ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಗನಾಡಿನ ಮಾಸದ ಸ್ವಪ್ನಗಳು...

Last Updated 9 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನೀವು ಬಿಮಲ್‌ ರಾಯ್‌ ನಿರ್ದೇಶನದ ‘ದೋ ಭಿಗಾ ಜಮೀನ್‌’ (1953) ಸಿನಿಮಾ ನೋಡಿದ್ದಲ್ಲಿ ಮನುಷ್ಯರನ್ನು ಗಾಡಿಯಲ್ಲಿ ಕುಳ್ಳಿರಿಸಿಕೊಂಡು ಕುದುರೆಯಂತೆ ಓಡುವ ನರಪೇತಲರನ್ನು ನೋಡಿಯೇ ಇರುತ್ತೀರಿ.

ನಾಲ್ಕು ದಶಕಗಳ ನಂತರವೂ ಆ ಪರಿಸ್ಥಿತಿ ಬದಲಾಗಿಯೇನೂ ಇಲ್ಲ. ಎಡಪಕ್ಷಗಳ ನೇತಾರರಾದ ಜ್ಯೋತಿ ಬಸು, ಬುದ್ಧದೇವ ಭಟ್ಟಾಚಾರ್ಯ, ಇದೀಗ ತೃಣಮೂಲ ಕಾಂಗ್ರೆಸ್ಸಿನ ಮಮತಾ ದೀದಿ ಅಧಿಕಾರಕ್ಕೆ ಬಂದಿದ್ದರೂ ಹಳೆಯ ನಗರ ಎಂದೇ ಪರಿಗಣಿಸಲಾಗುವ ಉತ್ತರ ಕೋಲ್ಕತ್ತ ಇನ್ನೂ ಹೇಗಿದೆಯೋ ಹಾಗೆಯೇ ಇದೆ.

ಮೂರು ದಿನಗಳ ಪ್ರವಾಸಕ್ಕಾಗಿ ಈಚೆಗೆ ಕೋಲ್ಕತ್ತಕ್ಕೆ ಭೇಟಿ ನೀಡಿದಾಗ ದಕ್ಷಿಣ ಕೋಲ್ಕತ್ತದ ಈಡನ್ ಗಾರ್ಡನ್‌, ವಿಕ್ಟೋರಿಯಾ ಮ್ಯೂಸಿಯಂ, ಅಧಿಕಾರ ಕೇಂದ್ರ ರೈಟರ್ಸ್‌ ಬಿಲ್ಡಿಂಗ್‌ಗಿಂತಲೂ ಹೆಚ್ಚು ಗಮನ ಸೆಳೆದದ್ದು ಮತ್ತು ಕುತೂಹಲದ ಕೇಂದ್ರವಾಗಿದ್ದು ಉತ್ತರ ಕೋಲ್ಕತ್ತದ ಬುರ್ರಾಬಜಾರ್‌, ಪುಟುರಿಯಾಘಾಟ್‌ ರಸ್ತೆಯ ರಸಗುಲ್ಲಾ, ಜಾಮೂನು ಮಾರುವ ಅಂಗಡಿಗಳು, ಮುಂದೆ ಚಪ್ಪಲಿ ಅಂಗಡಿಗಳನ್ನು ಇಟ್ಟುಕೊಂಡು, ಹಿಂದೆ ಮನೆಯಂತಹ ಪುಟ್ಟ ಗೂಡಿನಲ್ಲಿ ವಾಸಿಸುವ ಜನಸಮೂಹದವರು.

‘ಸಿಟಿ ಆಫ್‌ ಜಾಯ್‌’ ಎಂದು ಕರೆಸಿಕೊಂಡ ‘ಕಲಿಕತ್ತೆ’ (ಅಮರಕವಿ ಶರತ್‌ಚಂದ್ರ ಚಟರ್ಜಿ ತಮ್ಮ ಅನೇಕ ಕಾದಂಬರಿಗಳಲ್ಲಿ ಈ ನಗರವನ್ನು ಹೆಸರಿಸಿದ್ದು ಹೀಗೆಯೇ)ಯಲ್ಲಿ ದಿನ ಕಳೆಯುವುದು ಮಜವಾದ ಸಂಗತಿ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಬೀದಿಯಲ್ಲಿ ಬಿಳಿ ಧೋತಿ, ತೆಳ್ಳನೆಯ ಪೈಜಾಮ ಹಾಕಿಕೊಂಡು ಲಟಪಟನೆ ನಡೆಯುವ ಬಂಗಾಲಿ ಬಾಬುಗಳು ಒಂದೆಡೆಯಾದರೆ, ಅಷ್ಟೇನೂ ಧಡೂತಿಯಲ್ಲದ ಗುಂಡನೆಯ ಮುಖದ, ಲಿಪ್‌ಸ್ಟಿಕ್‌ ಹಚ್ಚಿದ ತರುಣಿಯರು ಆ ರಸ್ತೆಗೆ ವಿಶೇಷ ಕಳೆಯನ್ನು ತರುವವರು!


–ವಿಕ್ಟೋರಿಯಾ ಮ್ಯೂಸಿಯಂ

ನಮ್ಮ ಬೆಂಗಳೂರು, ಹುಬ್ಬಳ್ಳಿ– ಧಾರವಾಡದಂತೆ ಕೋಲ್ಕತ್ತದಲ್ಲಿ ಬೈಕುಗಳ ಅಬ್ಬರವೇ ಇಲ್ಲ. ಮಧ್ಯಮ ವರ್ಗದವರ ಸಂಖ್ಯೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ ಸಂಖ್ಯೆಯಲ್ಲಿದೆ. ಅತಿ ಶ್ರೀಮಂತರು ಹಾಗೂ ಮೇಲ್ಮಧ್ಯಮ ವರ್ಗದವರು ಸ್ವಂತ ಕಾರಿನಲ್ಲಿ ಪ್ರಯಾಣ ಮಾಡಿದರೆ, ಮೇಲ್ಮಧ್ಯಮ ವರ್ಗದವರು ತಳ್ಳುಗಾಡಿಯಲ್ಲಿ ಕುಳಿತುಕೊಂಡು ಗಮ್ಯ ಸ್ಥಾನವನ್ನು ತಲುಪುತ್ತಾರೆ.

ಮನುಷ್ಯರು ಎಳೆಯುವ ತಳ್ಳುಗಾಡಿಗಳನ್ನು ನಿಷೇಧಿಸಲು ಪಶ್ಚಿಮ ಬಂಗಾಳ ಸರ್ಕಾರ ಮುಂದಾಗಿತ್ತು. ಆದರೆ, ಇದನ್ನೇ ನಂಬಿಕೊಂಡು ಜೀವ ಸವೆಸುವ ಶ್ರಮಿಕ ಸಮುದಾಯ ಈ ನೀತಿಗೆ ಭಾರಿ ವಿರೋಧ ವ್ಯಕ್ತಪಡಿಸಿತು. ದೊಡ್ಡ ಮಟ್ಟದ ಪ್ರತಿರೋಧ ಕಂಡು ಬೆದರಿತು. ಸೀಮಿತ ಸ್ಥಳಗಳಲ್ಲಿ ಮಾತ್ರ ಇಂತಹ ತಳ್ಳುಗಾಡಿಗಳನ್ನು ಬಳಸಬಹುದು ಎಂದು ಷರತ್ತುಬದ್ಧ ಅನುಮತಿ ನೀಡಿತು ಎನ್ನುತ್ತಾರೆ ಬಂಗಾಳಿ ಗೆಳೆಯ ಸೌಪ್ತಿಕ್‌ ಪಾಲ್‌.

ಇಲ್ಲಿ ಇನ್ನೊಂದು ತಮಾಷೆಯ ಪ್ರಸಂಗವನ್ನು ನೆನಪಿಸಿಕೊಳ್ಳಲೇಬೇಕು. ಬೆಳಿಗ್ಗೆ ಎದ್ದು ಗಟ್ಟಿ ಹಾಲು, ಹಸಿ ಶುಂಠಿಯಿಂದ ತಯಾರಿಸಿದ ಚಹಾ ಕುಡಿಯುವ ರೂಢಿ ಇದ್ದ ನಮಗೆ ಚಹಾ ಅಂಗಡಿಗಳನ್ನು ಹುಡುಕಿಕೊಂಡು ಕೊಲ್ಕತ್ತೆಯ ಬೀದಿಗಳಲ್ಲಿ ಅಲೆದಾಡುವುದೇ ಒಂದು ಮೋಜಿನ ಸಂಗತಿ. ಹಳ್ಳಿಯಂತಿರುವ ಪುರುಲಿಯಾಘಾಟ್‌ ಬೀದಿಯಿಂದ ವಾಣಿಜ್ಯ ವಹಿವಾಟಿಗೆ ಹೆಸರಾದ ಎಸ್‌ಪ್ಲನೇಡ್‌ಗೆ ತೆರಳುವ ಖಾಸಗಿ ಬಸ್ಸುಗಳು ಅತ್ತಿಂದಿತ್ತ ಓಡಾಡುವ ರಸ್ತೆಯ ಪಕ್ಕದಲ್ಲಿ ಚುಮು ಚುಮು ಚಳಿಗೆ ಮೈ ಒಡ್ಡುತ್ತಾ ಹೋದಂತೆಲ್ಲ ಬೀದಿಯ ನಲ್ಲಿಗಳಲ್ಲಿ ನೀರು ಧಾರಾಕಾರವಾಗಿ ಹರಿಯುತ್ತಿತ್ತು.


–ಗೋಡೆಯ ಮೇಲೆ ಗಿಡಗಳು ಬೆಳೆದರೂ ಕೊಲ್ಕತ್ತಾ ಜನರಿಗೆ ಅನ್ನಂತೆ ಅಪಾರ್ಟ್‌ಮೆಂಟ್‌ ಕಟ್ಟಿಸಬೇಕು ಅನಿಸೇ ಇಲ್ಲ.

ಛೆ, ಏನಿದು ಇಷ್ಟೊಂದು ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆಯಲ್ಲ. ನೀರು ಅಗತ್ಯವಿಲ್ಲದಾಗ ಬಂದ್‌ ಮಾಡಲು ಟ್ಯಾಪ್‌ ಕೂಡಾ ಹಾಕಿಲ್ಲವೆಂದು ಮನಸ್ಸಿಗೆ ಪಿಚ್ಚೆನಿಸಿ ಮುಂದೆ ಹೋಗುತ್ತಿದ್ದಾಗ ಅರೆ, ಅಲ್ಲಿ ಮತ್ತೊಂದು ನಲ್ಲಿ. ಅದರಿಂದಲೂ ನೀರು ಧಾರಾಕಾರವಾಗಿ ಗಟಾರು ಸೇರುತ್ತಿದೆ. ಈ ಮಹಾನಗರ ಪಾಲಿಕೆಯವರಿಗೆ ಇಷ್ಟೂ ಜವಾಬ್ದಾರಿ ಇಲ್ಲವೇ ಎಂದು ವಾರಕ್ಕೊಮ್ಮೆ ಮಲಪ್ರಭಾ ನೀರು ಪಡೆಯುವ ನಮಗೆ ಸಿಟ್ಟು ತರಿಸಿತು. ಏನೋ ಇದ್ದಂಗಿದೆ ಎಂದುಕೊಂಡು ಅಲ್ಲಿಯೇ ಇದ್ದ ಬಟ್ಟೆ ವ್ಯಾಪಾರಿ ಪ್ರಶಾಂತ್‌ ಜಲನ್‌ಗೆ ಕೇಳಿಯೇ ಬಿಟ್ಟೆವು.

ನಸುನಗುತ್ತಲೇ ಉತ್ತರ ಹೇಳಿದ ಪ್ರಶಾಂತ್, ‘ಪಕ್ಕದಲ್ಲೇ ಹೂಗ್ಲಿ ನದಿ ಇದೆ. ಹಾಗಾಗಿ, ನಮಗೆ ದಿನದ 24 ಗಂಟೆಯೂ ನೀರು ಹರಿಯುತ್ತಿರಲೇಬೇಕು. ಬಳಕೆಯಾಗದ ನೀರು ನೇರವಾಗಿ ನದಿಯನ್ನೇ ಸೇರುವ ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ದಶಕಗಳ ಹಿಂದೆಯೇ ಮಾಡಿದೆ’ ಎಂದರು!

ಬ್ರಿಟಿಷರ ಕಾಲದಲ್ಲಿ ದೇಶದ ರಾಜಧಾನಿಯಾಗಿ ಮೆರೆದ ಕೋಲ್ಕತ್ತ ವಿಶ್ವಕ್ಕೆ ಅಧ್ಯಾತ್ಮದ ಅನುಭೂತಿ ನೀಡಿದ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಅಷ್ಟೇ ಏಕೆ, ರವೀಂದ್ರನಾಥ್‌ ಟ್ಯಾಗೋರ್‌, ಬಂಕಿಮಚಂದ್ರರು, ಶರತ್‌ ಚಂದ್ರರಂತಹ ಕವಿ ಪುಂಗವರು, ಸರಸ್ವತಿ ಪುತ್ರರನ್ನು ನೀಡಿದ ನಗರಿ. ನೇತಾಜಿ ಸುಭಾಷ್‌ಚಂದ್ರ ಬೋಸ್ ಇಲ್ಲಿನ ಮನೆಯಿಂದಲೇ ಬ್ರಿಟಿಷರ ಕಣ್ಗಾವಲಿಗೆ ಸವಾಲು ಹಾಕಿ ಬರ್ಮಾ (ಇಂದಿನ ಮಯನ್ಮಾರ್‌) ಮೂಲಕ ಜಪಾನ್‌, ಜರ್ಮನಿಯತ್ತ ನಡೆದರು. ದೇಶದ ಸ್ವಾತಂತ್ರ್ಯಕ್ಕಾಗಿ ಜೈಲು ಸೇರಿ ಉಪವಾಸ ಮಾಡಿ ಜೀವ ಬಿಟ್ಟ ಜತಿನ್‌ ದಾಸ್‌ರ ಕರ್ಮಭೂಮಿಯೂ ಇದೇ ಕೋಲ್ಕತ್ತ.


–ಮಾರುಕಟ್ಟೆಯಲ್ಲಿ ಪ್ರಯಾಣಿಕರಿಗಾಗಿ ಕಾದಿರುವ ಕೂಲಿಗಳು

ಕೋಲ್ಕತ್ತ ವಿಧಾನಸಭೆಯ ಎದುರುಗಡೆ ಬ್ರಿಟಿಷರ ವಿರುದ್ಧ ಚಿಕ್ಕಂದಿನಲ್ಲಿಯೇ ಸೆಣಸಿದ ಯುವಕ ಖುದಿರಾಮನ ಆಳೆತ್ತರದ ಪ್ರತಿಮೆ ಇದೆ. ಇದನ್ನು ಕಟೆದವರು ಒಡಿಶಾದಲ್ಲಿ ಬುಡಕಟ್ಟು ಸಮುದಾಯದ ಮಧ್ಯೆ ಕೆಲಸ ಮಾಡಿದ ಬಂಗಾಳದ ಕಾರ್ಮಿಕ ಮುಖಂಡ ತಪಸ್‌ ದತ್ತ. ಈ ಮೂರ್ತಿಯನ್ನು ಕಂಡ ಅಂದಿನ ಪ್ರಧಾನಿ ಇಂದಿರಾಗಾಂಧಿ ತಪಸ್‌ರನ್ನು ಕರೆಸಿ ತಮ್ಮ ತಂದೆ ಜವಾಹರಲಾಲ್‌ ನೆಹರೂ ಅವರ ಪ್ರತಿಮೆ ಕೆತ್ತುವಂತೆ ಮನವಿ ಮಾಡಿಕೊಂಡರಂತೆ. ಆದರೆ, ಅವರ ಮನವಿಯನ್ನು ತಪಸ್‌ ನಯವಾಗಿಯೇ ತಿರಸ್ಕರಿಸಿದರಂತೆ. ಬುರ್ರಾಬಜಾರ್‌ ನಗರ ರೈಲು ನಿಲ್ದಾಣದ ಸಮೀಪವೇ ರವೀಂದ್ರನಾಥರ ಪೂರ್ವಿಕರ ಮನೆ ಇತ್ತು. ಒತ್ತೊತ್ತಾಗಿ ಕಟ್ಟಿದ ಮನೆಗಳನ್ನೇ ಸ್ವಾತಂತ್ರ್ಯ ಚಳವಳಿಯಲ್ಲಿದ್ದ ಹಲವು ನೇತಾರರು ಅಡಗು ತಾಣಗಳನ್ನಾಗಿ ಮಾಡಿಕೊಂಡಿದ್ದರು ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು ಸೌಪ್ತಿಕ್‌.

₹ 30 ನೀಡಲು ಸಿದ್ಧವಿದ್ದರೆ ಬೀದಿ ಬದಿಯಲ್ಲೇ ಬಿಸಿಬಿಸಿಯಾದ ಪರೋಟ, ಆಲೂಗಡ್ಡೆ ಪಲ್ಯ ಸವಿಯಬಹುದು. ಆಲೂ ಪ್ರತಿಯೊಂದು ಅಡುಗೆಯಲ್ಲೂ, ತಿನಿಸಿನಲ್ಲೂ ಇರಲೇಬೇಕು ಈ ಬಂಗಾಲಿ ಬಾಬುಗಳಿಗೆ. ಒಂದು ಕಾಲದಲ್ಲಿ ದೇಶದ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಅಂಬಾಸಡರ್‌ ಕಾರುಗಳು ಈ ನಗರದ ಅಧಿಕೃತ ಟ್ಯಾಕ್ಸಿಗಳು. ಪ್ರಿಯೇಯ್ಡ್‌ ಕಾರು ಬುಕ್‌ ಮಾಡಿ ಎಲ್ಲೆಂದರಲ್ಲಿ ಹೋಗಬಹುದು.


–ಕೋಲ್ಕತ್ತ ಹೂಗ್ಲಿ ನದಿಗೆ ಅಡ್ಡಲಾಗಿ ಪ್ರಿನ್ಸೆಪ್‌ ಘಾಟ್‌ ಬಳಿ ನಿರ್ಮಿಸಿರುವ ತೂಗು ಸೇತುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT