ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯಕ್ಕೆ ಬೆಳಕು ನೀಡೀತೆ ಚುನಾವಣೆ ಕಾವು?

Last Updated 9 ಡಿಸೆಂಬರ್ 2017, 6:28 IST
ಅಕ್ಷರ ಗಾತ್ರ

ಭದ್ರಾವತಿ: ಬೆಳಗಿನ ಚಳಿಗೆ ಕಾರ್ಖಾನೆಯ ಕೊಳವೆಯಿಂದ ಬರುವ ಬಿಸಿಯ ಹವೆ ಒಂದಿಷ್ಟು ಉಲ್ಲಾಸ ತರುತ್ತಿದ್ದ ಕಾಲ ಈಗಿಲ್ಲ. ಬದಲಾಗಿ ಚುನಾವಣೆ ಕಾವಿಗೆ ಜನರು ಮೈಯೊಡ್ಡುವ ಪರಿಸ್ಥಿತಿ ಸದ್ಯಕ್ಕೆ ಇಲ್ಲಿದೆ.

ಹೌದು! ಎಂಪಿಎಂ ಕಾರ್ಖಾನೆ ಉತ್ಪಾದನೆ ಸ್ಥಗಿತವಾಗಿ ಎರಡು ವರ್ಷ ಪೂರೈಸಿದೆ. ಇದರ ನಡುವೆ ಕೆಲಸ ವಂಚಿತ ಕಾರ್ಮಿಕರು ತಮ್ಮ ಹಕ್ಕುಗಳ ರಕ್ಷಣೆಗೆ ಬೀದಿ ಹೋರಾಟದ ಜತೆಗೆ ಕಾನೂನು ಸಮರ ನಡೆಸಿದ ಪರಿಣಾಮ ಸರ್ಕಾರ ಪರಿಹಾರ ಕ್ರಮದ ಸೂತ್ರ ಪ್ರಕಟಿಸಿದೆ.

ಕಾರ್ಖಾನೆಯ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಯೋಜನೆ ಜಾರಿ ಮಾಡುವ ಮೂಲಕ ನೆರವಿನ ಸೂತ್ರವನ್ನು ಘೋಷಿಸಿರುವ ಸರ್ಕಾರದ ನಿರ್ಧಾರಕ್ಕೆ ಕಾರ್ಮಿಕ ಸಂಘ ಒಪ್ಪಿದೆ. ನೆರವಿನ ನಿರೀಕ್ಷೆಯಲ್ಲಿ ಕಾರ್ಮಿಕರು ದಿನ ದೂಡುತ್ತಿದ್ದಾರೆ. ಇದರ ನಡುವೆಯೇ ಡಿ.10ರಂದು ಕಾರ್ಖಾನೆಯ ಕಾರ್ಮಿಕ ಸಂಘದ ಚುನಾವಣೆ ನಡೆಯಲಿದೆ. ಪರಿಹಾರ, ಕಾರ್ಖಾನೆ ಆರಂಭ, ಪುನಶ್ಚೇತನ ವಿಷಯಗಳು ಗದ್ದಲ ಸೃಷ್ಟಿಸಿವೆ.

ಒಟ್ಟು 769 ಮಂದಿ ಮತದಾರರು ಚುನಾವಣೆ ಹಕ್ಕನ್ನು ಪಡೆದಿದ್ದಾರೆ. ಐದು ಪದಾಧಿಕಾರಿಗಳ ಸ್ಥಾನಕ್ಕೆ 18 ಮಂದಿ ಹಾಗೂ ನಾಲ್ಕು ವಿಭಾಗಗಳ ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ 15 ಮಂದಿ ಕಣದಲ್ಲಿದ್ದಾರೆ. ಪ್ರಚಾರ ಭರಾಟೆ ಹೆಚ್ಚಾಗಿದೆ.

ಸೌಲಭ್ಯಕ್ಕೆ ಆದ್ಯತೆ: ಸಂಘದ ಹಾಲಿ ಅಧ್ಯಕ್ಷ ಜಿ.ಎಸ್. ಶಿವಮೂರ್ತಿ ಅವರು ತಮ್ಮ ಜತೆಗಿನ ಪದಾಧಿಕಾರಿಗಳ ಪಡೆಯೊಂದಿಗೆ ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಕಾರ್ಮಿಕರ ಬದುಕಿಗೆ ಆಸರೆ ಒದಗಿಸುವ ನಿಟ್ಟಿನಲ್ಲಿ ಇಲ್ಲಿಯ ತನಕ ಮಾಡಿರುವ ಹೋರಾಟವನ್ನು ಪೂರ್ಣ ಮಾಡಲು ತಮ್ಮ ತಂಡವನ್ನೇ ಆಯ್ಕೆ ಮಾಡಿ ಎಂಬ ಘೋಷಣೆಯೊಂದಿಗೆ ಗೆಲುವಿಗೆ ಪ್ರಯತ್ನ ನಡೆಸಿದ್ದಾರೆ.

ಇವರ ವಿರುದ್ಧ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ, ಕಾರ್ಖಾನೆ ಸ್ಥಗಿತದ ನಂತರ ‘ಎಂಪಿಎಂ ಉಳಿಸಿ ಹೋರಾಟ ವೇದಿಕೆ’ ಮೂಲಕ ಹಲವು ಪ್ರಯತ್ನಗಳನ್ನು ನಡೆಸುತ್ತಿದ್ದ ಎಸ್. ಚಂದ್ರಶೇಖರ್ ತಂಡ ಸ್ಪರ್ಧೆಗೆ ಇಳಿದಿದೆ. ಉದ್ಯಮ ಆರಂಭ ಹಾಗೂ ಕಾನೂನುಬದ್ಧ ಪರಿಹಾರದ ಹಕ್ಕನ್ನು ಪಡೆಯಲು ತಮ್ಮನ್ನು ಬೆಂಬಲಿಸಿ ಎಂದು ಈ ಬಣ ಪ್ರಚಾರ ನಡೆಸಿದೆ.

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ನಡೆಯುತ್ತಿರುವ ಕಾರ್ಮಿಕ ಸಂಘದ ಚುನಾವಣೆಗೂ ರಾಜಕೀಯದ ಲೇಪನ ಹತ್ತಿದೆ. ಶಾಸಕ ಎಂ.ಜೆ. ಅಪ್ಪಾಜಿ ಹಾಗೂ ಮಾಜಿ ಶಾಸಕ ಬಿ.ಕೆ. ಸಂಗಮೇಶ್ವರ ತಮ್ಮ ಬೆಂಬಲಿಗರ ಗೆಲುವಿಗೆ ಕಸರತ್ತು ನಡೆಸಿದ್ದಾರೆ.

ಒಲ್ಲದ ಮನಸ್ಸು: ಕಾರ್ಖಾನೆ ಆರಂಭಗೊಳ್ಳುವ ಸೂಚನೆಯಿಲ್ಲ; ಪರಿಹಾರ ಪಡೆಯುವ ಉದ್ದೇಶಕ್ಕಾಗಿ ಚುನಾವಣೆ ನಡೆಸುವ ಅಗತ್ಯವಿರಲಿಲ್ಲ ಎಂದು ಒಲ್ಲದ ಮನಸ್ಸಿನಿಂದಲೇ ಚುನಾವಣೆಯಲ್ಲಿ ಪಾಲ್ಗೊಳ್ಳುವ ಇಂಗಿತವನ್ನು ಹಲವು ಕಾರ್ಮಿಕರು ವ್ಯಕ್ತಪಡಿಸಿದ್ದಾರೆ.

‘ಭವಿಷ್ಯದ ಕಲ್ಪನೆಯಿಲ್ಲದ ನಾಯಕರ ಹೋರಾಟಕ್ಕೆ ತಲೆದೂಗಿದ ಇಲ್ಲಿನ ಕೆಲವು ಮುಖಂಡರು ಕೇವಲ ಸ್ವಯಂ ನಿವೃತ್ತಿಯ ಅಜೆಂಡಾ ಹಿಡಿದು ಕೈಗಳಿಗೆ ಕೆಲಸ ಇಲ್ಲದಂತೆ ಮಾಡಿದ್ದಾರೆ’ ಎಂದು ದೂರುವ ಗುತ್ತಿಗೆ ಕಾರ್ಮಿಕರು, ‘ಉತ್ಪಾದನೆ ಆರಂಭಿಸಿದರೆ ಬದುಕು ನಡೆಯುತ್ತದೆ’ ಎಂದು ಅಭಿಪ್ರಾಯಪಡುತ್ತಾರೆ.

‘ಕಾರ್ಖಾನೆ ನಡೆಸುವಂತೆ ಆರಂಭವಾದ ಹೋರಾಟ ದಿಕ್ಕು ತಪ್ಪಿದ ಪರಿಣಾಮ ನಾವೇ ಸ್ವಯಂ ನಿವೃತ್ತಿ ಕೇಳುವ ಹಂತಕ್ಕೆ ಬರುವಂತಾಯಿತು. ಇದಕ್ಕೆಲ್ಲಾ ಕಾರಣವಾಗಿದ್ದು ನಮ್ಮ ನಾಯಕರು ಹಾದಿ ತಪ್ಪಿಸಿದ್ದು’ ಎಂದು ಗೋವಿಂದಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

‘ಈಗ ನಮ್ಮ ಮುಂದೆ ಇರುವುದು ಸ್ವಯಂ ನಿವೃತ್ತಿ ಯೋಜನೆಯಿಂದ ಹಣ ಪಡೆಯುವುದು ಮಾತ್ರ. ಭವಿಷ್ಯದಲ್ಲಿ ಕಾರ್ಖಾನೆ ಗತಿ ಏನೂ ಎಂಬುದು ಯಾರಿಗೂ ತಿಳಿದಿಲ್ಲ. ಇದಕ್ಕಾಗಿ ಚುನಾವಣೆ ಬೇಕಿತ್ತಾ’ ಎಂದು ಪ್ರಶ್ನಿಸುತ್ತಾರೆ ಕಾರ್ಖಾನೆ ಮುಂಭಾಗದ ಕಟ್ಟೆಯಲ್ಲಿ ಕುಳಿತ ಉದ್ಯೋಗಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT