ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕಾಡೆ ಮಲಗಿದ ಕನ್ಯತ್ವ ಪರೀಕ್ಷೆ!

Last Updated 10 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಭಾರತೀಯ ಸಮಾಜದಲ್ಲಿ ಪ್ರತಿಯೊಬ್ಬ ಗಂಡೂ ತಾನು ಮದುವೆಯಾಗುವ ಹೆಣ್ಣು ಕನ್ಯೆ (virgin)  ಆಗಿರಬೇಕು ಎಂದೇ ಬಯಸುತ್ತಾನೆ. ಅಷ್ಟೇ ಅಲ್ಲ ಹುಡುಗಿಯರು ಕೂಡಾ ‘ನನ್ನ ಕನ್ಯತ್ವದ ಬಗ್ಗೆ ಪತಿಗೆ ಅನುಮಾನ ಬರಬಾರದು, ಬಂದರೆ ಸಂಸಾರ ಹಾಳಾಗುತ್ತದೆ’ ಎಂಬ ಬಲವಾದ ಭಾವನೆಯಲ್ಲೇ ಮುಳುಗಿರುತ್ತಾರೆ.

ಗಂಡು ಹೆಣ್ಣಿನ ಪ್ರಥಮ ಸಮಾಗಮದಲ್ಲಿ ರಕ್ತಸ್ರಾವವಾದರೆ ಮಾತ್ರ ಆಕೆಯನ್ನು ಕನ್ಯೆ ಎಂದು ಪರಿಗಣಿಸಲಾಗುತ್ತದೆ. ಇದು ನಮ್ಮಲ್ಲಿ ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ನಂಬಿಕೆ. ಆದರೆ ಇದು ವೈಜ್ಞಾನಿಕವಾಗಿ ಶುದ್ಧ ತಪ್ಪು. ವಾಸ್ತವವದಲ್ಲಿ ಕನ್ಯಾಪೊರೆ ಕೆಲವರಲ್ಲಿ ಮಾತ್ರ ಮೊದಲ ರಾತ್ರಿಯಲ್ಲಿ ಹರಿಯಬಲ್ಲದು. ಮತ್ತೂ ಕೆಲವರಲ್ಲಿ ಈ ಅಂಗಾಂಶ ಸಂರಚನೆಯ ‘ಕನ್ಯಾಪೊರೆ’ಯೇ ಇರುವುದಿಲ್ಲ.

ಆಧುನಿಕ ಬದುಕಿನ ಈ ದಿನಗಳಲ್ಲಿ ಮಕ್ಕಳು ಚಿಕ್ಕಂದಿನಲ್ಲೇ ಓಟ, ನೆಗೆತ, ಸೈಕಲ್ ತುಳಿಯುವುದು, ಈಜು ಮೊದಲಾದವುಗಳಲ್ಲಿ ಸಕ್ರಿಯರಾಗಿರುತ್ತಾರೆ. ಹೀಗಾಗಿ ಕನ್ಯಾಪೊರೆ ಎಂಬುದು ಬೇರೆ ಚಟುವಟಿಕೆಯಿಂದಲೂ ಗಾಸಿಗೊಂಡಿರುವ ಸಾಧ್ಯತೆ ಹೇರಳವಾಗಿರುತ್ತದೆ. ಕನ್ಯಾಪೊರೆ ಹರಿದಿದೆ ಎಂದರೆ ಅದರರ್ಥ ಯುವತಿ ಬೇರೆ ಯಾರನ್ನೋ ಈ ಮೊದಲು ಕೂಡಿದ್ದಾಳೆ ಎಂಬುದಲ್ಲ ಅಥವಾ ಆಕೆಗೆ ಕನ್ಯಾಪೊರೆ ಇತ್ತು ಎಂದೂ ಭಾವಿಸಬೇಕಾಗಿಲ್ಲ.

ವಿವಾಹದ ನಂತರ ‘ಮೊದಲ ರಾತ್ರಿಯ ಮಿಲನದಲ್ಲಿ ಪತ್ನಿಯ ಕನ್ಯಾಪೊರೆ ಹರಿಯಲಿಲ್ಲವೆಂದರೆ ನನ್ನ ಹೆಂಡತಿ ಕನ್ಯೆಯಲ್ಲ. ವಿವಾಹ ಪೂರ್ವ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಳು’ ಎಂಬ ಅನುಮಾನಗಳಲ್ಲಿ ಬಳಲುವ ಸಂಶಯ ಪಿಶಾಚಿ ಗಂಡಸರಿಗೆ ಕೊರತೆಯೇನಿಲ್ಲ. ತಾವು ಹೇಗಿದ್ದರೂ ಸರಿ, ಸಂಗಾತಿ ಮಾತ್ರ ಕನ್ಯೆಯೇ ಆಗಿರಬೇಕು ಎಂದು ಬಯಸುತ್ತಾರೆ!

ನಾನು ವಕೀಲಿ ವೃತ್ತಿ ಪ್ರಾರಂಭಿಸಿದ 2002ರ ದಿನಗಳವು. ಸ್ತ್ರೀಯ ಕನ್ಯತ್ವಕ್ಕೆ ಸಂಬಂಧಿಸಿದ ಇಂತಹುದೊಂದು ಪ್ರಕರಣವೊಂದರಲ್ಲಿ ಹೆಣ್ಣಿನ ಪರ ವಾದ ಮಂಡಿಸುವ ಅವಕಾಶ ಒದಗಿತ್ತು. ಇದರಲ್ಲಿ ಪತಿ, ‘ನನ್ನ ಪತ್ನಿಯ ಕನ್ಯತ್ವದ ಕುರಿತಾಗಿ ವೈದ್ಯಕೀಯ ಪರೀಕ್ಷೆಗೆ ನಿರ್ದೇಶಿಸಬೇಕು’ ಎಂದು ನ್ಯಾಯಾಲಯಕ್ಕೆ ನಿವೇದನೆ ಮಾಡಿಕೊಂಡಿದ್ದ.

ನನ್ನ ವೃತ್ತಿಗೇ ಸವಾಲು ಒಡ್ಡಿದ ಪ್ರಕರಣ ಇದಾಗಿತ್ತು. ‘ಸ್ತ್ರೀರೋಗ ಶಾಸ್ತ್ರವು (gynecology) ಕನ್ಯತ್ವ ಅಥವಾ ಸಂಭೋಗದ ಅನುಭವವಿಲ್ಲದ ಕುರಿತು ಏನು ಹೇಳುತ್ತದೆ, ಕನ್ಯತ್ವದ ಪರೀಕ್ಷೆ ಎಂದರೇನು, ಅದರ ವಿಧಿ-ವಿಧಾನಗಳೇನು, ಇಂತಹ ಪರೀಕ್ಷೆ ಕಾನೂನು ಸಮ್ಮತವೇ, ಇದಕ್ಕೆ ಅನುಮತಿ ನೀಡಬಹುದೇ ಅಥವಾ ನಮ್ಮ ಸಂವಿಧಾನದಲ್ಲಿ ಕೊಡಮಾಡಿದ 21ನೇ ವಿಧಿಯ ವ್ಯಾಖ್ಯಾನದ (Right to Life guaranteed under Article 21 of Constitution of India) ಉಲ್ಲಂಘನೆಗೆ ಈ ಪ್ರಕರಣ ಒಳಪಡುತ್ತದೆಯೇ, ಪತಿಯ ಕೋರಿಕೆಗೆ ಕೋರ್ಟ್‌ ದಾರಿ ಮಾಡಿಕೊಡುತ್ತದೆಯೇ’ ಎಂಬೆಲ್ಲಾ ಸುದೀರ್ಘ ಮಂಥನದಲ್ಲಿ ನನ್ನ ಪಾಲಿನ ಸಮರ್ಥನೆಗಳೇನಿವೆ ಎಂದು ಸಾಕಷ್ಟು ತಡಕಾಡಿದೆ.

ತನ್ನ ಪತ್ನಿಯ ಕನ್ಯತ್ವ ಸಂಶಯಿಸಿದ್ದ ಸೈಯ್ಯದ್‌ ಜಾಫರ್‌, ರೈಲ್ವೆ ಇಲಾಖೆಯಲ್ಲಿ ಧಾರವಾಡದಲ್ಲಿ ಕೆಲಸದಲ್ಲಿದ್ದ. ಪತ್ನಿ ಸಯೀದಾ ಬೇಗಂ ಬಿ.ಎ. ಪದವೀಧರೆ. 30ರ ವಯಸ್ಸಿನ ಜಾಫರ್‌ ಕುಳ್ಳಗೆ ದಷ್ಟಪುಷ್ಟವಾಗಿದ್ದ. ಮೇಲ್ನೋಟಕ್ಕೆ ಸಾಕಷ್ಟು ಆರೋಗ್ಯವಂತನಾಗೇ ಕಾಣುತ್ತಿದ್ದ.

ಸಂಪ್ರದಾಯಸ್ಥರ ಕುಟುಂಬದ ಸಯೀದಾ ಬೇಗಂ ಕೂಡಾ ಚೆಲುವೆ. 26ರ ಪ್ರಾಯಕ್ಕೆ ಒಪ್ಪುವಂತಹ ವಿನೀತ ಭಾವದ ಗಾಂಭೀರ್ಯ ಮಡುಗಟ್ಟಿತ್ತು. ಅವಳ ಬೆಳಗುವ ಕಣ್ಣುಗಳು ಸುಪ್ತ ಜೀವನಶಕ್ತಿಯ ಪ್ರತೀಕ ಎಂಬಂತಿದ್ದವು.

‘ನನ್ನ ಗಂಡ ನನ್ನ ಕನ್ಯತ್ವದ ಪರೀಕ್ಷೆ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದಾನೆ’ ಎಂದು ನನ್ನ ಬಳಿಗೆ ಬಂದ ಬೇಗಂ, ‘ನನ್ನ ದುಃಖದ ಕಥೆ ಪ್ರಸ್ತದ ರಾತ್ರಿಯಿಂದಲೇ ಶುರುವಾಯಿತು. ಆತ ಲೈಂಗಿಕವಾಗಿ ಅಸಮರ್ಥ. ಆದರೆ, ಈಗ ನನ್ನನ್ನೇ ದೂಷಿಸುತ್ತಿದ್ದಾನೆ. ಕೋರ್ಟ್‌ ಕೂಡಾ ನನ್ನನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರ ಬಳಿ ಪರೀಕ್ಷೆಗೆ ಒಳಪಡಬೇಕು ಎಂದು ನಿರ್ದೇಶಿಸಿದೆ. ಇದು ನನಗೆ ಸಾಧ್ಯವಿಲ್ಲ. ಇದನ್ನು ತಪ್ಪಿಸಬೇಕು’ ಎಂದು ಗೋಳಿಟ್ಟರು.

ಇವರ ವಿವಾಹವನ್ನು ಎರಡೂ ಕುಟುಂಬಗಳು ಸಂತೋಷದಿಂದ ಸಂಪ್ರದಾಯಕ್ಕೆ ಅನುಗುಣವಾಗಿಯೇ ನೆರವೇರಿಸಿದ್ದವು.

‘ನನ್ನ ಗಂಡ ನಪುಂಸಕ. ವೈವಾಹಿಕ ಬದುಕಿನ ವಿಷಯಾಸಕ್ತಿಗಳನ್ನು ತೃಪ್ತಿಪಡಿಸಲು ಸಾಧ್ಯವಿಲ್ಲದ (ಷಂಡ) ಮತ್ತು ಜೀವನದ ಕರ್ತವ್ಯಗಳ ನಿರ್ವಹಣೆಯಲ್ಲಿ ಅಶಕ್ತ ಎಂಬ ಕಾರಣದಿಂದ ಸಂಪ್ರದಾಯ ಬದ್ಧವಾಗಿ ನೆರವೇರಿಸಲಾಗಿದ್ದ ಈ ವಿವಾಹಕ್ಕೆ ವಿಚ್ಛೇದನ ನೀಡಬೇಕು’ ಎಂದು (sought for dissolution of marriage) ಕೋರಿ ಬೇಗಂ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಈ ದಾವೆಗೆ ಪ್ರತಿಯಾಗಿ ಕೋರ್ಟ್‌ಗೆ ಉತ್ತರ ನೀಡಿದ್ದ ಜಾಫರ್‌,  ಅರ್ಜಿಯೊಂದನ್ನು ಸಲ್ಲಿಸಿ, ‘ನಾನು ಬೇಗಂಳ ಜೊತೆ ನಡೆಸಿರುವ ಸಂಭೋಗದ ಅನುಭವದಿಂದ ಆಕೆ ಕನ್ಯತ್ವ ಕಳೆದುಕೊಂಡಿದ್ದಾಳೆ. ನಾನು ಷಂಡನಲ್ಲ. ಸಮರ್ಥನಿದ್ದೇನೆ. ಆದ್ದರಿಂದ ನನ್ನ ಪತ್ನಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು. ಆಕೆಯ ಕನ್ಯತ್ವ ನಿರೂಪಿಸಲು ನಿರ್ದೇಶಿಸಿ ಆದೇಶ ನೀಡಬೇಕು’ ಎಂದು ಕೋರಿದ್ದನು.

ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದ ಬೇಗಂ, ‘ಪತ್ನಿಯ ಕನ್ಯತ್ವ ಅಥವಾ ವಿವಾಹ ಪೂರ್ವದಲ್ಲಿ ಸಂಭೋಗದ ಅನುಭವ ಇವೆರಡೂ ಪತಿಯ ಪುರುಷತ್ವ ಅಥವಾ ನಪುಂಸಕತ್ವವನ್ನು ಸಾಬೀತು ಮಾಡಲು ಸಹಕಾರಿಯಾಗಲಾರವು’ ಎಂಬ ಪ್ರತಿವಾದ ಮಂಡಿಸಿದ್ದರು. ಆದಾಗ್ಯೂ, ವಿಚಾರಣಾ ನ್ಯಾಯಾಲಯ ‘ಬೇಗಂ ತನ್ನ ಕನ್ಯತ್ವವನ್ನು ಸಾಬೀತು ಪಡಿಸುವ ಸಲುವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು’ ಎಂಬ ಆದೇಶ ನೀಡಿತ್ತು!

ಈ ಆದೇಶವನ್ನು ಬೇಗಂ ಹೈಕೋರ್ಟ್‌ನಲ್ಲಿ ಪ್ರಶ್ನಿಸಬೇಕಿತ್ತು ಅದಕ್ಕಾಗಿ ನನ್ನನ್ನು ವಕಾಲತ್ತು ವಹಿಸಿ ವಾದ ಮಂಡಿಸುವಂತೆ ಕೋರಿದ್ದರು.

ಅತ್ಯಂತ ಸೂಕ್ಷ್ಮವಾದ ಈ ಪ್ರಕರಣವನ್ನು ಒಲ್ಲದ ಮನಸ್ಸಿನಿಂದಲೇ ಕೈಗೆತ್ತಿಕೊಂಡೆ. ಕನ್ಯತ್ವವನ್ನು ಸಾಬೀತು ಪಡಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಹಾಗೂ ಸಾಂವಿಧಾನಿಕ ಅಂಶಗಳ ಅನ್ವಯ ಏನೆಲ್ಲಾ ಪೂರ್ವೇತಿಹಾಸಗಳು ಕಾನೂನಿನ ಚೌಕಟ್ಟಿನಲ್ಲಿ ಸಿಗಬಹುದು ಎಂದು ಪರಿಶೀಲಿಸಿದೆ.

ಕನ್ಯತ್ವ ಪರೀಕ್ಷಾ ಪ್ರಕ್ರಿಯೆಯ ಪ್ರಮುಖ ಅಂಶವೆಂದರೆ, ‘ಕನ್ಯೆ ಅಥವಾ ಮಹಿಳೆ ಇನ್ನೂ ಕನ್ಯೆಯೇ, ಎಂದಿಗೂ ಸಂಭೋಗ ಕ್ರಿಯೆಯಲ್ಲಿ ತೊಡಗಿಲ್ಲವೇ’ ಎಂಬುದನ್ನು ಕಂಡುಹಿಡಿಯುವ ಒಂದು ವೈದ್ಯಕೀಯ ಪ್ರಕ್ರಿಯೆ. ಈ ಪರೀಕ್ಷೆ ಒಳಗೊಂಡಿರುವ ಗುರುತರವಾದ ಅಂಶವೇನೆಂದರೆ, ‘ಸಂಭೋಗದಿಂದ ಮಾತ್ರವೇ ಕನ್ಯಾಪೊರೆ ಹರಿದಿದೆ ಎಂಬುದು ಕೇವಲ ಗ್ರಹಿಕೆ. ಈ ಗ್ರಹಿಕೆಯು ವೈಜ್ಞಾನಿಕವಾಗಿ ತಪ್ಪು’ ಎಂಬ ಆಧಾರಗಳನ್ನು ಹೆಕ್ಕಿಕೊಂಡೆ.

ಕನ್ಯತ್ವ ಪರೀಕ್ಷಾ ವಿಧಾನ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಭಿನ್ನವಾಗಿದೆ. ಭಾರತದಲ್ಲಿ ಸಾಮಾನ್ಯವಾಗಿ ಕನ್ಯತ್ವ ಪರೀಕ್ಷೆಯನ್ನು ಎರಡು ಬೆರಳುಗಳ ಮೂಲಕ ಪರೀಕ್ಷಿಸಿ, ಯೋನಿನಾಳ ಬಿಗಿ ಇದೆಯೇ ಅಥವಾ ಯೋನಿನಾಳದ ಸ್ನಾಯುಗಳು ಹಿಗ್ಗಿವೆಯೇ ಎಂಬುದನ್ನು ಪರೀಕ್ಷಿಸಿ ಹೇಳುವುದಾಗಿದೆ. ಇದಕ್ಕೆ ಎರಡು ಬೆರಳುಗಳ ಪರೀಕ್ಷೆ (two finger test) ಎಂದೂ ಕರೆಯಲಾಗುತ್ತದೆ (ಈಗ ಇದನ್ನು ನಡೆಸಬಾರದು ಎಂಬ ಸುಪ್ರೀಂ ಕೋರ್ಟ್‌ ಅಭಿಪ್ರಾಯವಿದೆ).

ಆದರೆ ‘ತೀವ್ರತರವಾದ ವ್ಯಾಯಾಮ, ದೈಹಿಕ ಶ್ರಮಗಳಲ್ಲಿ ತೊಡಗಿದಾಗಲೂ ಕನ್ಯಾ ಪೊರೆ ಹರಿದಿರುವ ಸಾಧ್ಯತೆ ಇರುತ್ತದೆ’ ಎಂಬ ಸಂಶೋಧಕರ ಅಂಶಗಳನ್ನು ಖಚಿತಪಡಿಸಿಕೊಂಡೆ.

ಈ ಹಿನ್ನೆಲೆಯಲ್ಲಿ, ಕನ್ಯೆ ಅಥವಾ ಮಹಿಳೆ ಒಮ್ಮೆಯೂ ಪುರುಷರ ಸಂಯೋಗ ಹೊಂದದೆ ಇದ್ದರೂ ಕನ್ಯತ್ವ ಕಳೆದಿದೆ ಎಂಬ ಅಭಿಪ್ರಾಯಗಳನ್ನು ದೃಢಪಡಿಸಿಕೊಂಡೆ.

‘ಸಂವಿಧಾನದ 21ನೇ ವಿಧಿಯ ವ್ಯಾಖ್ಯಾನವು, ದೇಶದ ಪ್ರತಿಯೊಬ್ಬ ಪ್ರಜೆಯ ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ. ಇಂದು ಒಬ್ಬ ಮಹಿಳೆಯನ್ನು ದೈಹಿಕವಾಗಿ ಕನ್ಯತ್ವ ಪರೀಕ್ಷೆಗೆ ಒಳಪಡಿಸುವುದು ಆಕೆಯ ಘನತೆಯನ್ನು ಕುಗ್ಗಿಸುವಂತಹ ಪ್ರಕ್ರಿಯೆಯಾಗಿದೆ. ಇದು ವೈಯಕ್ತಿಕ ಸ್ವಾತಂತ್ರ್ಯದ ಹರಣಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ನನ್ನ ವಾದಕ್ಕೆ ‘ಅಮ್ನೆಸ್ಟಿ ಇಂಟರ್‌ನ್ಯಾಷನಲ್’ ಸಂಸ್ಥೆಯ ನಿರ್ಣಯಗಳು ಬಲ ನೀಡಿದವು.

ಅಮ್ನೆಸ್ಟಿಯು ಪ್ರಮುಖವಾಗಿ ಏಳು ಆಯಕಟ್ಟಿನ ಮಹತ್ವದ ವಿಷಯಗಳ ಜೊತೆ ವ್ಯವಹರಿಸುತ್ತದೆ; ಅವುಗಳೆಂದರೆ, ಮಹಿಳೆಯರ ಹಕ್ಕುಗಳು, ಮಕ್ಕಳ ಹಕ್ಕುಗಳು, ಚಿತ್ರಹಿಂಸೆ ಅಂತ್ಯಗೊಳಿಸುವಿಕೆ, ಮರಣ ದಂಡನೆ ಶಿಕ್ಷೆ ರದ್ದುಪಡಿಸುವುದು, ನಿರಾಶ್ರಿತರ ಹಕ್ಕುಗಳು, ಧರ್ಮಪ್ರಜ್ಞೆಯುಳ್ಳ ಕೈದಿಗಳ ಹಕ್ಕುಗಳು ಹಾಗೂ ಮಾನವ ಕುಲದ ಗೌರವ ರಕ್ಷಣೆ.

‘ಕನ್ಯತ್ವ ಪರೀಕ್ಷೆಯು ಮಹಿಳೆಯ ದೈಹಿಕ ಪರೀಕ್ಷೆಯ ಭಾಗವಾಗಿದ್ದು, ಇದು ಒಂದು ವಿಧದಲ್ಲಿ ಮಹಿಳೆಯ ಮೇಲೆ ಅತಿಕ್ರಮಣವೆನ್ನುತ್ತದೆ’ ಎಂಬ ಅಮ್ನೆಸ್ಟಿ ಅಂಶ ನನ್ನ ಮುಂದಿನ ಚಿಂತನೆಗೆ ಆಶಾ ಕಿರಣವಾಯಿತು.

ನನ್ನ ಮುಂದಿದ್ದ ಕೆಲಸವೆಂದರೆ, ಈ ವೈಜ್ಞಾನಿಕ ಮತ್ತು ಸಾಂವಿಧಾನಿಕ ಅಂಶಗಳನ್ನು ಹೈಕೋರ್ಟ್‌ಗೆ ಮನದಟ್ಟು ಮಾಡಿಕೊಡುವುದಾಗಿತ್ತು.

ಶಾರದಾ ಮತ್ತು ಧರ್ಮಪಾಲ್ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ್ದ ಅಂಶಗಳನ್ನು ನ್ಯಾಯಮೂರ್ತಿ ಅಜಿತ್‌ ಗುಂಜಾಳ್‌ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಸವಿಸ್ತಾರವಾಗಿ ಅರುಹಿದೆ.

‘ಕೌಟುಂಬಿಕ ನ್ಯಾಯಾಲಯಗಳು ಒಬ್ಬ ವ್ಯಕ್ತಿ ವೈದ್ಯಕೀಯ ತಪಾಸಣೆಗೆ ಒಳಪಡಲು ಆದೇಶ ಮಾಡುವ ಅಧಿಕಾರ ಹೊಂದಿವೆ. ಇದು ಸಂವಿಧಾನದ 21ನೇ ವಿಧಿಯಲ್ಲಿನ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆ ಆಗಲಾರದು. ಆದರೆ ಇದು ಪ್ರಕರಣಕ್ಕೆ ತಕ್ಕಂತೆ ಇದೆಯೇ ಇಲ್ಲವೇ ಎಂಬುದನ್ನು ಗಮನಿಸಬೇಕು. ಈ ಅಧಿಕಾರವು ಅಗತ್ಯವಿದ್ದಲ್ಲಿ ಹಾಗೂ ಬಲಯುತ ಕಾರಣಗಳು ಕಂಡುಬಂದಲ್ಲಿ ಮಾತ್ರ ಪ್ರಯೋಗಿಸತಕ್ಕದ್ದು. ಈ ಪ್ರಕರಣದಲ್ಲಿ ಗಂಡಸಿನ ಪುಂಸತ್ವ ಸಿದ್ಧಮಾಡಬೇಕಿದೆ. ಆದರೆ, ಹೆಣ್ಣಿನ ಪರೀಕ್ಷೆ ಸಲ್ಲದು’ ಎಂಬ ಅಂಶವನ್ನು ನ್ಯಾಯಪೀಠಕ್ಕೆ ವಿವರಿಸಿದೆ.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಈ ಪ್ರಕರಣದಲ್ಲಿ ಪ್ರತಿವಾದಿ ಷಂಡನಾಗಿದ್ದು ವಿವಾಹದ ನಂತರ ಹೆಂಡತಿಯನ್ನು ತೃಪ್ತಿಪಡಿಸಬೇಕಾದ ಕರ್ತವ್ಯಗಳ ನಿರ್ವಹಣೆಯಲ್ಲಿ ಅಶಕ್ತನಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಬೇಗಂ ಕನ್ಯೆಯೇ ಅಥವಾ ಇಲ್ಲವೇ ಎಂಬ ವಿಷಯ ಇಲ್ಲಿ ಅಪ್ರಸ್ತುತ. ಹೀಗಾಗಿ ವಿಚಾರಣಾ ನ್ಯಾಯಾಲಯವು ಬೇಗಂ ಅವರ ಕನ್ಯತ್ವ ಪರೀಕ್ಷೆ ಸಲುವಾಗಿ ಸ್ತ್ರೀ ರೋಗ ತಜ್ಞರ ಬಳಿಗೆ ಹೋಗಿ ಎಂದು ಆದೇಶ ನೀಡಬಾರದಾಗಿತ್ತು’ ಎಂಬ ತೀರ್ಪು ನೀಡಿತು. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿತು.

ಈ ಪ್ರಕರಣದ ನಂತರ ಇತ್ತೀಚೆಗೆ 2013ರ ಏಪ್ರಿಲ್‌ 9ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿ.ಎಸ್‌.ಚೌಹಾಣ್‌ ಹಾಗೂ ಎಫ್‌.ಎಂ.ಐ.ಖಲೀಫುಲ್ಲಾ ಅವರಿದ್ದ ವಿಭಾಗೀಯ ನ್ಯಾಯಪೀಠವು, ಲಿಲ್ಲು ಮತ್ತು ಹರಿಯಾಣದ ರಾಜೇಶ್ ವಿರುದ್ಧದ ಪ್ರಕರಣದಲ್ಲಿ ಎರಡು ಬೆರಳಿನ ಪರೀಕ್ಷೆಯನ್ನು ನಡೆಸುವುದು ತರವಲ್ಲ ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದೆ.

‘ಎರಡು ಬೆರಳಿನ ಪರೀಕ್ಷೆ ಮಹಿಳೆಯ ಖಾಸಗಿತನದ ಹಕ್ಕು, ಘನತೆಯ ಹಕ್ಕು, ಗೌರವ, ಖ್ಯಾತಿ ಮತ್ತು ಜೀವದ ಹಕ್ಕಿನ ಉಲ್ಲಂಘನೆಯಾಗುತ್ತದೆ’ ಎಂದು ವ್ಯಾಖ್ಯಾನಿಸಿದೆ.

ಆದೇಶ ಪಡೆದ ನಂತರ ಕೋರ್ಟ್‌ ಹಾಲ್‌ನಿಂದ ಹೊರಬರುತ್ತಿದ್ದಂತೆ ನಿರಾಳ ಭಾವದಲ್ಲಿದ್ದ ಬೇಗಂ, ‘ನನ್ನ ಬದುಕಿನಲ್ಲೀಗ ಹೊಸ ಅರುಣೋದಯವಾಗಿದೆ’ ಎಂದು ಹೇಳಿದಾಗ ಆ ನುಡಿಗಳಿಗೆ ನಾನು ಮೂಕನಾಗಿದ್ದೆ!

(ಹೆಸರು ಬದಲಾಯಿಸಲಾಗಿದೆ)
–ಲೇಖಕ ಹೈಕೋರ್ಟ್‌ನ ಸಿಬಿಐ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT