ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ಇಲ್ಲದ ಎಂಜಿನಿಯರಿಂಗ್ ಕಾಲೇಜು ಮುಚ್ಚಿ: ವಜುಭಾಯಿ ವಾಲಾ

Last Updated 11 ಡಿಸೆಂಬರ್ 2017, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಮೂಲಸೌಕರ್ಯಗಳು ಮತ್ತು ಬೋಧಕ ಸಿಬ್ಬಂದಿ ಕೊರತೆ ಇರುವಂತಹ ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಿಬಿಡಿ’ ಎಂದು ರಾಜ್ಯಪಾಲ ವಜುಭಾಯಿ ವಾಲಾ ಸೂಚನೆ ನೀಡಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಶೃಂಗಸಭೆಯಲ್ಲಿ ಅವರು ಮಾತನಾಡಿದರು.

‘ಶೇ 50ರಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆ ಇದೆ. ಈ ಕಾರಣದಿಂದ ಕಾಲೇಜುಗಳೂ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಈ ವರ್ಷದ ವಿದ್ಯಾರ್ಥಿಗಳ ಹಾಜರಾತಿ ಮತ್ತು ಕಾಲೇಜಿನಲ್ಲಿನ ಸೌಲಭ್ಯಗಳನ್ನು ಗಮನಿಸಬೇಕು. ಎಲ್ಲಿ ಸೌಲಭ್ಯಗಳು ಇಲ್ಲವೋ ಅದು ಸರ್ಕಾರಿ, ಅನುದಾನಿತ, ಖಾಸಗಿ ಕಾಲೇಜು ಆಗಿದ್ದರೂ ಸರಿ ಅದನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಿದರು.

ಕಾಲೇಜುಗಳ ಆಡಳಿತ ಮಂಡಳಿಗಳು ಪ್ರತಿ ಒಂದು ಅಥವಾ ಎರಡು ತಿಂಗಳಿಗೊಮ್ಮೆ ವಿದ್ಯಾರ್ಥಿಗಳ ಸಭೆ ನಡೆಸಬೇಕು. ಅವರಿಗೆ ಯಾವ ರೀತಿಯ ಶಿಕ್ಷಣ ಅಗತ್ಯ, ಏನು ಸೌಲಭ್ಯಗಳು ಬೇಕು ಎಂಬುದನ್ನು ಕೇಳಿ ಅದನ್ನು ಒದಗಿಸಬೇಕು ಎಂದು ಸಲಹೆ ನೀಡಿದರು.

ಕೃಷಿ ಮತ್ತು ತಾಂತ್ರಿಕ ವಿಶ್ವವಿದ್ಯಾಲಯಗಳು ದೇಶದ ಬೆನ್ನೆಲುಬು ಇದ್ದಂತೆ. ಕೃಷಿಯಲ್ಲಿ ಬೆಳವಣಿಗೆ ಸಾಧಿಸಬೇಕಾದರೆ ಕೃಷಿ ಕ್ಷೇತ್ರದಲ್ಲಿ ಉತ್ತಮ ತಂತ್ರಜ್ಞರು ಬಂದು ಬದಲಾವಣೆ ತರಬೇಕು. ದೇಶದಲ್ಲಿ ಔದ್ಯಮಿಕ ಕ್ಷೇತ್ರ ಬೆಳೆಯಬೇಕಾದರೆ ತಾಂತ್ರಿಕ ವಿಶ್ವವಿದ್ಯಾಲಯಗಳು ಉತ್ತಮ ತಂತ್ರಜ್ಞರನ್ನು ನಿರ್ಮಿಸಬೇಕು ಎಂದು ಹೇಳಿದರು.

ವಿ.ವಿಗಳಲ್ಲಿ ನೇಮಕಾತಿ ಆಗಲಿ: ವಿಶ್ವವಿದ್ಯಾಲಯಗಳು ಗುಣಮಟ್ಟದ ಶಿಕ್ಷಣ ನೀಡಬೇಕಾದರೆ ಅಗತ್ಯ ಬೋಧಕ ಸಿಬ್ಬಂದಿ ಇರಬೇಕು. ಈ ಕಾರಣದಿಂದ ಎಲ್ಲಿ ಬೋಧಕ ಸಿಬ್ಬಂದಿ ಕೊರತೆ ಇದೆಯೋ ಆ ವಿಶ್ವವಿದ್ಯಾಲಯಗಳ ಕುಲಪತಿಗಳು ಅಲ್ಲಿಯೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆದ ರಾಜ್ಯಪಾಲರು ಸೂಚನೆ ನೀಡಿದರು.

ಖಾಸಗಿ ಕಾಲೇಜಿನಲ್ಲಿ ಯಾವುದಾದರೂ ಉಪಕರಣ ಹಾಳಾದರೆ ಕೂಡಲೇ ಬದಲಾಯಿಸುತ್ತಾರೆ. ಆದರೆ, ಸರ್ಕಾರಿ ಕಾಲೇಜುಗಳಲ್ಲಾದರೆ ವರದಿ ಸಿದ್ಧಪಡಿಸಿ, ಸರ್ಕಾರಕ್ಕೆ ಕಳುಹಿಸಿ, ಟೆಂಡರ್ ಕರೆದು, ಪೂರೈಕೆ ಆಗುವುದರೊಳಗೆ ಎಂಟು–ಹತ್ತು ತಿಂಗಳಾಗುತ್ತದೆ. ಇಂತಹ ವಿಳಂಬದಿಂದಾಗಿ ವಿದ್ಯಾರ್ಥಿಗಳು ಅಗತ್ಯ ಸೌಲಭ್ಯಗಳಿಂದ ವಂಚಿತ ಆಗುತ್ತಾರೆ. ಇದನ್ನು ತಪ್ಪಿಸಬೇಕಾದರೆ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆಯೊಂದನ್ನು ಹೊರತುಪಡಿಸಿ ಇತರೆ ವಿಧಾನಗಳಲ್ಲಿ ಬದಲಾಯಿಸಿಕೊಳ್ಳುವ ಅಗತ್ಯ ಇದೆ ಎಂದು ಹೇಳಿದರು.

ನೇಮಕಾತಿಗೆ ಅವಕಾಶ ನೀಡಲಾಗಿದೆ: ಡಾ.ಕರಿಸಿದ್ದಪ್ಪ
‘ವಿಶ್ವವಿದ್ಯಾಲಯಗಳ ನೇರ ನೇಮಕಾತಿಗೆ ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ’ ಎಂದು ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಹೇಳಿದರು.

‘ವಿಶ್ವವಿದ್ಯಾಲಯಗಳಿಗೆ ಅಗತ್ಯ ಇದ್ದರೆ ಸಿಬ್ಬಂದಿ ನೇಮಕ ಮಾಡಿಕೊಳ್ಳಬಹುದು ಎಂದು ಸೂಚಿಸಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಳೆದ ವಾರ ಸುತ್ತೋಲೆ ಕಳುಹಿಸಿದೆ’ ಎಂದು ಅವರು ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ನೇಮಕಾತಿ ಪ್ರಕ್ರಿಯೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಹೊಸ ನಿಯಮಾವಳಿಗಳನ್ನು ನೀಡಿದೆ. ಇದರ ಅನುಗುಣವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿದೆ. ವಿಟಿಯುನಲ್ಲಿ ಈಗಾಗಲೇ ನೇಮಕಾತಿ ಮಾಡಲಾಗಿದೆ. ಅಗತ್ಯ ಹುದ್ದೆಗಳಿಗೆ ಮತ್ತೆ ಮುಂದೆ ನೇಮಕಾತಿ ನಡೆಸಲಾಗುವುದು’ ಎಂದು ಕರಿಸಿದ್ದಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT