ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾಯೂರು: ದೇವಳದಲ್ಲಿ ಮದವೇರಿದ ಆನೆ, ಮಾವುತ ಸಾವು

Last Updated 10 ಡಿಸೆಂಬರ್ 2017, 19:38 IST
ಅಕ್ಷರ ಗಾತ್ರ

ತಿರುವನಂತಪುರ/ತ್ರಿಶೂರ್‌: ಕೇರಳದ ಪ್ರಸಿದ್ಧ ಗುರುವಾಯೂರು ಶ್ರೀಕೃಷ್ಣ ದೇವಾಲಯದ ಪ್ರಾಂಗಣದಲ್ಲಿ ಭಾನುವಾರ ಬೆಳಿಗ್ಗೆ ದೇವರ ಬಲಿ ನಡೆಯುತ್ತಿದ್ದಾಗ ದೇವಳದ ಮೂರು ಆನೆಗಳಿಗೆ ಮದವೇರಿ ಅಡ್ಡಾದಿಡ್ಡಿ ಓಡಾಡಿದ್ದರಿಂದ ಆತಂಕದ ಸನ್ನಿವೇಶ ನಿರ್ಮಾಣವಾಯಿತು.

ಮೂರರ ಪೈಕಿ ಶ್ರೀಕೃಷ್ಣನ್‌ ಎಂಬ ಹೆಸರಿನ ಆನೆ ನಡೆಸಿದ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾವುತ ಸುಭಾಷ್‌ (36) ಎಂಬುವವರು ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ.

ಆನೆಯು ಸುಭಾಷ್‌ ಅವರನ್ನು ತನ್ನ ದಾಡೆ ಮತ್ತು ಸೊಂಡಿಲಿನ ಮಧ್ಯೆ ಅದುಮಿ ಹಿಡಿದಿತ್ತು. ಇದರಿಂದಾಗಿ ಅವರ ಶ್ವಾಸಕೋಶಕ್ಕೆ ತೀವ್ರ ಗಾಯವಾಗಿತ್ತು.

ಘಟನೆ ವಿವರ: ದೇವಾಲಯದಲ್ಲಿ ನಡೆಯುವ ಶ್ರೀವೇಲಿ (ಸಿಂಗರಿಸಿರುವ ಆನೆಯ ಮೇಲೆ ದೇವರ ಮೂರ್ತಿ ಇಟ್ಟು ನಡೆಯುವ ಬಲಿ/ಮೆರವಣಿಗೆ) ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ನೂರಾರು ಭಕ್ತರ ಎದುರು ಪ್ರತಿ ದಿನ ಈ ಬಲಿ ನಡೆಯುತ್ತದೆ.

ಭಾನುವಾರ ಬೆಳಿಗ್ಗೆ 7 ಗಂಟೆಗೆ ಬಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಶ್ರೀಕೃಷ್ಣನ್‌ ಆನೆ ಮಾವುತನ ಮೇಲೆ ಎರಗಿತು. ಇದರಿಂದ ಉಂಟಾದ ಗದ್ದಲದಿಂದಾಗಿ ಉಳಿದೆರಡು ಆನೆಗಳೂ ಹುಚ್ಚೆದ್ದು ಓಡಲು ಆರಂಭಿಸಿದವು. ಒಂದು ಆನೆಯು ತನ್ನ ಮೇಲೆ ದೇವರ ಮೂರ್ತಿಯನ್ನು ಹಿಡಿದು ಕುಳಿತಿದ್ದ ಅರ್ಚಕರನ್ನು ನೆಲಕ್ಕೆ ಎಸೆಯಿತು. ಒಂದು ಆನೆ ದೇವಾಲಯ ಸಂಕೀರ್ಣದಿಂದ ಹೊರಗೆ ಓಡಿತು.

ಒಂದು ಗಂಟೆಯ ಬಳಿಕ ಮಾವುತರು ಮೂರೂ ಆನೆಗಳನ್ನು ನಿಯಂತ್ರಿಸಿ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಕೆಲವು ಭಕ್ತರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT