ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಹೆಚ್ಚಳ

ದಂಡ ಸಂಗ್ರಹದಲ್ಲಿ ಸಂಚಾರ ಪೊಲೀಸರ ದಾಖಲೆ

ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ದಂಡ ಸಂಗ್ರಹದಲ್ಲಿ ಸಂಚಾರ ಪೊಲೀಸರು ದಾಖಲೆ ಮಾಡಿದ್ದಾರೆ.

ದಂಡ ಸಂಗ್ರಹದಲ್ಲಿ ಸಂಚಾರ ಪೊಲೀಸರ ದಾಖಲೆ

ಬೆಂಗಳೂರು: ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ದಂಡ ಸಂಗ್ರಹದಲ್ಲಿ ಸಂಚಾರ ಪೊಲೀಸರು ದಾಖಲೆ ಮಾಡಿದ್ದಾರೆ.

ಮೋಟಾರು ವಾಹನಗಳ ಕಾಯ್ದೆ, ಕರ್ನಾಟಕ ಪೊಲೀಸ್‌ ಕಾಯ್ದೆ ಸೇರಿ ಹಲವು ಕಾಯ್ದೆಯಡಿ 2017ರ ಜನವರಿಯಿಂದ ನವೆಂಬರ್‌ 30ರವರೆಗೆ 94.63 ಲಕ್ಷ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು, ₹102 ಕೋಟಿ ದಂಡ ಸಂಗ್ರಹಿಸಿದ್ದಾರೆ. 2016ರಲ್ಲಿ ₹66.97 ಕೋಟಿ ದಂಡ ಸಂಗ್ರಹವಾಗಿತ್ತು. ಈ ಬಾರಿ ಅದರ ಪ್ರಮಾಣ ಶೇ 68ರಷ್ಟು ಹೆಚ್ಚಾಗಿದೆ.

‘2017ರ ಜುಲೈವರೆಗಿನ ಸಮೀಕ್ಷೆಯಂತೆ ನಗರದಲ್ಲಿ 70 ಲಕ್ಷ ವಾಹನಗಳಿದ್ದು, ಅದರಲ್ಲಿ 48 ಲಕ್ಷ ದ್ವಿಚಕ್ರ ವಾಹನಗಳು. ಹಲವು ಸವಾರರು ನಿಯಮ ಉಲ್ಲಂಘಿಸುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾರೆ. ಅಂಥವರನ್ನು ಪತ್ತೆ ಹಚ್ಚಿ ದಂಡ ವಿಧಿಸುತ್ತಿದ್ದೇವೆ. ಅಷ್ಟಾದರೂ ಅವರಲ್ಲಿ ಜಾಗೃತಿ ಮೂಡುತ್ತಿಲ್ಲ’ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌.ಹಿತೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೋ ಪಾರ್ಕಿಂಗ್‌ ಸ್ಥಳದಲ್ಲಿ ವಾಹನ ನಿಲುಗಡೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಆ ಸಂಬಂಧ ಪ್ರಸಕ್ತ ವರ್ಷ 20.31 ಲಕ್ಷ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಹೆಲ್ಮೆಟ್‌ ಧರಿಸದಿರುವುದು, ನಿರ್ಲಕ್ಷ್ಯದ ಚಾಲನೆ, ಪಥಶಿಸ್ತು ಉಲ್ಲಂಘನೆ, ಸಮವಸ್ತ್ರ ಧರಿಸದಿರುವುದು ಹಾಗೂ ಅತೀ ವೇಗದ ಚಾಲನೆ ಸಂಬಂಧ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ’ ಎಂದರು.

ಪ್ರಕರಣ ದಾಖಲಿಸಲು ಸಿಬ್ಬಂದಿ ಕೊರತೆ:

‘ನಗರದ ಬಹುತೇಕ ಸವಾರರು, ಪದೇ ಪದೇ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಪ್ರಮುಖ ವೃತ್ತ, ರಸ್ತೆಗಳಲ್ಲಿ 175ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ಅಂಥ ಕ್ಯಾಮೆರಾಗಳ ಮೂಲಕವೇ ಪ್ರಸಕ್ತ ವರ್ಷ 2.91 ಲಕ್ಷ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಹಿತೇಂದ್ರ ತಿಳಿಸಿದರು.

‘ವೃತ್ತ, ರಸ್ತೆಗಳಲ್ಲಿ ಆಗುತ್ತಿರುವ ನಿಯಮ ಉಲ್ಲಂಘನೆಗಳು ಕ್ಯಾಮೆರಾದಲ್ಲಿ ಸೆರೆಯಾಗುತ್ತಿವೆ. ಅವುಗಳೆಲ್ಲವನ್ನೂ ವೀಕ್ಷಿಸಿ ದಂಡ ವಿಧಿಸಲು ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಹಲವರು ಪ್ರಕರಣದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಆಕಸ್ಮಾತ್‌ ಸಮರ್ಪಕ ಸಂಖ್ಯೆಯಲ್ಲಿ ಸಿಬ್ಬಂದಿ ಇದ್ದರೆ, ದಂಡದ ಪ್ರಮಾಣ ಇನ್ನೂ ದುಪ್ಪಟ್ಟಾಗುತ್ತಿತ್ತು’ ಎಂದರು.

ದಂಡ ವಸೂಲಿ ಬಾಕಿ:

ಹಲವು ಸವಾರರಿಂದ ಸ್ಥಳದಲ್ಲೇ ದಂಡ ಸಂಗ್ರಹ ಮಾಡಲಾಗುತ್ತಿದೆ. ಕ್ಯಾಮೆರಾದಿಂದ ಪತ್ತೆಯಾದ ಪ್ರಕರಣಗಳಲ್ಲಿ ಪೊಲೀಸರೇ ಸವಾರರ ಮನೆಗೆ ಹೋಗಿ ದಂಡ ಸಂಗ್ರಹಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಇದುವರೆಗೂ ಅಂಥ 25,115 ಪ್ರಕರಣಗಳಲ್ಲಿ ₹31 ಲಕ್ಷ ದಂಡ ಸಂಗ್ರಹಿಸಲಾಗಿದೆ.

‘ದಂಡ ಪಾವತಿ ಮಾಡುವಂತೆ ಸವಾರರ ವಿಳಾಸಕ್ಕೆ ನೋಟಿಸ್‌ ಕಳುಹಿಸುತ್ತಿದ್ದೆವು. ಯಾರೊಬ್ಬರೂ ಅದಕ್ಕೆ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಠಾಣೆವಾರು ತಂಡಗಳನ್ನು ರಚಿಸಿ ಮನೆ ಬಾಗಿಲಿಗೆ ಹೋಗಿ ದಂಡ ಸಂಗ್ರಹಿಸಲಾಗುತ್ತಿದೆ’ ಎಂದು ಹಿತೇಂದ್ರ ತಿಳಿಸಿದರು.

‘ಅತೀ ಹೆಚ್ಚು ನಿಯಮ ಉಲ್ಲಂಘಿಸಿದ್ದ 500 ಸವಾರರ ಪಟ್ಟಿಯನ್ನು ಎರಡು ತಿಂಗಳ ಹಿಂದಷ್ಟೇ ಸಿದ್ಧಪಡಿಸಿ ದಂಡ ವಸೂಲಿ ಮಾಡಿದ್ದೆವು. ಈಗ 100 ಸವಾರರ ಪಟ್ಟಿ ಸಿದ್ಧಪಡಿಸಿ ದಂಡ ಸಂಗ್ರಹಿಸುತ್ತಿದ್ದೇವೆ’ ಎಂದರು.

Comments
ಈ ವಿಭಾಗದಿಂದ ಇನ್ನಷ್ಟು
ಸಾಲುಮರದ ತಿಮ್ಮಕ್ಕಗೆ ಬಿಎಂಎಸ್‌ ಕಲಾಸಿರಿ ಪ್ರಶಸ್ತಿ

ನೆಲಮಂಗಲ
ಸಾಲುಮರದ ತಿಮ್ಮಕ್ಕಗೆ ಬಿಎಂಎಸ್‌ ಕಲಾಸಿರಿ ಪ್ರಶಸ್ತಿ

20 Mar, 2018

ಮದ್ಯದ ಬಾಟಲಿ ಬಿರಡೆ ಟೆಂಡರ್‌ ಪ್ರಶ್ನಿಸಿದ ಅರ್ಜಿ
‘ಬೊಕ್ಕಸದ ನಷ್ಟ ತಡೆಯುವ ಉದ್ದೇಶ’

ಬೊಕ್ಕಸಕ್ಕೆ ಆಗುವ ನಷ್ಟ ತಡೆಯಲು ಎಲ್ಲ ವಿಧದ ಮದ್ಯದ ಬಾಟಲಿಗಳ ಬಿರಡೆ ಮೇಲೆ ಪಾಲಿಯೆಸ್ಟರ್‌ ಲೇಬಲ್‌ ಅಂಟಿಸುವ ಟೆಂಡರ್‌ಗೆ ಸರ್ಕಾರ ಅನುಮತಿ ನೀಡಿದೆ’ ಎಂದು...

20 Mar, 2018

ಬೆಂಗಳೂರು
ತಾಯಿ– ಮಗಳು ಆತ್ಮಹತ್ಯೆ

ಪ್ರಕಾಶನಗರದ 7ನೇ ಮುಖ್ಯರಸ್ತೆಯ ನಿವಾಸಿ ಸಾವಿತ್ರಮ್ಮ (60) ಹಾಗೂ ಅವರ ಮಗಳು ಮಂಜುಳಾ (37) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

20 Mar, 2018
ಮಧ್ಯಪ್ರವೇಶಿಸಲು ಹೈಕೋರ್ಟ್ ನಕಾರ

ಶಶಿಕಲಾಗೆ ಜೈಲಿನಲ್ಲಿ ಸೌಲಭ್ಯ ಆರೋಪ
ಮಧ್ಯಪ್ರವೇಶಿಸಲು ಹೈಕೋರ್ಟ್ ನಕಾರ

20 Mar, 2018

ಆರೋಪಿ ಬಂಧನ
ಮದ್ಯ ಖರೀದಿಗೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಕೊಲೆ

ಮದ್ಯ ಖರೀದಿಸಲು ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಅನಿಲ್ (24) ಎಂಬುವರನ್ನು ಕೊಲೆ ಮಾಡಿದ್ದ ಆರೋಪಿ ಶೇಷಾದ್ರಿಪುರದ ಶಿವಕುಮಾರ್‌ ಎಂಬಾತನನ್ನು ಚರ್ಚ್‌ಸ್ಟ್ರೀಟ್‌ ಪೊಲೀಸರು ಬಂಧಿಸಿದ್ದಾರೆ.

20 Mar, 2018