ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ: ಕಾಂಗ್ರೆಸ್‌ನಲ್ಲಿ ಬಲಾಢ್ಯರ ಆಕಾಂಕ್ಷೆ...

Last Updated 11 ಡಿಸೆಂಬರ್ 2017, 6:49 IST
ಅಕ್ಷರ ಗಾತ್ರ

ಬಳ್ಳಾರಿ: ಹಾಲಿ ಶಾಸಕರಿಗೇ ಮಣೆ ಹಾಕುವ ಗಟ್ಟಿ ಸಂಪ್ರದಾಯವುಳ್ಳ ಕಾಂಗ್ರೆಸ್‌ಗೆ ಈ ಬಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಕಾಂಕ್ಷಿಗಳನ್ನು ಸಮಾಧಾನಪಡಿಸುವ ದೊಡ್ಡ ಸವಾಲು ಎದುರಾಗುವ ಸಾಧ್ಯತೆ ಇದೆ. ಹಾಲಿ ಶಾಸಕರೊಂದಿಗೆ ಇಬ್ಬರು ಮಾಜಿ ಶಾಸಕರು ಆಕಾಂಕ್ಷಿಗಳ ಸಾಲಿನಲ್ಲಿರುವುದು ಇದಕ್ಕೆ ಕಾರಣ. ಆ ಹಿನ್ನೆಲೆಯಲ್ಲೇ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆ ಪೂರ್ವ ಸನ್ನಿವೇಶವೇ ಹೆಚ್ಚು ರಂಗೇರಲಿದೆ.

ಶಾಸಕ ಅನಿಲ್‌ ಲಾಡ್‌ ಅವ ರೊಂದಿಗೆ ಮಾಜಿ ಶಾಸಕರಾದ ಎನ್‌.ಸೂರ್ಯ ನಾರಾ ಯಣರೆಡ್ಡಿ ಮತ್ತು ಎಂ.ದಿವಾ ಕರಬಾಬು ಆಕಾಂಕ್ಷಿ ಗಳಾಗಿದ್ದಾರೆ. ಯಾವುದೇ ಪಕ್ಷದಲ್ಲಿ ದ್ದರೂ ಇವರಿಬ್ಬರು ಅದರ ಪ್ರಭಾವದ ಆಚೆಗೆ ತಮ್ಮ ವೈಯಕ್ತಿಕ ವರ್ಚಸ್ಸಿನಿಂದಲೇ ಗಮನ ಸೆಳೆಯುವ ಸಾಮರ್ಥ್ಯವುಳ್ಳವರು ಎಂಬುದು ವಿಶೇಷ. ಈಗಿನ ಶಾಸಕರಿಗಿಂತಲೂ ರಾಜಕೀಯದಲ್ಲಿ ಹೆಚ್ಚು ಅನುಭವವುಳ್ಳ ಮತ್ತು ತಮ್ಮದೇ ಭಿನ್ನ ವ್ಯಕ್ತಿತ್ವಗಳಿಂದ ಮಾಜಿ ಶಾಸಕರು ಬೆಂಬಲಿಗರ ಪಡೆಯನ್ನು ನಿರ್ಮಿಸಿಕೊಂಡಿದ್ದಾರೆ.

ನಗರ ಮತ್ತು ಗ್ರಾಮೀಣ ಪ್ರದೇಶವೆರಡಲ್ಲೂ ರೆಡ್ಡಿ ತಮ್ಮ ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳುವ ಪ್ರಯತ್ನವನ್ನು ನಿರಂತರವಾಗಿ ನಡೆಸಿದ್ದಾರೆ. ದಿವಾಕರಬಾಬು ಅವರೂ ತೆರೆಮರೆಯಲ್ಲೇ, ಹೆಚ್ಚು ಸದ್ದುಗದ್ದಲವಿಲ್ಲದೆ ಕ್ಷೇತ್ರದಲ್ಲಿ ತಮ್ಮ ಪ್ರಭಾವ ಹರಡುವಂತೆ ವ್ಯವಸ್ಥಿತವಾಗಿ ಸಕ್ರಿಯರಾಗಿದ್ದಾರೆ. ಅವರ ಮಗ ಹನುಮ ಕಿಶೋರ್‌ ನಗರ ಜಿಲ್ಲಾ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷರಾಗಿರುವುದು ಅವರ ಶಕ್ತಿಯನ್ನು ಹೆಚ್ಚಿಸಿದೆ.

ಇತ್ತೀಚೆಗಷ್ಟೇ 44ನೇ ಜನ್ಮದಿನವನ್ನು ಆಚರಿಸಿಕೊಂಡಿರುವ ಶಾಸಕ ಅನಿಲ್‌ಲಾಡ್‌ ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿರು ವವರು. ಅವರ ಕುರಿತು ಕ್ಷೇತ್ರದಲ್ಲಿ ತೀವ್ರ ಅಭಿಮಾನವಾಗಲೀ ಅಥವಾ ವಿರೋಧದ ಮಾತಾಗಲೀ ಹೆಚ್ಚು ಕೇಳಿ ಬಂದಿಲ್ಲ. ಆದರೆ ಅವರು ಆಯ್ಕೆಯಾದ ಬಳಿಕ ಕ್ಷೇತ್ರದ ಜನರಿಗೆ ನಿರಂತರ ದೊರಕುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತದೆ. ಅದರಾಚೆಗೆ ಅವರೂ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪೈಪೋಟಿಯು ಟಿಕೆಟ್‌ ವಿತರಣೆ ಸಂದರ್ಭದಲ್ಲಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ಎಲ್ಲ ಸಾಧ್ಯತೆಗಳು ಇವೆ.

ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಪಕ್ಷ ಎಚ್ಚರಿಕೆ ಹೆಜ್ಜೆ ಇಡಬೇಕು ಎಂಬ ಸನ್ನಿವೇಶ ಸೃಷ್ಟಿಯಾಗಿದೆ.

ಸೋಲು–ಗೆಲುವು, ಪಕ್ಷಾಂತರ...

ದಿವಾಕರಬಾಬು ಮತ್ತು ನಾರಾಯಣರೆಡ್ಡಿ ರಾಜಕೀಯ ಜೀವನದಲ್ಲಿ ಸೋಲು–ಗೆಲುವಿಗೂ ಮುಖಾಮುಖಿಯಾಗಿದ್ದಾರೆ. ರೆಡ್ಡಿ ಅವರು ಬಿಜೆಪಿ, ಜೆಡಿಎಸ್‌ ಪಕ್ಷದಲ್ಲಿದ್ದು ನಂತರ ಕಾಂಗ್ರೆಸ್‌ಗೆ ಬಂದಿದ್ದಾರೆ. ದಿವಾಕರಬಾಬು ಸ್ವತಂತ್ರವಾಗಿ ಸ್ಪರ್ಧಿಸಿ ಕಾಂಗ್ರೆಸ್‌ ಅಭ್ಯರ್ಥಿಯನ್ನೇ ಸೋಲಿಸಿದ ದಾಖಲೆಯನ್ನೂ ಮಾಡಿದ್ದಾರೆ.

ಕ್ಷೇತ್ರ ಪುನರ್ ವಿಂಗಡಣೆಗೆ ಮುನ್ನ 1994ರ ಚುನಾವಣೆಯಲ್ಲಿ ದಿವಾಕರ ಬಾಬು ಸ್ವತಂತ್ರವಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ವೆಂಕಟ ಮಹಿಪಾಲ್‌ ಅವರನ್ನು ಸೋಲಿಸಿದ್ದರು. 1999ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಬಿಜೆಪಿಯ ಶ್ರೀರಾಮುಲು ಅವರನ್ನು ಸೋಲಿಸಿದ್ದರು. 2004ರಲ್ಲಿ ಈ ಫಲಿತಾಂಶ ತಿರುಗು–ಮುರುಗಾಗಿತ್ತು.

2008ರಲ್ಲಿ ನಗರ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕ ಬಿಜೆಪಿಯ ಸೋಮಶೇಖರ ರೆಡ್ಡಿ ವಿರುದ್ಧ ಕಾಂಗ್ರೆಸ್‌ನ ಅನಿಲ್‌ಲಾಡ್‌ ಸೋತಿದ್ದರು. 2013ರಲ್ಲಿ ಕಾಂಗ್ರೆಸ್‌ನ ಅನಿಲ್‌ಲಾಡ್‌ ಗೆದ್ದಿದ್ದರು. ಬಿಎಸ್‌ಆರ್‌ಸಿಯ ಮುರಳಿಕೃಷ್ಣ ಸೋತಿದ್ದರು.

1999ರಲ್ಲಿ ಕುರುಗೋಡು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರೆಡ್ಡಿ ಸೋತಿದ್ದರು. 2004ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಗೆದ್ದಿದ್ದರು. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಕುರುಗೋಡು ಕ್ಷೇತ್ರ ರದ್ದಾಯಿತು. ನಂತರ ಅವರು ಸ್ಪರ್ಧಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT