿ ಕಳೆದುಕೊಂಡಿದೆ. ಬಿಜೆಪಿ ಗೆದ್ದ ಸ್ಥಾನಗಳು 2,366 ಮತ್ತು ಠೇವಣಿ ಕಳೆದುಕೊಂಡಿರುವ ಸ್ಥಾನಗಳು 3,656. ಹೀಗೆ ಠೇವಣಿ ಕಳೆದುಕೊಂಡ ಸಮಾಜವಾದಿ ಪಾರ್ಟಿ ಮತ್ತು ಬಹುಜನಸಮಾಜ ಪಾರ್ಟಿ ಹಾಗೂ ಕಾಂಗ್ರೆಸ್ಸಿನ ಅಭ್ಯರ್ಥಿಗಳ ಪ್ರಮಾಣ ಬಿಜೆಪಿಗಿಂತ ಹೆಚ್ಚು.

ಮೂರೂ ಹಂತಗಳ ಸ್ಥಳೀಯ ಸಂಸ್ಥೆಗಳಿಗೆ ತಾನು ಸ್ಪರ್ಧಿಸಿದ್ದ 12,644 ಸೀಟುಗಳ ಪೈಕಿ ಬಿಜೆಪಿ 2,366 (ಶೇ.18.7) ಸೀಟು ಗೆದ್ದಿದೆ. 10,278 (ಶೇ.81.3) ಸೀಟುಗಳನ್ನು ಬಿಜೆಪಿಯೀತರ ಪಕ್ಷಗಳು ಗೆದ್ದಿವೆ. ಪುರಸಭೆ ಮತ್ತು ನಗರಸಭೆ ಚುನಾವಣೆಗಳಲ್ಲಿ ಅತಿ ದೊಡ್ಡ ಗೆಲುವು ಸಾಧಿಸಿರುವವರು ಪಕ್ಷೇತರರೇ ವಿನಾ ಘಟಾನುಘಟಿ ರಾಜಕೀಯ ಪಕ್ಷಗಳಲ್ಲ ಎಂಬುದು ಅತ್ಯಂತ ಕುತೂಹಲದ ಸಂಗತಿ.

ನಗರಸಭೆಯ 4,769 ಸೀಟುಗಳನ್ನು ಪಕ್ಷೇತರರು ಮತ್ತು ಇತರೆ ಪ್ರಮುಖ ಪಕ್ಷಗಳು ಗೆದ್ದುಕೊಂಡರೆ ಬಿಜೆಪಿ ಪಾಲಿಗೆ ದಕ್ಕಿದ್ದು ಕೇವಲ 664. ಪಕ್ಷೇತರರು 3,875 ಸೀಟುಗಳನ್ನು ಗೆದ್ದಿದ್ದಾರೆ. ಸಮಾಜವಾದಿ ಪಾರ್ಟಿ 453, ಬಿ.ಎಸ್.ಪಿ. 218, ಆಮ್ ಆದ್ಮಿ ಪಾರ್ಟಿ 19, ದೇವೇಗೌಡರ ಜಾತ್ಯತೀತ ಜನತಾದಳ 13 ಸೀಟು ಗೆದ್ದಿದೆ.

ಎರಡು ಹಂತದ ಮತದಾನದಲ್ಲಿ ಉತ್ತರಪ್ರದೇಶದ ಮತದಾರರು ಹತ್ತು ಸಾವಿರಕ್ಕೂ ಹೆಚ್ಚು ವಾರ್ಡ್ ಗಳು, 438 ಪುರಸಭೆಗಳ ಅಧ್ಯಕ್ಷರು ಹಾಗೂ 198 ನಗರಸಭೆಗಳ (ಮುನಿಸಿಪಲ್ ಕೌನ್ಸಿಲ್) ಅಧ್ಯಕ್ಷರನ್ನು ಆರಿಸಿದ್ದಾರೆ. 5,390 ಪುರಸಭಾ ಸೀಟುಗಳು ಫಲಿತಾಂಶಗಳಲ್ಲಿ ಅಧಿಕಾರಾರೂಢ ಬಿಜೆಪಿ 662ನ್ನು ಮಾತ್ರ ಗೆದ್ದುಕೊಂಡಿದೆ. ಉಳಿದ 4,728 ಸೀಟುಗಳು ಇತರರ ಪಾಲಾಗಿವೆ. ಪುರಸಭಾ ಅಧ್ಯಕ್ಷರ ಹುದ್ದೆಗಳ ಪೈಕಿ ಬಿಜೆಪಿ ನೂರರಲ್ಲಿ ಗೆದ್ದಿದೆ. 337ರಲ್ಲಿ ಸೋತಿದೆ. ನಗರಸಭೆ ಅಧ್ಯಕ್ಷ ಸ್ಥಾನಗಳಲ್ಲಿ ಬಿಜೆಪಿ 68ನ್ನು ಗೆದ್ದು 127ರಲ್ಲಿ ಪರಾಭವಗೊಂಡಿದೆ.

ನೋಟು ರದ್ದು ಮತ್ತು ಜಿ.ಎಸ್.ಟಿ.ಯ ಹೊಡೆತದ ನಂತರವೂ ದೊಡ್ಡ ನಗರಗಳಲ್ಲಿ ಬಿಜೆಪಿಯ ಜನಬೆಂಬಲ ಅಲುಗಿಲ್ಲ. ಸಣ್ಣ ಪಟ್ಟಣಗಳು ಮುನಿದಿರುವಂತೆ ತೋರುತ್ತಿದೆ. 2014ರ ಲೋಕಸಭೆ ಮತ್ತು 2017ರ ವಿಧಾನಸಭೆ ಚುನಾವಣೆಗಳಲ್ಲಿ ನಗರಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳ ಭೇದವಿಲ್ಲದೆ ತೋರಿ ಬಂದ ಜನಪ್ರಿಯತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮರೆಯಾಗಿದೆ.

ಮುಖ್ಯಮಂತ್ರಿ ಆದಿತ್ಯನಾಥ್ ಅವರು ಮತ ಚಲಾಯಿಸಿದ ಅವರದೇ ಕ್ಷೇತ್ರ ಗೋರಖ್ ಪುರದ 68ನೆಯ ಕ್ರಮಸಂಖ್ಯೆಯ ವಾರ್ಡನ್ನು ಕೂಡ ಬಿಜೆಪಿ ಗೆದ್ದಿಲ್ಲ. ಇಲ್ಲಿ ಬಿಜೆಪಿಯ ಮಾಯಾ ತ್ರಿಪಾಠಿ ಅವರು ಪಕ್ಷೇತರ ನಾದಿರಾ ಖಾತುನ್ ಅವರಿಂದ ಸೋಲು ಅನುಭವಿಸಿದ್ದಾರೆ.

ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು ಬಳಸಿರುವ ಮೇಯರ್ ಚುನಾವಣೆಗಳಲ್ಲಿ ಬಿಜೆಪಿಯದು ಕಣ್ಣು ಕುಕ್ಕುವ ಗೆಲುವು. ಆದರೆ ಉಳಿದಂತೆ ಕಾಗದದ ಮತಪತ್ರಗಳನ್ನು ಬಳಸಲಾದ ಚುನಾವಣೆಗಳಲ್ಲಿ ಪಕ್ಷದ ಸೋಲು ಘನ ಘೋರ ಎಂಬುದು ಅತೀವ ಕುತೂಹಲಕಾರಿ ಅಂಶ.

Comments
ಈ ವಿಭಾಗದಿಂದ ಇನ್ನಷ್ಟು
ನಾಲ್ಕು ದಶಕಗಳಲ್ಲಿ ₹10 ಸಾವಿರ ಕೋಟಿ ಸಾಮ್ರಾಜ್ಯದ ಒಡೆಯ ಅಸಾರಾಂ ಬಾಪು

ಸಂತ ಅಸಾರಾಂ ಆದ ’ಅಸುಮಲ್‌’
ನಾಲ್ಕು ದಶಕಗಳಲ್ಲಿ ₹10 ಸಾವಿರ ಕೋಟಿ ಸಾಮ್ರಾಜ್ಯದ ಒಡೆಯ ಅಸಾರಾಂ ಬಾಪು

25 Apr, 2018
ಪಶ್ಚಿಮ ಬಂಗಾಳ ಹಿಂದೂಗಳಿಗೆ ಸುರಕ್ಷಿತವಲ್ಲ; ಮಮತಾ ಬ್ಯಾನರ್ಜಿ ಶೂರ್ಪನಖಿ: ಬಿಜೆಪಿ ಶಾಸಕ

ಉತ್ತರಪ್ರದೇಶದ ಶಾಸಕ ಸುರೇಂದ್ರ ಸಿಂಗ್ ಹೇಳಿಕೆ
ಪಶ್ಚಿಮ ಬಂಗಾಳ ಹಿಂದೂಗಳಿಗೆ ಸುರಕ್ಷಿತವಲ್ಲ; ಮಮತಾ ಬ್ಯಾನರ್ಜಿ ಶೂರ್ಪನಖಿ: ಬಿಜೆಪಿ ಶಾಸಕ

25 Apr, 2018
ಅಪ್ರಾಪ್ತೆ ಅತ್ಯಾಚಾರ ಪ್ರಕರಣ: ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

ಶಿಲ್ಪಿ, ಶರದ್‌ಗೆ 20 ವರ್ಷ ಕಾರಾಗೃಹ
ಅಪ್ರಾಪ್ತೆ ಅತ್ಯಾಚಾರ ಪ್ರಕರಣ: ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

25 Apr, 2018
ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪು ದೋಷಿ: ಜೋಧಪುರ ನ್ಯಾಯಾಲಯ ತೀರ್ಪು

ಇಬ್ಬರು ಸಹಚರರ ಖುಲಾಸೆ
ಅತ್ಯಾಚಾರ ಪ್ರಕರಣದಲ್ಲಿ ಅಸಾರಾಂ ಬಾಪು ದೋಷಿ: ಜೋಧಪುರ ನ್ಯಾಯಾಲಯ ತೀರ್ಪು

25 Apr, 2018
ಶೀಘ್ರದಲ್ಲೇ ಎಟಿಎಂ, ಚೆಕ್‌, ಕಾರ್ಡ್‌ ವಹಿವಾಟಿಗೂ ಶುಲ್ಕ?

ಉಚಿತ ಸೇವೆಗಳಿಗೂ ತೆರಿಗೆ ಪಾವತಿ ಸೂಚನೆ ಪರಿಣಾಮ
ಶೀಘ್ರದಲ್ಲೇ ಎಟಿಎಂ, ಚೆಕ್‌, ಕಾರ್ಡ್‌ ವಹಿವಾಟಿಗೂ ಶುಲ್ಕ?

25 Apr, 2018