ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೋಷಣೆಯೆಂಬ ಕತ್ತಲೆಗೆ ಬುದ್ಧನೇ ಬೆಳಕು’

Last Updated 12 ಡಿಸೆಂಬರ್ 2017, 8:39 IST
ಅಕ್ಷರ ಗಾತ್ರ

ಇಳಕಲ್: ‘ಬೌದ್ಧ ಸಂಪ್ರದಾಯದಂತೆ ಸಾಮೂಹಿಕ ಮಂಗಲ ಪರಿಣಯ (ಮದುವೆ) ಕಾರ್ಯಕ್ರಮ ಆಯೋಜಿಸಿ, ಶೋಷಣೆ, ಬಡತನಕ್ಕೆ ಕಾರಣವಾದ ಸಂಪ್ರದಾಯ, ಮೌಢ್ಯಗಳ ಬಗ್ಗೆ ದಲಿತರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಬುದ್ಧನ ತತ್ವಾದರ್ಶಗಳನ್ನು ಪ್ರಚುರಪಡಿಸಲು ಇನ್ನೂ ಹೆಚ್ಚು ಕಾರ್ಯಕ್ರಮ ನಡೆಯಬೇಕು’ ಎಂದು ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ ಅಭಿಪ್ರಾಯಪಟ್ಟರು.

ನಗರದ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಸೇವಾ ಸಮಿತಿಯು ಸೋಮವಾರ ಇಲ್ಲಿನ ಅಂಬೇಡ್ಕರ್ ಭವನ ನಿರ್ಮಾಣದ ವಾರ್ಷಿಕೊತ್ಸವದ ಅಂಗವಾಗಿ ಆಯೋಜಿಸಿದ ಬೌದ್ಧ ಸಂಪ್ರದಾಯದ 16 ಜೋಡಿಗಳ ಉಚಿತ ಸಾಮೂಹಿಕ ಮಂಗಲ ಪರಿಣಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಜಾಪರಿವರ್ತನೆ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪರಶುರಾಮ ಮಹಾರಾಜನವರ ಮಾತನಾಡಿ, ‘ಧರ್ಮ, ದೇವರ ಹೆಸರಿನಲ್ಲಿ ಮನುವಾದಿಗಳು ಸಮಾಜದಲ್ಲಿ ಶೋಷಣೆ, ಅಶಾಂತಿ ಹುಟ್ಟು ಹಾಕುತ್ತಿದ್ದಾರೆ. ಇದನ್ನು ಎದುರಿಸಲು ಬುದ್ಧನ ಅಷ್ಟಾಂಗ ಮಾರ್ಗ ಹಾಗೂ ಪಂಚಶೀಲಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣ, ಹೋರಾಟ ಹಾಗೂ ಸಂಘಟನೆಯ ಮೂಲಕ ಎಲ್ಲ ಅಡತಡೆಗಳನ್ನು ದಾಟಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು’ ಎಂದರು.

‘ಬಾಬಾಸಾಹೇಬರು ಬೌದ್ಧ ಧರ್ಮ ಸ್ವೀಕರಿಸಿದ್ದು ಮತಾಂತರ ಅಲ್ಲ. ಅದು ಮನೆಗೆ ಮರಳಿದ ಪ್ರಕ್ರಿಯೆ. ಈ ನೆಲದಲ್ಲಿ ಅರಳಿ, ಪ್ರೀತಿ ಹಂಚಿದ ಧರ್ಮದ ಸವಿಯನ್ನು ಅನುಭವಿಸಬೇಕಾದರೇ ಮೊದಲು ಹಿಂದೂ ಧರ್ಮದ ಎಲ್ಲ ಮೌಢ್ಯಗಳನ್ನು ತ್ಯಜಿಸಬೇಕು ಎಂದರು. ಮಾಂಗಲ್ಯ ಕಟ್ಟುವುದು ಸಾಂಕೇತಿಕ ಅಷ್ಟೇ. ಮನಸ್ಸು ಕಟ್ಟುವುದು ನಿಜವಾದ ಮದುವೆ. ಪ್ರೀತಿ, ಕರುಣೆ, ನಂಬಿಕೆಯ ತಳಹದಿಯ ಮೇಲೆ ವಧು ವರರು ಮನಸ್ಸು ಕಟ್ಟಿಕೊಳ್ಳಬೇಕು’ ಎಂದು ಹೇಳಿದರು.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಡಾ.ವನಿತಾ ತೊರವಿ ಮಾತನಾಡಿ, ‘ಬೌದ್ಧ ಧರ್ಮ ಮೌಢ್ಯ, ಆಡಂಬರಗಳನ್ನು ತಿರಸ್ಕರಿಸಿ, ಸರಳತೆ ಬೋಧಿಸುವ ವೈಜ್ಞಾನಿಕ ಧರ್ಮ. ಸರಳತೆಯಿಂದ ನೆಮ್ಮದಿ, ಸ್ವಾತಂತ್ರ್ಯ, ಸಬಲತೆ ದೊರೆಯುತ್ತದೆ. ಈ ಧರ್ಮದಲ್ಲಿ ದೇವರಿಲ್ಲ, ಗುರು ಇದ್ದಾನೆ. ಬಾಬಾಸಾಹೇಬ್ ಅಂಬೇಡ್ಕರ್‌ ಸೇವಾ ಸಮಿತಿಯವರು ಬುದ್ಧನ ಬೆಳಕು ತೋರಿಸಿದ್ದಾರೆ. ಅನುಸರಿಸಿ ಬದುಕನ್ನು ಸುಂದರಗೊಳಿಸಿಕೊಳ್ಳಬೇಕು’ ಎಂದರು.

ಬೀದರ್‌ ಜಿಲ್ಲೆ ಅಣದೂರ ಬೌದ್ಧ ಅಧ್ಯಯನ ಕೇಂದ್ರದ ಸಂಘಪಾಲ್‌ ಬಂತೇಜಿ ಮಾತನಾಡಿ ‘ಬುದ್ಧ ಹಾಗೂ ಅಂಬೇಡ್ಕರ್‌ರನ್ನು ದೇವರೆಂದು ಭಾವಿಸಿ ಪೂಜಿಸಿದರೇ ಪ್ರಯೋಜನವಿಲ್ಲ. ಅವರನ್ನು ಅಧ್ಯಯನ ಮಾಡಿ, ಅವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜೀವನದ ಪ್ರತಿ ನಡೆಯಲ್ಲೂ ಬೌದ್ಧ ಧಮ್ಮ ಬಂದಾಗ ಮಾತ್ರ ಅಜ್ಞಾನ ಕಡಿಮೆಯಾಗಿ ಬೆಳಕಿನೆಡೆಗೆ ಸಾಗುವಿರಿ’ ಎಂದರು.

ಸಿದ್ದಣ್ಣ ಆಮದಿಹಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಪೌರಾಯುಕ್ತ ಅರವಿಂದ ಜಮಖಂಡಿ, ಅಂಬೇಡ್ಕರ್‌ ಸೇವಾ ಸಮಿತಿಯ ಅಧ್ಯಕ್ಷೆ ಸಾವಿತ್ರಿ ಕೋಟೆಗಾರ ನಗರಸಭೆ ಸದಸ್ಯರಾದ ಶೋಭಾ ಆಮದಿಹಾಳ, ಮಂಜುನಾಥ ಹೊಸಮನಿ, ಹುಬ್ಬಳ್ಳಿ ಶಹರದ ಸಿಪಿಐ ರತನ್‌ಕುಮಾರ ಜೀರಗಾಳ ಉಪಸ್ಥಿತರಿದ್ದರು.

* * 

ಬೌದ್ಧ ಧಮ್ಮ ಅನುಸರಿಸುವ ಪ್ರಮಾಣ ಮಾಡಿ ಅಯ್ಯಪ್ಪನನ್ನು, ಯಲ್ಲವ್ವನ್ನು ಹುಡುಕಿಕೊಂಡು ಶಬರಿಮಲೈಗೆ, ಯಲ್ಲಮ್ಮನಗುಡ್ಡಕ್ಕೆ ಹೋದರೆ ಅದು ಬುದ್ಧನಿಗೆ, ಅಂಬೇಡ್ಕರ್‌ಗೆ ಮಾಡಿದ ದ್ರೋಹ
ಪರಶುರಾಮ ಮಹಾರಾಜನವರ, ರಾಜ್ಯ ಪ್ರಧಾನ ಕಾರ್ಯದರ್ಶಿ,
ಪ್ರಜಾಪರಿವರ್ತೆನೆ ವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT