ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುಣಮಟ್ಟ ಹೆಚ್ಚಲು ಬೋಧಕ ಕೇಂದ್ರಿತ ಶಿಕ್ಷಣನೀತಿ ಅಗತ್ಯ’

Last Updated 9 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮಕ್ಕಳ ಆರಂಭಿಕ ಹಂತದ ಸಾಕ್ಷರತೆಯ ಗುಣಮಟ್ಟಕ್ಕೆ ಸಂಬಂಧಿಸಿದ ಚರ್ಚೆ ಹಳೆಯದು. ಮಕ್ಕಳ ಕಲಿಕೆಯಲ್ಲಿ ಕಂಡುಬರುವ ವೈಫಲ್ಯ ಭಾರತದ ಮಕ್ಕಳಿಗೆ ಅಪರಿಚಿತವಾದ ಇಂಗ್ಲಿಷ್‌ನಂಥ ಭಾಷೆಗಳಿಗೆ ಮಾತ್ರ ಸೀಮಿತವಾಗಿಲ್ಲ. ತಮ್ಮದೇ ಪರಿಸರದ ಭಾಷೆಯ ಕಲಿಕೆಯಲ್ಲೂ ಈ ವೈಫಲ್ಯ ಢಾಳಾಗಿಯೇ ಕಾಣಿಸುತ್ತಿದೆ ಎಂದು ಶಿಕ್ಷಣದ ಸ್ಥಿತಿಗತಿಯ ಕುರಿತ ಹಲವು ವಾರ್ಷಿಕ ವರದಿಗಳು (ಎಎಸ್‌ಇಆರ್) ಹೇಳುತ್ತಲೇ ಬಂದಿವೆ. ಈ ವೈಫಲ್ಯದ ಕಾರಣಗಳನ್ನು ಹೆಚ್ಚು ಆಳವಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಟಾಟಾ ಟ್ರಸ್ಟ್ಸ್ ಮತ್ತು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯಗಳು ಜಂಟಿಯಾಗಿ ಭಾರತೀಯ ಭಾಷೆಗಳ ಸಾಕ್ಷರತಾ ಅಧ್ಯಯನಕ್ಕೆ ಮುಂದಾದವು.

ಎಲ್ಐಆರ್‌ಐಎಲ್ ಅಥವಾ ಲಿಟರಸಿ ರೀಸರ್ಚ್ ಇನ್ ಇಂಡಿಯನ್ ಲಾಂಗ್ವೇಜಸ್ ಎಂದು ಗುರುತಿಸಲಾಗುವ ದೀರ್ಘಕಾಲೀನ ಸಂಶೋಧನಾ ಯೋಜನೆಯ ಭಾಗವಾಗಿ ಆರ್ಥಿಕವಾಗಿ ಹಿಂದುಳಿದಿರುವ ಕರ್ನಾಟಕದ ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕು ಮತ್ತು ಮಹಾರಾಷ್ಟ್ರದ ಪಾಲ್‌ಘರ್ ಜಿಲ್ಲೆಯ ವಾಡಾ ತಾಲ್ಲೂಕಿನ ವಿದ್ಯಾರ್ಥಿಗಳನ್ನು ಆರಿಸಿಕೊಂಡು ನಡೆಸಿದ ಸಂಶೋಧನಾ ವರದಿ ಈಗ ಪ್ರಕಟವಾಗಿದೆ. 2013ರಿಂದ 2016ರ ಅವಧಿಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು ನಡೆದ ಅಧ್ಯಯನ ಮಕ್ಕಳ ಆರಂಭಿಕ ಸಾಕ್ಷರತೆಗೆ ಸಂಬಂಧಿಸಿದಂತೆ ಹಲವು ಒಳನೋಟಗಳನ್ನು ನೀಡುತ್ತಿದೆ. ಇವುಗಳನ್ನು ಶೈಕ್ಷಣಿಕ ನೀತಿ ನಿರೂಪಣೆಯ ದೃಷ್ಟಿಯಿಂದ ಹೇಗೆ ಅರ್ಥ ಮಾಡಿಕೊಳ್ಳಬಹುದು ಎಂಬುದನ್ನು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ (ಎಪಿಯು) ಕುಲಪತಿ ಅನುರಾಗ್ ಬೆಹರ್ ‘ಪ್ರಜಾವಾಣಿ’ ಯೊಂದಿಗೆ ಹಂಚಿಕೊಂಡಿದ್ದಾರೆ.

ಪ್ರಾಥಮಿಕ ಶಿಕ್ಷಣ ಕ್ಷೇತ್ರದ ಸುಧಾರಣೆಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಮುಖ್ಯ ನಿರ್ವಹಣಾಧಿಕಾರಿಯೂ ಆಗಿರುವ ಅನುರಾಗ್ ಬೆಹರ್, ಶಿಕ್ಷಣಕ್ಕೆ ಸಂಬಂಧಿಸಿದ ರಾಷ್ಟ್ರಮಟ್ಟದ ಅನೇಕ ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವ ಉಳ್ಳವರು.

* ಆರಂಭಿಕ ಹಂತದ ಸಾಕ್ಷರತೆಗೆ ಸಂಬಂಧಿಸಿದಂತೆ ಕಳೆದ ಒಂದೂವರೆ ದಶಕಗಳ ಅವಧಿಯಲ್ಲಿ ಅನೇಕ ಬದಲಾವಣೆಗಳು ಸಂಭವಿಸಿವೆ. ಬೋಧನಾ ವಿಧಾನ ಮತ್ತು ಕಲಿಕೆಯ ವಾತಾವರಣವನ್ನು ಸುಧಾರಿಸುವ ಪ್ರಕ್ರಿಯೆಯೊಂದು ಈ ಅವಧಿಯುದ್ದಕ್ಕೂ ಚಾಲನೆಯಲ್ಲಿತ್ತು. ಇದರ ಪರಿಣಾಮವಾಗಿ ಮಕ್ಕಳ ಕಲಿಕೆಯ ಮಟ್ಟ ಹೆಚ್ಚಾಗಬೇಕಿತ್ತು. ಆದರೆ ಸಂಶೋಧನಾ ವರದಿ ಇದಕ್ಕೆ ವ್ಯತಿರಿಕ್ತ ಫಲಿತಾಂಶವನ್ನು ನೀಡಿದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?

ಕಳೆದ ಎರಡು ದಶಕಗಳ ಅವಧಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಆಗಿರುವ ಬಹುದೊಡ್ಡ ಸಕಾರಾತ್ಮಕ ಬದಲಾವಣೆಯೊಂದರ ಮೂಲಕ ಈ ಫಲಿತಾಂಶಗಳನ್ನು ಅರ್ಥಮಾಡಿಕೊಳ್ಳಬೇಕು. ಎರಡು ಮೂರು ದಶಕಗಳ ಹಿಂದೆ ಶಾಲೆಗೆ ಸೇರುತ್ತಿದ್ದ ಮಕ್ಕಳ ಪ್ರಮಾಣವೆಷ್ಟು, ಈಗಿನ ಪ್ರಮಾಣವೆಷ್ಟು ಎಂಬುದನ್ನು ಹೋಲಿಸಿ ನೋಡಿದರೆ ಇದು ಅರ್ಥವಾಗುತ್ತದೆ. ಹಿಂದೆಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇದು ಬಹುದೊಡ್ಡ ಸಾಧನೆ. ಇದು ಹೊಸ ಸವಾಲುಗಳನ್ನೂ ಮುಂದೊಡ್ಡಿದೆ. ಈ ಮೊದಲು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳ ಪ್ರಮಾಣ ಬಹಳ ಕಡಿಮೆ ಇತ್ತು. ಈಗ ಸ್ಥಿತಿ ಬದಲಾಗಿದೆ. ಕಲಿಕೆಯ ವಯಸ್ಸಿನ ಎಲ್ಲಾ ಮಕ್ಕಳೂ ಶಾಲೆಗೆ ಬರುತ್ತಿದ್ದಾರೆ. ಅರ್ಥಾತ್ ವೈವಿಧ್ಯಮಯ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿನ್ನೆಲೆಯಿರುವ ಮಕ್ಕಳು ತರಗತಿಗಳ ಒಳಗಿದ್ದಾರೆ. ಅಂದರೆ ಶಿಕ್ಷಕರ ಸವಾಲುಗಳು ಹಿಂದಿಗಿಂತ ದುಪ್ಪಟ್ಟಾಗಿವೆ. ಆದ್ದರಿಂದ ಬೋಧನಾ ವಿಧಾನ ಮತ್ತು ಪಠ್ಯಗಳಲ್ಲಿ ಎಷ್ಟೇ ಸುಧಾರಣೆಯಾಗಿದ್ದರೂ ಕಲಿಕೆಯ ಗುಣಮಟ್ಟಕ್ಕೆ ಸಂಬಂಧಿಸಿದ ಫಲಿತಾಂಶಗಳು ನಕಾರಾತ್ಮಕವಾಗಿವೆ.

* ಈ ಸವಾಲನ್ನು ಎದುರಿಸುವುದಕ್ಕೆ ಇರುವ ಮಾರ್ಗಗಳೇನು?

ಮೊದಲಿಗೆ ಈ ಸವಾಲುಗಳನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಬೇಕು. ಎರಡು ದಶಕಗಳ ಹಿಂದೆ ಶಾಲೆಗೆ ಬರುತ್ತಿದ್ದ ಮಕ್ಕಳಲ್ಲಿ ಹೆಚ್ಚಿನವರ ಪಾಲಕರಿಗೆ ಸಣ್ಣಮಟ್ಟದ ಶೈಕ್ಷಣಿಕ ಹಿನ್ನೆಲೆಯಾದರೂ ಇರುತ್ತಿತ್ತು. ಮನೆಯಲ್ಲಿ ಕೆಲವಾದರೂ ಪುಸ್ತಕಗಳಿರುತ್ತಿದ್ದವು. ತಂದೆ ತಾಯಿಗೂ ಸ್ವಲ್ಪ ಮಟ್ಟಿಗೆ ಓದಲು ಬರೆಯಲು, ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬಹುದಾದ ಅನುಕೂಲಗಳಿದ್ದವು. ಈಗ ಶಾಲೆಗೆ ಬರುತ್ತಿರುವ ಮಕ್ಕಳಲ್ಲಿ ಅನೇಕರಿಗೆ ಇಂಥದ್ದೊಂದು ಹಿನ್ನೆಲೆ ಇಲ್ಲ. ಕಲಿಕೆ ಎಂಬುದು ಶಾಲೆಯಲ್ಲೇ ಪೂರ್ಣಗೊಳ್ಳುವ ವಿಚಾರವಲ್ಲ. ಅದಕ್ಕೆ ಮನೆಯ ಪರಿಸರದ ಬೆಂಬಲವೂ ಬೇಕು. ಈ ಬಗೆಯ ಬೆಂಬಲವಿಲ್ಲದ ಮಕ್ಕಳಿಗೆ ಆ ಬೆಂಬಲವನ್ನು ಹೇಗೆ ಶಾಲೆಯಲ್ಲೇ ನೀಡಬಹುದು ಎಂಬುದರ ಬಗ್ಗೆ ನಾವು ಆಲೋಚಿಸಬೇಕಾಗಿದೆ. ಅಂದರೆ ಮನೆಯಲ್ಲಿ ಇಲ್ಲದೇ ಇರುವ ಕಲಿಕಾ ಪರಿಸರಕ್ಕೆ ಪರ್ಯಾಯವಾಗಿ ಶಾಲೆಯಲ್ಲೇ ಏನನ್ನಾದರೂ ಮಾಡಬೇಕಾದ ಸವಾಲು ಬೋಧಕರ ಮುಂದಿದೆ.

ಕಲಿಕೆಯ ಗುಣಮಟ್ಟ ಕಡಿಮೆಯಾಗಿದೆ ಎಂದಾಕ್ಷಣ ನಾವೆಲ್ಲರೂ ಬೋಧಕರನ್ನು ಟೀಕಿಸಲು ಆರಂಭಿಸುತ್ತೇವೆ. ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರುತ್ತೇವೆ. ಇದರ ಬದಲಿಗೆ ನಿಜವಾದ ಸಮಸ್ಯೆಯತ್ತ ಗಮನಹರಿಸಬೇಕು. ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಮಾಜದ ಮುಖ್ಯವಾದ ಪ್ರಕ್ರಿಯೆಯೊಂದನ್ನು ಶಿಕ್ಷಕ ನಡೆಸುತ್ತಿದ್ದಾನೆ ಎಂಬುದನ್ನೇ ನಾವು ಮರೆತಿರುತ್ತೇವೆ. ಇಂಥದ್ದೊಂದು ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಶಿಕ್ಷಕರಿಗೆ ಯಾವ ಬಗೆಯ ಸಾಮಾಜಿಕ ಬೆಂಬಲ ದೊರೆಯುತ್ತಿದೆ? ಈ ಪ್ರಶ್ನೆಗೆ ನಮಗೆ ದೊರೆಯುವುದು ನಿರಾಶಾದಾಯಕವಾದ ಉತ್ತರ. ಶಿಕ್ಷಕರೆಂದರೆ ಶಿಕ್ಷಣ ಇಲಾಖೆಯ ಕೊನೆಯ ಹಂತದ ನೌಕರರು ಎಂಬ ಸಾಮಾಜಿಕ ಗ್ರಹಿಕೆ ನಮ್ಮದು. ಇದನ್ನು ನಾವು ಬದಲಾಯಿಸಬೇಕು. ಅವರಿಗೆ ಹೆಚ್ಚಿನ ಗೌರವ ನೀಡುವ ಸಾಮಾಜಿಕ ಮತ್ತು ಸಾಂಸ್ಕೃತಿಕ ವಾತಾವರಣವೊಂದು ನಿರ್ಮಾಣವಾಗಬೇಕು. ಇದರ ಜೊತೆಗೆ ದೇಶವ್ಯಾಪಿಯಾಗಿ ಬಿ.ಇಡಿ ಮತ್ತು ಡಿ.ಇಡಿ ಶಿಕ್ಷಣದ ಮಾದರಿಯನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ಈಗಾಗಲೇ ವೃತ್ತಿನಿರತರಾಗಿರುವ ಶಿಕ್ಷಕರ ಸಾಮರ್ಥ್ಯವೃದ್ಧಿಗಾಗಿ ಸಾಕಷ್ಟು ಹೂಡಿಕೆ ಮಾಡಬೇಕು.

* ಬಿ.ಇಡಿ ಮತ್ತು ಡಿ.ಇಡಿಯಲ್ಲಿ ಆಗಬೇಕಿರುವ ಸುಧಾರಣೆಗಳನ್ನು ವಿವರಿಸುತ್ತೀರಾ?

ಈ ಸಂಬಂಧ ಈಗಾಗಲೇ ನ್ಯಾಯಮೂರ್ತಿ ವರ್ಮಾ ಸಮಿತಿ ಸಾಕಷ್ಟು ಸಲಹೆಗಳನ್ನು ನೀಡಿದೆ. ಇತ್ತೀಚೆಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಭಾರತದಲ್ಲಿರುವ ಬಹುತೇಕ ಬಿ.ಇಡಿ ಮತ್ತು ಡಿ.ಇಡಿ ಕಾಲೇಜುಗಳು ನಡೆಸುತ್ತಿರುವ ವಂಚನೆಯ ಬಗ್ಗೆ ಬಹಿರಂಗವಾಗಿಯೇ ಹೇಳಿದ್ದರು. ಅಂದರೆ ಈ ವ್ಯವಸ್ಥೆ ಹೇಗಿದೆ ಎಂಬುದು ಸ್ಪಷ್ಟ. ಈ ಬಗೆಯ ವಂಚನೆಗಳ ಹೊರತಾಗಿಯೂ ಈ ವ್ಯವಸ್ಥೆಯಲ್ಲಿ ಸಾಕಷ್ಟು ದೋಷಗಳಿವೆ. ಒಂದು ವರ್ಷದ ತರಬೇತಿಯಲ್ಲಿ ಬೋಧಕನೊಬ್ಬನನ್ನು ರೂಪಿಸಲು ಸಾಧ್ಯವಿಲ್ಲ. ಇದರ ಬದಲಿಗೆ ಪದವಿ ಮತ್ತು ಬಿ.ಇಡಿ ಒಳಗೊಂಡಿರುವ ನಾಲ್ಕು ವರ್ಷಗಳ ಸಮಗ್ರ ಕೋರ್ಸ್ ಒಂದನ್ನು ರೂಪಿಸುವ ಅಗತ್ಯವಿದೆ. ಆಗ ಮಾತ್ರ ನಮ್ಮ ವರ್ತಮಾನದ ಸವಾಲುಗಳನ್ನು ಎದುರಿಸಲು ಶಕ್ತರಾಗಿರುವ ಬೋಧಕರನ್ನು ರೂಪಿಸಲು ಸಾಧ್ಯ.

ಈಗಾಗಲೇ ವೃತ್ತಿನಿರತರಾಗಿರುವ ಶಿಕ್ಷಕರಿಗೆ ನೀಡುವ ತರಬೇತಿಗಳ ಮಾದರಿಯಲ್ಲೂ ಸಾಕಷ್ಟು ಬದಲಾವಣೆಗಳಾಗಬೇಕಾಗಿವೆ. ಅದಕ್ಕೆ ಸಾಕಷ್ಟು ಪ್ರಮಾಣದ ಹೂಡಿಕೆಯ ಅಗತ್ಯವೂ ಇದೆ. ಈಗ ನಾವು ಮಾದರಿ ಶೈಕ್ಷಣಿಕ ವ್ಯವಸ್ಥೆ ಎಂದು ಗುರುತಿಸುವ ಫಿನ್ಲೆಂಡ್‌ನಂಥ ದೇಶ ಕೂಡ ನಾವು ಎದುರಿಸಿದಂಥದ್ದೇ ಸವಾಲುಗಳನ್ನು ಎದುರಿಸಿತ್ತು ಎಂಬುದು ನಮಗೆ ನೆನಪಿರಬೇಕು.

* ಅಭಿವೃದ್ಧಿ ಹೊಂದಿದ ದೇಶಗಳು ಈ ಸವಾಲನ್ನು ಹೇಗೆ ಎದುರಿಸಿದವು?

ಸಮಸ್ಯೆಯ ಮೂಲಕ್ಕೆ ತಲುಪುವ ಮೂಲಕ ತಮ್ಮ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿದವು. ಫಿನ್ಲೆಂಡ್ ಶಿಕ್ಷಕ ಮತ್ತು ವಿದ್ಯಾರ್ಥಿ ಕೇಂದ್ರಿತವಾದ ಶೈಕ್ಷಣಿಕ ವ್ಯವಸ್ಥೆಯೊಂದನ್ನು ರೂಪಿಸಿತು. ಇದೇನು ದಿನ ಬೆಳಗಾಗುವುದರ ಒಳಗೆ ಸಂಭವಿಸಿದ್ದಲ್ಲ. ಇಂದು ಫಿನ್ಲೆಂಡ್ ಸಾಧಿಸಿರುವುದರ ಹಿಂದೆ ನಲವತ್ತು ವರ್ಷಗಳ ಅವಧಿಯ ನಿರಂತರ ಶ್ರಮವಿದೆ. ಶೈಕ್ಷಣಿಕ ಸುಧಾರಣೆಗಳು ಏಕಾಏಕಿ ಫಲ ನೀಡುವುದಿಲ್ಲ. ಫಿನ್ಲೆಂಡ್, ಅಮೆರಿಕದಂಥ ದೇಶಗಳು ಮೊದಲು ಆರಂಭಿಸಿದ್ದೇ ಶಿಕ್ಷಕರ ತರಬೇತಿಯಲ್ಲಿ ಸುಧಾರಣೆಗಳನ್ನು ತರುವ ಮೂಲಕ. ನಾವೀಗ ಅದೇ ಕ್ರಿಯೆಯನ್ನು ಆರಂಭಿಸಬೇಕಾಗಿದೆ. ಇದರ ಜೊತೆ ಜೊತೆಯಲ್ಲೇ ಶಿಕ್ಷಕರಿಗೆ ನೀಡಬೇಕಾದ ಸಾಮಾಜಿಕ ಬೆಂಬಲ, ಶಾಲೆಗಳಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಖಾತರಿ ಪಡಿಸುವ ಕೆಲಸಗಳು ನಡೆಯಬೇಕು. ಇದರ ಜೊತೆಗೆ ಬದಲಾವಣೆಗಾಗಿ ಕಾಯುವ ತಾಳ್ಮೆಯೂ ನಮಗಿರಬೇಕಾಗುತ್ತದೆ.

* ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರಗಳು ಮಾಡುತ್ತಿರುವ ಹೂಡಿಕೆ ಸಾಕಷ್ಟಿದೆಯೇ?

ನಮ್ಮ ಹೂಡಿಕೆಯ ಪ್ರಮಾಣ ಕಡಿಮೆ. ಸದ್ಯದ ಮಟ್ಟಿಗೆ ಇದು ಒಟ್ಟು ಆಂತರಿಕ ಉತ್ಪನ್ನದ ಶೇ 3.8ರಷ್ಟಿದೆ. ಇದನ್ನು ಶೇ 6ಕ್ಕೆ ಹೆಚ್ಚಿಸುವುದು ಸಾಮಾನ್ಯ ಕೆಲಸವಲ್ಲ. ಇದಕ್ಕೆ ಬೇಕಿರುವ ಸಂಪನ್ಮೂಲವನ್ನು ಕ್ರೋಡೀಕರಿಸುವ ಸವಾಲೂ ಸರ್ಕಾರದ ಮುಂದೆ ಇದೆ. ಅಭಿವೃದ್ಧಿಹೊಂದಿದ ದೇಶಗಳಲ್ಲಿರುವ ತೆರಿಗೆಯ ಅನುಪಾತವನ್ನೂ ನಾವು ಗಮನಿಸಬೇಕು. ಅಲ್ಲಿರುವ ತೆರಿಗೆಯ ಅನುಪಾತ ನಮಗಿಂತ ಹಲವು ಪಾಲು ಹೆಚ್ಚು. ಇದು ಬೀಜ-ವೃಕ್ಷ ನ್ಯಾಯದಂಥ ಸಮಸ್ಯೆ. ಹೆಚ್ಚು ತೆರಿಗೆ ಪಾವತಿಸುವ ಸಮಾಜವಾಗುವ ಮೂಲಕ ನಾವು ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವ ಕಡೆ ಸಾಗಬೇಕು. ಆಗ ಶಿಕ್ಷಣಕ್ಕೆ ಒದಗಿಸುವ ಸಂಪನ್ಮೂಲದ ಪ್ರಮಾಣದ ಬಗ್ಗೆ ಮಾತನಾಡುವುದಕ್ಕೆ ನಮಗೂ ನೈತಿಕ ಬಲ ಬರುತ್ತದೆ.

* ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಈಗ ಸರ್ಕಾರೇತರ ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದ ಸುಧಾರಣೆಗಾಗಿ ಕೆಲಸ ಮಾಡುತ್ತಿವೆ. ಹೊಸ ಸವಾಲುಗಳನ್ನು ಎದುರಿಸುವಲ್ಲಿ ಇದು ಪೂರಕವಾಗಿ ಕೆಲಸ ಮಾಡಬೇಕಾಗಿತ್ತಲ್ಲವೇ?

ಮೇಲ್ನೋಟಕ್ಕೆ ನೀವು ಮುಂದಿಡುತ್ತಿರುವ ವಾದ ಸರಿಯೆಂಬಂತೆ ಕಾಣಿಸುತ್ತದೆ. ವಾಸ್ತವ ಹಾಗಿಲ್ಲ. ಸಾವಿರಾರು ಶಿಕ್ಷಕರೊಂದಿಗೆ ಕೆಲಸ ಮಾಡುವ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದಂಥ ಸಂಸ್ಥೆಗೂ ತಲುಪಲು ಸಾಧ್ಯವಾಗಿರುವುದು ಒಟ್ಟು ವ್ಯವಸ್ಥೆಯ ಅತ್ಯಂತ ಸಣ್ಣಭಾಗವನ್ನು ಮಾತ್ರ. ಭಾರತದಾದ್ಯಂತ ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಕೆಲಸ ಮಾಡುತ್ತಿರುವ ಎಲ್ಲಾ ಸರ್ಕಾರೇತರ ಸಂಸ್ಥೆಗಳನ್ನು ಒಟ್ಟಾಗಿ ನೋಡಿದರೂ ಅವು ಮಾಡುತ್ತಿರುವ ಕೆಲಸ ಒಂದು ಬಿಂದುವಿನಷ್ಟೇ. ಹೆಚ್ಚಿನ ಕೆಲಸ ನಡೆಯುತ್ತಿರುವುದು ಸರ್ಕಾರದಿಂದ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಶಿಕ್ಷಣ ಇಲಾಖೆಯ ಕೆಲಸ ನಮ್ಮಂಥ ಸರ್ಕಾರೇತರ ಸಂಸ್ಥೆಗಳು ಮಾಡುತ್ತಿರುವ ಕೆಲಸಕ್ಕಿಂತ ಬಹುಪಾಲು ದೊಡ್ಡದು. ನಾವೇನಿದ್ದರೂ ಅದಕ್ಕೆ ಪೂರಕವಾಗಿ ಕೆಲಸ ಮಾಡಬಹುದೇ ಹೊರತು ಪರ್ಯಾಯ ವ್ಯವಸ್ಥೆಯಂತಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆಯಂಥ ವ್ಯವಸ್ಥೆಗಳನ್ನು ಬಲಪಡಿಸುವುದರಿಂದಷ್ಟೇ ಶಿಕ್ಷಣ ಕ್ಷೇತ್ರದ ಸಮಗ್ರ ಬದಲಾವಣೆ ಸಾಧ್ಯ.

* ಶಿಕ್ಷಕರ ತರಬೇತಿಯಲ್ಲಿ ಕೊರತೆಗಳನ್ನು, ಒಟ್ಟು ಉನ್ನತ ಶಿಕ್ಷಣದ ಸಮಸ್ಯೆಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆಯಲ್ಲವೇ? ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದಂಥ ಸಂಸ್ಥೆಗಳು ಉನ್ನತ ಶಿಕ್ಷಣ ಕ್ಷೇತ್ರದಲ್ಲೂ ಮಧ್ಯಪ್ರವೇಶಿಸುವ ಅಗತ್ಯವಿದೆ ಎನಿಸುವುದಿಲ್ಲವೇ?

ಉನ್ನತ ಶಿಕ್ಷಣದ ಸಮಸ್ಯೆಗಳ ಅರಿವು ನಮಗಿದೆ. ಆದರೆ ನಮ್ಮ ಮಿತಿಯಲ್ಲಿ ಮಾಡಬಹುದಾಗಿರುವುದನ್ನು ನಾವು ಮಾಡುತ್ತಿದ್ದೇವೆ. ಮಾದರಿ ಎನಿಸುವಂಥ ಪದವಿ ಕೋರ್ಸ್‌ಗಳನ್ನು ರೂಪಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದೇವೆ. ಮುಂದಿನ ಜುಲೈನಲ್ಲಿ ನಮ್ಮ ಮೊದಲ ಪದವಿ ತಂಡ ಹೊರಬರುತ್ತಿದೆ. ನಾವು ಅನುಸರಿಸುವ ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳನ್ನು ಇತರರ ಜೊತೆಗೆ ಹಂಚಿಕೊಳ್ಳಲೂ ಸಿದ್ಧರಿದ್ದೇವೆ. ಆದರೆ ಈಗಿನ ನಮ್ಮ ಮಿತಿಯಲ್ಲಿ ಸದ್ಯ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನಕ್ಕೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಧ್ಯಪ್ರವೇಶ ಅಸಾಧ್ಯ ಎನಿಸುತ್ತದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT