ಮಯಂಕ್ ಅಗರವಾಲ್ ಅರ್ಧಶತಕ; ಧವಳ್ ಕುಲಕರ್ಣಿ ಏಕಾಂಗಿ ಹೋರಾಟ

ವಿನಯ್‌ ಹ್ಯಾಟ್ರಿಕ್: ನೆಲಕಚ್ಚಿದ ಮುಂಬೈ

ಇಲ್ಲಿಯ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದ  ಮೊದಲ ಇನಿಂಗ್ಸ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ವಿನಯಕುಮಾರ್ ಮುಂಬೈ ತಂಡವನ್ನು 173 ರನ್ ಗಳ ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು.

ವಿನಯ್‌ ಹ್ಯಾಟ್ರಿಕ್: ನೆಲಕಚ್ಚಿದ ಮುಂಬೈ

ನಾಗಪುರ: ಗುರುವಾರ ಮುಂಜಾನೆಯ ಮಂಜು ಕರಗುವ ಹೊತ್ತಿಗೆ ಕರ್ನಾಟಕ ತಂಡದ ಸಂತಸ ಮುಗಿಲು ಮುಟ್ಟಿತ್ತು. ಮುಂಬೈ ಆಟಗಾರರ ಹಣೆಯ ಮೇಲೆ ಬೆವರಿನ ಹನಿಗಳು ಮೂಡಿದ್ದವು. ಅದಕ್ಕೆ ಕಾರಣರಾಗಿದ್ದು ‘ದಾವಣಗೆರೆ ಎಕ್ಸ್ ಪ್ರೆಸ್’ ಆರ್. ವಿನಯಕುಮಾರ್.

ಇಲ್ಲಿಯ ವಿದರ್ಭ ಕ್ರಿಕೆಟ್ ಸಂಸ್ಥೆ (ವಿಸಿಎ) ಕ್ರೀಡಾಂಗಣದಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದ  ಮೊದಲ ಇನಿಂಗ್ಸ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ವಿನಯಕುಮಾರ್ ಮುಂಬೈ ತಂಡವನ್ನು 173 ರನ್ ಗಳ ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು.

ಟಾಸ್ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆರಂಭಿಸಿತು. ಮೊದಲ ಓವರ್ ನ ಕೊನೆಯ ಎಸೆತದಲ್ಲಿ ಪೃಥ್ವಿ ಷಾ ವಿಕೆಟ್ ಕಬಳಿಸಿದರು. ತಮ್ಮ ಎರಡನೇ ಓವರ್ ನ ಮೊದಲ ಎಸೆತದಲ್ಲಿ ಜೈ ಗೋಕುಲ್ ಬಿಷ್ಠ ಮತ್ತು ನಂತರದ ಎಸೆತದಲ್ಲಿ ಆಕಾಶ್ ಪಾರ್ಕರ್ ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಇನಿಂಗ್ಸ್ ನಲ್ಲಿ ಒಟ್ಟು ಆರು ವಿಕೆಟ್ ಗಳಿಸಿದ ವಿನಯ್ ದಾಖಲೆ ಬರೆದರು. ಅದರಿಂದಾಗಿ ಆದಿತ್ಯ ತಾರೆ ಬಳಗವು ಚಹಾ ವಿರಾಮಕ್ಕೂ ಮುನ್ನವೇ ಸರ್ವಪತನವಾಯಿತು. ನಂತರ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡವು 29 ಓವರ್ ಗಳಲ್ಲಿ 1 ವಿಕೆಟ್ ಗೆ 115 ರನ್ ಗಳಿಸಿದೆ. ಮಯಂಕ್ ಅಗರವಾಲ್ (ಬ್ಯಾಟಿಂಗ್ 62) ಮತ್ತು ಮೀರ್ ಕೌನೇನ್ ಅಬ್ಬಾಸ್ (ಬ್ಯಾಟಿಂಗ್ 12) ಕ್ರೀಸ್ ನಲ್ಲಿದ್ದಾರೆ.

ಚಾಣಾಕ್ಷ ಬೌಲಿಂಗ್: ವಿನಯ್ ತಮ್ಮ ಮೊದಲ ಸ್ಪೆಲ್ ನಲ್ಲಿಯೇ (ಮೊದಲ ಸ್ಪೆಲ್; 6–2–10–4) ಮುಂಬೈಗೆ ಆಘಾತ ನೀಡಿದರು. ಅವರಿಗೆ ಉತ್ತಮ ಜೊತೆ ನೀಡಿದ ಅಭಿಮನ್ಯು ಮಿಥುನ್ (31ಕ್ಕೆ1) ಮತ್ತು ಎಸ್. ಅರವಿಂದ್ (45ಕ್ಕೆ2) ಕೂಡ ಬ್ಯಾಟ್ಸ್‌ಮನ್ ಗಳ ಮೇಲೆ ಒತ್ತಡ ಹೇರಿದರು. ಬೆಳಿಗ್ಗೆ 9 ಗಂಟೆಗೆ ಪಂದ್ಯ ಆರಂಭವಾದಾಗ ಪಿಚ್ ಮೇಲಿನ ಹುಲ್ಲಿನ ಗರಿಕೆಗಳಲ್ಲಿ ಮಿನುಗುತ್ತಿದ್ದ ಮಂಜಿನ ಹನಿಗಳೂ ಬೌಲರ್ ಗಳಿಗೆ ಬೆಂಬಲ ನೀಡಿದವು.

ಊಟದ ವಿರಾಮದ ವೇಳೆಗೆ ಮುಂಬೈ 90 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು.  ಅಗ್ರಕ್ರಮಾಂಕದ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿದ್ದರು. ಅನುಭವಿ ಆಟಗಾರ ಧವಳ್ ಕುಲಕರ್ಣಿ ಮತ್ತು ಅಖಿಲ್ ಹೆರ್ವಾಡ್ಕರ್ ಅವರು ತಂಡವನ್ನು ಸಂಕಷ್ಟದಿಂದ ಪಾರು ಮಾಡಲು ಶ್ರಮಿಸಿದರು.

ಆದರೆ, ಊಟದ ನಂತರ ಮತ್ತೆ ಮಿಂಚಿದ ವಿನಯ್ ಅವರು ಅಖಿಲ್ ಹೆರ್ವಾಡ್ಕರ್, ಕರ್ಷ ಕೊಠಾರಿ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು.

ಇನ್ನೊಂದೆಡೆ ಪದಾರ್ಪಣೆ ಪಂದ್ಯ ಆಡಿದ ಆಟಗಾರ ಶಿವಂ ದುಬೆ (7 ರನ್) ಅವರನ್ನುಆಫ್ ಸ್ಪಿನ್ನರ್ ಕೆ. ಗೌತಮ್ ಔಟ್ ಮಾಡಿದರು. ಆದರೆ ಕೊನೆಯ ವಿಕೆಟ್ ಜೊತೆಯಾಟವನ್ನು ಮುರಿಯಲು ಬೌಲರ್ ಗಳು ಬಹಳಷ್ಟು ಬೆವರು ಹರಿಸಿದರು.

ಧವಳ್ ಅರ್ಧಶತಕ: ಅನುಭವಿ ಆಲ್ ರೌಂಡರ್ ಧವಳ್ ಕುಲಕರ್ಣಿ (75; 132ಎ, 132 ನಿ, 9ಬೌಂ, 2 ಸಿ) ದಿಟ್ಟ ಹೋರಾಟ ನಡೆಸಿದರು. ಕರ್ನಾಟಕದ ಮೂವರು ಮಧ್ಯಮವೇಗಿಗಳು ಮತ್ತು ಇಬ್ಬರು ಸ್ಪಿನ್ನರ್ ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಪದಾರ್ಪಣೆ ಮಾಡಿದ ಶಿವಂ ಮಲ್ಹೋತ್ರಾ (ಔಟಾಗದೆ 7) ಅವರೊಂದಿಗೆ ಕೊನೆಯ ವಿಕೆಟ್ ಜೊತೆಯಾಟದಲ್ಲಿ 70 ರನ್ ಗಳಿಸಿದರು. ಶ್ರೇಯಸ್ ಗೋಪಾಲ್ ಅವರನ್ನು ಧವಳ್ ಹೆಚ್ಚು ದಂಡಿಸಿದರು. ಆದರೆ 56ನೇ ಓವರ್ ನಲ್ಲಿ ಅರವಿಂದ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿನಯ್ ಕುಮಾರ್ ಪಡೆದ ಆಕರ್ಷಕ ಕ್ಯಾಚ್ ಗೆ ನಿರ್ಗಮಿಸಿದರು.

ಮಯಂಕ್ ಮಿಂಚು: ಮಧ್ಯಾಹ್ನದ ಚುರುಕುಬಿಸಿಲಿನಲ್ಲಿ ಆರಂಭಿಕ ಜೋಡಿ ಮಯಂಕ್ ಅಗರವಾಲ್ ಮತ್ತು ಆರ್. ಸಮರ್ಥ್ ಮಿಂಚಿದರು. ಈ  ಋತುವಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ರನ್ ಗಳಿಸಿರುವ ಮಯಂಕ್ ಇಲ್ಲಿ ಮತ್ತೊಂದು ಅರ್ಧಶತಕ ದಾಖಲಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಸಮರ್ಥ್ ಜೊತೆಗೆ 83 ರನ್ ಸೇರಿಸಿದರು. 19ನೇ ಓವರ್ ನಲ್ಲಿ ಬೌಲಿಂಗ್ ಆರಂಭಿಸಿದ ಸ್ಪಿನ್ನರ್ ಶಿವಂ ದುಬೆ ಅವರ ಮೊದಲ ಎಸೆತದಲ್ಲಿಯೇ ಸಮರ್ಥ್  ಕ್ಲೀನ್ ಬೌಲ್ಡ್ ಆದರು.

ಪವನ್, ಅಬ್ಬಾಸ್ ಗೆ ಅವಕಾಶ

ಮೊಣಕಾಲು ನೋವಿನಿಂದಾಗಿ ಆಲ್‌ ರೌಂಡರ್ ಸ್ಟುವರ್ಟ್ ಬಿನ್ನಿ ಅವರಿಗೆ ವಿಶ್ರಾಂತಿ ನೀಡಲಾಯಿತು. ಅವರ ಬದಲಿಗೆ ಧಾರವಾಡದ ಆಟಗಾರ ಪವನ್ ದೇಶಪಾಂಡೆ ಅವರಿಗೆ ಅವಕಾಶ ನೀಡಲಾಯಿತು. ಈ ಋತುವಿನಲ್ಲಿ ಸ್ಟುವರ್ಟ್ ಎರಡು ಅರ್ಧಶತಕ ಮತ್ತು ಒಂದು ಶತಕ ದಾಖಲಿಸಿದ್ದರು. ಬುಧವಾರ ಮೊಣಕಾಲು ನೋವಿನ ಕಾರಣ ಅವರು ನೆಟ್ಸ್ ನಲ್ಲಿ ಅವರು ಹೆಚ್ಚು ಹೊತ್ತು ಅಭ್ಯಾಸ ಮಾಡಿರಲಿಲ್ಲ. ‌

ಉದಯೋನ್ಮುಖ ಆಟಗಾರ ಡಿ. ನಿಶ್ಚಲ್ ಅವರು ಗುರುವಾರ ಬೆಳಿಗ್ಗೆ ಅಭ್ಯಾಸ ಮಾಡುವಾಗ ಚೆಂಡು ಬಡಿದು ಹೆಬ್ಬೆ ರಳಿಗೆ ಗಾಯವಾದ ಕಾರಣ ವಿಶ್ರಾಂತಿ ನೀಡಲಾಯಿತು. ಕೆ.ಎಲ್. ರಾಹುಲ್ ರಾಷ್ಟ್ರೀಯ ತಂಡಕ್ಕೆ ಆಡಲು ಹೋಗಿದ್ದರಿಂದ ಪುಣೆ ಪಂದ್ಯದಲ್ಲಿ ನಿಶ್ಚಲ್ ಪದಾರ್ಪಣೆ ಮಾಡಿದ್ದರು. ಕಾನ್ಪುರದಲ್ಲಿ ನಡೆದಿದ್ದ ಲೀಗ್ ಹಂತದ ಪಂದ್ಯದಲ್ಲಿ ಶತಕ (195) ಗಳಿಸಿದ್ದರು.

ನಿಶ್ಚಲ್ ಬದಲಿಗೆ ಮೀರ್ ಕೌನೇನ್ ಅಬ್ಬಾಸ್ ಅವರಿಗೆ ಅವಕಾಶ ನೀಡಲಾಯಿತು. ಲೀಗ್ ಹಂತದ ಕೆಲವು ಪಂದ್ಯಗಳಿಗೆ ಗೈರಾಗಿದ್ದ ಎಡಗೈ ಮಧ್ಯಮವೇಗಿ ಎಸ್. ಶ್ರೀನಾಥ್ ಕಣಕ್ಕಿಳಿದರು. ಆದ್ದರಿಂದ ರೋನಿತ್ ಮೋರೆಗೆ ವಿಶ್ರಾಂತಿ ನೀಡಲಾಯಿತು.

ಕರುಣ್‌ ನಾಯರ್‌ ಆಕರ್ಷಕ ಕ್ಯಾಚ್

ವಿನಯ್ ಕುಮಾರ್ ಹ್ಯಾಟ್ರಿಕ್ ಸಾಧನೆಗೆ ಮೊದಲ ಸ್ಲಿಪ್ ಫೀಲ್ಡರ್ ಕರುಣ್ ನಾಯರ್ ಅವರ ಕಾಣಿಕೆಯ ಸಿಂಹಪಾಲು ಇದೆ. ಮೊದಲ ಓವರ್ ನ ಕೊನೆಯ ಎಸೆತದಲ್ಲಿ ಪೃಥ್ವಿ ಷಾ ಅವರ ಕ್ಯಾಚ್ ಪಡೆದಿದ್ದ ಕರುಣ್ ಸಂಭ್ರಮಿಸಿದ್ದರು. ವಿನಯ್ ಹಾಕಿದ ತಮ್ಮ ಎರಡನೇ ಓವರ್ ನ ಮೊದಲ ಎಸೆತದಲ್ಲಿ ಬಲಗೈ ಬ್ಯಾಟ್ಸ್ ಮನ್ ಜೈ ಗೋಕುಲ್ ಬಿಷ್ಠ ಅವರು ಡ್ರೈವ್ ಮಾಡಲು ಯತ್ನಿಸಿದರು. ಆದರೆ ಬ್ಯಾಟಿನ ಹೊರ ಅಂಚು ಸವರಿದ ಚೆಂಡು ಹಿಂದೆ ಸಾಗಿತು. ವಿಕೆಟ್ ಕೀಪರ್ ಸಿ.ಎಂ. ಗೌತಮ್ ಅವರನ್ನು ಚೆಂಡು ದಾಟಿದ್ದನ್ನು ಕ್ಷಣಾರ್ಧದಲ್ಲಿ ಗಮನಿಸಿದ್ದ ಕರುಣ್ ತಮ್ಮ ಎಡಬದಿಗೆ ಬಾಗಿ ಕೈಚಾಚಿದರು. ಚೆಂಡು ಅವರ ಎಡಗೈಯಲ್ಲಿ ಬಂದಿಯಾಯಿತು.

ಬುಧವಾರ 26ನೇ ಜನ್ಮದಿನವನ್ನು ತಂಡದೊಂದಿಗೆ ಭರ್ಜರಿಯಾಗಿ ಆಚರಿಸಿಕೊಂಡಿದ್ದ ಕರುಣ್ ತಮ್ಮ ನಾಯಕನ ಹ್ಯಾಟ್ರಿಕ್ ಸಾಧನೆಗೆ ಮಹತ್ವದ ಕಾಣಿಕೆ ನೀಡಿದರು.

Comments
ಈ ವಿಭಾಗದಿಂದ ಇನ್ನಷ್ಟು
ಗಿಳಿ ಭವಿಷ್ಯ ಸುಳ್ಳು ಮಾಡುವುದೇ ಜಪಾನ್?

ಫಿಫಾ ವಿಶ್ವಕಪ್‌
ಗಿಳಿ ಭವಿಷ್ಯ ಸುಳ್ಳು ಮಾಡುವುದೇ ಜಪಾನ್?

19 Jun, 2018
ಎನ್‌ಸಿಎನಲ್ಲಿ ಅಭ್ಯಾಸ ನಡೆಸಿದ ಮಹಿ

ಕ್ರಿಕೆಟ್‌
ಎನ್‌ಸಿಎನಲ್ಲಿ ಅಭ್ಯಾಸ ನಡೆಸಿದ ಮಹಿ

19 Jun, 2018

ಕ್ರಿಕೆಟ್‌ ಟೂರ್ನಿ
ಲೋಚನ್ ಅಪ್ಪಣ್ಣ ಆಕರ್ಷಕ ಶತಕ

ಮೊದಲು ಬ್ಯಾಟ್‌ ಮಾಡಿದ ಜುಪಿಟರ್‌ ಸಂಸ್ಥೆ 84.5 ಓವರ್‌ಗಳಲ್ಲಿ 289ರನ್‌ ದಾಖಲಿಸಿತು. ಇದಕ್ಕುತ್ತರವಾಗಿ ಎನ್‌ಗ್ರೇಡ್ಸ್‌ ಕ್ಲಬ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 35.2 ಓವರ್‌ಗಳಲ್ಲಿ 115ರನ್‌ಗಳಿಗೆ...

19 Jun, 2018
ಸ್ವೀಡನ್‌ ತಂಡದ ಕೈ ಹಿಡಿದ ವಿಎಆರ್‌

ಫಿಫಾ ವಿಶ್ವಕಪ್‌
ಸ್ವೀಡನ್‌ ತಂಡದ ಕೈ ಹಿಡಿದ ವಿಎಆರ್‌

19 Jun, 2018
ದಕ್ಷಿಣ ಆಫ್ರಿಕಾ ತಂಡದಲ್ಲಿ ತಬ್ರೈಜ್‌, ಕೇಶವ್‌ಗೆ ಸ್ಥಾನ

ಏಕದಿನ ಕ್ರಿಕೆಟ್‌ ಸರಣಿ
ದಕ್ಷಿಣ ಆಫ್ರಿಕಾ ತಂಡದಲ್ಲಿ ತಬ್ರೈಜ್‌, ಕೇಶವ್‌ಗೆ ಸ್ಥಾನ

19 Jun, 2018