ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಗೇಟ್‌: ಸುರಕ್ಷತೆಯ ಭರವಸೆ

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ದೃಶ್ಯ 1: ನಿರ್ದಿಷ್ಟ ಸಂಖ್ಯೆ ಹೊಂದಿದ ಮನೆಗೆಲಸದಾಕೆ ಅಪಾರ್ಟ್‌ಮೆಂಟ್‌ ಆವರಣ ಪ್ರವೇಶಿಸಿ ಭದ್ರತಾ ಸಿಬ್ಬಂದಿ ಬಳಿ ಇರುವ ಸಾಧನದಲ್ಲಿ ನಂಬರ್‌ ನಮೂದಿಸಿ ಚೆಕ್ ಇನ್‌ ಮಾಡುತ್ತಿದ್ದಂತೆ ನಿಮ್ಮ ಮನೆಗೆಲಸ ಬಂದಿದ್ದಾಳೆ ಎನ್ನುವ ಸಂದೇಶ ಮನೆ ಮಾಲೀಕರ ಮೊಬೈಲ್‌ಗೆ ಸಂದೇಶ ಬರುತ್ತದೆ. ಆಕೆ ತನ್ನ ಮನೆಗೆ ಮರಳುವಾಗ, ಮನೆ ಕೆಲಸದಾಕೆಗೆ ನಾನು ತಿಂಗಳ ವೇತನ ನೀಡಿರುವೆ. ಆಕೆಯ ಬಳಿ ₹ 2,000 ಇದೆ. ಆಕೆಗೆ ನಾನು ಇಂತಿಂತಹ ಪರಿಕರಗಳನ್ನು ನೀಡಿರುವೆ ಎನ್ನುವ ಚಿತ್ರಸಹಿತ ಸಂದೇಶವೂ ಭದ್ರತಾ ಸಿಬ್ಬಂದಿಯ ಬಳಿ ಇರುವ ಸಾಧನಕ್ಕೆ ಬರುತ್ತದೆ.

ದೃಶ್ಯ 2: ಮನೆಗೆ ಆಹ್ವಾನಿಸಿದ ಅತಿಥಿಗಳ ಮೊಬೈಲ್‌ ಸಂಖ್ಯೆಯನ್ನು ಭದ್ರತಾ ಸಿಬ್ಬಂದಿಗೆ ಮಾಲೀಕರು ಮೊದಲೇ ನೀಡಿರುತ್ತಾರೆ. ಅತಿಥಿಗಳು ತಮ್ಮ ಮೊಬೈಲ್‌ಗೆ ಬಂದಿದ್ದ ಒಟಿಪಿ ಹೇಳಿದರೆ ಸಾಕು. ಬಂದವರು ನಿರ್ದಿಷ್ಟ ಮನೆಯ ಪರಿಚಯಸ್ಥರು. ಅವರನ್ನು ಯಾವುದೇ ಪ್ರಶ್ನೆ ಕೇಳದೆ ಕಳಿಸಬಹುದು ಎನ್ನುವುದು ಭದ್ರತಾ ಸಿಬ್ಬಂದಿಗೆ ಮನದಟ್ಟಾಗುತ್ತದೆ.

ದೃಶ್ಯ 3: ಮನೆಯಿಂದ ಆಚೆ ಇದ್ದಾಗ ಇ–ಕಾಮರ್ಸ್‌ ತಾಣಗಳಿಂದ ಬಂದ ಸರಕು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಭದ್ರತಾ ಸಿಬ್ಬಂದಿಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರೆ ಸರಕು ಬಂದಾಗ ಸಿಬ್ಬಂದಿ ತಮ್ಮ ಬಳಿ ಇರುವ ಸಾಧನದಿಂದ ಸರಕಿನ ಚಿತ್ರ ತೆಗೆದುಕೊಂಡಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಆ್ಯಪ್ ನಿರ್ದಿಷ್ಟ ಕೋಡ್‌ ಜನರೇಟ್‌ ಮಾಡಿರುತ್ತದೆ. ಸರಕಿನ ಮಾಲೀಕರು ಮನೆಗೆ ಮರಳುವಾಗ ಗೇಟ್‌ನಲ್ಲಿನ ಸಿಬ್ಬಂದಿಗೆ ತಮ್ಮ ಮೊಬೈಲ್‌ಗೆ ಬಂದ ಒಟಿಪಿ ತೋರಿಸಿ ತಮ್ಮ ಸರಕನ್ನು ತೆಗೆದುಕೊಳ್ಳಬಹುದು. ಸಂಬಂಧಿಸಿದವರು ತಮ್ಮ ಸರಕು ಪಡೆಯದಿದ್ದರೆ ಪ್ರತಿ 8 ಗಂಟೆಗೊಮ್ಮೆ ಅವರಿಗೆ ನೆನಪೋಲೆ ಬರುತ್ತಿರುತ್ತದೆ.

ಇದೇ ಬಗೆಯಲ್ಲಿ ಅಪಾರ್ಟ್‌ಮೆಂಟ್‌ಗೆ ಬಂದು ಹೋಗುವ ಪಿಜ್ಜಾ ವಿತರಕರು, ಇ–ಕಾಮರ್ಸ್‌ ತಾಣಗಳ ಸರಕು ಒದಗಿಸುವವರು, ಟ್ಯಾಕ್ಸಿ ಚಾಲಕರ ಚಲನವಲನಗಳನ್ನು ಮಾಲೀಕರು ಮತ್ತು ಭದ್ರತಾ ಸಿಬ್ಬಂದಿ ತುಂಬ ಸುಲಭವಾಗಿ ನಿರ್ವಹಿಸಬಹುದಾದ ಮೊಬೈಲ್‌ ಆ್ಯಪ್‌ ಅನ್ನು ಬೆಂಗಳೂರಿನ ಸ್ಟಾರ್ಟ್‌ಅಪ್‌ ‘ಮೈಗೇಟ್‌’ ಅಭಿವೃದ್ಧಿಪಡಿಸಿದೆ. ಈ ಆ್ಯಪ್‌ ಮತ್ತು ಈ ತಂತ್ರಜ್ಞಾನ ನೆರವಿನ ಸುರಕ್ಷತಾ ಸೌಲಭ್ಯ ಅಳವಡಿಸಿಕೊಂಡ ಅಪಾರ್ಟ್‌ಮೆಂಟ್‌ಗಳ ಭದ್ರತಾ ಸಿಬ್ಬಂದಿಗೆ ಸಂಸ್ಥೆ ಒದಗಿಸುವ ಅಂಗೈಯಲ್ಲಿ ಹಿಡಿಯಬಹುದಾದ ಪುಟ್ಟ ಸಾಧನವು ಭದ್ರತಾ ಸಿಬ್ಬಂದಿಯ ಕೆಲಸ ಹಗುರಗೊಳಿಸಿದೆ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ತಲೆ ಎತ್ತಿರುವ ಗಗನಚುಂಬಿ ಅಪಾರ್ಟ್‌ಮೆಂಟ್ಸ್‌ಗಳಲ್ಲಿ, ಗೇಟೆಡ್‌ ಕಮ್ಯುನಿಟಿಗಳಲ್ಲಿ ವಾಸಿಸುವವರ ಜೀವನಶೈಲಿ ಗಮನಾರ್ಹ ಬದಲಾವಣೆ ಕಂಡಿದೆ. ಮನೆಗೆಲಸದವರು, ಬಾಡಿಗೆ ಟ್ಯಾಕ್ಸಿ ಚಾಲಕರ ಮೇಲೆ ಹೆಚ್ಚಿದ ಅವಲಂಬನೆ, ಇ–ಕಾಮರ್ಸ್‌ ತಾಣಗಳಲ್ಲಿ ಖರೀದಿಸಿದ ಸರಕು ವಿತರಿಸುವವರ ಭೇಟಿ, ರೆಸ್ಟೊರೆಂಟ್ಸ್‌ಗಳಿಂದ ಪಿಜ್ಜಾ, ಬರ್ಗರ್‌ ತರಿಸುವುದು, ಅತಿಥಿಗಳ ಭೇಟಿ, ಮಕ್ಕಳು ಅಪಾರ್ಟ್‌ಮೆಂಟ್‌ ಆಚೆ ಹೋಗದಂತೆ ನೋಡಿಕೊಳ್ಳುವ ಎಚ್ಚರ – ಹೀಗೆ ನಿತ್ಯದ ಜೀವನದಲ್ಲಿ ಅನೇಕರ ಮೇಲಿನ ಅವಲಂಬನೆ ಹೆಚ್ಚಿಸಿದೆ. ಹೀಗೆ ಬಂದು ಹೋಗುವವರ ಪ್ರತಿಯೊಂದು ವಿವರಗಳನ್ನು ಪ್ರತ್ಯೇಕ ಸಂದರ್ಶಕರ ಪುಸ್ತಕಗಳಲ್ಲಿ ದಾಖಲಿಸುವುದರಲ್ಲಿ, ಇಂಟರ್‌ಕಾಂ ಮೂಲಕ ಮನೆಯಲ್ಲಿ ಇರುವವರ ಗಮನಕ್ಕೆ ತರುವಲ್ಲಿ ಭದ್ರತಾ ಸಿಬ್ಬಂದಿ ಹೈರಾಣಾಗುತ್ತಾರೆ. ಇದರಿಂದ ಸಾಕಷ್ಟು ಸಮಯವೂ ಅಪಯ್ಯವ ಆಗುತ್ತದೆ. ಅಪಾರ್ಟ್‌ಮೆಂಟ್‌ ನಿವಾಸಿಗಳ ಹಲವು ಬಗೆಯ ತಲೆನೋವು ದೂರ ಮಾಡುವ, ಭದ್ರತಾ ಸಿಬ್ಬಂದಿಯ ಕೆಲಸವನ್ನೂ ಹಗುರ ಮಾಡುವ ವಿಶಿಷ್ಟ ಆ್ಯಪ್‌ ಇದಾಗಿದೆ.

10 ವರ್ಷಗಳವರೆಗೆ ವಾಯುಪಡೆಯಲ್ಲಿ ಸ್ಕ್ವಾರ್ಡನ್‌ ಲೀಡರ್‌ ಆಗಿದ್ದ ವಿಜಯ್‌ ಅರಿಶೆಟ್ಟಿ ಅವರು ಸೇನಾ ಪಡೆಯಿಂದ ಹೊರ ಬಂದು ನಾಗರಿಕ ಬದುಕಿಗೆ ಕಾಲಿಟ್ಟಾಗ ಅಪಾರ್ಟ್‌ಮೆಂಟ್ಸ್‌ ಮತ್ತು ಗೇಟೆಡ್‌ ಕಮ್ಯುನಿಟಿಯ ನಿವಾಸಿಗಳು ಪ್ರತಿ ದಿನ ಎದುರಿಸುವ ಅಸುರಕ್ಷಿತ ಭಾವನೆ ದೂರ ಮಾಡಲು ತಂತ್ರಜ್ಞಾನ ನೆರವಿನಿಂದ ಏನಾದರೂ ಮಾಡಲು ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಮೊಬೈಲ್‌ ಆ್ಯಪ್‌ ಮೂಲಕ ಈ ಸಮಸ್ಯೆಗೆ ಸುಲಭ, ಸರಳ ಮತ್ತು ಅಗ್ಗದ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಮನಗಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಅದರ ಫಲವಾಗಿಯೇ ‘ಮೈಗೇಟ್‌ (mygate) ಕಿರುತಂತ್ರಾಂಶದ ಸೇವೆ ಒದಗಿಸುವ ಸ್ಟಾರ್ಟ್‌ಅಪ್‌ ಆರಂಭಿಸಿದ್ದಾರೆ. ಅವರಿಗೆ ವಿಜಯ್‌ ಅವರು ಬೆಂಬಲ ನೀಡಿದ್ದಾರೆ. ಇಬ್ಬರೂ ಸೇರಿಕೊಂಡು ಹಣ ತೊಡಗಿಸಿ ಈ ನವೋದ್ಯಮ ಕಟ್ಟಿ ಬೆಳೆಸುತ್ತಿದ್ದಾರೆ.

ಬೆಂಗಳೂರು ಬಹುತೇಕ ಪ್ರಮುಖ ಅಪಾರ್ಟ್‌ಮೆಂಟ್ಸ್‌ಗಳು ಈ ಆ್ಯಪ್‌ ಅನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿವೆ. ಈ ಆ್ಯಪ್‌ ಬಳಕೆಯಿಂದ ಅಪಾರ್ಟ್‌ಮೆಂಟ್‌ ನಿವಾಸಿಗಳ ಬದುಕು ಹೆಚ್ಚು ಸಹ್ಯಗೊಂಡಿದೆ. ಅಪಾರ್ಟ್‌ಮೆಂಟ್‌ಗೆ ಬಂದು ಹೋಗುವ ಪ್ರತಿಯೊಬ್ಬರ ಚಲನವಲನ ಇಲ್ಲಿ ಡಿಜಿಟಲ್‌ ರೂಪದಲ್ಲಿ ದಾಖಲಾಗುವುದರಿಂದ ಸುರಕ್ಷತೆ ಭಾವ ಹೆಚ್ಚಿದೆ.

ಭದ್ರತಾ ಸಿಬ್ಬಂದಿಯ ಕೆಲಸವೂ ಹಗುರವಾಗಿದೆ. ಇಲ್ಲಿ ಸಂವಹನಕ್ಕೆ ಭಾಷೆಯ ಅಡ್ಡಿಯೂ ಬರುವುದಿಲ್ಲ. ಇಲ್ಲಿ ಸಂವಹನವು ಮೊಬೈಲ್‌, ಒಟಿಪಿ ಮೂಲಕವೇ ನಡೆಯುವುದರಿಂದ ಐದನೇ ತರಗತಿ ಓದಿದ ಭದ್ರತಾ ಸಿಬ್ಬಂದಿಯು ಈ ಸೌಲಭ್ಯವನ್ನು ಅಡೆತಡೆ ಇಲ್ಲದೆ ಬಳಸಬಹುದಾಗಿದೆ. ಅಪಾರ್ಟ್‌ಮೆಂಟ್‌ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ನೇಮಿಸಿಕೊಂಡು ಅವರಿಗಾಗಿ ಹೆಚ್ಚು ವೆಚ್ಚ ಮಾಡುವ ಅಗತ್ಯವೂ ಇಲ್ಲಿ ಉದ್ಭವಿಸಲಾರದು. ಆ್ಯಕ್ಸೆಸ್‌ ಕಾರ್ಡ್, ಬಯೊಮೆಟ್ರಿಕ್‌ ಕಾರ್ಡ್‌, ಬೂಮ್‌ ಬ್ಯಾರಿಯರ್ಸ್‌ಗಳನ್ನು ಬಳಸದೆ ಬರೀ ಮೊಬೈಲ್‌ ಮೂಲಕವೇ ಸಂದರ್ಶಕರ ಭೇಟಿ ನಿಯಂತ್ರಿಸುವ ವಿಶಿಷ್ಟ ಸೌಲಭ್ಯ ಇದಾಗಿದೆ.

‘ಭದ್ರತಾ ಸಿಬ್ಬಂದಿಗೆ ನೀಡುವ ಮೈಗೇಟ್‌ ಡಿವೈಸ್‌ ಸೇರಿದಂತೆ ಇಡೀ ಸೌಲಭ್ಯದ ತಿಂಗಳ ವೆಚ್ಚ ಅಪಾರ್ಟ್‌ಮೆಂಟ್‌ಗಳ ಸಂಖ್ಯೆ ಆಧರಿಸಿ ₹ 4,000 ರಿಂದ ₹ 10,000 ವರೆಗೆ ಬರಲಿದೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೇ ಈ ವೆಚ್ಚ ಭರಿಸುತ್ತವೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹ 50 ಆಚೀಚೆ ಆಗಬಹುದು. ಇದರಲ್ಲಿ ಭದ್ರತಾ ಸಿಬ್ಬಂದಿಗೆ ನೀಡುವ ತರಬೇತಿಯೂ ಒಳಗೊಂಡಿರುತ್ತದೆ’ ಎಂದು ವಿಜಯ್‌ ಹೇಳುತ್ತಾರೆ.

ಪಿಜ್ಜಾ ಮತ್ತಿತರ ಸರಕು ವಿತರಿಸುವವರು ಬಂದಾಗ, ಮಾಲೀಕರು ಮನೆಯಲ್ಲಿ ಇರದಿದ್ದಾಗ ಸಿಬ್ಬಂದಿ ಬಳಿಯಲ್ಲಿಯೇ ಸರಕು ಬಿಟ್ಟು ಹೋಗಲು ಸೂಚಿಸಬಹುದು. ಈ ಬಗ್ಗೆ ಸಿಬ್ಬಂದಿಗೆ ಮುಂಚೆಯೇ ಮಾಹಿತಿ ನೀಡಿ ನಿಶ್ಚಿಂತರಾಗಿ ಇರಬಹುದು.

ಆಹ್ವಾನಿಸಿದ ಅತಿಥಿಗಳಿಗೆ ಅನುಮತಿಗಾಗಿ ಕಾಯುವ ಮುಜುಗರ ತಪ್ಪಿಸಲು ‘ ಗೊ ಟು ಇನ್‌ವೈಟ್‌’ – ವಿಭಾಗಕ್ಕೆ ಹೋಗಿ ಅವರ ಮೊಬೈಲ್‌ ಸಂಖ್ಯೆ ಸೇರ್ಪಡೆ ಮಾಡಬಹುದು. ಎಷ್ಟು ಬೇಕಾದಷ್ಟು ಅತಿಥಿಗಳ ವಿವರ ದಾಖಲಿಸಬಹುದು. ಬರಲಿರುವ ಅತಿಥಿಗಳಿಗೆ ಒಟಿಪಿ ಹೋಗಿರುತ್ತದೆ. ಅವರು ಗೇಟ್‌ನಲ್ಲಿನ ಸಿಬ್ಬಂದಿಗೆ ಒಟಿಪಿ ತೋರಿಸಿದರೆ ಸಾಕು. ಸಿಬ್ಬಂದಿ ಮರುಮಾತಿಲ್ಲದೇ ಅವರನ್ನು ಹೋಗಲು ಬಿಡುತ್ತಾರೆ. ಅವರು ಯಾರು, ಯಾರ ಮನೆಗೆ ಬಂದಿದ್ದಾರೆ ಎನ್ನುವ ವಿವರಗಳೆಲ್ಲ ಅವರ ಬಳಿ ಇರುವ ಸಾಧನದಲ್ಲಿ ದಾಖಲಾಗಿರುತ್ತದೆ. ಈ ಆ್ಯಪ್‌ ಬಳಕೆ ಮುಂಚೆ ಹೀಗೆ ಬಂದವರೆಲ್ಲ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಹೆಸರು ಬರೆಯಬೇಕಾಗಿತ್ತು. ಇನ್ನು ಮುಂದೆ ಅಂತಹ ರಗಳೆಗಳಿಲ್ಲ. ‘ಅಪಾರ್ಟಮೆಂಟ್‌ಗಳಲ್ಲಿ ದುಬಾರಿ ವೆಚ್ಚದ ಇಂಟರ್‌ಕಾಂ ಸೌಲಭ್ಯ ಅಳವಡಿಸಬೇಕಾದ ಅಗತ್ಯವೂ ಉದ್ಭವಿಸುವುದಿಲ್ಲ. ಕಾಗದ, ಪೆನ್‌ ಬಳಕೆಯ ಅಗತ್ಯವೇ ಇಲ್ಲ. ಇದೊಂದು ಪರಿಸರ ಸ್ನೇಹಿ ಡಿಜಿಟಲ್‌ ಸೌಲಭ್ಯವಾಗಿದೆ. ಅಪರಾಧ ತಡೆಗೂ ಈ ಮಾಹಿತಿ ನೆರವಾಗುತ್ತದೆ’ ಎಂದು ವಿಜಯ್‌ ಹೇಳುತ್ತಾರೆ.

ದೇಶದಲ್ಲಿ ಮೊದಲ ಬಾರಿಗೆ ಇಂತಹ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಈ ಸ್ಟಾರ್ಟ್‌ಅಪ್‌ಗೆ ಸದ್ಯಕ್ಕೆ ಯಾರೊಬ್ಬರೂ ಪ್ರತಿಸ್ಪರ್ಧಿ ಇಲ್ಲ. ಈ ಆ್ಯಪ್‌ ಸೇವೆ ಪಡೆಯಲು ಅಪಾರ್ಟ್‌ಮೆಂಟ್‌ವೊಂದರಲ್ಲಿ ಕನಿಷ್ಠ 15 ಮನೆಗಳು ಇರಬೇಕು.
ಮಾಹಿತಿಗೆ http://www.mygate.in ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT