ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಂಗ್ಯಾ ಸಮುದಾಯದವರು ಮ್ಯಾನ್ಮಾರ್‌ಗೆ ಮರಳಿಲ್ಲವೇಕೆ?

Last Updated 9 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮ್ಯಾನ್ಮಾರ್‌ನ ಸಶಸ್ತ್ರ ಪಡೆಗಳು ಆಗಸ್ಟ್ ತಿಂಗಳಿನಿಂದ ನಡೆಸಿದ ಜನಾಂಗೀಯ ಶುದ್ಧೀಕರಣ ಕಾರ್ಯಾಚರಣೆಯ ನಂತರ, ಮ್ಯಾನ್ಮಾರ್ ಮತ್ತು ನೆರೆಯ ಬಾಂಗ್ಲಾದೇಶ ಸರ್ಕಾರಗಳು ನ.23ರಂದು ಒಪ್ಪಂದವೊಂದಕ್ಕೆ ಸಹಿ ಹಾಕಿದವು. ಆರು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ರೋಹಿಂಗ್ಯಾ ವಲಸಿಗರನ್ನು ಸ್ವಸ್ಥಾನಕ್ಕೆ ಮರಳುವಂತೆ ಮಾಡುವುದು ಈ ಒಪ್ಪಂದದ ಉದ್ದೇಶ. ಇವರೆಲ್ಲ ಪಶ್ಚಿಮ ಮ್ಯಾನ್ಮಾರ್‌ನ ರಾಖೈನ್ ಪ್ರಾಂತ್ಯದಿಂದ ಬಾಂಗ್ಲಾದ ಕಾಕ್ಸ್ ಬಜಾರ್‌ಗೆ ವಲಸೆ ಹೋಗಿ ನೆಲೆಯಾಗಿರುವವರು.

ಈ ಒಪ್ಪಂದದ ಪ್ರಕಾರ, ಬಾಂಗ್ಲಾದೇಶವು ಸ್ವಯಂಪ್ರೇರಿತವಾಗಿ ಮೂಲನೆಲೆಗೆ ವಾಪಸ್ಸಾಗಲು ಬಯಸುವ ವಲಸಿಗರ ಪಟ್ಟಿಯನ್ನು ಸಿದ್ಧಪಡಿಸಲಿದೆ. ಮ್ಯಾನ್ಮಾರ್ ಪ್ರತಿ ಅರ್ಜಿಯನ್ನೂ ಪರಿಶೀಲಿಸಿ, ಆ ಅರ್ಜಿದಾರರು ಪುನಃ ರಾಷ್ಟ್ರಕ್ಕೆ ವಾಪಸ್ಸಾಗಲು ಅರ್ಹರೇ ಅಥವಾ ಅಲ್ಲವೇ ಎಂಬುದನ್ನು ತೀರ್ಮಾನಿಸಲಿದೆ. ಹಿಂದಿರುಗಲು ಅಪೇಕ್ಷಿಸುವವರು ತಮ್ಮ ಗುರುತು ಚೀಟಿಯ ನಕಲು ಪ್ರತಿಗಳನ್ನು ನೀಡುವುದರ ಜತೆಗೆ ಮ್ಯಾನ್ಮಾರ್‌ನಲ್ಲಿನ ತಮ್ಮ ವಿಳಾಸ ದೃಢೀಕರಿಸುವ ಪ್ರಮಾಣೀಕೃತ ದಾಖಲೆಗಳನ್ನು ಒದಗಿಸಬೇಕು.

ಈ ಒಪ್ಪಂದವು ಇತ್ತಂಡಗಳಿಗೂ ಸಮಸ್ಯೆಯಾಗಿರುವ ವಲಸೆ ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಎರಡು ರಾಷ್ಟ್ರಗಳ ನಡುವೆ ಏರ್ಪಟ್ಟಿರುವ ‘ನೀತಿ ನಿರ್ಧಾರ’ ಎಂಬ ಭ್ರಮೆಯನ್ನು ಹುಟ್ಟುಹಾಕುವ ಸಾಧ್ಯತೆ ಇದೆ. ಆದರೆ ಈ ಒಪ್ಪಂದವು ಒಂದುಪೊಳ್ಳು ರಾಜಕೀಯ ನಡೆಯೇ ವಿನಾ ಬೇರೇನೂ ಅಲ್ಲ ಎಂಬುದು ಕಟುವಾಸ್ತವ.

ಮೊದಲನೆಯದಾಗಿ, ಮರುವಲಸೆ ಬಯಸುವ ವ್ಯಕ್ತಿಯ ಅರ್ಜಿಯು ಮ್ಯಾನ್ಮಾರ್ ಪರಿಶೀಲನೆಗೆ ಒಳಪಡಬೇಕು ಎಂಬ ಅಂಶವನ್ನೇ ನೋಡೋಣ. ಮ್ಯಾನ್ಮಾರ್‌ನ ಸೇನಾ ಸರ್ಕಾರಗಳು ರೋಹಿಂಗ್ಯಾ ವಲಸಿಗರ ಬಳಿ ಇದ್ದ ಅಧಿಕೃತ ದಾಖಲೆಗಳನ್ನು ತಮ್ಮ ವಶದಲ್ಲಿರಿಸಿಕೊಳ್ಳುವ ಅಥವಾ ಅವರ ಬಳಿ ಇದ್ದಿರಬಹುದಾದ ಸಣ್ಣಪುಟ್ಟ ದಾಖಲಾತಿಗಳನ್ನು ನಾಶಪಡಿಸುವ ಕೆಲಸವನ್ನು ಮುಂಚಿನಿಂದಲೂ ಅನುಸರಿಸಿಕೊಂಡು ಬರುತ್ತಿವೆ. ಮ್ಯಾನ್ಮಾರ್ ಸರ್ಕಾರ ಹೇಗೆ ತನ್ನ ಪ್ರಜಾಹಕ್ಕು ನಿಯಮಗಳನ್ನು 1989ರಲ್ಲಿ ಬದಲಾಯಿಸಿತು; ಇದು ಹೇಗೆ ಬಹುತೇಕ ರೋಹಿಂಗ್ಯಾ ವಲಸಿಗರು ಹೊಂದಿದ್ದ ‘ನಿವಾಸಿ ಪತ್ರ’ಗಳನ್ನು ಅಸಿಂಧುಗೊಳಿಸಿತು ಎಂಬುದನ್ನು ಬ್ರಿಟನ್ ಸರ್ಕಾರದ ವರದಿಯೊಂದು ದಾಖಲಿಸಿದೆ. ಈ ಅನೂರ್ಜಿತ ನಿವಾಸಿ ಪತ್ರಗಳನ್ನು ಸರ್ಕಾರ ಸಂಗ್ರಹಿಸಿತಾದರೂ ಬಹುತೇಕ ಪ್ರಕರಣಗಳಲ್ಲಿ ಅದಕ್ಕೆ ಬದಲಿಗೆ ಹೊಸ ನಿವಾಸಿ ಪತ್ರಗಳನ್ನು ನೀಡುವಲ್ಲಿ ವಿಫಲವಾಯಿತು. ಹೀಗಾಗಿ ಪ್ರಸ್ತುತ ಬಾಂಗ್ಲಾದಲ್ಲಿ ನೆಲೆಯಾಗಿರುವ ಬಹುಪಾಲು ರೋಹಿಂಗ್ಯಾ ವಲಸಿಗರಿಗೆ ಈ ವರ್ಷದ ಆರಂಭದಲ್ಲಿ ಯಾವುದೇ ಅಧಿಕೃತ ದಾಖಲೆಗಳು ಇರಲೇ ಇಲ್ಲ.

ರೋಹಿಂಗ್ಯಾ ಸಮುದಾಯದ ಬಹುತೇಕರು ಬಾಂಗ್ಲಾದೇಶಕ್ಕೆ ಓಡಿಹೋಗಿದ್ದು ತೀವ್ರ ಅಪಾಯಕಾರಿ ಸನ್ನಿವೇಶದಲ್ಲಿ; ತಮ್ಮ ಹಳ್ಳಿಗಳು ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದಾಗ, ತಾವು ಕಾಲು ಕೀಳದಿದ್ದರೆ ಬದುಕಿ ಉಳಿಯುವುದೇ ಅಸಾಧ್ಯ ಎಂಬ ಸ್ಥಿತಿಯಲ್ಲಿ. ಬೇರೆ ದಿಕ್ಕುಗಾಣದೆ ತಮ್ಮ ಮಕ್ಕಳುಮರಿ ಹಾಗೂ ಹಿರಿಯರ ಸಮೇತ ಅವರು ಪಲಾಯನ ಮಾಡಿದರು. ದೇಶ ಬಿಟ್ಟು ಓಡಿಹೋಗುವ ಸಂದರ್ಭದಲ್ಲಿ ತಮ್ಮ ದಾಖಲಾತಿಗಳನ್ನೆಲ್ಲಾ ಹುಡುಕುತ್ತಾ ಕೂರುವ ವ್ಯವಧಾನವಾದರೂ ಎಲ್ಲಿರುತ್ತದೆ?

ಬಾಂಗ್ಲಾ- ಮ್ಯಾನ್ಮಾರ್ ನಡುವೆ ಏರ್ಪಟ್ಟಿರುವ ಒಡಂಬಡಿಕೆಯಲ್ಲಿ ವಲಸಿಗರನ್ನು ತಮ್ಮ ಮೂಲನೆಲೆಗಳಿಗೆ ಹಾಗೂ ಅವರ ಆಸ್ತಿಪಾಸ್ತಿ ಇದ್ದ ಕಡೆಗೆ ವಾಪಸ್ಸು ಕಳುಹಿಸುವ ವ್ಯವಸ್ಥೆಯಾಗಬೇಕು ಎಂದು ನಿರ್ದಿಷ್ಟವಾಗಿ ಪ್ರಸ್ತಾಪಿಸಲಾಗಿದೆ. ಆದರೆ ಇದು ಸಾಧ್ಯವಿಲ್ಲದ ಸಂಗತಿ. ಏಕೆಂದರೆ ಈ ಸಮುದಾಯದವರಿದ್ದ ಅಸಂಖ್ಯಾತ ಗ್ರಾಮಗಳು ಸುಟ್ಟು ಭಸ್ಮವಾಗಿರುವುದಷ್ಟೇ ಅಲ್ಲದೆ ಅವರ ಆಸ್ತಿಪಾಸ್ತಿ ಮತ್ತು ಜಾನುವಾರುಗಳನ್ನು ನೆರೆಯ ಬೌದ್ಧರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಹಿಂದಿರುಗಲಿರುವ ಕೆಲವು ವಲಸಿಗರಿಗಾಗಿ ಶಿಬಿರಗಳನ್ನು ನಿರ್ಮಿಸುವುದಾಗಿ ಮ್ಯಾನ್ಮಾರ್ ಕಳೆದ ವಾರ ಪ್ರಕಟಿಸಿತು. ಆದರೆ ಇದು ಸರ್ಕಾರದ ಗಂಭೀರ ನೀತಿ ನಿರ್ಧಾರವೇ ಅಥವಾ ಕೇವಲ ಬಾಯಿಮಾತಿನ ಪ್ರಸ್ತಾಪವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉದ್ದೇಶಿತ ಶಿಬಿರಗಳ ಸಾಮರ್ಥ್ಯದ ಬಗ್ಗೆಯೂ ಯಾವುದೇ ವಿವರ ಲಭ್ಯವಿಲ್ಲ. ದಿನವೊಂದಕ್ಕೆ 300ಕ್ಕಿಂತ ಹೆಚ್ಚು ವಲಸಿಗರಗನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ಸಾಧ್ಯವಿಲ್ಲ ಎಂದು ಮ್ಯಾನ್ಮಾರ್‌ನ ಪುನರ್ವಸತಿ ಸಚಿವ ವಿನ್ ಮ್ಯಾತ್ ಆಯೇ ಅವರು ಹೇಳಿರುವುದಷ್ಟೇ ಗೊತ್ತು. ಈ ಪ್ರಕಾರ, ಎಲ್ಲಾ 6 ಲಕ್ಷ ವಲಸಿಗರನ್ನು ವಾಪಸ್ಸು ಕರೆಸಿಕೊಳ್ಳಲು ಐದೂವರೆ ವರ್ಷಕ್ಕಿಂತ ಹೆಚ್ಚು ಅವಧಿ ಬೇಕಾಗುತ್ತದೆ.

ಈ ಪುನರ್ವಸತಿಯು ಸ್ವಪ್ರೇರಣೆಯಿಂದ ನಡೆಯಬೇಕು ಎಂಬುದು ಮತ್ತೊಂದು ಗಮನಾರ್ಹ ಅಂಶ. ರೋಹಿಂಗ್ಯಾ ಸಮುದಾಯದವರು ತಮಗೆ ಅಷ್ಟರಮಟ್ಟಿಗೆ ಸುರಕ್ಷಿತವೆನ್ನಿಸುವ ರಾಷ್ಟ್ರದಲ್ಲಿರುವ ವಲಸಿಗರ ಶಿಬಿರದಿಂದ, ತಮ್ಮ ಮೇಲೆ ದ್ವೇಷದ ಕಿಡಿಕಾರುವ ರಾಷ್ಟ್ರದ ವಲಸಿಗರ ಶಿಬಿರಕ್ಕೆ ಏಕಾದರೂ ವಲಸೆ ಹೋಗಲು ಬಯಸುತ್ತಾರೆ? ತಮ್ಮವರನ್ನು ಕೊಂದು ಹಾಕಿದವರನ್ನು ಹಾಗೂ ತಮಗೆ ನೆಲೆ ನೀಡಿದ ಗ್ರಾಮಗಳನ್ನು ಸುಟ್ಟುಹಾಕಿದವರನ್ನು ಪುನಃ ಹೇಗೆ ಅವಲಂಬಿಸುತ್ತಾರೆ?

ಬಾಂಗ್ಲಾದೇಶದ ಶಿಬಿರಗಳಲ್ಲಿ ನಾನು ಭೇಟಿಯಾದ ಹಲವು ವಲಸಿಗರು ತಮಗೆ ಪ್ರಜಾ ಹಕ್ಕಿನ ಜೊತೆಗೆ ಸಮಾನ ಹಕ್ಕುಗಳನ್ನು ನೀಡಿದರೆ ತಾವು ಮ್ಯಾನ್ಮಾರ್‌ಗೆ ಹಿಂದಿರುಗುವುದಾಗಿ ತಿಳಿಸಿದರು. ಆದರೆ ಲಾಗಾಯ್ತಿನಿಂದಲೂ ರೋಹಿಂಗ್ಯಾ ಮುಸ್ಲಿಮರಿಗೆ ಕಾನೂನುಬದ್ಧ ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ನೀಡಲು ನಿರಾಕರಿಸುತ್ತಾ ಬಂದಿರುವ ಮ್ಯಾನ್ಮಾರ್‌ನ ಚರಿತ್ರೆಯನ್ನು ನೋಡಿದರೆ ಇದು ಅಸಾಧ್ಯವೆಂದೇ ತೋರುತ್ತದೆ.

ಮ್ಯಾನ್ಮಾರ್ ಸರ್ಕಾರವು ಈವರೆಗೆ ವಲಸಿಗರ ಕಾನೂನುಬದ್ಧ ಸ್ಥಾನಮಾನ ಕುರಿತಾಗಲೀ ಅಥವಾ ಅವರ ಸುರಕ್ಷತೆ ಖಾತ್ರಿ ಬಗ್ಗೆಯಾಗಲೀ ಯಾವುದೇ ಭರವಸೆ ನೀಡಿಲ್ಲ. ಈ ಹಿಂದಿನಿಂದಲೂ ವ್ಯಾಖ್ಯಾನಿಸಿಕೊಂಡು ಬಂದಿರುವ ರೀತಿಯಲ್ಲೇ ಅವರನ್ನು ‘ಬಾಂಗ್ಲಾದೇಶದ ವಲಸಿಗರು’ ಎಂಬ ಪರಿಗಣನೆಯಲ್ಲೇ ಇದು ಪರ್ಯವಸಾನ ಆಗಬಹುದು.

ಇದೇ ವೇಳೆ, ಮ್ಯಾನ್ಮಾರ್‌ನ ಸೇನಾ ಮುಖ್ಯಸ್ಥ ಜನರಲ್ ಮಿನ್ ಆಂಗ್ ಹಲೈಂಗ್ ಅವರು ವಲಸಿಗರ ವಾಪಸಾತಿ ಕುರಿತು ನೀಡಿರುವ ಹೇಳಿಕೆಯು ಸುರಕ್ಷತೆಗೆ ಸಂಬಂಧಿಸಿಂತೆ ಭೀತಿಗಳನ್ನು ಹುಟ್ಟುಹಾಕಿದೆ. ‘ಯಾವುದೇ ಪರಿಸ್ಥಿತಿಯು ಸ್ಥಳೀಯ ರಾಖೈನ್ ಬುಡಕಟ್ಟು ಸಮುದಾಯ ಮತ್ತು ಬಂಗಾಳೀಯರು ಇಬ್ಬರಿಗೂ ಸ್ವೀಕಾರಾರ್ಹವಾಗಬೇಕು. ಮ್ಯಾನ್ಮಾರ್‌ನ ನಿಜವಾದ ಪ್ರಜೆಗಳಾದ ರಾಖೈನ್ ಬುಡಕಟ್ಟು ಜನರ ಆಶಯಗಳಿಗೆ ಒತ್ತು ನೀಡಬೇಕು’ ಎಂದು ಅವರು ಹೇಳಿದ್ದಾರೆ.

ಇವೆಲ್ಲವೂ ಬಾಂಗ್ಲಾ- ಮ್ಯಾನ್ಮಾರ್ ನಡುವಿನ ಒಪ್ಪಂದದ ಬಗ್ಗೆ ತೀವ್ರ ಸಂಶಯಗಳಿಗೆ ಎಡೆಮಾಡಿಕೊಟ್ಟಿವೆ. ಈ ಒಪ್ಪಂದಕ್ಕೆ ಸಹಿ ಬಿದ್ದ ನಂತರ ಢಾಕಾದಲ್ಲಿ ನಾನು ಬಾಂಗ್ಲಾ ನಾಯಕರನ್ನು ಭೇಟಿ ಮಾಡಿದಾಗ, ರೋಹಿಂಗ್ಯಾ ಸಮುದಾಯದವರನ್ನು ಹಿಂದಕ್ಕೆ ಕಳುಹಿಸುವ ಬಗೆ ಹೇಗೆ ಎಂಬುದಕ್ಕಿಂತ ಹೆಚ್ಚಾಗಿ ಅವರನ್ನು ಹೇಗಾದರೂ ಸರಿ ಕಳುಹಿಸಿಬಿಟ್ಟರೆ ಸಾಕು ಎಂಬ ಮನೋಭಾವ ಅವರಲ್ಲಿ ವ್ಯಕ್ತವಾಗಿದ್ದನ್ನು ಕಂಡಿದ್ದೇನೆ. ಇವರು ತಮಗೆ ಆರ್ಥಿಕವಾಗಿ ಹೊರೆ ಹಾಗೂ ಭದ್ರತೆಯ ದೃಷ್ಟಿಯಿಂದಲೂ ಅಪಾಯಕಾರಿ ಎಂಬುದು ಅವರ ಭಾವನೆಯಾಗಿದೆ.

ಬಾಂಗ್ಲಾದೇಶವು ರೋಹಿಂಗ್ಯಾ ವಲಸಿಗರನ್ನು ಸಮಾಜದ ಮುಖ್ಯವಾಹಿನಿಗೆ ಹೊರತಾದ ಪ್ರತ್ಯೇಕ ಶಿಬಿರಗಳಲ್ಲಿ ಇರಿಸಿದೆಯೇ ಹೊರತು ಅವರನ್ನು ತಮ್ಮವರು ಎಂಬಂತೆ ನಡೆಸಿಕೊಳ್ಳುತ್ತಿಲ್ಲ. ಎಷ್ಟು ಜನರನ್ನು ವಾಪಸ್ಸು ಕಳುಹಿಸಿದರೆ ಅಷ್ಟರಮಟ್ಟಿಗೆ ಒಳ್ಳೆಯದು ಎಂದು ಭಾವಿಸಿಯೇ ಅಲ್ಲಿನ ರಾಜಕಾರಣಿಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಮ್ಯಾನ್ಮಾರ್‌ನ ನಾಗರಿಕ ಸರ್ಕಾರ ಹಾಗೂ ಅದರ ಪರಮೋಚ್ಚ ನಾಯಕಿ ಆಂಗ್ ಸಾನ್ ಸೂಕಿ ಅವರಿಗೆ ಈ ಒಪ್ಪಂದವು ಅಂತರರಾಷ್ಟ್ರೀಯ ಖಂಡನೆಯನ್ನು ತೊಡೆದುಹಾಕುವ ಒಂದು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮವಾಗಿದೆ. ಈ ಸಂಬಂಧ ಸೇನೆ ಮತ್ತು ಸೂಕಿ ಅವರ ಸರ್ಕಾರದ ನಡುವೆ ಯಾವ ಸಂವಹನವೂ ನಡೆದಿಲ್ಲ ಎಂದೂ ಮೂಲಗಳು ತಿಳಿಸಿವೆ. ಒಂದೊಮ್ಮೆ ಸೂಕಿ ಅವರು ರೋಹಿಂಗ್ಯಾ ಸಮುದಾಯದವರ ಮೇಲಿನ ದೌರ್ಜನ್ಯ ತಡೆಯಬೇಕು ಎಂದು ಬಯಸಿದರೂ ಅದು ಅಲ್ಲಿನ ಸೇನಾ ನಾಯಕತ್ವದ ಬೆಂಬಲವಿಲ್ಲದೆ ಸಾಧ್ಯವಾಗುವಂತಹುದಲ್ಲ.

ಈ ಸಮುದಾಯದವರಿಗೂ ಇದು ಗೊತ್ತಾಗಿದೆ. ಹೀಗಾಗಿಯೇ ಕಾಕ್ಸ್ ಬಜಾರ್ ಪ್ರದೇಶದಲ್ಲಿ ಪುನರ್ವಸತಿ ಅರ್ಜಿಗಳನ್ನು ಕೊಳ್ಳಲು ಸರದಿಯಲ್ಲಿ ಜನ ನಿಂತಿರುವುದೇನೂ ಕಂಡುಬರುತ್ತಿಲ್ಲ. ಸದ್ಯದ ಈಗಿನ ಸ್ಥಿತಿಯಲ್ಲಿ ವಲಸಿಗರಿಗೆ ಕಾಕ್ಸ್ ಬಜಾರ್‌ನಲ್ಲಿ ನೆಲೆಸುವುದೇ ಅತ್ಯುತ್ತಮ ಆಯ್ಕೆಯಾಗಿದೆ. ಬಾಂಗ್ಲಾದೇಶ ಕೂಡ ಅವರನ್ನು ಗಡಿ ದಾಟಿಸಿ, ಹಿಂಸಿಸುವವರ ಮಡಿಲಿಗೆ ಒಪ್ಪಿಸುವುದಕ್ಕೆ ಬದಲಾಗಿ ಅವರು ತಮ್ಮಲ್ಲೇ ಉಳಿಯಲು ಅವಕಾಶ ಕಲ್ಪಿಸಬೇಕು.

(ಲೇಖಕ ‘ಸೆಂಟರ್ ಫಾರ್ ಗ್ಲೋಬಲ್ ಪಾಲಿಸಿ’ಯ ಹಿರಿಯರಲ್ಲಿ ಒಬ್ಬರಾಗಿದ್ದು ‘ದಿ ರೋಹಿಂಗ್ಯಾಸ್: ಇನ್‍ಸೈಡ್ ಮ್ಯಾನ್ಮಾರ್ಸ್ ಹಿಡನ್ ಜೆನಸೈಡ್’ ಎಂಬ ಕೃತಿಯ ರಚನಕಾರರೂ ಆಗಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT