ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಳದಲ್ಲೊಂದು ಕಾಡು ಬೆಳೆಸಿ...

Last Updated 11 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹಳ್ಳಿ ಎಂಬ ಆ ಪುಟ್ಟ ಗ್ರಾಮದ ಮೂರು ಎಕರೆ ಜಾಗದಲ್ಲಿ ಸೂರ್ಯನ ಕಿರಣಗಳು ಭೂಮಿಗೆ ತಾಕದಂತೆ ಆಗಿತ್ತು. ಯಾವುದೋ ದಟ್ಟ ಕಾನನಕ್ಕೆ ಹೊಕ್ಕ ಅನುಭವ. ಒಂದೇ ಕಡೆ ಎಷ್ಟೆಲ್ಲ ಗಿಡಮರಗಳು...

ಸರ್ಕಾರಿ ಗೋಮಾಳವಾಗಿ ಪಾಳು ಬಿದ್ದಿದ್ದ ಜಾಗದಲ್ಲಿ ಅರಣ್ಯ ಚಿಗುರಿಸಿದ ಕಥೆಯನ್ನು ಆ ಗ್ರಾಮದವರೇ ಆದ ಭೂಹಳ್ಳಿ ಪುಟ್ಟಸ್ವಾಮಿ ಬಿಚ್ಚಿಡುತ್ತಾ ಹೋದರು. ದಶಕದ ಹಿಂದಷ್ಟೇ ಈ ಜಾಗದಲ್ಲಿ ನಾಲ್ಕಾರು ಆಲದಮರ ಬಿಟ್ಟರೆ ಮತ್ತೇನು ಇರಲಿಲ್ಲ. ಅವೂ ಇವತ್ತೋ ನಾಳೆಯೋ ಎಂದು ದಿನ ಎಣಿಸುತ್ತಿವೆ ಎಂಬಂಥ ಸ್ಥಿತಿಯಲ್ಲಿ ಇದ್ದವು. ಭೂಮಿ ಬರಡಾಗಿ ಹೋಗಿತ್ತು. ಒಣಗಿದ ನೆಲದಲ್ಲಿ ಹಸಿರು ಚಿಗುರಿಸುವ ಕನಸು ಹೊತ್ತ ಪುಟ್ಟಸ್ವಾಮಿ ಒಂದೊಂದೇ ಗಿಡಗಳನ್ನು ನೆಡುತ್ತಾ ಹೋದರು. ಅವರ ಬೆವರು ಹರಿದಂತೆಲ್ಲ ನೆಲ ಹಸಿರಾಗುತ್ತಾ ಹೋಯಿತು.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಭೂಹಳ್ಳಿ ಗ್ರಾಮದಲ್ಲಿನ ಈ ಗೋಮಾಳ ಇಂದು ದಟ್ಟ ಅರಣ್ಯವಾಗಿ ಪರಿ ವರ್ತನೆ ಹೊಂದಿದೆ. ಬರೋಬ್ಬರಿ 150 ಪ್ರಬೇಧಗಳ ಗಿಡಮರಗಳು ಇಲ್ಲಿ ಬೆಳೆದಿವೆ. ಮೂರು ಎಕರೆ ಭೂಮಿಯಲ್ಲಿ ಸಾವಿರಕ್ಕೂ ಹೆಚ್ಚು ಗಿಡಗಳು ಬೇರೂರಿವೆ.

ಯಾರ ನೆರವನ್ನೂ ನೆಚ್ಚಿಕೊಳ್ಳದೇ ಸ್ವಂತ ಖರ್ಚಿನಲ್ಲಿಯೇ ಕಾಡು ಬೆಳೆಸಲು ಮುಂದಾದ ಪುಟ್ಟಸ್ವಾಮಿ ತಮ್ಮ ಸಂಬಳದ ಬಹುಪಾಲು ಹಣವನ್ನು ಇದಕ್ಕಾಗಿ ವ್ಯಯಿಸಿದ್ದಾರೆ. ರಾಮನಗರ, ಮಂಡ್ಯ, ಹಾಸನದ ಜೊತೆಗೆ ದೂರದ ದೆಹಲಿ, ಉಜ್ಜಯಿನಿ ಹಾಗೂ ಚೆನ್ನೈದಿಂದ ಸಸಿ ಹೊತ್ತು ತಂದು ಪೋಷಿಸಿದ್ದಾರೆ.

‘ಗೋಮಾಳದಲ್ಲಿ ಸಸಿ ನೆಟ್ಟು ಬೆಳೆಸುತ್ತೇನೆ ಎಂದಾಗ ಬೆಂಬಲ ಸಿಕ್ಕಷ್ಟೇ ವಿರೋಧವೂ ವ್ಯಕ್ತವಾಗಿತ್ತು. ಯಾವುದಕ್ಕೂ ಎದೆಗುಂದದೆ ನನ್ನ ಪಾಲಿನ ಕಾರ್ಯ ಮಾಡಿದೆ. ಸಸಿಗಳನ್ನು ಕೊಂಡು ತಂದು ಗುಂಡಿ ಮಾಡಿ ನೆಡತೊಡಗಿದೆ. ನೀರಿನ ಸಂಗ್ರಹಕ್ಕೆಂದು ದೊಡ್ಡದಾದ ಸಂಪ್‌ ನಿರ್ಮಿಸಿ ಅಕ್ಕಪಕ್ಕದ ಹೊಲಗಳಿಂದ ನೀರನ್ನು ದುಡ್ಡುಕೊಟ್ಟು ಪಡೆದು ಉಣಿಸಿದೆ. ವೃತ್ತಿಯಲ್ಲಿ ಉಪನ್ಯಾಸಕನಾಗಿರುವ ಕಾರಣ ನನ್ನ ಶಿಷ್ಯಕೋಟಿಯ ಬೆಂಬಲ ಸಹ ಸಿಕ್ಕಿತು. ಮೊದಲ ಐದು ವರ್ಷ ನಮಗೆ ಈ ಕಾರ್ಯ ಸವಾಲಾಗಿತ್ತು. ಈಗ ಈ ಕಾಡು ತನ್ನನ್ನು ತಾನೇ ಪೋಷಿಸಿಕೊಳ್ಳುತ್ತಿದೆ’ ಎಂದು ಪುಟ್ಟಸ್ವಾಮಿ ತಮ್ಮ ಪರಿಸರಪ್ರಿಯ ಕಾಯಕದ ಪರಿಯನ್ನು ವಿವರಿಸುತ್ತಾ ಹೋದರು.

ಸದ್ಯ ಈ ತಾಣವು ಸುತ್ತಲಿನ ಜನರ ಆಕರ್ಷಣೆಯಾಗಿದೆ. ಗ್ರಾಮಸ್ಥರು ಇಲ್ಲಿಗೆ ಬಂದು ದಣಿವಾರಿಸಿಕೊಳ್ಳುತ್ತಾರೆ. ಆಗಾಗ್ಗೆ ಇಲ್ಲಿ ಉಪನ್ಯಾಸ ಕಾರ್ಯಕ್ರಮಗಳೂ, ಚರ್ಚೆಗಳೂ, ಬೆಳದಿಂಗಳ ಕಾರ್ಯಕ್ರಮಗಳೂ ನಡೆಯುತ್ತಲಿರುತ್ತವೆ. ತಮ್ಮೂರಿನ ವ್ಯಕ್ತಿ ತಮ್ಮ ನೆಲದಲ್ಲೇ ಅರಣ್ಯ ಬೆಳೆಸಿದ ಬಗ್ಗೆ ಇಲ್ಲಿನ ಜನರಿಗೆ ಹೆಮ್ಮೆಯಿದೆ.

ಪ್ರಾಣಿ–ಪಕ್ಷಿಗಳಿಗೆ ಆಶ್ರಯ: ಹತ್ತಾರು ಬಗೆಯ ಪ್ರಾಣಿ ಪಕ್ಷಿಗಳಿಗೆ ಈ ಜಾಗ ಆಶ್ರಯ ನೀಡಿದೆ. ಪಕ್ಷಿಗಳ ಕಲರವ ನಿರಂತರವಾಗಿರುತ್ತದೆ. ಅವುಗಳಿಗೆ ಆಹಾರದ ಸಲುವಾಗಿ ಸೀಬೆ, ಸಪೋಟ, ಸೀತಾಫಲ, ನೇರಳೆ ಸಹಿತ ಹತ್ತಾರು ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಸುಮಾರು ಆರು ಅಡಿ ಎತ್ತರದ ಪಿಲ್ಲರ್‌ ಕಟ್ಟಿ ಅದರ ಮೇಲೆ ಸಣ್ಣ ತೊಟ್ಟಿಗಳನ್ನು ಇಡಲಾಗಿದೆ. ಅಲ್ಲಿನ ನೀರು ಪಕ್ಷಿಗಳ ದಾಹ ತಣಿಸತೊಡಗಿದೆ.

ಅಲ್ಲಲ್ಲಿ ಜೇನುಗಳು ಗೂಡು ಕಟ್ಟಿಕೊಂಡಿವೆ. ನವಿಲು, ಮೊಲ, ಮುಂಗುಸಿ, ಹಾವುಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಆಗಾಗ್ಗೆ ಚಿರತೆ, ಕರಡಿ ಬಂದು ಹೋದದ್ದೂ ಉಂಟು ಎಂದು ಸ್ಥಳೀಯರು ಹೇಳಿದರು. ಇಲ್ಲಿನ ಯಾವ ಉತ್ಪನ್ನವೂ ಹೊರಹೋಗದಂತೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಮುರಿದು ಬಿದ್ದ ಟೊಂಗೆಗಳು, ಒಣಗಿ ಧರೆಗುರುಳಿದ ಮರಗಳು ಇಲ್ಲಿಯೇ ಉಳಿದಿವೆ. ಉದುರಿದ ಎಲೆಗಳು ಕೊಳೆತು ಗೊಬ್ಬರವಾಗುತ್ತಿವೆ.

ಬುದ್ಧೇಶ್ವರ ಪ್ರತಿಮೆಯ ವೈಶಿಷ್ಟ: ಈ ಪ್ರದೇಶಕ್ಕೆ ವಿಶೇಷ ಮೆರುಗು ನೀಡುವ ಸಲುವಾಗಿ ಪುಟ್ಟಸ್ವಾಮಿ ಇಲ್ಲೊಂದು ವಿಶೇಷ ಪ್ರತಿಮೆಯನ್ನು ಕೆತ್ತಿಸಿ ನಿಲ್ಲಿಸಿದ್ದಾರೆ. ‘ಬುದ್ಧೇಶ್ವರ’ ಎನ್ನುವ ಇದರ ಕಲ್ಪನೆಯೇ ವಿಶಿಷ್ಟವಾಗಿದೆ. ಅರ್ಧ ಭಾಗ ಬುದ್ಧನಾಗಿ, ಮತ್ತರ್ಧ ಭಾಗ ಈಶ್ವರನಾಗಿ ಇದನ್ನು ಕೆತ್ತಲಾಗಿದೆ. ‘ಇದೊಂದು ಅಮೂರ್ತ ಬಗೆಯ ಕಲ್ಪನೆ. ವ್ಯಕ್ತಿತ್ವದಲ್ಲಿ ಈ ಇಬ್ಬರಿಗೂ ಸಾಮ್ಯತೆ ಇದೆ. ಇಬ್ಬರೂ ಧ್ಯಾನಕ್ಕೆ ಹೆಸರಾದವರು. ಹೀಗಾಗಿ ಇಬ್ಬರನ್ನೂ ಒಳಗೊಂಡು ಈ ಮೂರ್ತಿ ನಿರ್ಮಾಣಗೊಂಡಿದೆ’ ಎಂದು ಅವರು ವಿವರಿಸಿದರು. ಇದಕ್ಕಾಗಿ ಅವರು ಬರೋಬ್ಬರಿ ₹5 ಲಕ್ಷ ವ್ಯಯಿಸಿದ್ದಾರೆ. ಈ ಮೊದಲು ಈ ಜಾಗಕ್ಕೆ ‘ಕವಿ ವನ’ ಎಂದು ಹೆಸರಿಟ್ಟಿದ್ದು, ಈಗ ಅದನ್ನು ‘ಬುದ್ಧೇಶ್ವರ ಧಾಮ’ ಎಂದು ಮರು ನಾಮಕರಣ ಮಾಡಲಾಗಿದೆ.

ವನಪಾಲಕರಾಗಿಯೂ ಸೇವೆ: ಪುಟ್ಟಸ್ವಾಮಿ ಅವರ ಸೇವೆ ಕೇವಲ ಒಂದು ವನ ಬೆಳೆಸಲು ಸೀಮಿತವಾಗಿಲ್ಲ. ಚನ್ನಪಟ್ಟಣ ನಗರದ ಸಾರ್ವಜನಿಕ ಉದ್ಯಾನಗಳನ್ನು ಹಸಿರುಮಯವಾಗಿಸಲು ಅವಿರತ ದುಡಿಯುತ್ತಿದ್ದಾರೆ. ಜಾಗ ಖಾಲಿ ಇರುವ ಕಡೆಯೆಲ್ಲ ಸಸಿಗಳನ್ನು ನೆಟ್ಟು, ಪೋಷಿಸುತ್ತಾ ಬಂದಿದ್ದಾರೆ. ರಸ್ತೆ ಬದಿಗಳಲ್ಲಿಯೂ ಗಿಡ–ಮರಗಳನ್ನು ಬೆಳೆಸುತ್ತಾ ಬಂದಿದ್ದಾರೆ.

ಚನ್ನಪಟ್ಟಣ–ಸಾತನೂರು ರಸ್ತೆಯಲ್ಲಿರುವ ‘ಜಿವೇಶ್ವರ ವನ’ದಲ್ಲಿ ಕೇವಲ ಮೂರು ವರ್ಷದ ಹಿಂದೆ ನೆಟ್ಟಿರುವ ನೂರಾರು ಸಸಿಗಳು ಇಂದು ಆಳೆತ್ತರಕ್ಕೆ ಬೆಳೆದಿವೆ. ಕೆಲವು ತಿಂಗಳ ಹಿಂದಷ್ಟೇ ಸಮಾನ ಮನಸ್ಕರ ಜೊತೆಗೂಡಿ ಇದರ ಜನ್ಮದಿನವನ್ನೂ ಆಚರಿಸಿದ್ದಾರೆ.

ಚನ್ನಪಟ್ಟಣದ ನಾಲ್ಕಾರು ಕಡೆಗಳಲ್ಲಿ ಇಂತಹದ್ದೇ ಉದ್ಯಾನಗಳಲ್ಲಿ ಅವರು ಸಸಿಗಳನ್ನು ಬೆಳೆಸತೊಡಗಿದ್ದಾರೆ. ನಮ್ಮ ನಾಡಿನ ಇತಿಹಾಸವನ್ನು ನೆನಪಿಸುವಂತೆ ಈ ಉದ್ಯಾನಗಳಿಗೆ ಒಂದೊಂದು ಹೆಸರಿಟ್ಟಿದ್ದಾರೆ. ಪುಲಿಕೇಶಿ ವನ, ನೃಪತುಂಗ ವನ, ಕದಂಬ ವನ, ಹೊಯ್ಸಳ ವನ, ಕನ್ನಡ ವನ, ಪಂಪ ವನವೆಂಬ ಹೆಸರಿನಲ್ಲಿ ಈ ಉದ್ಯಾನಗಳನ್ನು ಗುರುತಿಸಲಾಗುತ್ತಿದೆ.

ಇವರ ಪರಿಸರ ಪ್ರಿಯ ಕೆಲಸಗಳಲ್ಲಿ ಅವರ ವಿದ್ಯಾರ್ಥಿಗಳು ನೆರವಾಗುತ್ತಿದ್ದಾರೆ. ಕರೆದಾಗ ಬಂದು, ಗುಂಡಿ ತೋಡಿ ಗಿಡ ನೆಟ್ಟು ನೀರು ಹಾಕಿ ಹೋಗುವ, ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಶಿಷ್ಯ ಪಡೆ ಇವರ ಬೆನ್ನಿಗಿದೆ. ಅವರ ಶ್ರಮವನ್ನು ನೆನೆಯುವ ಸಲುವಾಗಿ ಉದ್ಯಾನವೊಂದಕ್ಕೆ ‘ವಿದ್ಯಾರ್ಥಿ ವನ’ ಎಂದೇ ಹೆಸರಿಡಲಾಗಿದೆ. ಮಾತ್ರವಲ್ಲ, ಅಲ್ಲಿನ ಕೆಲವು ಮರಗಳಿಗೆ ನೆಚ್ಚಿನ ವಿದ್ಯಾರ್ಥಿಗಳ ಹೆಸರನ್ನೇ ನಾಮಕರಣ ಮಾಡಲಾಗಿದೆ.

ಬೇಸಿಗೆಯಲ್ಲಿ ಉದ್ಯಾನದ ಸಸಿಗಳು ಒಣಗುವಾಗ ಸ್ವಂತ ಖರ್ಚಿನಲ್ಲಿ ಹತ್ತಾರು ಟ್ಯಾಂಕರ್ ನೀರು ಖರೀದಿಸಿ ಉಣಿಸಿದ್ದಾಗಿ ಪುಟ್ಟಸ್ವಾಮಿ ಹೇಳಿದರು. ಸದ್ಯ ನಿವೃತ್ತಿ ಜೀವನ ನಡೆಸುತ್ತಿರುವ ಅವರು ಬರುವ ಪಿಂಚಣಿ ಹಣದ ಜೊತೆಗೆ ಉಳಿತಾಯದ ಹಣವನ್ನೂ ಈ ಕಾರ್ಯಕ್ಕಾಗಿ ವಿನಿಯೋಗಿಸುತ್ತಿದ್ದಾರೆ.



‘ಉಪನ್ಯಾಸಕನಾಗಿ, ಲೇಖಕನಾಗಿ ನನ್ನನ್ನು ಗುರುತಿಸಿಕೊಂಡಿದ್ದರೂ ಎಲ್ಲಕ್ಕಿಂತ ಪರಿಸರ ಸ್ನೇಹಿ ಕಾರ್ಯಗಳು ಹೆಚ್ಚು ಖುಷಿ ಕೊಡುತ್ತಿವೆ. ಕಾಡು ಬೆಳೆಸುವುದರಿಂದ ನಮಗಷ್ಟೇ ಅಲ್ಲದೆ ಇಡೀ ಜೀವರಾಶಿಗೆ ಅನುಕೂಲವಿದೆ. ಪರಿಸರದಲ್ಲಿನ ಉಷ್ಣಾಂಶ ಇಳಿಯದ ಹೊರತು ಈ ಭೂಮಿ ಹೆಚ್ಚು ದಿನ ಬದುಕಲಾರದು. ಗಿಡ–ಮರಗಳನ್ನು ನೆಟ್ಟು ಬೆಳೆಸುವ ಮೂಲಕ ನಾವು ಈ ಭೂಮಿಯ ಋಣ ತೀರಿಸಬೇಕಿದೆ’ ಎಂದು ಹೇಳಿದರು ಪುಟ್ಟಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT