ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರಂಜನಮೂರ್ತಿಗೆ ಬಿಜೆಪಿ ಬೆಂಬಲ’

Last Updated 12 ಡಿಸೆಂಬರ್ 2017, 9:10 IST
ಅಕ್ಷರ ಗಾತ್ರ

ಚಾಮರಾಜನಗರ: ಜೂನ್‌ನಲ್ಲಿ ನಡೆಯಲಿರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಅಭ್ಯರ್ಥಿ ಬಿ. ನಿರಂಜನಮೂರ್ತಿ ಅವರಿಗೆ ಬಿಜೆಪಿ ಬೆಂಬಲ ವ್ಯಕ್ತಪಡಿಸಿದೆ. ‘ವಿಧಾನಸಭೆ ಚುನಾವಣೆ ಮುಗಿದ ಬಳಿಕ ಪರಿಷತ್‌ಗೆ ಪದವೀಧರ ಕ್ಷೇತ್ರದ ಚುನಾವಣೆ ನಡೆಯಲಿದೆ. ಶಿಕ್ಷಣ ಮತ್ತು ಶಿಕ್ಷಕರಿಗೆ ಸಂಬಂಧಿಸಿದ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ನಿರಂಜನಮೂರ್ತಿ ಅವರಿಗೆ ಪಕ್ಷ ಬೆಂಬಲ ನೀಡಲಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳನ್ನು ನಿರಂಜನಮೂರ್ತಿ ಪ್ರತಿನಿಧಿಸಲಿದ್ದಾರೆ. ಹಲವು ವರ್ಷಗಳಿಂದ ಶಿಕ್ಷಕರಾಗಿ, ಸಂಘಟನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಅವರು ಶಿಕ್ಷಣ ವಲಯದಲ್ಲಿ ಹೆಚ್ಚು ಪರಿಚಿತರಾಗಿದ್ದಾರೆ. ಅವರಿಗೆ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಲ್ಕು ಜಿಲ್ಲೆಗಳಿಂದ ಇದುವರೆಗೂ 6,481 ಶಿಕ್ಷಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯಿಂದ 541 ಮತದಾರರಿದ್ದಾರೆ. ಅದರಲ್ಲಿ ಚಾಮರಾಜನಗರ ತಾಲ್ಲೂಕಿನಿಂದ 241, ಗುಂಡ್ಲುಪೇಟೆಯಿಂದ 103, ಯಳಂದೂರಿನ 81, ಕೊಳ್ಳೇಗಾಲ 83 ಮತ್ತು ಹನೂರು 33 ಶಿಕ್ಷಕರು ನೋಂದಣಿಯಾಗಿದ್ದಾರೆ. ಇವರಲ್ಲಿ 394 ಪುರುಷರು ಹಾಗೂ 147 ಮಹಿಳಾ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ಮತದಾರರ ನೋಂದಣಿಗೆ 21ರವರೆಗೆ ಸಮಯವಿದ್ದು, ಕನಿಷ್ಠ 500–600 ಶಿಕ್ಷಕರ ನೋಂದಣಿ ನಡೆಯಲಿದೆ. ಪಕ್ಷದ ವತಿಯಿಂದ ಪ್ರಚಾರ ನಡೆಸಿ ಶಿಕ್ಷಕರ ನೋಂದಣಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಅಭ್ಯರ್ಥಿ ನಿರಂಜನಮೂರ್ತಿ ಮಾತನಾಡಿ, ‘ನಾನು ನಂಜನಗೂಡಿನವನು. ಮೈಸೂರಿನಲ್ಲಿ ಎಂ.ಎ ಪದವಿ ಮುಗಿಸಿ ಉಪನ್ಯಾಸಕನಾಗಿ ಮತ್ತು ಸಹಾಯಕ ಪ್ರಾಧ್ಯಾಪಕನಾಗಿ ವೃತ್ತಿ ಅನುಭವ ಪಡೆದುಕೊಂಡಿದ್ದೇನೆ. 2010ರಿಂದ ಜೆಎಸ್‌ಎಸ್‌ ಮಹಾವಿದ್ಯಾಲಯದ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ. ಮಾಧ್ಯಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷನಾಗಿ ಶಿಕ್ಷಕರ ಪರವಾಗಿ ಶ್ರಮಿಸಿದ್ದೇನೆ’ ಎಂದರು.

‘18 ವರ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸದಸ್ಯರು ಶಿಕ್ಷಣಕ್ಕೆ ಕ್ಷೇತ್ರಕ್ಕೆ ಸಂಬಂಧಿಸಿದವರಲ್ಲ. ಅವರಿಂದ ಶಿಕ್ಷಕರಿಗೆ ಯಾವ ಉಪಯೋಗವೂ ಆಗಿಲ್ಲ. ಶಿಕ್ಷಕರ ಮತ್ತು ಶಿಕ್ಷಣ ವಲಯದ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಇದರಿಂದ ಅನೇಕ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ’ ಎಂದು ಆರೋಪಿಸಿದರು.

ಅರೆಕಾಲಿಕ ಶಿಕ್ಷಕರ ಕಾಯಮ್ಮಾತಿ ಮಾಡುತ್ತಿಲ್ಲ. ನಿವೃತ್ತ ಶಿಕ್ಷಕರ ಹುದ್ದೆ ಹಾಗೆಯೇ ಖಾಲಿ ಉಳಿಯುತ್ತಿವೆ. ಇದರಿಂದ ಅರ್ಹ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ವೃತ್ತಿ ಭದ್ರತೆ ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು ಸರ್ಕಾರದ ಜವಾಬ್ದಾರಿ. ಈ ಬಗ್ಗೆ ಪರಿಷತ್‌ನಲ್ಲಿ ಚರ್ಚಿಸಿ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ತಮ್ಮ ಗುರಿ ಎಂದು ತಿಳಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪ ಅವರ ಸರ್ಕಾರ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿತ್ತು. ಹೀಗಾಗಿ ಬಿಜೆಪಿಯ ಬೆಂಬಲದೊಂದಿಗೆ ಸ್ಪರ್ಧಿಸುತ್ತಿರುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನೂರೊಂದು ಶೆಟ್ಟಿ, ಮುಖಂಡರಾದ ಮೈ.ವಿ. ರವಿಶಂಕರ್‌ ಮತ್ತು ಆರ್‌. ಮಹದೇವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT