ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಾತುರಿಯಲ್ಲಿ ಘಟಿಕೋತ್ಸವ: ರಾಜ್ಯಪಾಲರಿಗೆ ದೂರು

Last Updated 12 ಡಿಸೆಂಬರ್ 2017, 9:47 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯ ತರಾತುರಿಯಲ್ಲಿ ಘಟಿಕೋತ್ಸವ ಆಚರಣೆಗೆ ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ. ವಿಶ್ವವಿದ್ಯಾಲಯದ ಆತುರದ ನಿರ್ಧಾರಕ್ಕೆ ಸಿಂಡಿಕೇಟ್‌ ಸದಸ್ಯರು, ಕಾಲೇಜು ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕುಲಪತಿ ಪ್ರೊ.ಬಿ.ಬಿ.ಕಲಿವಾಳ ಅವರ ಅಧಿಕಾರಾವಧಿ ಇದೇ 29ಕ್ಕೆ ಕೊನೆಗೊಳ್ಳಲಿದೆ. ಈ ಅವಧಿ ಒಳಗೆ ಘಟಿಕೋತ್ಸವ ನಡೆಸಲು ಅವರು ಪಟ್ಟು ಹಿಡಿದಿದ್ದಾರೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ. ಕುಲಪತಿ ಅವರ ಈ ನಡೆ ವಿರುದ್ಧ ಸಿಂಡಿಕೇಟ್‌ ಸದಸ್ಯರು ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ.

ಘಟಿಕೋತ್ಸವಕ್ಕೆ ಸಿಂಡಿಕೇಟ್‌ ಸಭೆಯ ಅನುಮತಿ ಅಗತ್ಯ. ನವೆಂಬರ್‌ 7ರಂದು ಕರೆದಿದ್ದ ಸಿಂಡಿಕೇಟ್‌ ವಿಶೇಷ ಸಭೆಯ ಪ್ರಮುಖ ನಡಾವಳಿ ಕೂಡ ಇದೇ ಆಗಿತ್ತು. ಅಂದು ನಡೆದ ಸಭೆಯಲ್ಲಿ, ಘಟಿಕೋತ್ಸವ ತರಾತುರಿಯಲ್ಲಿ ನಡೆಸುವುದು ಬೇಡ. ಅಲ್ಲದೇ, ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಈಗ ಪರೀಕ್ಷಾ ಸಮಯವಾಗಿದ್ದರಿಂದ ಘಟಿಕೋತ್ಸವ ನಡೆಸಿದರೆ ವಿದ್ಯಾರ್ಥಿಗಳು, ಕಾಲೇಜಿನ ಆಡಳಿತ ಮಂಡಳಿಗೆ ತೊಂದರೆಯಾಗುತ್ತದೆ ಎಂಬ ಕಾರಣಗಳನ್ನು ಪಟ್ಟಿ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಘಟಿಕೋತ್ಸವ ನಡೆಸಲು ಒಪ್ಪಿಗೆ ಸೂಚಿಸಲಿಲ್ಲ. ಆದರೆ, ಈಚೆಗೆ ವಿಶ್ವವಿದ್ಯಾಲಯದ ಅಧಿಕಾರಿಗಳು ಕರೆಮಾಡಿ, ಡಿ.23ರಂದು ಘಟಿಕೋತ್ಸವ ನಡೆಯಲಿದೆ ಎಂದು ತಿಳಿಸಿದ್ದರಿಂದ ಅನಿವಾರ್ಯವಾಗಿ ದೂರು ನೀಡಲಾಯಿತು ಎಂದು ಸಿಂಡಿಕೇಟ್‌ ಸದಸ್ಯರಾದ ಬಿ.ಎನ್‌.ಶಿಶಿಧರ್ ಹಾಗೂ ಕೊಂಡಜ್ಜಿ ಜಯಪ್ರಕಾಶ್ ತಿಳಿಸಿದ್ದಾರೆ.

ವಿಶ್ವವಿದ್ಯಾಲಯ ಘಟಿಕೋತ್ಸವದ ಅಧಿಸೂಚನೆಯನ್ನು ಡಿ.8ರಂದು ಪ್ರಕಟಿಸಿದೆ. ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ಎಲ್ಲಾ ಸ್ನಾತಕ/ಸ್ನಾತಕೋತ್ತರ ಹಾಗೂ ಎಂ.ಫಿಲ್/ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಕ್ಕೆ ಡಿ.17ರ ಒಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಆದರೆ, ಬಹಳಷ್ಟು ವಿಭಾಗಗಳು ಇನ್ನೂ ಪರೀಕ್ಷೆಯ ಅಂಕಪಟ್ಟಿಯನ್ನೇ ವಿದ್ಯಾರ್ಥಿಗಳಿಗೆ ವಿತರಿಸಿಲ್ಲ. ಅಂತಹ ವಿದ್ಯಾರ್ಥಿಗಳು ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಬರುವುದಿಲ್ಲ ಎನ್ನುತ್ತಾರೆ ಸಿಂಡಿಕೇಟ್‌ ಸದಸ್ಯರು.

ಘಟಿಕೋತ್ಸವ ದಿನವೇ ಪರೀಕ್ಷೆ! ಅಷ್ಟೇ ಅಲ್ಲದೆ, ಈಗ ವಿಶ್ವವಿದ್ಯಾಲಯ ವ್ಯಾಪ್ತಿಯ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಕಾಲೇಜುಗಳಲ್ಲಿ ಸ್ನಾತಕೋತ್ತರ ಪದವಿಯ ಪರೀಕ್ಷೆಗಳು ನಡೆಯುತ್ತಿವೆ. ಘಟಿಕೋತ್ಸವ ಹಮ್ಮಿಕೊಂಡ ಡಿ.23ರಂದೇ ಪರೀಕ್ಷೆಗಳಿವೆ. ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಪರೀಕ್ಷೆ ಬಿಟ್ಟು ಬಂದು ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಸಾಧ್ಯವೇ? ವಿದ್ಯಾರ್ಥಿಗಳು ಇಲ್ಲದಿದ್ದರೆ ಘಟಿಕೋತ್ಸವ ನಡೆಸುವುದು ಯಾರಿಗಾಗಿ? ಈ ಬಗ್ಗೆ ಕುಲಪತಿ ಕನಿಷ್ಠ ಚಿಂತನೆ ನಡೆಸಿಲ್ಲ. ಇದು ಅವರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಎಂದು ಆರೋಪಿಸುತ್ತಾರೆ ಸದಸ್ಯರು.

‘ಈಗ ಕಾಲೇಜುಗಳಲ್ಲಿ ಪರೀಕ್ಷೆಯ ಕಾಲ. ನಾವು ಪರೀಕ್ಷೆ ನಡೆಸಬೇಕೊ ಅಥವಾ ಘಟಿಕೋತ್ಸವಕ್ಕಾಗಿ ವಿದ್ಯಾರ್ಥಿಗಳ ಅಂಕಪಟ್ಟಿ ಸಿದ್ಧಪಡಿಸಬೇಕೊ ತಿಳಿಯುತ್ತಿಲ್ಲ. ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಿ, ಅವಸರದಲ್ಲಿ ಘಟಿಕೋತ್ಸವ ನಡೆಸುವ ಉದ್ದೇಶ ಗೊತ್ತಾಗುತ್ತಿಲ್ಲ. ವಿಶ್ವವಿದ್ಯಾಲಯಕ್ಕೆ ಈ ಕುರಿತಂತೆ ಪತ್ರ ಬರೆಯಲಾಗಿದೆ’ ಎಂದು ದಾವಣಗೆರೆಯ ಹರಿಹರ ತಾಲ್ಲೂಕಿನ ಗಿರಿಯಮ್ಮ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಎಸ್‌.ಎಚ್.ಪ್ಯಾಟಿ ಪ್ರತಿಕ್ರಿಯಿಸಿದರು.

‘ಇದುವರೆಗೂ ನಮಗೆ ಅಂಕಪಟ್ಟಿ ಸಿಕ್ಕಿಲ್ಲ. ಘಟಿಕೋತ್ಸವಕ್ಕೆ ಅರ್ಜಿ ಹಾಕಲು ಅಂಕಪಟ್ಟಿ ಬೇಕೇ ಬೇಕು. ಕಾಲೇಜಿನಲ್ಲಿ ಈ ಬಗ್ಗೆ ವಿಚಾರಿಸಿದರೆ ಡಿ.17ರ ಒಳಗೆ ಅಂಕಪಟ್ಟಿ ನೀಡುವುದಾಗಿ ಹೇಳುತ್ತಿದ್ದಾರೆ. ಅಷ್ಟರ ಒಳಗೆ ಅಂಕಪಟ್ಟಿಯಲ್ಲಿ ಹೆಸರು ಅಥವಾ ಏನಾದರೂ ತಿದ್ದುಪಡಿ ಮಾಡುವುದಿದ್ದರೆ ಕಷ್ಟವಾಗುತ್ತದೆ. ಇಷ್ಟರ ಮೇಲೆ ನಾವು ಯಾವಾಗ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬೇಕು’ ಎಂದು ಪ್ರಶ್ನಿಸುತ್ತಾರೆ ಹೆಸರು ಇಚ್ಛಿಸದ ಸ್ನಾತಕೋತ್ತರ ವಿದ್ಯಾರ್ಥಿಗಳು.

ಘಟಿಕೋತ್ಸವ ದಿನಾಂಕವನ್ನು ರಾಜ್ಯಪಾಲರೇ ನಿಗದಿಗೊಳಿಸಿದ್ದಾರೆ. ಆಹ್ವಾನ ಪತ್ರಿಕೆಗಳೂ ಮುದ್ರಣಗೊಂಡಿವೆ. ಈಗಾಗಲೇ ಕುವೆಂಪು ವಿಶ್ವವಿದ್ಯಾಲಯ ಘಟಿಕೋತ್ಸವ ನಡೆಸಿದೆ. ಸರ್ಕಾರವೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವರ್ಷಕ್ಕೆ ಎರಡು ಬಾರಿ ಘಟಿಕೋತ್ಸವ ನಡೆಸಿ ಎಂದು ವಿಶ್ವವಿದ್ಯಾಲಯಕ್ಕೆ ಮೌಖಿಕವಾಗಿ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಸ್ವಲ್ಪ ಬೇಗ ಘಟಿಕೋತ್ಸವ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ.ಕೆ.ಎನ್‌.ಗಂಗಾನಾಯ್ಕ.

ಘಟಿಕೋತ್ಸವದ ಅಧಿಸೂಚನೆ ಈಗಾಗಲೇ ಹೊರಡಿಸಲಾಗಿದೆ. ಫಲಿತಾಂಶ ಪ್ರಕಟಿಸಿದಾಗಲೇ ರ‍್ಯಾಂಕ್‌ ವಿಜೇತರ ಪಟ್ಟಿ ಹಾಗೂ ಅಂಕಪಟ್ಟಿ ಎರಡೂ ಇರುವುದರಿಂದ ಪ್ರಮಾಣ ಪತ್ರ ಸಿದ್ಧಪಡಿಸಲು ಹೆಚ್ಚಿನ ಸಮಯಾವಕಾಶ ಬೇಕಿಲ್ಲ ಎನ್ನುತ್ತಾರೆ ಅವರು. ಈ ವಿಷಯ ಕುರಿತಂತೆ ಪ್ರತಿಕ್ರಿಯೆ ಪಡೆಯಲು ಕುಲಪತಿ ಅವರಿಗೆ ‘ಪ್ರಜಾವಾಣಿ’ ಕರೆ ಮಾಡಿದಾಗ ಅವರು ಮೊಬೈಲ್ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ವಿಶ್ವವಿದ್ಯಾಲಯದ ಶಿವಗಂಗೋತ್ರಿ ಕ್ಯಾಂಪಸ್‌ನಲ್ಲಿ ಘಟಿಕೋತ್ಸವ ನಡೆಯಲಿದ್ದು, ಇದೇ ಆವರಣದಲ್ಲಿರುವ ಬಹುತೇಕ ವಿಭಾಗಗಳಲ್ಲಿ ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪರೀಕ್ಷೆ ಇದೆ. ಘಟಿಕೋತ್ಸವ ಸಮಾರಂಭದ ಗದ್ದಲದಿಂದಾಗಿ ‍ಪರೀಕ್ಷೆ ಬರೆಯವ ವಿದ್ಯಾರ್ಥಿಗಳಿಗೆ ಖಂಡಿತ ಕಿರಿಕಿರಿ ಉಂಟಾಗುತ್ತದೆ.

ಯಾವುದೇ ಪರೀಕ್ಷೆ ನಡೆಯಬೇಕಾದರೆ ಆ ಸ್ಥಳದಿಂದ 200 ಮೀಟರ್‌ ಒಳಗೆ ಸಾರ್ವಜನಿಕರಿಗೆ ನಿರ್ಬಂಧ ಹಾಕಲಾಗಿರುತ್ತದೆ. ಆದರೆ, ಘಟಿಕೋತ್ಸವದ ದಿನದಂದು ಸಾಕಷ್ಟು ಸಾರ್ವಜನಿಕರು, ಗಣ್ಯರು ಭಾಗವಹಿಸುತ್ತಾರೆ. ಇದರಿಂದ ತೊಂದರೆ ಆಗುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ ಭಾರತೀಯ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಜೆ.ಮಹಾಲಿಂಗಪ್ಪ.

* * 

ಪರೀಕ್ಷಾ ದಿನದಂದೇ ಘಟಿಕೋತ್ಸವ ಇರುವುದು ನಿಜ. ಈ ಬಗ್ಗೆ ಕುಲಪತಿ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.
ಪ್ರೊ.ಕೆ.ಎನ್‌.ಗಂಗಾನಾಯ್ಕ ಕುಲಪತಿ (ಪರೀಕ್ಷಾಂಗ) ದಾವಣಗೆರೆ ವಿ.ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT