ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮಕದ ಗಮ್ಮತ್ತು ಉಳಿದೀತೆ?

Last Updated 8 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಸಂಜೆ ಆರರ ಹೊತ್ತಿಗೆ ಚಳಿಯಿರಲಿ, ಮಳೆಯಿರಲಿ... ಸದ್ದಿಲ್ಲದೆ ಮೈಸೂರಿನ ನಾದಬ್ರಹ್ಮ ಸಭಾಂಗಣದಲ್ಲಿ ಕನಿಷ್ಠವೆಂದರೂ 250ರಿಂದ 300 ಜನರು ಸೇರುತ್ತಾರೆ. ಏಕೆಂದರೆ, ಕಾಗದದ ಮೇಲೆ ನಿರ್ಜೀವವಾಗಿ ಹುದುಗಿರುವ ಕಾವ್ಯವನ್ನು ತಮ್ಮ ಧ್ವನಿಶರೀರದಲ್ಲಿ ಸಪ್ರಾಣಗೊಳಿಸುವಂತೆ ಮಾಡುವ ಗಮಕಿಗಳ ವಾಚನಕ್ಕೆ, ಆಮೇಲಿನ ವ್ಯಾಖ್ಯಾನಕ್ಕೆ ಕಾಯುತ್ತಾರೆ. ಕಾರ್ಯಕ್ರಮವನ್ನು ‘ಪರಂಪರೆ ಸಂಸ್ಥೆ’ ಅಷ್ಟೇ ಬದ್ಧತೆಯಿಂದ ನಡೆಸುತ್ತಿದೆ. ಸದ್ಯ ಪಂಪನ ‘ಆದಿಪುರಾಣ’ದ ವಾಚನ– ವ್ಯಾಖ್ಯಾನ ನಡೆಯುತ್ತಿದೆ. ಇದು ನವೆಂಬರ್‌ 25ರಂದು ಶುರುವಾಗಿದ್ದು, ನಿತ್ಯ ವಿವಿಧ ವಿದ್ವಾಂಸರು ವಾಚನ– ವ್ಯಾಖ್ಯಾನ ಮಾಡುತ್ತಿದ್ದರೆ, ಅವರ ಎದುರಿಗೆ ವಿದ್ವಾಂಸ ಟಿ.ವಿ. ವೆಂಕಟಾಚಲಶಾಸ್ತ್ರೀ ಅವರು ‘ಆದಿಪುರಾಣ’ದ ಪಠ್ಯವನ್ನು ಹಿಡಿದುಕೊಂಡು ಕುಳಿತಿರುತ್ತಾರೆ. ಅವರ ಹಾಗೆ ಅನೇಕರು ಪಠ್ಯವನ್ನು ಹಿಡಿದುಕೊಂಡು ಕುಳಿತಿರುತ್ತಾರೆ. ವಾಚನದಲ್ಲಿ, ವ್ಯಾಖ್ಯಾನದಲ್ಲಿ ತಪ್ಪಾದರೆ ಶಾಸ್ತ್ರಿ ಅವರು ಥಟ್ಟನೆ ‘ಅದು ಹಾಗಲ್ಲ, ಹೀಗೆ’ ಎಂದು ಹೇಳುತ್ತಾರೆ.

ಇದರಿಂದ ವಾಚಿಸುವವರು, ವ್ಯಾಖ್ಯಾನಿಸುವವರು ತಪ್ಪನ್ನು ತಿದ್ದಿಕೊಂಡು ಮುಂದುವರಿಯುತ್ತಾರೆ. ‘ಪಠ್ಯವನ್ನು ನೋಡುವುದೇಕೆಂದರೆ ಹೆಚ್ಚು ಆಪ್ತವಾಗುತ್ತದೆ. ಕೇಳುತ್ತಾ ಕಾವ್ಯದ ಸಾಲುಗಳನ್ನು ನೋಡುತ್ತಿದ್ದರೆ ಅವುಗಳ ಸ್ವಾರಸ್ಯ, ಶಬ್ದ ವಿಭಜನೆ ಹೇಗೆ, ಅರ್ಥಗ್ರಹಣ ಹೇಗೆಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ. ವಾಚಿಸುವವರು, ವ್ಯಾಖ್ಯಾನಿಸುವವರು ಸರಿಯಾಗಿ ಹೇಳಲಿ ಎನ್ನುವ ಉದ್ದೇಶವೂ ಇದೆ’ ಎನ್ನುವ ವಿವರ ವೆಂಕಟಾಚಲಶಾಸ್ತ್ರೀ ಅವರದ್ದು.

ನಾದಬ್ರಹ್ಮದ ಸಭಾಂಗಣದಲ್ಲಿ ಗಮಕ ನಡೆಯುತ್ತಿದ್ದರೆ, ಅದರ ಮೇಲಿನ ಸಭಾಂಗಣದಲ್ಲಿ ‘ಆದಿಪುರಾಣ’ದ ಚಿತ್ರಪಟಗಳಿವೆ. 24 ತೀರ್ಥಂಕರರ ಚಿತ್ರಗಳು, ಅವುಗಳ ವಿವರಗಳೂ ಇವೆ. ಜೈನಧರ್ಮದ ಪಾರಿಭಾಷಿಕ ಶಬ್ದಗಳು, ಪಂಪನ ಕುರಿತ ಹಳೆಯ ಕೃತಿಗಳ ಪ್ರದರ್ಶನವೂ ಇದೆ. ಇದು ಡಿಸೆಂಬರ್‌ 9ರಂದು (ಇಂದು) ಕೊನೆಯಾಗಲಿದೆ.  ಸಂಜೆ 6 ಗಂಟೆಗೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ‘ಆದಿಪುರಾಣ’ ಎಂಬ ನೃತ್ಯರೂಪಕವನ್ನು ವಿದ್ವಾನ್‌ ಸಂದೇಶ್‌ ಭಾರ್ಗವ ಮತ್ತು ಶಿಷ್ಯರು ಪ್ರಸ್ತುತಪಡಿಸಲಿದ್ದಾರೆ.

ಆದರೆ, ‘ಈ ಕಾರ್ಯಕ್ರಮಕ್ಕೆ ಹಾಜರಾಗುವವರಲ್ಲಿ ಐವತ್ತು ದಾಟಿದವರೇ ಹೆಚ್ಚು. ಹೊಸ ತಲೆಮಾರಿನವರು ತೀರಾ ಅಪರೂಪ’ ಎನ್ನುವ ಅಸಮಾಧಾನ ಪ್ರತಿ ದಿನ ಹಾಜರಾಗುತ್ತಿರುವ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಎ. ಓದುತ್ತಿರುವ ರಾಜಶ್ರೀ ಎಸ್‌.ನಾಡಿಗ್ ಅವರದು.

‘ಚನ್ನರಾಯಪಟ್ಟಣದಲ್ಲಿ ನಮ್ಮ ತಾತ ನಾಗಪ್ಪ ಅವರು ಶಾನುಭೋಗರಾಗಿದ್ದರು. ಜತೆಗೆ, ಗಮಕಿ. ಅವರಿಂದ ಅಪ್ಪ ಸಿ.ಎನ್‌.ಸುಬ್ಬಣ್ಣಗೆ ಆಸಕ್ತಿ ಬಂತು. ಅಪ್ಪನಿಂದ ನನಗೆ ಆಸಕ್ತಿ ಬಂತು. ಶಾಲೆಯಲ್ಲಿದ್ದಾಗ ಹಳಗನ್ನಡದ ಪದ್ಯಗಳನ್ನು ಅಪ್ಪನಿಂದ ಓದಿಸಿಕೊಳ್ಳುತ್ತಿದ್ದೆ. ಆದರೆ, ಈ ಕಾರ್ಯಕ್ರಮಕ್ಕೆ ಮೂವತ್ತರ ಒಳಗಿರುವವರು ಬರುವುದು ಕಡಿಮೆ. ಇವತ್ತು ಕನ್ನಡ ಸ್ಕೋರ್‌ ಮಾಡುವ ವಿಷಯವಾಗಿಲ್ಲ. ಏಕೆಂದರೆ, ಹಳಗನ್ನಡ ಪಠ್ಯವಾಗಿಟ್ಟರೆ ಹೆಚ್ಚು ಅಂಕ ಪಡೆಯಲಾಗದು ಎನ್ನುವ ಆತಂಕ ಅನೇಕರದು’ ಎನ್ನುತ್ತಾರೆ ರಾಜಶ್ರೀ.

‘ನಮ್ಮ ತಲೆಮಾರಿಗೆ ರುಚಿಸುವ ಹಾಗೆ ಮಹಾಕಾವ್ಯಗಳನ್ನು ದಾಟಿಸುವ ಕೆಲಸ ಮಾಡಬೇಕಿದೆ. ನಮ್ಮ ತಲೆಮಾರಿನವರಿಗೆ ಪ್ರಸಿದ್ಧಿ ಸಿಗುತ್ತದೆ ಎಂದರೆ ಕಲಿಯಲು ಆಸಕ್ತಿ ತೋರಿಸುತ್ತಾರೆ. ಆದಿಪುರಾಣ ಓದಿದರೆ ಏನು ಸಿಗುತ್ತದೆ ಎಂದು ಕೇಳುವವರಿದ್ದಾರೆ. ಮೇಷ್ಟ್ರುಗಳು ಆಸಕ್ತಿ ಮೂಡಿಸುವ ಹಾಗೆ ಪಾಠ ಮಾಡಬೇಕು.

ಅವರಿಗೇ ಹಳಗನ್ನಡ ಓದಲು ಬರುವುದಿಲ್ಲ! ವಿಜ್ಞಾನ, ವಾಣಿಜ್ಯ ವಿಷಯ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಕನ್ನಡ ಎಂದರೆ ನಿರ್ಲಕ್ಷ್ಯ. ಹಳಗನ್ನಡ, ವ್ಯಾಕರಣ ಎಂದರೆ ತಲೆನೋವು ಎಂದೇ ಅನೇಕ ಗೆಳೆಯರು ಹೇಳುತ್ತಾರೆ. ಭರತನಾಟ್ಯ, ಸಂಗೀತ ತರಗತಿಗಳ ಹಾಗೆ ಗಮಕವನ್ನು ಪಾಠವಾಗಿ ಕಲಿಸುವಂತಾಗಬೇಕು. ಶಾಲೆಯ ಆಚೆಗೆ ಸಂಗೀತ ಕಲಿಯುವವರಿಗೆ ಗಮಕ ಪರಿಚಯಿಸಬೇಕು’ ಎನ್ನುವುದು ಅವರ ಮನವಿ.

ಅತ್ತ ಶಿವಮೊಗ್ಗದಿಂದ 6 ಕಿ.ಮೀ. ದೂರದಲ್ಲಿ, ಗಮಕ ಗ್ರಾಮವೆಂದೇ ಕರೆಯಲಾಗುವ ಹೊಸಹಳ್ಳಿಯಲ್ಲಿ 83ರ ಹರೆಯದ ಎಚ್‌.ಆರ್‌.ಕೇಶವಮೂರ್ತಿ ಅವರು ನಿತ್ಯ ಸಂಜೆ ತಮ್ಮ ಶಿಷ್ಯರ ಎದುರು ಮಹಾಕಾವ್ಯಗಳನ್ನು ವಾಚನ ಮಾಡುತ್ತಾರೆ. ಅದೇ ಹೊತ್ತಿಗೆ ರಾಜಾರಾಮಮೂರ್ತಿ ಅವರು ಗಮಕಕ್ಕೇ ಸಂಬಂಧಿಸಿದ ‘ಗಮಕಸಂಪದ’ ಎಂಬ ಮಾಸಪತ್ರಿಕೆ ತರಲು ಸಿದ್ಧತೆ ನಡೆಸುತ್ತಿರುತ್ತಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಪ್ರತಿ ಗುರುವಾರ ಸಂಜೆ ಕೋಟೆ ರಾಘವೇಂದ್ರ ಮಠದಲ್ಲಿ ಸಮಗ್ರ ಕುಮಾರವ್ಯಾಸ ಭಾರತದ ಗಮಕ ವಾಚನ ನಡೆಯುತ್ತಿದೆ. ಅಲ್ಲಿ ಸುಮಿತ್ರಾ ವಿಶ್ವನಾಥ್, ನಾಗಶ್ರೀ, ಸಿ.ಎನ್‌.ಸುಬ್ಬಣ್ಣ, ಬಿ.ಎ.ಗೋಪಿನಾಥ್‌ ಅವರು ನಿರಂತರವಾಗಿ ಗಮಕ ವಾಚನ–ವ್ಯಾಖ್ಯಾನ ಮಾಡುತ್ತಾರೆ.

ತುಮಕೂರಿನಲ್ಲಿ ಪ್ರತಿ ಶನಿವಾರ ಮನೆ ಮನೆಗಳಲ್ಲಿ ಗಮಕ ವಾಚನ–ವ್ಯಾಖ್ಯಾನ ನಡೆಯುತ್ತಿದೆ. 25ನೇ ವಯಸ್ಸಿಗೇ ಗಮಕ ಕಲೆಯನ್ನು ರೂಢಿಸಿಕೊಂಡಿರುವ ಬೆಂಗಳೂರು ನಿವಾಸಿ ಎಂ.ಖಾಸಿಂ ಮಲ್ಲಿಗೆಮಡುವು ಅವರು ವಾರದಲ್ಲಿ ಕೆಲವು ಕಡೆ ಕಾರ್ಯಕ್ರಮ ನೀಡುತ್ತಾರೆ.

ಹೀಗೆ ಗಮಕದ ಕಾರ್ಯಕ್ರಮಗಳು ಸದ್ದಿಲ್ಲದೆ ನಾಡಿನಲ್ಲಿ ನಡೆಯುತ್ತಲೇ ಇರುತ್ತವೆ. ಕಠಿಣವಾದ ಪ್ರೌಢಕಾವ್ಯಗಳನ್ನು ಜನರಲ್ಲಿ ಅಭಿರುಚಿ ಹುಟ್ಟಿಸುವ ಹಾಗೆ ಗಮಕರೂಪದಲ್ಲಿ ಶ್ರುತಪಡಿಸಿ, ಅವುಗಳ ಸೂಕ್ಷ್ಮತೆಗಳನ್ನೂ ವಿಶೇಷ ಅಂಶಗಳನ್ನೂ ವ್ಯಾಖ್ಯಾನದ ಮೂಲಕ ಪರಿಚಯಿಸಲಾಗುತ್ತಿದೆ. ಮೂಲಕಾವ್ಯಗಳನ್ನು ಅಭ್ಯಾಸ ಮಾಡಲು ಸ್ಫೂರ್ತಿ, ಪ್ರೇರಣೆ ಸಿಗಲಿ ಎನ್ನುವ ಉದ್ದೇಶವೂ ಇದೆ.

ಏಕೆಂದರೆ, ಹಳೆಯ ಕಾವ್ಯ ಓದಲು ಸಿದ್ಧತೆ ಬೇಕು. ಇದಕ್ಕೆ ಅನೇಕ ಸಂಸ್ಥೆಗಳು ಮೀಟುಗೋಲಾಗಿವೆ. ‘ನಿತ್ಯನೂತನವಾದ ಸಂದೇಶ, ಗಾಢವಾದ ಜೀವನದರ್ಶನ, ಮಹಾಕವಿಗಳ ಸತ್ವ ಅಡಗಿರುವ ಕಾವ್ಯವನ್ನು ಗ್ರಹಿಸಿ ಆಸಕ್ತಿ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ನಷ್ಟವಾಗುವುದು ಆ ಕಾವ್ಯಕ್ಕೆ ಅಥವಾ ಆ ಕವಿಗೆ ಅಲ್ಲ; ನಮಗೇ’ ಎನ್ನುವುದು ಅನೇಕರ ಅಭಿಪ್ರಾಯ.

ಅಂದಹಾಗೆ ಗಮಕ ಎಂದರೇನು? ಸಂಸ್ಕೃತದ ಪಾಠಕ, ವಾಚಕ ಕನ್ನಡದಲ್ಲಿ ಗಮಕಿಯಾಗಿದೆ. ‘ರಸೋಚಿತವಾದ ರಾಗಗಳನ್ನು ಸಂಯೋಜಿಸಿ, ಸಹೃದಯರ ಮನ ಮುಟ್ಟುವಂತೆ ಕಾವ್ಯಗಾಯನ ಮಾಡುವ ಕಲೆ’ ಎಂದೂ ಅರ್ಥೈಸಲಾಗುತ್ತದೆ.

ಮುಖ್ಯವಾಗಿ ಗಮಕ ಎಲ್ಲ ಜನಸಾಮಾನ್ಯರನ್ನು ಒಳಗೊಳ್ಳುವ ಕಲೆಯಾಗಿದೆ.

ಕವಿರಾಜಮಾರ್ಗಕಾರ ನಮ್ಮ ಜನರನ್ನು ಕುರಿತು ‘ಕುರಿತೋದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್...’ ಎಂದಿದ್ದಾನೆ. ಶಾಲೆಗೆ ಹೋಗಿ ಕಲಿಯದ ನಮ್ಮ ಹಿರಿಯರು ಮಹಾಕಾವ್ಯಗಳನ್ನು ಕೇಳುತ್ತ ಸಾಹಿತ್ಯಪ್ರಜ್ಞೆ ಬೆಳೆಸಿಕೊಂಡರು. ಹಿಂದೆ ಪುಸ್ತಕಗಳು ಸಿಗುತ್ತಿರಲಿಲ್ಲ. ತಾಳೆಗರಿಗಳನ್ನು ಓದಲು ಎಲ್ಲರಿಗೂ ಆಗುತ್ತಿರಲಿಲ್ಲ. ಕಟ್ಟೆಯ ಮೇಲೆ, ದೇವಾಲಯಗಳ ಅಂಗಳದಲ್ಲಿ ರಾಮಾಯಣ, ಮಹಾಭಾರತ, ಭಾಗವತ ಕಥೆಗಳನ್ನು ಹೇಳುತ್ತಿದ್ದರು. ಹೀಗೆ ಜನರಿಗೆ ಕಾವ್ಯ ತಲುಪಿಸಿದವರು ಗಮಕಿಗಳು. ಮಹಾಕಾವ್ಯಗಳನ್ನು ಜನರಿಗೆ ಅರ್ಥವಾಗುವ ಹಾಗೆ ಹೇಳುತ್ತ, ನಮ್ಮ ಬದುಕಿಗೆ ಬೇಕಾದ ಮೌಲ್ಯಗಳನ್ನು ತಿಳಿಸಿದರು. ಪದ್ಯವನ್ನು ಸುಮ್ಮನೆ ಓದದೆ ರಾಗವಾಗಿ ಹಾಡಿದರು. ಹಾಗೆ ಓದುವವರನ್ನು ಗಮಕಿಗಳೆಂದು ಕರೆದರು. ಹೇಳುವ ಕಲೆಗೆ ಗಮಕ ಎಂದರು. ಮೊದಮೊದಲು ಒಬ್ಬರೇ ಹೇಳುತ್ತಿದ್ದರು. ಶ್ರಮವಾಗುತ್ತದೆಂದು, ಅಭಿಪ್ರಾಯ ಸ್ಪಷ್ಟವಾಗಲೆಂದು ಹೇಳುವವರೊಬ್ಬರಾಗಿ, ಅರ್ಥಕ್ಕೆ ಇನ್ನೊಬ್ಬರ ನೆರವು ಪಡೆದರು. ಹೀಗೆ ವಾಚಿಸುವವರು, ವ್ಯಾಖ್ಯಾನಿಸುವವರು ಎಂದು ವರ್ಗವಾಯಿತು.

ಗಮಕ ಗ್ರಾಮ: ಶಿವಮೊಗ್ಗ ಸನಿಹದ ಹೊಸಹಳ್ಳಿಯನ್ನು ಗಮಕ ಗ್ರಾಮವೆಂದು ಕರೆಯುತ್ತಾರೆ. ಅಲ್ಲಿ 3–4ನೇ ತಲೆಮಾರಿನ ಗಮಕಿಗಳಿದ್ದಾರೆ. ಅಲ್ಲಿಯ ಅಗ್ರಹಾರದಲ್ಲಿ 60 ಮನೆಗಳಿದ್ದು, ಮನೆಗೆ ಇಬ್ಬರು–ಮೂವರು ಗಮಕಿಗಳಿದ್ದಾರೆ.

ಮತ್ತೂರು–ಹೊಸಹಳ್ಳಿಯಲ್ಲಿ ರಾಮಶಾಸ್ತ್ರಿಗಳು ಎಂಬ ಗಮಕಿಗಳಿದ್ದರು. ಲಕ್ಷ್ಮೀಕೇಶವಶಾಸ್ತ್ರಿ ಎಂಬ ವ್ಯಾಖ್ಯಾನಕಾರರಿದ್ದರು. ಅವರ ಪರಂಪರೆಯನ್ನು ಎಚ್‌.ಆರ್‌.ಕೇಶವಮೂರ್ತಿ ಮುಂದುವರಿಸಿಕೊಂಡು ಬಂದಿದ್ದಾರೆ. ಅವರು ಹಾಡುವ ಗಮಕದ ಶೈಲಿ ಘರಾಣದ ಹಾಗೆ ಅಪರೂಪವಾದುದು. ಅವರು ವಾಚನ ಮಾಡಿದರೆ, ಮತ್ತೂರಿನಲ್ಲಿರುವ 84 ವರ್ಷದ ಮಾರ್ಕಂಡೇಯ ಅವಧಾನಿಗಳು ವ್ಯಾಖ್ಯಾನ ಮಾಡುತ್ತಾರೆ. ಅವರ ಅನೇಕ ಶಿಷ್ಯರು ಗಮಕವನ್ನು ಪ್ರಚಾರಗೊಳಿಸುತ್ತಿದ್ದಾರೆ.

ಅನೇಕ ವರ್ಷಗಳ ಹಿಂದೆ ಯಾರದೇ ಮನೆಯಲ್ಲಿ ಕಾರ್ಯಕ್ರಮವಾದರೂ ‘ಗಮಕ ಇಟ್ಟುಕೊಳ್ಳೋಣ...’ ಎಂದು ಕೇಳುತ್ತಿದ್ದರು ಕೇಶವಮೂರ್ತಿ. ‘ತಾಂಬೂಲ ಕೊಟ್ಟರೂ ಸಾಕು’ ಎನ್ನುತ್ತಿದ್ದರು. ಇದರ ಪರಿಣಾಮ ಮಗುವಿನ ನಾಮಕರಣದಿಂದ ಹಿಡಿದು, ವೈಕುಂಠ ಸಮಾರಾಧನೆವರೆಗೂ ಈಗ ಗಮಕ ಇಟ್ಟುಕೊಳ್ಳುತ್ತಾರೆ. ಪ್ರತಿವರ್ಷ ‘ಗಮಕ ಸಪ್ತಾಹ’ ಅಲ್ಲಿ ನಡೆಯುತ್ತಿದೆ. ಇದರೊಂದಿಗೆ ಅಲ್ಲಿ ಸೂರ್ಯನಾರಾಯಣ ಅವಧಾನಿ ಸ್ಮಾರಕ ರಾಜ್ಯಮಟ್ಟದ ಗಮಕ ಸ್ಪರ್ಧೆ, 2004ರಿಂದ ಅಹೋರಾತ್ರಿ ಗಮಕ ಕಾರ್ಯಕ್ರಮ ನಡೆಯುತ್ತಿವೆ. ಗಮನಾರ್ಹ ಸಂಗತಿ ಎಂದರೆ, ಹೊಸಹಳ್ಳಿಯಲ್ಲಿ ‘ಗಮಕ ಭವನ’ ಇದೆ. ಇದರ ನಿರ್ಮಾಣಕ್ಕೆ ಮತ್ತೂರು ಕೃಷ್ಣಮೂರ್ತಿಗಳು ಶ್ರಮಿಸಿದರು. 2008ರಲ್ಲಿ ಭವನ ಉದ್ಘಾಟನೆಯಾಯಿತು. ಈಗ ಇದರಲ್ಲಿಯೇ ಗಮಕದ ಎಲ್ಲ ಕಾರ್ಯಕ್ರಮಗಳು ನಡೆಯುತ್ತವೆ.

ಮಕ್ಕಳಿಂದಲೂ ವಿಮರ್ಶೆ: ತುಮಕೂರಲ್ಲಿ ತುಮಕೂರು ಸುನಂದಾ ಗಮಕ ಕಲೆಯನ್ನು ಬೆಳೆಸಿದರು. ಅವರ ಶ್ರಮದಿಂದ ಅಲ್ಲಿನ ಮನೆ–ಮನೆಗಳಲ್ಲಿ ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ಯ ಗಮಕವನ್ನು ಪೂರ್ಣಗೊಳಿಸಲಾಗಿದೆ. ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’, ಹರಿಹರನ ‘ಗಿರಿಜಾ ಕಲ್ಯಾಣ’, ಹರಿಹರನ ರಗಳೆಗಳು, ಲಕ್ಷ್ಮೀಶನ ‘ಜೈಮಿನಿ ಭಾರತ’, ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದ ವಾಚನ–ವ್ಯಾಖ್ಯಾನವಾಗಿದೆ. ಇದು 45 ವರ್ಷಗಳಿಂದ ನಡೆಯುತ್ತಿದೆ. ಕಾವ್ಯ ವಾಚನ ನಡೆಯುವಾಗ ಆಸಕ್ತರು ಪಠ್ಯವನ್ನು ಹಿಡಿದುಕೊಂಡು ಕುಳಿತಿರುತ್ತಾರೆ. ಕಾರ್ಯಕ್ರಮವಾದ ಮೇಲೆ ನಡೆಯುವ ಅವಲೋಕನದಲ್ಲಿ ‘ಈ ಭಾಗ ಸರಿಯಾಗಿ ಹಾಡಲಿಲ್ಲ, ವ್ಯಾಖ್ಯಾನ ಜಾಸ್ತಿಯಾಯಿತು, ವಾಚನ ಕಡಿಮೆಯಾಯಿತು...’ ಹೀಗೆ ಚರ್ಚೆ ನಡೆಯುತ್ತದೆ. ಮಕ್ಕಳೂ ಭಾಗವಹಿಸಿ ವಿಮರ್ಶೆ ಮಾಡುತ್ತಾರೆ. ಜತೆಗೆ, ಗಮಕ ಭಾರತಿ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಪ್ರತಿವರ್ಷ ಆಷಾಢ ಮಾಸದಲ್ಲಿ ಗಮಕ ಹಬ್ಬ ಆಯೋಜಿಸಲಾಗುತ್ತಿದೆ. ಇದರಲ್ಲಿ ಒಂದು ದಿನ ಮಕ್ಕಳಿಗೇ ಮೀಸಲು.

‘ಗಮಕ ಕಲೆ ಅಭ್ಯಾಸ ಮಾಡಿದ ಮೇಲೆ ಹಳಗನ್ನಡ ಕಾವ್ಯಗಳನ್ನು ಆಕರ್ಷಕವಾಗಿ ಪಾಠ ಮಾಡಲು ಸಾಧ್ಯವಾಯಿತು. ಗಮಕ ಕಲಾ ಪರಿಷತ್ತಿನ ಸಹಯೋಗದಲ್ಲಿ ನಮ್ಮ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳಿಗಾಗಿ ಪಾವಗಡ, ಕುಣಿಗಲ್‌, ಮಧುಗಿರಿ, ತಿಪಟೂರು, ಗುಬ್ಬಿ ಮೊದಲಾದ ಕಡೆ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಕನ್ನಡವನ್ನು ಮೇಜರ್‌ ಆಗಿ ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಪಠ್ಯ ಆಧರಿಸಿ ಗಮಕ ಕಾರ್ಯಕ್ರಮ ಏರ್ಪಡಿಸುತ್ತೇವೆ. 3 ತಿಂಗಳ ಹಿಂದೆ ತುಮಕೂರು ವಿಶ್ವವಿದ್ಯಾಲಯದಲ್ಲಿ ರನ್ನನ ಗದಾಯುದ್ಧ ಕುರಿತ ಗಮಕ ವಾಚನ–ವ್ಯಾಖ್ಯಾನ ನಡೆಯಿತು. ಇದರಲ್ಲಿ ತುಮಕೂರು ವಿ.ವಿ ವ್ಯಾಪ್ತಿಯ ವಿಜ್ಞಾನ ಪದವಿಯ 600 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ–

ಶಿಕ್ಷಕರಿಗೆ, ಪಿಯು ಕಾಲೇಜಿನ ಉಪನ್ಯಾಸಕರಿಗೆ ಹಳಗನ್ನಡ ಕಾವ್ಯ ಕುರಿತು ಕಾರ್ಯಾಗಾರ ಆಯೋಜಿಸಿದ್ದೇವೆ’ ಎನ್ನುತ್ತಾರೆ ಗಮಕ ಭಾರತಿ ಚಾರಿಟಬಲ್‌ ಟ್ರಸ್ಟ್‌ ಕಾರ್ಯದರ್ಶಿ, ವ್ಯಾಖ್ಯಾನಕಾರ ಪಾವಗಡ ರೇಣುಕಾಪ್ರಸಾದ್‌.

ಹಾಸನದಲ್ಲಿ ರುಕ್ಮಿಣಿ ನಾಗೇಂದ್ರ, ಕೆ.ವಿ.ವಸಂತಲಕ್ಷ್ಮಿ ವಾಚನಕಾರರು ಇದ್ದರೆ, ಪ್ರೊ.ನರಹರಿ, ಜಿ.ಎಸ್‌.ಮಂಜುನಾಥ್, ಎಚ್‌.ಎಲ್‌. ಮಲ್ಲೇಶಗೌಡ, ಪರಮೇಶ್ವರ ಭಟ್, ಎಂ.ಎನ್. ಪಾಂಡುರಂಗ, ಚಂದ್ರಕಾಂತ ಪಡೆಸೂರ, ಗಣೇಶ ಉಡುಪ ಅವರು ವಾಚನಕಾರರು. ಅಲ್ಲಿನ ಅನೇಕ ಕಲಾವಿದರು ಸ್ವಾರ್ಥವನ್ನು ಬಿಟ್ಟು, ಸಾಹಿತ್ಯದಲ್ಲಿ ಆಸಕ್ತಿಯಿಟ್ಟು, ಭಾವನಾಪ್ರಧಾನವಾದ ಕಥೆಗಳನ್ನು ಆಯ್ದುಕೊಂಡು ಗಮಕ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇದಕ್ಕೆ ದೇವಸ್ಥಾನಗಳೂ ಪೋಷಕವಾಗಿವೆ. ಪ್ರತಿವರ್ಷ ಗಮಕಸಪ್ತಾಹ ನಡೆಸಲಾಗುತ್ತಿದೆ.

‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಮಕ ಕುರಿತು ಗೋಷ್ಠಿಗಳು ನಡೆಯುತ್ತಿಲ್ಲ. ಈ ಸಂಬಂಧ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ’ ಎನ್ನುವ ಬೇಸರ ಗಣೇಶ ಉಡುಪ ಅವರದು.

ಯೇಸು ಜನನ ಚರಿತೆಯನ್ನು 9 ಕಾಂಡಗಳಲ್ಲಿ 2011 ಪದ್ಯಗಳನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿರುವ ಹಾಸನದ ಪ್ರೊ.ನರಹರಿ ಅವರು ದಶಾವತಾರ ಕಾವ್ಯಗಳನ್ನೂ ರಚಿಸಿದ್ದಾರೆ. ಇವು ಗಮಕ ಕಾರ್ಯಕ್ರಮದಲ್ಲಿ ಪ್ರಸ್ತುತಗೊಳ್ಳುತ್ತಿವೆ.

ಶಿಕ್ಷಣ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾಗ ಶಾಲಾ ಪಠ್ಯವಾಗಿರುವುದನ್ನು ಆಯ್ದುಕೊಂಡು ಕಾರ್ಯಕ್ರಮ ಏರ್ಪಡಿಸಿದ್ದರು. ‘ಆದರೆ, ಎಷ್ಟು ಪ್ರಮಾಣದಲ್ಲಿ ನಡೆಯಬೇಕೋ ಅಷ್ಟಾಗಿ ನಡೆಯುತ್ತಿಲ್ಲ. ಗಮಕ ಹಾಡಿದಾಗ ವಿದ್ಯಾರ್ಥಿಗಳು ಸಂಭ್ರಮಿಸುತ್ತಾರೆ. ಪ್ರಾಥಮಿಕ ಶಾಲಾ ಶಿಕ್ಷಕರಿಂದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರವರೆಗೂ ಹಳಗನ್ನಡ ಕಾವ್ಯ ಓದಲು ಬಾರದವರಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಗಮನ ಹರಿಸಬೇಕು’ ಎನ್ನುತ್ತಾರೆ ಪ್ರೊ.ನರಹರಿ.

ಇದಕ್ಕೆ ಪೂರಕವಾಗಿ ಚೆನ್ನೈನ ಮದ್ರಾಸ್‌ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ತಮಿಳ್‌ ಸೆಲ್ವಿ ಅವರು, ‘ಹಳಗನ್ನಡ ಕಾವ್ಯಗಳನ್ನು ಪಾಠ ಮಾಡಲು ಗಮಕ ಕಲೆ ಅನುಕೂಲವಾಗಿದೆ’ ಎನ್ನುತ್ತಾರೆ. ‘ನನ್ನ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಹಳಗನ್ನಡ ಕಾವ್ಯ ಕಬ್ಬಿಣದ ಕಡಲೆ ಆಗುವುದಿಲ್ಲ. ಹಳಗನ್ನಡವನ್ನು ಕಬ್ಬಿಣದ ಕಡಲೆ ಎಂದೇ ಕನ್ನಡ ಅಧ್ಯಾಪಕರು ತಿಳಿಯುತ್ತಾರೆ. ಶ್ರದ್ಧೆಯಿಂದ ಕಲಿತರೆ, ಗಮಕದತ್ತ ಮನಸ್ಸು ಮಾಡಿದರೆ ಖಂಡಿತವಾಗಿಯೂ ವಿದ್ಯಾರ್ಥಿಗಳಿಗೆ ಆಸಕ್ತಿಕರವಾಗಿ ಪಾಠ ಮಾಡಬಹುದು’ ಎನ್ನುವ ಸಲಹೆ ಅವರದು.

ಮುಂಬೈನಲ್ಲಿ ಗಮಕ ಕಲೆಯನ್ನು ಬೆಳೆಸಿದವರು ಎಚ್‌.ಬಿ.ಎಲ್‌. ರಾವ್‌. ಗಮಕ ಕಲಾ ಪರಿಷತ್ತಿನ ಘಟಕ ಕೂಡಾ ಅಲ್ಲಿ ಇದೆ. ಆದರೆ, ಮರಾಠಿಗರಿಗೆ ಗಮಕ ಕಲೆ ತಲುಪಿಸಲಾಗಿಲ್ಲವೆಂಬ ವ್ಯಥೆ ಮುಂಬೈನ ಶ್ಯಾಮಲಾ ಪ್ರಕಾಶ್‌ ಅವರದು.

ಹೆಗ್ಗೋಡಿನ ನೀನಾಸಂ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಎಂಟು ದಿನಗಳವರೆಗೆ ಗಮಕ ಕಲೆ ಪರಿಚಯಿಸುತ್ತಾರೆ ಸಾಗರ ತಾಲ್ಲೂಕಿನ ಶೆಡ್ತಿಕೆರೆಯ ಸಮುದ್ಯುತಾ ವೆಂಕಟರಾಮು. ನೀನಾಸಂನ ‘ಶೂದ್ರ ತಪಸ್ವಿ ನಾಟಕ’ಕ್ಕೆ ಗಮಕವನ್ನು ಅಳವಡಿಸಿದ್ದರು. ಹರಿಹರದ ಸುಜಾತಾ ಗೋಪಿನಾಥ್ ಅವರು ಹರಿಹರ, ದಾವಣಗೆರೆ ಮೊದಲಾದ ಕಡೆ ಗಮಕ ಕುರಿತು ಶಿಬಿರಗಳನ್ನು ಏರ್ಪಡಿಸಿದ್ದಾರೆ. ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಗಮಕದ ಮೂಲಕ ಪಠ್ಯವನ್ನು ಹೇಳುತ್ತಿದ್ದಾರೆ.

ಆದರೆ, ಈ ಪ್ರಯತ್ನ ಸಾಲದು ಎನ್ನುವುದು ಅನೇಕರಿಗೆ ಗೊತ್ತಿದೆ. ‘ಮಹಾರಾಜರ ಕಾಲದಲ್ಲಿ ಗಮಕ ಉಚ್ಛ್ರಾಯದಲ್ಲಿತ್ತು. ಹಳಗನ್ನಡ ಕಾವ್ಯಗಳ ಸೊಗಸು, ಸೊಗಡನ್ನು, ಭಾಷಾ ಸಮೃದ್ಧಿಯನ್ನು ಜನರಿಗೆ ಮುಟ್ಟಿಸಬೇಕೆಂದರೆ ಗಮಕಿಗಳಿಂದ ಸಾಧ್ಯ’ ಎನ್ನುವುದು ಗಮಕಿ ಎ.ವಿ.ಪ್ರಸನ್ನ ಅವರ ಅಭಿಮತ.

‘ಆದರೆ, ಕಾಲೇಜಿನಲ್ಲಿ ಪಾಠ ಮಾಡುವ ಅಧ್ಯಾಪಕರಿಗೆ ಹಳಗನ್ನಡದ ಮೇಲೆ ಹಿಡಿತ ತಪ್ಪಿ ಹೋಗುತ್ತಿದೆ. ಇದಕ್ಕಾಗಿ ಹಳಗನ್ನಡದ ಪಠ್ಯವಿಡಲು ಹಿಂದೇಟು ಹಾಕುತ್ತಾರೆ. ಅಧ್ಯಾಪಕರಿಗೇ ಹೇಳಲು ಬರುವುದಿಲ್ಲ ಎನ್ನುವುದು ದುರಂತ. ವಿದ್ವತ್‌ ವಲಯ ಈಗ ಕಡಿಮೆಯಾಗುತ್ತಿದೆ. ಎಂಜಿನಿಯರಿಂಗ್‌, ವೈದ್ಯಕೀಯ ಕ್ಷೇತ್ರಗಳಿಗೆ ಯುವ ಜನಾಂಗ ಒಲವು ತೋರಿಸುತ್ತಿದೆ. ವಿ.ವಿಗಳು ಕೂಡಾ ಸಾಹಿತ್ಯದಿಂದ ವಿಮುಖವಾಗಿವೆ. ಗಮಕ ಕಲೆಯೇ ಇದನ್ನು ಸರಿಪಡಿಸುವ ದಾರಿ. ಚಂದನ ವಾಹಿನಿಯಲ್ಲಿ ಗಮಕ ಸೌರಭ ಎಂಬ ಕಾರ್ಯಕ್ರಮವನ್ನು 10 ವರ್ಷಗಳಿಂದ ನಡೆಸಿಕೊಡುತ್ತಿರುವೆ. ಆದರೆ, ಯುವಕರೆಲ್ಲ ಹಣ ಸಂಪಾದನೆಯ ಕಡೆಗೇ ಹೆಚ್ಚು ಒಲವು ಹೊಂದಿದ್ದಾರೆ. ಹಣವೊಂದರಿಂದಲೇ ಸುಖಜೀವನ ನಡೆಸಬಹುದು ಎಂದು ಬಲವಾಗಿ ನಂಬಿದ್ದಾರೆ. ಹಣವೊಂದೇ ಎಲ್ಲವೂ ಅಲ್ಲ ಎಂಬುದನ್ನು ಅರಿತು ಗಮಕ ಕಲೆಯತ್ತ ವಾಲಬೇಕು’ ಎನ್ನುವ ಸಲಹೆ ಅವರದು.

ಸಂಗೀತ ಮತ್ತು ನೃತ್ಯ ಅಕಾಡೆಮಿಯ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಒಂದು ಲಕ್ಷ ಮಕ್ಕಳಿಗೆ ಹಾಗೂ 2–3 ಸಾವಿರ ಶಿಕ್ಷಕರಿಗೆ ಕಲಿಸಿದ ಹೆಮ್ಮೆ ‘ಗಮಕದ ಕ್ಯಾಪ್ಟನ್’ ಎಂದೇ ಖ್ಯಾತರಾಗಿರುವ ಗಂಗಮ್ಮ ಕೇಶವಮೂರ್ತಿ ಅವರದು. ಈಗ ಅವರು ರಾಜ್ಯ ಗಮಕ ಕಲಾ ಪರಿಷತ್ತಿನ ಅಧ್ಯಕ್ಷೆ. ‘ಇಂದಿನ ಮಕ್ಕಳ ಮನಸ್ಥಿತಿ ಬದಲಾಗಿದೆ. ಇಂಗ್ಲಿಷ್‌ ಶಾಲೆಗಳು ಹೆಚ್ಚಿವೆ. ಗಮಕ ಮಾಡುತ್ತೇವೆಂದರೆ  ಒಳಗೆ ಪ್ರವೇಶ ಕೊಡುವುದಿಲ್ಲ. ಸರ್ಕಾರಿ ಶಾಲೆಗಳಿಗೆ ಹೋಗಿ ಗಮಕ ಹೇಳಿಕೊಡುತ್ತೇವೆಂದರೆ ಅಲ್ಲಿನ ಮಕ್ಕಳ ತಲೆಗೆ ಹತ್ತುವುದಿಲ್ಲ’ ಎನ್ನುವ ಬೇಸರ ಅವರಿಗೆ ಇದೆ.

ಗಮಕಿಗಳ ಜವಾಬ್ದಾರಿ ಏನು?: ‘ಗಮಕದಲ್ಲಿ ಪದ್ಯ–ಗದ್ಯಗಳು ಸಮನ್ವಯವಾಗಿರಬೇಕು. ಅದು ದಾಂಪತ್ಯದ ಹಾಗಿರಬೇಕು. ಪದ್ಯದ ಲಯವನ್ನು ಗದ್ಯದಲ್ಲಿ ಮುಂದುವರಿಸಬೇಕು. ಗದ್ಯದ ಆಶಯ ಪದ್ಯವಾಗಿ ಅರಳಬೇಕು. ಹೀಗೆ ಕೊಡುಕೊಳ್ಳುವಿಕೆಯಾದಾಗ ಸಮನ್ವಯ ಸಾಧಿಸಿದಂತಾಗುತ್ತದೆ. ಈ ತಂತ್ರವನ್ನು ಅಳವಡಿಸಿಕೊಂಡರೆ ಹೆಚ್ಚು ಪರಿಣಾಮವಾಗುವುದು. ದೀರ್ಘವಾಗಿ ಮಾತನಾಡುವುದು, ವಿಸ್ತಾರವಾದ ವ್ಯಾಖ್ಯಾನ ಸಲ್ಲದು. ಕವಿ ಏನನ್ನು ಹೇಳಲು ಇಷ್ಟಪಡುತ್ತಾನೆ, ಕವಿತೆಯ ಆಶಯವೇನು ಎಂಬುದನ್ನು ಜನರ ಮುಂದಿಡುವ ಪ್ರಯತ್ನ ಮಾಡಬೇಕು. ಸ್ವನಿಯಂತ್ರಣದಲ್ಲಿದ್ದರೆ ಗಮಕಿಗಳು ಯಶಸ್ಸು ಸಾಧಿಸಲು ಸಾಧ್ಯ’ ಎನ್ನುವ ಸಲಹೆ ವ್ಯಾಖ್ಯಾನಕಾರ ಕಬ್ಬಿನಾಲೆ ವಸನ್ತ ಭಾರದ್ವಾಜ ಅವರದು.

ಆಧುನಿಕತೆಯ ಪ್ರಭಾವದಿಂದಾಗಿ ಗಮಕ ಕೇಳುವವರ, ಕಲಿಯುವವರ ಸಂಖ್ಯೆ ಕಡಿಮೆಯಾಗಿರಬಹುದು. ಈ ಪ್ರವೃತ್ತಿ ಬದಲಿಸಬೇಕು. ಮನೆಗಳಲ್ಲಿ ಸಣ್ಣಪುಟ್ಟ ಕಾರ್ಯಕ್ರಮ ನಡೆದಾಗಲೂ ಗಮಕ ಆಯೋಜಿಸಬೇಕು. ಆದರೂ ದೇವರ ಮುಂದೆ ಸಣ್ಣ ದೀಪದ ಹಾಗೆ ಉರಿಯುತ್ತಿರುವ ಗಮಕ ಕಲೆ ದೇದೀಪ್ಯಮಾನವಾಗಿ ಬೆಳಗಬೇಕಾದರೆ ಏನು ಮಾಡಬೇಕು ಎನ್ನುವುದಕ್ಕೆ ಟಿ.ವಿ.

ವೆಂಕಟಾಚಲಶಾಸ್ತ್ರೀ ಕೊಡುವ ಸಲಹೆ ಹೀಗಿದೆ– ‘ಗಮಕದ ಸಾಧ್ಯತೆಗಳನ್ನು ಹೆಚ್ಚು ಹೆಚ್ಚು ಕಂಡುಕೊಳ್ಳಬೇಕು. ಪ್ರಚಲಿತವಿರುವ ಕಾವ್ಯಗಳನ್ನು ಆಯ್ದುಕೊಳ್ಳದೆ ಸಾಂಗತ್ಯ, ದ್ವಿಪದಿ, ಸೀಸಪದ್ಯಗಳು ಕೇಳುವವರ ಕಿವಿಗೆ ಬೀಳಬೇಕಿದೆ. ಇದಕ್ಕಾಗಿ ಗಮಕಿಗಳಿಗೆ ತಕ್ಕ ಶಿಕ್ಷಣ ಬೇಕಿದೆ. ಹಳಗನ್ನಡ, ನಡುಗನ್ನಡ ಭಾಷೆಗಳ ಒಡನಾಟ ಇಟ್ಟುಕೊಳ್ಳಬೇಕು. ಪ್ರಭಾವ ಬೀರಬೇಕಾದರೆ ತೋರಿಕೆಯಾಗಿ ಓದದೆ, ಭಾಷೆಯ ವ್ಯಾಕರಣವನ್ನು ಖಚಿತವಾಗಿ ಪಡೆದುಕೊಂಡರೆ ಹೆಚ್ಚು ಸಮರ್ಥವಾಗಿ ಸಮುದಾ

ಯವನ್ನು ಮುಟ್ಟಬಲ್ಲರು. ವಿವರಣೆ, ವ್ಯಾಖ್ಯಾನಗಳು ವಿಜೃಂಭಿಸಿದರೆ ಕವಿಯ ಪದ್ಯದ ಅರ್ಥ, ಆಶಯಗಳು ಮಬ್ಬಾಗುತ್ತವೆ, ಪೆಟ್ಟು ತಿನ್ನುತ್ತವೆ. ಇದರೊಂದಿಗೆ ಇಂಗ್ಲಿಷ್‌ ಮಾಧ್ಯಮದ ಮಕ್ಕಳಿಗೆ ನಮ್ಮತನ, ನಮ್ಮ ಪರಂಪರೆಯ ಬೌದ್ಧಿಕ ಸಂಪತ್ತು ಉಳಿಸಿಕೊಡಬೇಕಿದೆ. ಇದಕ್ಕೆ ಗಮಕ ದೊಡ್ಡ ಸಾಧನ. ಗಮಕಿಗಳು ಸೇನೆಯ ಹಾಗೆ ತಯಾರಾಗಬೇಕು. ದೊಡ್ಡ ಆಂದೋಲನವಾಗಿ ಬೆಳೆಯಬೇಕು...’

**

ಗಮಕಕ್ಕಾಗಿಯೇ ಪರಿಷತ್ತು

1982ರ ಅಕ್ಟೋಬರ್‌ 2ರಂದು ಬೆಂಗಳೂರಿನಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಆರಂಭಗೊಂಡಿತು. ಇದರ ಸ್ಥಾಪಕರು ಗಮಕಿ ಎಂ.ರಾಘವೇಂದ್ರ. 20 ವರ್ಷಗಳವರೆಗೆ ಅಧ್ಯಕ್ಷರಾಗಿದ್ದವರು ಜಿ.ನಾರಾಯಣ.

1935ರಿಂದ 1969ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗಮಕದ ತರಗತಿಗಳು ನಡೆಯುತ್ತಿದ್ದವು. 1982ರ ವರೆಗೆ ಗಮಕ ಕುರಿತು ಅನೇಕ ಪರೀಕ್ಷೆಗಳು ನಡೆಯುತ್ತಿದ್ದವು. ಆಮೇಲೆ ಗಮಕಕ್ಕೆ ಪ್ರತ್ಯೇಕ ಪರಿಷತ್ತಿನ ಅವಶ್ಯಕತೆ ಇದೆ ಎಂದು  ಮನಗಂಡ ಪರಿಣಾಮ ಇದು ಅಸ್ತಿತ್ವಕ್ಕೆ ಬಂತು. ಈ ಪರಿಷತ್ತಿನಿಂದ ‘ಗಮಕದುಂದುಭಿ’ ತ್ರೈಮಾಸಿಕ ಪತ್ರಿಕೆ 8 ವರ್ಷಗಳಿಂದ ಪ್ರಕಟವಾಗುತ್ತಿದೆ. ಜತೆಗೆ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಘಟಕಗಳಿವೆ.

‘ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಗಮಕವನ್ನು ಕಡ್ಡಾಯವಾಗಿ ಪಠ್ಯ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಇದುವರೆಗೆ ಜಾರಿಯಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಆರು ವರ್ಷ ಕಾಲ ಪರಿಷತ್ತಿನ ಅಧ್ಯಕ್ಷರಾಗಿದ್ದ ಎಂ.ಆರ್‌.ಸತ್ಯನಾರಾಯಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT