ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರದ ಕಾಯಿಲೆಗೆ ಸಾವಿರ ಲಸಿಕೆಯೇ!

Last Updated 8 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕೀಟಗಳ ಮಾರಣಹೋಮ ಭೂಮಂಡಲದುದ್ದಕ್ಕೂ ನಡೆಯುತ್ತಿದೆ. ‘ಕೀಟಗಳಷ್ಟೇ ತಾನೆ’ ಎನ್ನುವಂತಿಲ್ಲ. ಕಣ್ಣಿಗೆ ಕಾಣುವ ಜಗತ್ತಿನಲ್ಲಿ ಕೀಟಜಗತ್ತೇ ಭೂಮಿಯಲ್ಲಿ ಅತಿ ವಿಸ್ತಾರವಾದುದು. ನಮ್ಮ ಇಡೀ ಕೃಷಿ, ಆಹಾರ ಉತ್ಪಾದನೆ ಕೀಟಗಳ ಪರಾಗಸ್ಪರ್ಶದಿಂದ ನಡೆಯುವಂಥದ್ದು. ಒಂದು ಅಂದಾಜಿನ ಪ್ರಕಾರ ನಾವೇ ಇದನ್ನು ಯಾಂತ್ರಿಕವಾಗಿ ಮಾಡಬೇಕಾದರೆ 50,000 ಕೋಟಿ ಡಾಲರ್ ಬೇಕಾಗುತ್ತದೆಯಂತೆ. ಕೆಲವು ದೇಶಗಳಲ್ಲಿ ಇದಕ್ಕಾಗಿ ನ್ಯಾನೋ ಕೃತಕ ಕೀಟಗಳನ್ನು ತಯಾರು ಮಾಡುತ್ತಿದ್ದಾರೆ. ಕಾರಣ ಶೇ.74ರಷ್ಟು ಕೀಟಜಗತ್ತು ಈಗಾಗಲೇ ನಾಶವಾಗಿದೆಯಂತೆ. ಇದಕ್ಕೆ ನಾವೇ ಮುಖ್ಯ ಕಾರಣ.

ನಮ್ಮ ಕೃಷಿಪದ್ಧತಿಯಲ್ಲಿ ಬಳಸುವ ಕೀಟನಾಶಕ ‘ಅವೈಜ್ಞಾನಿಕವಾಗಿಯೋ’ ಅಥವಾ ’ವೈಜ್ಞಾನಿಕವಾಗಿಯೋ’ ಒಟ್ಟಿನಲ್ಲಿ ಒಳ್ಳೆಯ ಕೀಟಗಳೋ, ಹಾನಿಕಾರಕ ಕೀಟಗಳೋ, ಸರ್ವನಾಶವನ್ನಂತೂ ಮಾಡಿಕೊಂಡು ಬಂದಿದ್ದೇವೆ. ಇದನ್ನು ಕೆಲವರು ಬೈಬಲ್‌ನ ಪ್ರಳಯ ಪದವನ್ನು ಉಪಯೋಗಿಸಿ ಹೇಳುವ ಇನ್ಸೆಕ್ಟಗೆಡನ್ (insectageddon) ಎನ್ನುತ್ತಾರೆ, ಕೀಟನಾಶದಿಂದ ಜಗತ್ತಿನ ಪ್ರಳಯವಾಗುವುದು ಎಂದು.

ಇದು ಒಂದೆಡೆ ಹೀಗಿದ್ದರೆ, ಸೊಳ್ಳೆಯಂತಹ ಕೀಟಗಳು ಎಲ್ಲ ರೀತಿಯ ಕೀಟನಾಶಕಗಳಿಗೂ ಹೊಂದಿಕೊಂಡು ಬದುಕುವಂತಾಗಿದೆ. ಸೊಳ್ಳೆಯಿಂದ ಬರುವ ಮಲೆರಿಯಾ, ಚಿಕುನ್‌ಗುನ್ಯ, ಜಿಕಾ, ಮತ್ತು ಡೆಂಗಿ ರೋಗಗಳು ಇಂದು ಜಗತ್ತನ್ನೇ ಕಾಡುತ್ತಿವೆ. ಮುಂದುವರಿದ ರಾಷ್ಟ್ರ, ಹಿಂದುಳಿದ ರಾಷ್ಟ್ರ  – ಎನ್ನುವ ಬೇಧಭಾವ ಮಾಡದೆ ಕಾಡುತ್ತಿವೆ!

ನಾಲ್ಕು ದಶಕಗಳ ಮೊದಲು ಡೆಂಗಿರೋಗ ಕೆಲವೇ ಲಕ್ಷ ಜನರಿಗೆ ಕಾಡುವ ಕಾಯಿಲೆಯಾಗಿತ್ತು. ಇಂದು ಸುಮಾರು ನಲವತ್ತು ಕೋಟಿ ಜನರಿಗೆ ತಗುಲುತ್ತಿದೆ. ಡೆಂಗಿ ಎರಡು, ಮೂರು ಅಥವಾ ನಾಲ್ಕು ಬಾರಿ ತಗುಲಿದರೆ ಅದರ ತೀವ್ರತೆ ಹೆಚ್ಚಾಗುತ್ತದೆ. ಈಗ ಡೆಂಗಿ ಕಾಯಿಲೆಗೆ ಉಪಯೋಗಿಸಲು ಕೆಲವು ದೇಶಗಳಲ್ಲಿ ಅನುಮತಿ ಕೊಟ್ಟಿದ್ದ ಸನಾಫೆ ಪ್ಯಾಶ್ಚರ್ ಕಂಪನಿಯ ‘ಡೆಂಗ್‌ವ್ಯಾಕ್ಸಿಯ’ ಲಸಿಕೆ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದೆ.

ಈಗ ಫಿಲಿಪ್ಪೀನ್ಸ್‌ ದೇಶದಲ್ಲಿ ಕಳೆದ ವಾರ ಲಸಿಕೆಯನ್ನು ನಿಲ್ಲಿಸಲಾಯಿತು. ಡೆಂಗಿ ಬರದ ಮಕ್ಕಳಿಗೆ ತಡೆಯಲು ಕೊಟ್ಟಾದ ಮೇಲೆ ಮುಂದೆ ಅವರಿಗೇನಾದರೂ ಕಾಯಿಲೆ ಬಂದಾಗ ತೀವ್ರ ಅದು ಸ್ವರೂಪವನ್ನು ಪಡೆಯುತ್ತದೆ ಎಂದು ಕಂಡು ಬಂದಿದೆ.

ಕಳೆದ ವರ್ಷವೇ ವಿಶ್ವ ಆರೋಗ್ಯ ಸಂಸ್ಥೆ ಇದರ ಬಗ್ಗೆ ಎಚ್ಚರಿಕೆ ಕೊಟ್ಟಿತ್ತು. ಆದರೂ ಫಿಲಿಪ್ಪೀನ್ಸ್‌ ಅವಸರದಿಂದ ಮುನ್ನುಗ್ಗಿ 7.3 ಲಕ್ಷ ಮಕ್ಕಳಿಗೆ ಈ ಲಸಿಕೆಯನ್ನು ಹಾಕಿಸಿತ್ತು. ಈ ಲಸಿಕೆ ಹಾಕಿಸಿಕೊಂಡಿರುವ ಮಕ್ಕಳನ್ನು ಇನ್ನು ಐದು ವರ್ಷ ತುಂಬ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಿದೆ.

ಭಾರತ ಸರ್ಕಾರ ಇನ್ನೂ ಈ ಲಸಿಕೆಗೆ ಅನುಮತಿಯನ್ನು ಕೊಟ್ಟಿಲ್ಲ. ಕಳೆದ ಎರಡು ವರ್ಷದಿಂದ ಕಂಪನಿ ಸತತವಾಗಿ ಪ್ರಯತ್ನ ಮಾಡುತ್ತಿದೆ. ಲಸಿಕೆ ಮನುಕುಲವನ್ನು ಅನೇಕ ಕಾಯಿಲೆಗಳಿಂದ ರಕ್ಷಿಸಿದೆಯಾದರೂ ಹೊಸ ಕಾಯಿಲೆಗಳಿಗೆ ಸರಿಯಾದ ಎಲ್ಲ ಹಂತದ ಪ್ರಯೋಗ ನಡೆಯದೇ ಇದ್ದಾಗ ಹೆಚ್ಚು ಜಾಗರೂಕರಾಗುವುದು ಲೇಸು. ಇನ್ನೊಂದೆಡೆ ‘ಸಾವಿರ ಕಾಯಿಲೆಗೆ ಸಾವಿರ ಲಸಿಕೆಯೇ’ – ಎನ್ನುವ ಪ್ರಶ್ನೆ ಕೇಳಲಾಗುತ್ತಿದೆ.

ಪರಿಸರ ನಾಶ ಎಷ್ಟರ ಮಟ್ಟಿಗೆ ಹೊಸ ಕಾಯಿಲೆಗಳಿಗೆ ಕಾರಣವಾಗುತ್ತಿವೆ ಎನ್ನುವುದನ್ನು ಗಮನಿಸುವ ಅವಶ್ಯಕತೆ ಇದೆ. ಜಿಕಾದಂತಹ ಅಥವಾ ಲೈಮ್‌ ರೋಗ ಕಾಡಿನಿಂದ ಊರಿಗೆ ಬರಲು ಪ್ರಕೃತಿ ನಾಶವೇ ಹೆಚ್ಚಿನ ಕಾರಣ ಎನ್ನುವ ವಾದ ಮತ್ತು ಅದಕ್ಕೆ ಸಾಕ್ಷಿಗಳು ಹೆಚ್ಚಾಗುತ್ತಿವೆ.

ಇಂದಿನ ಜಾಗತೀಕರಣ ಯುಗದಲ್ಲಿ ಕಾಯಿಲೆಗಳು ಸುಲಭವಾಗಿ ದೇಶದಿಂದ ದೇಶಕ್ಕೆ ಹಬ್ಬುತ್ತಿವೆ. ಆಸ್ಟ್ರೇಲಿಯಾ ಇಂದು ಡೆಂಗಿ ಕಾಯಿಲೆ ಹತ್ತಿಕ್ಕಲು ಹರಸಾಹಸ ಪಡುತ್ತಿದೆ. ಇತ್ತೀಚಿಗೆ ನಮ್ಮ ಹವಮಾನ ಇಲಾಖೆಯ ಪ್ರಕಾರ ದೆಹಲಿಯ ವಾಯುಮಾಲಿನ್ಯಕ್ಕೆ ಶೇ.40ರಷ್ಟು ಕಾರಣ ಇರಾಕ್ ಮತ್ತು ಸೌದಿ ದೇಶದಲ್ಲಿ ಉಂಟಾದ ದೂಳಿನ ಬಿರುಗಾಳಿಯಂತೆ! ಅದು ಜಾಗತಿಕ ಮಟ್ಟದ ಪರಸ್ಪರ ಸಂಬಂಧಿ ವಿಚಾರ ಎನಿಸಬಹುದು. ಆದರೆ ಇತ್ತ ಕೊಳಚೆ ನೀರು, ಅಲ್ಲಲ್ಲಿ ಸಂಗ್ರಹವಾಗುವ ನೀರಿನ ಸಮಸ್ಯೆ – ಇಂಥವುಗಳನ್ನು ನೀಗಿಸಿ ಸ್ವಚ್ಛತೆಯನ್ನು ಕಾಪಾಡಿದರೆ ಮತ್ತು ಕೆರೆ–ಕಟ್ಟೆಗಳಲ್ಲಿ ಕಪ್ಪೆ ಮೀನುಗಳಿರುವಂತೆ ನೋಡಿಕೊಂಡಿದರೆ ಸೊಳ್ಳೆಗಳ ಸಂಖ್ಯೆಯನ್ನು ಕಡಿಮೆಯಾಗಿಸಬಹುದು.

ಶ್ರೀಲಂಕಾದೇಶ ‘ಮಲೇರಿಯ ಮುಕ್ತ’ ಎಂದು ಘೋಷಿಸಿಕೊಂಡಿದೆ. ಬಾಂಗ್ಲಾದೇಶ ಕೂಡ ಈ ದಾರಿಯಲ್ಲಿ ಮಹತ್ತರ ಸಾಧನೆ ಮಾಡಿದೆ. ವಿಜ್ಞಾನದ ಸಹಾಯ, ವೈಜ್ಞಾನಿಕ ಪರಿಹಾರ – ಇವೆಲ್ಲವೂ ಸರಿ; ಆದರೆ ಇದರ ಜೊತೆಗೆ ಮೂಗಿನ ಕೆಳಗಿನ ಪರಿಹಾರಕ್ಕೆ ಮೊದಲ ಆದ್ಯತೆ ಸಿಗಬೇಕಿದೆ.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT