ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿ ಮಾತು ‘ಕೈ’ಗೆ ಆಪತ್ತು

ಪ್ರಧಾನಿ ಮೋದಿ ವಿರುದ್ಧ ಟೀಕೆ: ಮಣಿಶಂಕರ್‌ ಅಮಾನತು
Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ನೀಚ ಸ್ವಭಾವದ ಮನುಷ್ಯ’ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಟೀಕಿಸಿದ್ದಾರೆ. ಇದು ಕಾಂಗ್ರೆಸ್‌ನವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ.

ಅಯ್ಯರ್ ಅವರ ಟೀಕೆಯನ್ನು ಕಾಂಗ್ರೆಸ್ ಖಂಡಿಸಿದ್ದು, ಕಠಿಣ ಕ್ರಮ ತೆಗೆದುಕೊಂಡಿದೆ. ಅಯ್ಯರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ. ಟೀಕೆ ಬಗ್ಗೆ ವಿವರಣೆ ನೀಡುವಂತೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.

ಅಂಬೇಡ್ಕರ್ ಅವರ ಹೆಸರು ಹೇಳಿಕೊಂಡು ಒಂದು ಕುಟುಂಬ ಮತ ಕೇಳುತ್ತದೆ ಎಂದು ಮೋದಿ ಅವರು ಗುರುವಾರ ಬೆಳಿಗ್ಗೆ ಮಾಡಿದ್ದ ಟೀಕೆಗೆ ಮಣಿಶಂಕರ್ ಪ್ರತಿಕ್ರಿಯೆ ನೀಡಿದ್ದರು. ‘ಅಂಬೇಡ್ಕರ್‌ ಅವರ ಕಾರ್ಯಕ್ರಮದಲ್ಲಿ ಇಂತಹ ಕೆಟ್ಟ ರಾಜಕಾರಣ ಮಾಡುವ ಅವಶ್ಯಕತೆ ಇತ್ತೆ? ಮೋದಿ ನೀಚ ಸ್ವಭಾವದ ಮನುಷ್ಯ. ಅವರಲ್ಲಿ ಸಭ್ಯತೆಯೇ ಇಲ್ಲ’  ಎಂದು ಅಯ್ಯರ್ ಟೀಕೆ ಮಾಡಿದ್ದರು.

ಮಧ್ಯಾಹ್ನ ಸೂರತ್‌ನಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ಮೋದಿ ಅವರು ಮಣಿಶಂಕರ್ ಮಾತನ್ನು ಟೀಕಿಸಿದ್ದಾರೆ. ‘ಶ್ರೀಮಾನ್ ಮಣಿಶಂಕರ್ ಅಯ್ಯರ್ ಇವತ್ತು ಮೋದಿ ನೀಚ ಜಾತಿಯವ ಮತ್ತು ನೀಚ ಎಂದು ಕರೆದಿದ್ದಾರೆ. ಇದು ಗುಜರಾತಿಗೆ ಮಾಡಿದ ಅವಮಾನವಲ್ಲವೇ. ಇದಕ್ಕೆ ಗುಜರಾತಿಗರು ಮತದಾನದಲ್ಲಿ ಉತ್ತರ ನೀಡಲಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಮೊಘಲ್ ಕಾಲದಲ್ಲಿ ಬಡವರು ಒಳ್ಳೆಯ ಬಟ್ಟೆ ಧರಿಸಿದರೆ ತೊಂದರೆ ಎದುರಿಸಬೇಕಾಗುತ್ತಿತ್ತು. ಇವರದ್ದೂ ಅಂಥದ್ದೇ ಮನಸ್ಥಿತಿ. ಬಡ ಮತ್ತು ನೀಚ ಜನರ ಉದ್ಧಾರಕ್ಕಾಗಿ ಮಹಾತ್ಮ ಗಾಂಧೀಜಿ ಅವರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ನಾನೂ ಗಾಂಧಿ ಅವರ ಹೆಜ್ಜೆಯನ್ನೇ ಅನುಸರಿಸುತ್ತಿದ್ದೇನೆ. ನಾನು ನೀಚ, ನಾನು ನೀಚ ಜಾತಿಯವ ಎಂದು ನೀವು ಕರೆದರೂ ಬಡವರಿಗಾಗಿ ದುಡಿಯುವುದನ್ನು ನಾನು ಮುಂದುವರೆಸುತ್ತೇನೆ’ ಎಂದು ಮೋದಿ ಹೇಳಿದ್ದಾರೆ.

ರಾಹುಲ್ ‘ಸೂಚನೆ’, ಅಯ್ಯರ್ ಕ್ಷಮೆ

‘ಕಾಂಗ್ರೆಸ್‌ನ ಅನ್ನು ಟೀಕಿಸಲು ಪ್ರಧಾನಿ ಮತ್ತು ಬಿಜೆಪಿ ನಾಯಕರು ಪದೇ ಪದೇ ಅವಾಚ್ಯ ಭಾಷೆಯನ್ನು ಬಳಸುತ್ತಾರೆ. ಆದರೆ ಕಾಂಗ್ರೆಸ್‌ನ ಸಂಸ್ಕೃತಿ ಮತ್ತು ಪರಂಪರೆಯೇ ಬೇರೆ. ಪ್ರಧಾನಿ ಅವರನ್ನು ಟೀಕಿಸಲು ಮಣಿಶಂಕರ್ ಅಯ್ಯರ್ ಬಳಸಿದ ಭಾಷೆ ಮತ್ತು ಮಾತಿನ ದಾಟಿಯನ್ನು ನಾನು ಒಪ್ಪುವುದಿಲ್ಲ. ಈ ಬಗ್ಗೆ ಅಯ್ಯರ್ ಅವರು ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಮತ್ತು ನಾನು ಬಯಸುತ್ತೇವೆ’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

ರಾಹುಲ್ ಟ್ವೀಟ್ ಮಾಡುತ್ತಿದ್ದಂತೆಯೇ ಮಣಿಶಂಕರ್ ಪತ್ರಿಕಾಗೋಷ್ಠಿ ಕರೆದು ಕ್ಷಮೆ ಕೋರಿದ್ದಾರೆ. ‘ನನಗೆ ಹಿಂದಿಯ ಮೇಲೆ ಹಿಡಿತ ಇಲ್ಲದ ಕಾರಣ ಹೀಗಾಗಿದೆ. ಹಿಂದಿಯಲ್ಲಿ ನೀಚ ಎಂಬ ಪದವನ್ನು ಬೇರೆ ಬೇರೆ ಅರ್ಥಗಳಲ್ಲಿ, ನೀಚ ಜಾತಿಯಲ್ಲಿ ಹುಟ್ಟಿದವ ಎಂಬರ್ಥದಲ್ಲೂ ಬಳಸುತ್ತಾರೆ ಎಂದು ಈಗ ತಿಳಿಯಿತು. ಆದರೆ ನಾನು ಆ ಅರ್ಥದಲ್ಲಿ ಹೇಳಲಿಲ್ಲ. ಅವರು ನೀಚ ಜಾತಿಯವ ಎಂದು ನಾನು ಹೇಳಿಲ್ಲ. ಅವರದ್ದು ನೀಚ ಭಾಷೆ ಎಂಬರ್ಥದಲ್ಲಿ ಹೇಳಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

‘ನೀಚ ಎಂಬ ಪದವನ್ನು ಮೋದಿ ಯಾವ ರೀತಿ ಅರ್ಥ ಮಾಡಿಕೊಂಡಿದ್ದಾರೊ ಗೊತ್ತಿಲ್ಲ. ನೀಚ ವ್ಯಕ್ತಿ ಎಂದೇ ಅರ್ಥ ಮಾಡಿಕೊಂಡಿದ್ದರೆ ನಾನು ಕ್ಷಮೆ ಕೇಳುವುದಿಲ್ಲ. ನೀಚ ಜಾತಿಯಲ್ಲಿ ಹುಟ್ಟಿದವ ಎಂದು ಅರ್ಥ ಮಾಡಿಕೊಂಡಿದ್ದರೆ ಖಂಡಿತ ಕ್ಷಮೆ ಕೇಳುತ್ತೇನೆ’ ಎಂದು ಅಯ್ಯರ್ ಹೇಳಿದ್ದಾರೆ.

* ಅವರು ನನ್ನನ್ನು ನೀಚ ಎಂದೇ ಕರೆಯಲಿ, ನಾನು ಉನ್ನತ ಕೆಲಸಗಳನ್ನೇ ಮಾಡುತ್ತೇನೆ. ಅವರ ಭಾಷೆ ಅವರ ಬಳಿಯೇ ಇರಲಿ, ನಾವು ನಮ್ಮ ಕೆಲಸ ಮಾಡುತ್ತೇವೆ.

 – ನರೇಂದ್ರ ಮೋದಿ, ಪ್ರಧಾನಿ

* ನೀಚ ಎಂದರೆ ಕೀಳು ಜಾತಿ...

ಹಿಂದಿಯಲ್ಲಿ ನೀಚ ಎಂಬ ಪದವನ್ನು ಕೀಳು ಜಾತಿ, ಕೆಳ ಜಾತಿ ಎಂಬ ಅರ್ಥದಲ್ಲೂ ಬಳಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT