ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಧಾನಿ’ ಜೆರುಸಲೇಂ ಹೊತ್ತಿಸಿದ ಕಿಡಿ

Last Updated 8 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಜೆರುಸಲೇಂ ನಗರಕ್ಕೆ ‘ಇಸ್ರೇಲ್‌ನ ರಾಜಧಾನಿ’ ಎಂದು ಮಾನ್ಯತೆ ನೀಡಿ ಅಮೆರಿಕ ರಾಯಭಾರ ಕಚೇರಿಯನ್ನು ಅಲ್ಲಿಗೆ ಸ್ಥಳಾಂತರಿಸಲು ಆದೇಶಿಸಿರುವುದು ಭಾರಿ ಕೋಲಾಹಲಕ್ಕೆ ಎಡೆ ಮಾಡಿಕೊಟ್ಟಿದೆ. ಇಸ್ರೇಲ್‌, ಪ್ಯಾಲೆಸ್ಟೀನ್‌ ಮತ್ತು ಅರಬ್‌ ದೇಶಗಳನ್ನು ಒಳಗೊಂಡ ಪಶ್ಚಿಮ ಏಷ್ಯಾದಲ್ಲಿ ಅಸ್ಥಿರತೆ ಮತ್ತೆ ಹೆಚ್ಚಬಹುದು, ಹಿಂಸೆ ಭುಗಿಲೇಳಬಹುದು ಎಂಬ ಆತಂಕವೂ ಇದೆ.

ಟ್ರಂಪ್‌ ಘೋಷಣೆಯನ್ನು ಬೇರೆ ಯಾವ ದೇಶವೂ ಬೆಂಬಲಿಸಿಲ್ಲ. ಅಮೆರಿಕದಲ್ಲಿಯೇ ಸಾಕಷ್ಟು ವಿರೋಧ ಇದೆ. ಷಿಕಾಗೊದಲ್ಲಿ ಸಾವಿರಾರು ಜನ ಬೀದಿಗೆ ಇಳಿದು ಪ್ರತಿಭಟಿಸಿದ್ದಾರೆ. ಅತ್ತ, ಪ್ಯಾಲೆಸ್ಟೀನ್‌ ನಿಯಂತ್ರಣದ ಪ್ರದೇಶಗಳಲ್ಲಿ ಪ್ಯಾಲೆಸ್ಟೀನ್‌ ಮುಸ್ಲಿಮರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಐರೋಪ್ಯ ರಾಷ್ಟ್ರಗಳು ಮತ್ತು ಬ್ರಿಟನ್‌ ಸಹ ಟ್ರಂಪ್‌ ನಡೆಯನ್ನು ತೀವ್ರವಾಗಿ ವಿರೋಧಿಸಿವೆ. ಪೋಪ್‌ ಅವರೂ ಅಸಮ್ಮತಿ ಸೂಚಿಸಿದ್ದಾರೆ. ವಿಶ್ವಸಂಸ್ಥೆಯೂ ಇದೇ ನಿಲುವು ತಳೆದಿದೆ.

* ಒಂದು ನಗರಕ್ಕೆ ರಾಜಧಾನಿಯ ಮಾನ್ಯತೆ ನೀಡುವುದರಿಂದ ಏಕಿಷ್ಟು ಸಮಸ್ಯೆ, ಟ್ರಂಪ್‌ ನಿರ್ಧಾರಕ್ಕೆ ಕಾರಣವೇನು?

ಜೆರುಸಲೇಂ ಮೇಲೆ ಇಸ್ರೇಲ್‌, ಪ್ಯಾಲೆಸ್ಟೀನ್‌... ಎರಡೂ ಹಕ್ಕು ಸಾಧಿಸುತ್ತಿವೆ. ವಾಸ್ತವದಲ್ಲಿ ಅದು ಇಸ್ರೇಲ್‌ ನಿಯಂತ್ರಣದಲ್ಲಿದ್ದರೂ ಈ ಕಾರಣಕ್ಕಾಗಿ ವಿವಾದಾತ್ಮಕ ನಗರ. ಜೆರುಸಲೇಂ ತನ್ನ ರಾಜಧಾನಿ ಎಂದು ಇಸ್ರೇಲ್‌ ಸಂಸತ್ತು ಬಹಳ ಹಿಂದೆಯೇ ನಿರ್ಣಯ ಅಂಗೀಕರಿಸಿದೆ. ಆದರೂ ಟೆಲ್‌ಅವೀವ್‌ನಿಂದಲೇ ಕಾರ್ಯನಿರ್ವಹಿಸುತ್ತಿದೆ. ಈಗಲೂ ಜೆರುಸಲೇಂನಲ್ಲಿ ಯಾವುದೇ ದೇಶದ ರಾಜತಾಂತ್ರಿಕ ಕಚೇರಿಗಳಿಲ್ಲ. 1995ರಲ್ಲಿ ಅಮೆರಿಕ ಕಾಂಗ್ರೆಸ್‌ ಕೂಡ ಜೆರುಸಲೇಂಗೆ ಇಸ್ರೇಲ್‌ನ ರಾಜಧಾನಿ ಎಂಬ ಮಾನ್ಯತೆ ನೀಡಿ ರಾಯಭಾರ ಕಚೇರಿ ಸ್ಥಳಾಂತರಿಸುವ ನಿರ್ಣಯ ತೆಗೆದುಕೊಂಡಿತ್ತು. ಆದರೆ ಆಗ ಇದ್ದ ಮತ್ತು ನಂತರ ಬಂದ ಅಧ್ಯಕ್ಷರು ಆರು ತಿಂಗಳಿಗೊಮ್ಮೆ ತಮ್ಮ ವಿಶೇಷಾಧಿಕಾರ ಚಲಾಯಿಸಿ ಈ ನಿರ್ಣಯದ ಜಾರಿ ಮುಂದೂಡುತ್ತ ಬಂದಿದ್ದರು. ಇದು ಟ್ರಂಪ್‌ಗೆ ಚುನಾವಣಾ ವಿಷಯವಾಗಿತ್ತು. ಆಗ ಮಾಡಿದ ವಾಗ್ದಾನವನ್ನು ಈಗ ಜಾರಿಗೊಳಿಸಿದ್ದಾರೆ. ಈ ಮೂಲಕ ರಾಜಕೀಯ ಲಾಭ ಪಡೆಯುವುದು ಅವರ ಉದ್ದೇಶ.

* ಜೆರುಸಲೇಂಗೆ ಏಕಿಷ್ಟು ಮಹತ್ವ?

ಜೆರುಸಲೇಂ ವಿಶ್ವದ ಅತ್ಯಂತ ಹಳೆಯ ಕೆಲವೇ ನಗರಗಳಲ್ಲಿ ಒಂದು. ಮೆಡಿಟರೇನಿಯನ್‌ ಸಮುದ್ರ ಮತ್ತು ಮೃತ ಸಮುದ್ರದ ಮಧ್ಯದಲ್ಲಿನ ಈ ನಗರ ಕ್ರಿಸ್ತಪೂರ್ವ 4500ಕ್ಕೂ ಮೊದಲೇ ಅಸ್ತಿತ್ವದಲ್ಲಿತ್ತು ಎನ್ನುತ್ತವೆ ಪುರಾತತ್ವ ಸಾಕ್ಷ್ಯಗಳು. ಇದು ಯೆಹೂದಿಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು... ಹೀಗೆ ಮೂರು ಪ್ರಮುಖ ಧರ್ಮದವರಿಗೂ ಅತ್ಯಂತ ಪವಿತ್ರ ಸ್ಥಳ. ವಿಶ್ವದಲ್ಲಿ ಇದಕ್ಕೆ ಪರ್ಯಾಯವಾದ ಇನ್ನೊಂದು ಉದಾಹರಣೆ ಇಲ್ಲ. ಪ್ರವಾದಿ ಮುಹಮ್ಮದರು ಸ್ವರ್ಗಾರೋಹಣ ಮಾಡಿದ್ದು ಇಲ್ಲಿಂದಲೇ ಎಂಬುದು ಮುಸ್ಲಿಮರ ನಂಬಿಕೆ.

ಮೆಕ್ಕಾ, ಮದೀನಾ ನಂತರ ಇದು ಅವರ ಪಾಲಿಗೆ ಮೂರನೇ ಅತ್ಯಂತ ಪವಿತ್ರ ಸ್ಥಳ. ಏಸುವನ್ನು ಶಿಲುಬೆಗೆ ಏರಿಸಿದ ಮತ್ತು ಏಸುವಿನ ಮಹಾಪರಿನಿರ್ವಾಣ ಸ್ಥಳ ಎನ್ನುವ ಕಾರಣಕ್ಕಾಗಿ ಕ್ರೈಸ್ತರಿಗೆ ಇದು ಪುಣ್ಯ ಭೂಮಿ. ಜಗತ್ತಿನ ಎಲ್ಲ ಜೀವಿಗಳ ಸೃಷ್ಟಿ ಆರಂಭವಾದದ್ದೇ ಇಲ್ಲಿಂದ ಎಂಬ ನಂಬಿಕೆಯಿಂದಾಗಿ ಯೆಹೂದಿಗಳಿಗೂ ಈ ನಗರಕ್ಕೂ ಧಾರ್ಮಿಕವಾಗಿ ಬಿಡಲಾರದ ನಂಟು. ಅವರ ಪ್ರಕಾರ ಇಲ್ಲಿನ ಪಶ್ಚಿಮ ಗೋಡೆ ಈಗಲೂ ದೇವತೆಗಳಿರುವ ಸ್ಥಳ. ಅದರ ದರ್ಶನ, ಆರಾಧನೆ ಅವರ ಪಾಲಿಗೆ ಧಾರ್ಮಿಕ ಕರ್ತವ್ಯ. ಧರ್ಮ ಗ್ರಂಥಗಳಲ್ಲಿ ‘ಶಾಂತಿಯ ನಗರ’ ಎಂದು ಉಲ್ಲೇಖಗೊಂಡಿದ್ದರೂ ಇದರ ಮೇಲೆ ಪರಮಾಧಿಕಾರ ಸಾಧಿಸಲು ಸಾವಿರಾರು ವರ್ಷಗಳಿಂದ ನಡೆದ ಯುದ್ಧಗಳಿಗೆ ಲೆಕ್ಕವಿಲ್ಲ.

* ಪೂರ್ವ ಮತ್ತು ಪಶ್ಚಿಮ ಜೆರುಸಲೇಂ. ಏನು?

ಸಾಲೊಮನ್‌, ಡೆವಿಡ್‌ರಿಂದ ಹಿಡಿದು ಕಾಲಾಂತರದಲ್ಲಿ ಟರ್ಕಿಯ ಒಟ್ಟೊಮನ್‌ ಅರಸೊತ್ತಿಗೆಯ ವಶಕ್ಕೆ ಬಂದ ಈ ನಗರವನ್ನು ಸ್ಥೂಲವಾಗಿ ಪೂರ್ವ ಮತ್ತು ಪಶ್ಚಿಮ ಜೆರುಸಲೇಂ ಎಂದು ಎರಡು ಭಾಗಗಳಾಗಿ ಗುರುತಿಸಲಾಗುತ್ತಿದೆ. ಅಲ್‌ ಅಕ್ಸಾ ಮಸೀದಿ, ಪಶ್ಚಿಮ ಗೋಡೆ, ಡೋಮ್‌ ಆಫ್‌ ದಿ ರಾಕ್‌, ಡೋಮ್‌ ಆಫ್‌ ದಿ ಚೈನ್‌ ಮುಂತಾದ ಪವಿತ್ರ ಸ್ಥಳಗಳು ಹಳೆಯ ಜೆರುಸಲೇಂ ಎಂದು ಕರೆಯುವ ಪೂರ್ವ ಭಾಗದಲ್ಲಿವೆ. ಪಶ್ಚಿಮ ಜೆರುಸಲೇಂ ಸ್ವಲ್ಪ ಆಧುನಿಕ ನಗರ. 1947ರಲ್ಲಿ ವಿಶ್ವಸಂಸ್ಥೆಯು ಇದನ್ನು ಅಂತರರಾಷ್ಟ್ರೀಯ ನಗರ ಎಂದು ಘೋಷಿಸಿತ್ತು. ನಗರದ ಪಶ್ಚಿಮ ಭಾಗದಲ್ಲಿ ಯೆಹೂದಿಗಳು, ಪೂರ್ವ ಭಾಗದಲ್ಲಿ ಪ್ಯಾಲೆಸ್ಟೀನಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಕಾರಣಕ್ಕಾಗಿ ಎರಡು ಭಾಗವಾಗಿ ಗುರುತು ಮಾಡಿತ್ತು.

ಪಶ್ಚಿಮ ಭಾಗ ಇಸ್ರೇಲ್‌ ನಿಯಂತ್ರಣದಲ್ಲಿ, ಪೂರ್ವ ಭಾಗ ಜೋರ್ಡ್‌ನ್‌ ದೊರೆಯ ನಿಯಂತ್ರಣದಲ್ಲಿ ಇದ್ದವು. ಆದರೆ 1967ರಲ್ಲಿ ನಡೆದ ಆರು ದಿನಗಳ ಯುದ್ಧದಲ್ಲಿ ಅರಬ್‌ ದೇಶಗಳ ಮೇಲೆ ಇಸ್ರೇಲ್‌ ಜಯಗಳಿಸಿ ಪೂರ್ವ ಭಾಗವನ್ನೂ ತನ್ನ ಸುಪರ್ದಿಗೆ ತೆಗೆದುಕೊಂಡಿತು. ಅದರ ಪ್ರಕಾರ ಪೂರ್ವ– ಪಶ್ಚಿಮ ಜೆರುಸಲೇಂ ಎಂಬುದು ಇಲ್ಲವೇ ಇಲ್ಲ. ಅದು ಇಡಿಯಾಗಿ ಒಂದು ನಗರ. ಆದರೆ ಇಸ್ರೇಲ್‌ನ ಈ ವಾದ ಮತ್ತು ಆಕ್ರಮಣವನ್ನು ಅಮೆರಿಕ ಬಿಟ್ಟರೆ ಬೇರೆ ಯಾವ ದೇಶವೂ ಒಪ್ಪಿಲ್ಲ. ಪೂರ್ವ ಜೆರುಸಲೇಂ ಭಾಗವನ್ನು ಇಸ್ರೇಲ್‌ ಬಲವಂತವಾಗಿ ಆಕ್ರಮಿಸಿದೆ ಎಂದು ವಿಶ್ವಸಂಸ್ಥೆ ಹೇಳಿದ್ದರೂ ಇದಕ್ಕೆ ಇಸ್ರೇಲ್‌ ಸೊಪ್ಪು ಹಾಕಿಲ್ಲ. ಇಡೀ ನಗರವನ್ನು ತನ್ನ ಬಿಗಿಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಪೂರ್ವ ಜೆರುಸಲೇಂನ ಧಾರ್ಮಿಕ ಪ್ರದೇಶದ ಉಸ್ತುವಾರಿಯನ್ನು ಮುಸ್ಲಿಂ ವಕ್ಫ್‌ ಆಡಳಿತಕ್ಕೆ ವಹಿಸಿಕೊಟ್ಟಿದ್ದರೂ ಅಲ್ಲಿ ತನ್ನ ಯೆಹೂದಿ ಪ್ರಜೆಗಳಿಗೆ ಹೊಸ ಹೊಸ ಬಡಾವಣೆ ನಿರ್ಮಿಸುತ್ತ ಪ್ಯಾಲೆಸ್ಟೀನಿ ಮುಸ್ಲಿಮರ ಪ್ರಾಬಲ್ಯ ಕಡಿಮೆ ಮಾಡುತ್ತ ನಡೆದಿದೆ.

* ಟ್ರಂಪ್‌ ಘೋಷಣೆಗೆ ಪ್ಯಾಲೆಸ್ಟೈನ್‌ ವಿರೋಧ ಏಕೆ?

ಜೆರುಸಲೇಂಗೂ ಯೆಹೂದಿಗಳಿಗೂ ಯಾವುದೇ ಧಾರ್ಮಿಕ, ಭಾವನಾತ್ಮಕ ಸಂಬಂಧ ಇಲ್ಲ ಎಂಬುದು ಪ್ಯಾಲೆಸ್ಟೀನ್‌ ವಿಮೋಚನಾ ರಂಗದ (ಪಿಎಲ್‌ಒ) ನೇತೃತ್ವದ ಪ್ಯಾಲೆಸ್ಟೀನ್‌ ಸರ್ಕಾರದ ವಾದ. ಅಲ್ಲಿ ಇಸ್ರೇಲಿಗಳ ಮೇಲುಗೈಯನ್ನು ಅದು ವಿರೋಧಿಸುತ್ತಲೇ ಬಂದಿದೆ. ಪೂರ್ವ ಜೆರುಸಲೇಂ ತನ್ನ ರಾಜಧಾನಿ ಎಂದು ಪಟ್ಟು ಹಿಡಿದಿದ್ದರೂ ವಾಸ್ತವವಾಗಿ ಅದು ರಮಲ್ಲಾದಿಂದ ಕಾರ್ಯ ನಿರ್ವಹಿಸುತ್ತಿದೆ.

‘ಜೆರುಸಲೇಂನ ಆಡಳಿತಾತ್ಮಕ ಸ್ವರೂಪ ಬದಲಾಯಿಸುವುದು, ಇಸ್ರೇಲ್‌ನ ರಾಜಧಾನಿ ಎಂದು ಘೋಷಿಸುವುದು ಅಂತರರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧ; ಶಾಂತಿ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ’ ಎನ್ನುತ್ತಾರೆ ಪ್ಯಾಲೆಸ್ಟೀನ್‌ ಅಧ್ಯಕ್ಷ ಮಹಮ್ಮೂದ್‌ ಅಬ್ಬಾಸ್‌. ಇಸ್ರೇಲ್‌ನ ಅಸ್ತಿತ್ವವನ್ನು ಮಾನ್ಯ ಮಾಡಿರುವ ಪಿಎಲ್‌ಒ ಮತ್ತು ಕೆಲ ಅರಬ್‌ ದೇಶಗಳು, ಇದೇ ಕಾರಣ ಮುಂದಿಟ್ಟುಕೊಂಡು ಮಾನ್ಯತೆ ರದ್ದು ಮಾಡಲು ಹಿಂಜರಿಯುವುದಿಲ್ಲ ಎಂಬ ಬೆದರಿಕೆ ಹಾಕಿವೆ. ಹಾಗೇನಾದರೂ ಆದರೆ ಪಶ್ಚಿಮ ಏಷ್ಯಾ ಮತ್ತೆ ಅಶಾಂತಿಯ ಗೂಡಾಗುತ್ತದೆ ಎಂಬುದು ವಿಶ್ವದ ಆತಂಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT