ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾಕ್ಷಿ ಬೆಳೆ ರೋಗದಿಂದ ಕಾಪಾಡಲು ಸಲಹೆ

Last Updated 10 ಡಿಸೆಂಬರ್ 2017, 8:54 IST
ಅಕ್ಷರ ಗಾತ್ರ

ವಿಜಯಪುರ : ಡಿಸೆಂಬರ್ ತಿಂಗಳಿನಲ್ಲಿ ಆರಂಭವಾಗಿ ಫೆಬ್ರುವರಿ ತಿಂಗಳವರೆಗೂ ಮುಂದುವರೆಯುವಂತಹ ಚಳಿಗಾಲದಲ್ಲಿ ವಾಣಿಜ್ಯ ಬೆಳೆಯಾಗಿರುವ ದ್ರಾಕ್ಷಿಗೆ ಬರುವಂತಹ ರೋಗಗಳನ್ನು ನಿಯಂತ್ರಣ ಮಾಡಿಕೊಳ್ಳುವ ಕಡೆಗೆ ರೈತರು ಹೆಚ್ಚು ಗಮನ ಹರಿಸಬೇಕು ಎಂದು ದೇವನಹಳ್ಳಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವಂತಹ ಬೆಂಗಳೂರು ಬ್ಲೂ ದ್ರಾಕ್ಷಿಗೆ ಚಳಿಗಾಲದಲ್ಲಿ ‘ಡೌನಿ ಮಿಲ್ಡ್’ ರೋಗ ಬೀಳುತ್ತದೆ, ಕೆಲ ಕಡೆಗಳಲ್ಲಿ ರೈತರು ಹೆಚ್ಚಿನ ಲಾಭ ಮಾಡಿಕೊಳ್ಳುವ ದೃಷ್ಠಿಯಿಂದ ಬೀಜರಹಿತ ದ್ರಾಕ್ಷಿಯನ್ನು ಬೆಳೆಯುತ್ತಿದ್ದಾರೆ ಎಂದಿದ್ದಾರೆ.

ದ್ರಾಕ್ಷಿಗೆ ‘ಪೌಡರಿ ಮಿಲ್ಡ್’ (ದ್ರಾಕ್ಷಿ ಎಲೆಗಳ ಹಿಂಭಾಗದಲ್ಲಿ ಪೌಡರ್ ಮಾದರಿಯಲ್ಲಿ ಬೀಳುವ ರೋಗ) ರೋಗ ಕಾಣಿಸಿಕೊಳ್ಳುತ್ತದೆ. ಇದರಿಂದ ಕ್ಲೋರೋಫಿಲ್ ಫಾರ್ಮೇಷನ್ ಗೆ ಹೊಡೆತವಾಗುವುದರಿಂದ ಇಳುವರಿಯಲ್ಲಿ ಏರುಪೇರು ಆಗಲಿದೆ. ಇದು ಫಂಗಸ್ ರೋಗವಾಗಿದ್ದು, ಸುಲಭವಾಗಿ ಹತೋಟಿಗೆ ತರಬಹುದಾಗಿದೆ ಎಂದು ಹೇಳಿದ್ದಾರೆ.

ಮೋಡ ಮುಸುಕಿದ ವಾತಾವರಣ, ಮಳೆ ಬರುವ ವಾತಾವರಣದಲ್ಲಿ ಸಿಡ್ ಲೆಸ್ ದ್ರಾಕ್ಷಿಯಲ್ಲಿ ಹೆಚ್ಚು ರೋಗ ಕಾಣಿಸಿಕೊಳ್ಳಲಿದೆ. ಮುಂದಿನ ಬೆಳೆಗಳಾಗಿ ರೈತರು ಎಲೆಗಳನ್ನು ಉಳಿಸಿಕೊಳ್ಳಬೇಕಾಗಿದೆ. ಸಸ್ಯ ಸಂರಕ್ಷಣಾ ಔಷಧಿಗಳನ್ನು ಸಿಂಪಡಣೆ ಮಾಡಿಕೊಳ್ಳಬೇಕಾಗುತ್ತದೆ. ಈ ಕುರಿತು ರೈತರಿಗೆ ಮಾಹಿತಿಗಳನ್ನು ಆಗಿದ್ದಾಗ್ಗೆ ಕೊಡುತ್ತಿದ್ದೇವೆ ಎಂದಿದ್ದಾರೆ.

ಚಳಿಗಾಲದಲ್ಲಿ ದ್ರಾಕ್ಷಿಯನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿರುತ್ತದೆ. ಬಿಸಿಲು ಹೆಚ್ಚಾಗಿದ್ದಷ್ಟು ದ್ರಾಕ್ಷಿಗೆ ಉತ್ತಮವಾದ ವಾತಾವರಣವಾಗಿದೆ. ಬೆಳಗಾಂ, ಅಥಣಿ, ಬಿಜಾಪುರ, ಸಾಂಗ್ಲಿ, ಮಹಾರಾಷ್ಟ್ರ ಕಡೆಗಳಲ್ಲಿ ಸಿಡ್ ಲೆಸ್ ದ್ರಾಕ್ಷಿ ಹೆಚ್ಚು ಬೆಳೆಯುತ್ತಾರೆ. ಇಳುವರಿ ಉತ್ತಮವಾಗಿರುತ್ತದೆ ಎಂದು ಹೇಳಿದ್ದಾರೆ.

ರೈತರು ಸಿಡ್ ಲೆಸ್ ದ್ರಾಕ್ಷಿಗಳು ಬೆಳೆಯಲು ಮುಂದಾಗಿದ್ದಾರೆ, ಬೆಂಗಳೂರು ವಾತಾವರಣಕ್ಕೆ ಸಿಡ್ ಲೆಸ್ ಬೆಳೆಯುವುದು ತಾಂತ್ರಿಕವಾಗಿ ಸೂಕ್ತವಲ್ಲ ಎಂದು ರೈತರಿಗೆ ಜಾಗೃತಿ ಮೂಡಿಸಿದರೂ ರೈತರು ಬದಲಾವಣೆಗಾಗಿ ಬೆಳೆಯಲು ಮುಂದಾಗುತ್ತಿದ್ದಾರೆ ಎಂದಿದ್ದಾರೆ.

ಪೂರ್ವ ತಯಾರಿ ಮಾಡಿಕೊಂಡು ದ್ರಾಕ್ಷಿ ಬೆಳೆಯುತ್ತಾರೆ. ಒಮ್ಮೆ ಬೆಳೆ ನಾಟಿ ಮಾಡಿದರೆ 30 ರಿಂದ 40 ವರ್ಷಗಳು ಇರುತ್ತದೆ. ವಿಜಯಪುರ ಹೋಬಳಿಯ ವೆಂಕಟಗಿರಿಕೋಟೆ, ಹೊಸಹುಡ್ಯ, ಹಾರೋಹಳ್ಳಿ, ಬಿಜ್ಜವಾರ, ಇರಿಗೇನಹಳ್ಳಿ, ಬುಳ್ಳಹಳ್ಳಿ, ಬೀಡಿಗಾನಹಳ್ಳಿ ಸೇರಿದಂತೆ ಹಲವಾರು ಕಡೆ ಬೆಳೆಯುತ್ತಿದ್ದಾರೆ. 2001 ರಿಂದ ಶೇ 70 ರಷ್ಟು ಮಂದಿ ದಿಲ್ ಕುಶ್, ಅನಾಫಿಶ್ ತಳಿಗಳನ್ನು ಬಿಟ್ಟು ಬೀಜರಹಿತ ದ್ರಾಕ್ಷಿಯನ್ನು ಬೆಳೆಯಲು ಮುಂದಾಗಿದ್ದಾರೆ. ಬೆಂಗಳೂರು ಸುತ್ತಮುತ್ತಲಿನ ಹವಾಮಾನಕ್ಕೆ ವಿರುದ್ಧವಾಗಿದ್ದರೂ ಬೆಳೆಯಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ವಿಜಯಪುರ (ಬಿಜಾಪುರ ) ಜಿಲ್ಲೆಯಲ್ಲಿ ಬೆಳೆಯುವ ದ್ರಾಕ್ಷಿಗೆ ಹೋಲಿಕೆ ಮಾಡಿದರೆ ನಮ್ಮ ಸುತ್ತಮುತ್ತಲಿನಲ್ಲಿ ಬೆಳೆಯುವ ದ್ರಾಕ್ಷಿಯ ಇಳುವರಿ ಕಡಿಮೆ, ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಆದ್ದರಿಂದ ಇಲ್ಲಿನ ದ್ರಾಕ್ಷಿಗೆ ಸಿಗುವ ಬೆಲೆ ಕಡಿಮೆಯಾಗುತ್ತದೆ. ಈ ಕಾರಣದಿಂದ ಕೆಲ ರೈತರು ದ್ರಾಕ್ಷಿ ಬೆಳೆಗಳಿಂದ ವಿಮುಖವಾಗಿ ತರಕಾರಿ ಬೆಳೆಗಳು ಬೆಳೆಯಲು ಮುಂದಾಗಿದ್ದಾರೆ.

ಸೀಡ್ ಲೆಸ್ ದ್ರಾಕ್ಷಿಗೆ ಬೀಳುವ ರೋಗಗಳನ್ನು ತಡೆಗಟ್ಟಲು ವಿಪರೀತವಾದ ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಬೆಂಗಳೂರಿನಲ್ಲಿ ಬಹಳಷ್ಟು ಮಂದಿಗೆ ಜಾಗೃತಿ ಮೂಡಿದೆ. ದ್ರಾಕ್ಷಿಯಲ್ಲಿ ವಿಷಕಾರಕ ವಸ್ತುಗಳನ್ನು ತೆಗೆಯಲು ಸಾಧ್ಯವಾಗುವುದಿಲ್ಲ. ಇದು ಆರೋಗ್ಯದ ಕೆಟ್ಟ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ.

ಇದರಿಂದ ನಮ್ಮ ಸುತ್ತಮುತ್ತಲಿನಲ್ಲಿ ಬೆಳೆಯುವ ದ್ರಾಕ್ಷಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ವಿಜಯಪುರ (ಬಿಜಾಪುರ) ದ ಕಡೆಗಳಲ್ಲಿ ಬೇಸಿಗೆಕಾಲದಲ್ಲಿ ಒಂದು ಪ್ರೂನಿಂಗ್, ಚಳಿಗಾಲದಲ್ಲಿ ಒಂದು ಪ್ರೂನಿಂಗ್ ಮಾಡ್ತಾರೆ, ಆದ್ದರಿಂದ ಉತ್ತಮ ಇಳುವರಿ ಪಡೆಯುತ್ತಾರೆ.

ನಮ್ಮ ರೈತರು ಚಳಿಗಾಲದ ಅಕ್ಟೋಬರ್ ಮೊದಲ ವಾರದ ಒಳಗೆ ಪ್ರೂನಿಂಗ್ ಮುಗಿಸಿಕೊಳ್ಳುವಂತೆ ಜಾಗೃತಿ ಮೂಡಿಸಿದರೂ ರೈತರು ಮುಂದೂಡುತ್ತಾರೆ. ಬೆಂಗಳೂರು ಬ್ಲೂ, ದಿಲ್ ಕುಶ್ ಗೆ ಸಮಸ್ಯೆಯಾಗುವುದಿಲ್ಲ. ಕೆಲವು ರೈತರು ಈಗ ಪ್ರೂನಿಂಗ್ ಮಾಡುತ್ತಿದ್ದಾರೆ.

ಫೆಬ್ರುವರಿಯಲ್ಲಿ ಬೆಳೆ ತೆಗೆದರೆ ಉತ್ತಮ ಇಳುವರಿ ಮತ್ತು ಬೆಲೆ ಪಡೆಯಲು ಸಾಧ್ಯವಾಗುತ್ತದೆ. ಏಪ್ರೀಲ್, ಮೇ ತಿಂಗಳಿನಲ್ಲಿ ಬೆಳೆಗಳು ಬರುವಂತೆ ರೈತರು ನೋಡಿಕೊಳ್ಳುತ್ತಾರೆ. ಈ ವೇಳೆ ಅಕಾಲಿಕ ಮಳೆಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಳಾಗುತ್ತಿದೆ ಎಂದು ತಿಳಿಸಿದ್ದಾರೆ.

* * 

ಬೆಳೆಗಳು ನಷ್ಟವಾದಾಗ ಪರಿಹಾರ ರೈತರಿಗೆ ಸಿಗುವುದಿಲ್ಲ, ವಿಮೆ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರೈತರು ಈ ಬಗ್ಗೆ ಜಾಗೃತರಾಗಬೇಕು. ಇಲಾಖೆಯಿಂದ ನೀಡುವಂತಹ ನಿರ್ದೇಶನಗಳನ್ನು ಪಾಲನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ
ಮಂಜುನಾಥ್
ದೇವನಹಳ್ಳಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT