ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಾಂತ್ಯಕ್ಕೆ ವಿದ್ಯುತ್‌ಚಾಲಿತ ಶತಾಬ್ದಿ ರೈಲು ಸಂಚಾರ

Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು–ಮೈಸೂರು ನಡುವಿನ ರೈಲು ಮಾರ್ಗದಲ್ಲಿ ವಿದ್ಯುತ್‌ಚಾಲಿತ ರೈಲು ಸಂಚರಿಸುವ ಕಾಲ ಸನ್ನಿಹಿತವಾಗಿದೆ. ಈ ತಿಂಗಳಾಂತ್ಯಕ್ಕೆ ವಿದ್ಯುತ್‌ಚಾಲಿತ ಶತಾಬ್ದಿ ರೈಲು (ಮೈಸೂರು–ಚೆನ್ನೈ) ಓಡಾಟ ಆರಂಭಿಸಲಿದೆ.

ಚೆನ್ನೈನಿಂದ ಬರುವ ವಿದ್ಯುತ್‌ಚಾಲಿತ ಶತಾಬ್ದಿ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಲೋಕೊಮೋಟಿವ್‌ ಎಂಜಿನ್‌ಗೆ ಬದಲಾಯಿಸಿಕೊಳ್ಳಲು 15 ನಿಮಿಷ ಬೇಕಿತ್ತು. ಆ ಸಮಯ ಈಗ ಉಳಿತಾಯವಾಗಲಿದೆ.

2017-18ರ ಕೊನೆಯ ತ್ರೈಮಾಸಿಕದಲ್ಲಿ ಕನಿಷ್ಠ ಮೂರು ಎಕ್ಸ್‌ಪ್ರೆಸ್‌ ಹಾಗೂ ಮೂರು ಪ್ಯಾಸೆಂಜರ್‌ ರೈಲುಗಳನ್ನು ವಿದ್ಯುತ್‌ಚಾಲಿತವಾಗಿ ಓಡಿಸುವ ಉದ್ದೇಶವಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಬೆಂಗಳೂರು–ಮೈಸೂರು ರೈಲು ಮಾರ್ಗದ ವಿದ್ಯುದೀಕರಣವನ್ನು ರೈಲ್ವೆ ಸುರಕ್ಷತಾ ಆಯುಕ್ತರು ಮಂಗಳವಾರ ಪರಿಶೀಲನೆ ನಡೆಸಿದ್ದರು. ಅವರು ಎರಡು ವಾರಗಳಲ್ಲಿ ವರದಿ ನೀಡುವ ಸಾಧ್ಯತೆ ಇದೆ.

ನೈರುತ್ಯ ರೈಲ್ವೆಯು ಬೆಂಗಳೂರು–ಮೈಸೂರು ನಡುವೆ 13 ಜೋಡಿ ಎಕ್ಸ್‌ಪ್ರೆಸ್‌, 5 ಜೋಡಿ ಪ್ಯಾಸೆಂಜರ್‌ ಹಾಗೂ 7 ಜೋಡಿ ನಿಯಮಿತವಾಗಿ ಅಲ್ಲದ ರೈಲು ಸಂಚಾರವನ್ನು ನಡೆಸುತ್ತಿದೆ. ಸರಾಸರಿ 21 ರೈಲುಗಳು ಪ್ರತಿದಿನ 42 ಟ್ರಿಪ್‌ಗಳು ನಡೆಸುತ್ತಿವೆ.

‘ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ರೈಲುಗಳಿಗೆ ಡೀಸೆಲ್‌ ಲೋಕೊಮೊಟಿವ್‌ ಎಂಜಿನ್‌ಗಳನ್ನು ತೆಗೆದು ಎಲೆಕ್ಟ್ರಿಕ್‌ ಎಂಜಿನ್‌ಗಳನ್ನು ಅಳವಡಿಸಲಾಗುತ್ತದೆ. ಯಲಿಯೂರಿನಲ್ಲಿರುವ ವಿದ್ಯುತ್‌ ಪೂರೈಕೆ ಉಪಕೇಂದ್ರದಲ್ಲಿ ವಿದ್ಯುತ್‌ ಲಭ್ಯತೆ ಆಧಾರದ ಮೇಲೆ ಎಲೆಕ್ಟ್ರಿಕ್‌ ಎಂಜಿನ್‌ಗಳನ್ನು ಬದಲಾಯಿಸಲಾಗುತ್ತದೆ’ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ.ವಿಜಯಾ ತಿಳಿಸಿದರು.

‘ಈ ಮಾರ್ಗದ ಎಲ್ಲ ರೈಲುಗಳನ್ನು ಎಲೆಕ್ಟ್ರಿಕ್‌ ಲೋಕೊಮೊಟಿವ್‌ಆಗಿ ಬದಲಾಯಿಸಿದರೆ ಪ್ರತಿದಿನ 27 ಸಾವಿರ ಲೀಟರ್‌ ಡೀಸೆಲ್‌ ಉಳಿತಾಯವಾಗಲಿದೆ. ಕನಿಷ್ಠ ₹15 ಲಕ್ಷ ಉಳಿತಾಯವಾಗಲಿದೆ. ವಾಯುಮಾಲಿನ್ಯವನ್ನು ತಡೆಗಟ್ಟುವ ಜತೆಗೆ ಶೇ 40ರಷ್ಟು ಇಂಧನ ವೆಚ್ಚವನ್ನು ಕಡಿಮೆ ಮಾಡುತ್ತದೆ’ ಎಂದರು.

‘ಎಲೆಕ್ಟ್ರಿಕ್‌ ಕೋಚ್‌ಗಳ ತಯಾರಿಕಾ ಕಾರ್ಖಾನೆಯು ಏಕಕಾಲದಲ್ಲಿ ಎಂಜಿನ್‌ಗಳನ್ನು ಪೂರೈಸುವಷ್ಟು ಸಮರ್ಥವಾಗಿಲ್ಲ. ಹೀಗಾಗಿ ಎಲ್ಲ ರೈಲುಗಳನ್ನು ಎಲೆಕ್ಟ್ರಿಕ್‌ ರೈಲುಗಳಾಗಿ ಪರಿವರ್ತಿಸಲು ಸ್ವಲ್ಪ ಸಮಯ ಹಿಡಿಯಲಿದೆ’ ಎಂದು ಹೇಳಿದರು.

‘12 ಬೋಗಿಗಳ ಮೆಮು ರೈಲಿಗೆ ₹15 ಕೋಟಿ ವೆಚ್ಚವಾಗಲಿದೆ. ಈ ರೈಲಿನಲ್ಲಿ ಎರಡು ಎಂಜಿನ್‌ಗಳು ಇರುತ್ತವೆ. ಬೆಮೆಲ್‌ನ ದಾಖಲೆಗಳ ಪ್ರಕಾರ ಒಂದು ಎಂಜಿನ್‌ಗೆ ₹3.18 ಕೋಟಿ ವೆಚ್ಚವಾಗುತ್ತದೆ. ಉಳಿದ ಬೋಗಿಗಳಿಗೆ ತಲಾ ₹78 ಲಕ್ಷ ವೆಚ್ಚವಾಗುತ್ತದೆ’ ಎಂದು ತಿಳಿಸಿದರು.

ವಿದ್ಯುದೀಕರಣ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ನಿರ್ದೇಶನ ನೀಡಿದ್ದರು. ಮುಂದಿನ 4–5 ವರ್ಷಗಳಲ್ಲಿ ರೈಲುಗಳ ವಿದ್ಯುದೀಕರಣಕ್ಕಾಗಿ ₹26,500 ಕೋಟಿ ಮೀಸಲಿಡಲಾಗಿದೆ.

ಒಟ್ಟು ರೈಲುಗಳು: 18 ಪ್ರತಿದಿನ, 7 ನಿಯಮಿತವಾಗಿ ಸಂಚರಿಸದ ರೈಲು

ಟ್ರಿಪ್‌ಗಳ ಸಂಖ್ಯೆ: 36 + 14

ಪ್ರತಿದಿನ ಸರಾಸರಿ ಟ್ರಿಪ್‌ಗಳು: 21

ಪ್ರತಿದಿನ ಡೀಸೆಲ್ ಬಳಕೆ: 27,300 ಲೀಟರ್

ಪ್ರತಿ ಲೀಟರ್‌ ಡೀಸೆಲ್‌ ದರ: ₹57.20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT