ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧಿಕಾರಿ ಜೈಲಿಗೆ: ಹೈಕೋರ್ಟ್‌ ಎಚ್ಚರಿಕೆ

ಬೆಂಗಳೂರು ಗ್ರಾಮಾಂತರ ಡಿ.ಸಿ.ಗೆ ಹೈಕೋರ್ಟ್‌ ತರಾಟೆ * ಇಂದು ವಿಚಾರಣೆ
Last Updated 7 ಡಿಸೆಂಬರ್ 2017, 20:27 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ (ಕೆಎಟಿ) ಆದೇಶವಿದ್ದರೂ ಭೂ ಪರಿವರ್ತನೆಗೆ ಸಂಬಂಧಿಸಿದ ಅರ್ಜಿಯೊಂದನ್ನು ಇತ್ಯರ್ಥಗೊಳಿಸದೆ ವಿಳಂಬ ಮಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಅವರನ್ನು ಜೈಲಿಗೆ ಕಳುಹಿಸುವುದಾಗಿ ಹೈಕೋರ್ಟ್‌ ಗುರುವಾರ ಮೌಖಿಕವಾಗಿ ಎಚ್ಚರಿಕೆ ನೀಡಿದೆ.

ನಗರದ ಮಂಗಿಲಾಲ್‌ ಎಂಬುವರು ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಎನ್‌.ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪಾಲಯ್ಯ ಮತ್ತು ಜಿಲ್ಲಾಧಿಕಾರಿ ಕಚೇರಿ ಸಹಾಯಕ (ಒ.ಎ) ಎಂ.ಸಿ.ನರಸಿಂಹ ಮೂರ್ತಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.

‘ಕೆಎಟಿ ಆದೇಶವಿದ್ದರೂ ಅರ್ಜಿಯನ್ನು ಏಕೆ ವಿಲೇವಾರಿ ಮಾಡಿಲ್ಲ. ಇಂತಹ ಅರ್ಜಿಗಳ ವಿಲೇವಾರಿಗೆ ನೀವು ಲಕ್ಷಗಟ್ಟಲೆ ಕೇಳುತ್ತೀರಿ ಎಂಬ ದೂರುಗಳು ಬಂದಿವೆ. ಸೆಗಣಿ ತಿನ್ನುವ ಹಲ್ಕಟ್‌ ಕೆಲಸ ಮಾಡಲು ನಿಮಗೆ ನಾಚಿಕೆಯಾಗೊಲ್ವೇ’ ಎಂದು ನ್ಯಾಯಮೂರ್ತಿ ಕಿಡಿ ಕಾರಿದರು.

ವಾಗ್ದಾಳಿ ವೇಳೆ ಕೈಕಟ್ಟಿ, ತಲೆತಗ್ಗಿಸಿ ನಿಂತಿದ್ದ ಜಿಲ್ಲಾಧಿಕಾಯನ್ನು ಪೆನ್ಸಿಲ್‌ನಿಂದ ಟೇಬಲ್‌ ಕುಕ್ಕಿ ತಲೆ ಎತ್ತುವಂತೆ ಆದೇಶಿಸಿದ ನ್ಯಾಯಮೂರ್ತಿ, ‘ನೀವು ನಾಳೆ ಬೆಳಿಗ್ಗೆ 10 ಗಂಟೆಯೊಳಗೆ ಈ ಕುರಿತು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಅದರಲ್ಲಿ ಏನಾದರೂ ತಪ್ಪು ಕಂಡು ಬಂದರೆ ನಿಮ್ಮನ್ನು ಕೆಂಪು ಬಸ್ಸು ಹತ್ತಿಸಬೇಕೊ ಅಥವಾ ಜೀಪು ಹತ್ತಿಸಿ ಎಲ್ಲಿಗೆ ಕಳಿಸಬೇಕೊ ಅಲ್ಲಿಗೇ ಕಳುಹಿಸುತ್ತೇನೆ. ಸಿಬಿಐ ತನಿಖೆಗೆ ಆದೇಶಿಸುತ್ತೇನೆ’ ಎಂದರು.

‘ನೀವು ಪಡೆಯುವ ಸಂಬಳ ದರ್ಶಿನಿ ಹೋಟೆಲ್‌ ಕಾಫಿ ಕುಡಿಯಲು ಸಾಕಾಗುವುದಿಲ್ಲ. ಆದರೆ, ನೀವು ಬೆಂಜ್‌, ಆಡಿ, ಬಿಎಂಡಬ್ಲ್ಯೂ ಕಾರುಗಳಲ್ಲಿ ಅಡ್ಡಾಡುತ್ತೀರಿ. ವಿಂಡ್ಸರ್‌ ಮ್ಯಾನರ್‌ ಹೋಟೆಲ್‌ಗೆ ಹೋಗುತ್ತೀರಿ. ಪಿಯುಸಿ ಓದೋ ನಿಮ್ಮ ಮಕ್ಕಳಿಗೆ ಪೊರ್ಶೆ ಕಾರು, ಎಂಟು ಲಕ್ಷದ ಮೋಟಾರು ಬೈಕ್‌ ಕೊಡಿಸುತ್ತೀರಿ. ಇಂತಹ ವಿಲಾಸಿ ಜೀವನ ಶೈಲಿಗೆ ನಿಮಗೆ ದುಡ್ಡು ಎಲ್ಲಿಂದ ಬರುತ್ತೊ ಗೊತ್ತಿಲ್ಲ’ ಎಂದು ಕೆಂಡಾಮಂಡಲವಾದರು.

‘₹2 ಲಕ್ಷ ಚಿಲ್ಲರೆ ಸಂಬಳ ತಗೋಳ್ಳೊ ನಮಗೆ ತಿಂಗಳ ಕೊನೆಗೆ ಹೆಂಗಪ್ಪಾ ಅಡ್ಜಸ್ಟ್‌ ಮಾಡೋದು ಅನ್ನೋ ಯೋಚನೆ ಇರುತ್ತೆ. ಆದರೆ, ನೀವು ಭೂ ಪರಿವರ್ತನೆಯನ್ನು ದಂದೆ ಮಾಡಿಕೊಂಡು ಕುಳಿತಿದ್ದೀರಿ. ನಿಮ್ಮ ಕಂದಾಯ ಇಲಾಖೆ ಬೋರ್ಡ್‌ ತೆಗೆದು ಅದಕ್ಕೆ ಬೆಗ್ಗರ್ಸ್‌ ಕಾಲೊನಿ (ಭಿಕ್ಷುಕರ ಕಾಲೊನಿ) ಎಂದು ಹೆಸರಿಡಿ. ನಿಮಗೆ ನಾಚಿಕೆ ಆಗೊದಿಲ್ವಾ’ ಎಂದು ಜಾಡಿಸಿದರು.

ನ್ಯಾಯಮೂರ್ತಿಗಳ ಈ ಆವೇಶ ಶಮನ ಮಾಡಲು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಜಿ.ಶಿವಣ್ಣ ಮಧ್ಯ ಪ್ರವೇಶಿಸಿದರು. ಆದರೆ, ಯಾವುದೇ ಸಮಜಾಯಿಷಿ ಒಪ್ಪದ ಸತ್ಯನಾರಾಯಣ, ‘ನೋಡಿ ಶಿವಣ್ಣ, ನಾನು ತಮಾಷೆಗೆ ಇದನ್ನೆಲ್ಲಾ ಹೇಳುತ್ತಿಲ್ಲ. ನನ್ನ ಚೇಂಬರ್‌ಗೆ ಬನ್ನಿ. ಈ ಜಿಲ್ಲಾಧಿಕಾರಿ ವಿರುದ್ಧ ಬಂದಿರುವ ದೂರುಗಳ ಕಂತೆಯನ್ನೇ ತೋರಿಸುತ್ತೇನೆ. ಎಲ್ಲರಿಗೂ ಕೋರ್ಟ್‌ ಮೆಟ್ಟಿಲು ತುಳಿಯುವ ಶಕ್ತಿ ಇಲ್ಲ. ಅವನ್ನೆಲ್ಲಾ ನೋಡುತ್ತಿದ್ದರೆ ನನಗೆ ಕಣ್ಣಲ್ಲಿ ನೀರು ಬರುತ್ತದೆ’ ಎಂಬ ವ್ಯಥೆ ಹೊರ ಹಾಕಿದರು.

‘ನನಗೆ ಇದರಲ್ಲಿ ಯಾವುದೇ ವೈಯಕ್ತಿಕ ಆಸಕ್ತಿ ಇಲ್ಲ. ಇಂತಹ ಅಧಿಕಾರಿ‌ಗಳಿಂದ ಇಡಿ ವ್ಯವಸ್ಥೆ ಹದಗೆಟ್ಟು ಹೋಗಿದೆ. ಇದನ್ನು ಸ್ವಚ್ಛ ಮಾಡಲೇಬೇಕು. ನಾನು ಈ ಅಧಿಕಾರಿಯನ್ನು ಬಿಡೋದಿಲ್ಲ. ಇದು ಆರಂಭ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಿಯೇ ತೀರುತ್ತೇನೆ’ ಎಂದು ಗುಡುಗಿದರು.

(ನ್ಯಾಯಮೂರ್ತಿ ಸತ್ಯನಾರಾಯಣ)

ಕೃಷಿ ಭೂಮಿ ಪರಿವರ್ತನೆ ಕೋರಿಕೆ ಪ್ರಕರಣ

ನಗರದ ಬನ್ನೇರುಘಟ್ಟ ಪ್ರದೇಶದ ನಿವಾಸಿ ಮಂಗಿಲಾಲ್‌ ಬಿನ್‌ ಕೇಸಾರಾಮ್‌ ಎಂಬುವರು ದೇವನಹಳ್ಳಿ ಕಸಬಾ ಹೋಬಳಿಯ ರಾಯಸಂದ್ರ ಗ್ರಾಮದ ವ್ಯಾಪ್ತಿಯಲ್ಲಿ 2 ಎಕರೆ 34 ಗುಂಟೆ ಕೃಷಿ ಭೂಮಿಯನ್ನು ಕೃಷಿಯೇತರ ಬಳಕೆಗೆ ಪರಿವರ್ತಿಸಲು ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು.

‘ಅರ್ಜಿದಾರರು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ’ ಎಂದು ಹೇಳಿ ಜಿಲ್ಲಾಧಿಕಾರಿ ಪರಿವರ್ತನೆಗೆ ನಿರಾಕರಿಸಿದ್ದರು. ಇದನ್ನು ಮಂಗಿಲಾಲ್‌ ಕೆಎಟಿಯಲ್ಲಿ ಪ್ರಶ್ನಿಸಿದ್ದರು. ಕೆಎಟಿ, ‘ಅರ್ಜಿದಾರರ ಕೋರಿಕೆ ಸರಿಯಾಗಿದೆ. ಅವರ ಜಮೀನನ್ನು ಪರಿವರ್ತಿಸಬೇಕು’ ಎಂದು ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದರು. ಆದರೆ, ಜಿಲ್ಲಾಧಿಕಾರಿ ಆದೇಶ ಪಾಲನೆ ಮಾಡಿರಲಿಲ್ಲ. ಇದನ್ನು ಮಂಗಿಲಾಲ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

* ಕೃಷಿ ಜಮೀನು ಪರಿವರ್ತನೆ ಅಧಿಕಾರಿಗಳ ಪಾಲಿಗೆ ದೊಡ್ಡ ದಂದೆಯಾಗಿ ಪರಿಣಮಿಸಿದೆ.

–ಎಸ್‌.ಎನ್‌.ಸತ್ಯನಾರಾಯಣ, ನ್ಯಾಯಮೂರ್ತಿ

ನ್ಯಾಯಮೂರ್ತಿ ಹೇಳಿದ್ದು: 

* ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುತ್ತೇನೆ

* ಭಿಕ್ಷುಕರಿಗೂ ಅಧಿಕಾರಿಗಳಿಗೂ ವ್ಯತ್ಯಾಸ ಇಲ್ಲ

* ನಾಲ್ಕು ಜನರನ್ನ ಒಳಗೆ ಕಳಿಸಿದ್ರೆ ವ್ಯವಸ್ಥೆ ಸ್ವಚ್ಛ ಆಗುತ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT