ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

ಹಣಕಾಸು
Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹೆಸರು ಬೇಡ, ಊರು ಬೇಡ

ನಮ್ಮ ಕುಟುಂಬ ಗೃಹಸಾಲ ಪಡೆಯಲು ಇಚ್ಚಿಸಿದ್ದಾರೆ. ಕ್ಯಾನ್‌ಫಿನ್‌ ಹೋಮ್‌ನಲ್ಲಿ ಗೃಹಸಾಲ ಪಡೆಯಬಹುದೇ, ಹಾಗೂ ಅವರ ಸೇವೆ ಹೇಗಿದೆ?

ಉತ್ತರ: ಕ್ಯಾನ್‌ಫಿನ್‌ ಹೋಮ್‌ ಕೆನರಾ ಬ್ಯಾಂಕಿನ ಸಹ ಸಂಸ್ಥೆ. ಇದೊಂದು ಉತ್ತಮವಾದ ಗೃಹಸಾಲ ನೀಡುವ ಸಂಸ್ಥೆ. ನೀವು ಇಲ್ಲಿ ಸಾಲ ಪಡೆಯಬಹುದು ಹಾಗೂ ಅವರ ಸೇವೆ ಕೂಡಾ ಚೆನ್ನಾಗಿದೆ. ಆದರೆ ಗೃಹಸಾಲ ಪಡೆಯುವ ಮುನ್ನ, ಭಾರತೀಯ ರಿಸರ್ವ್‌ ಬ್ಯಾಂಕ್‌ ರೇಪೋ ರೇಟ್‌ ಕಡಿಮೆ ಮಾಡಿದಾಗ, ಪ್ಲೋಟರ್‌ ಬಡ್ಡಿ ಪಡೆದರೆ, ನೀವು ಪಡೆಯುವ ಗೃಹಸಾಲದ ಬಡ್ಡಿ ಕೂಡಾ ಕಡಿಮೆ ಮಾಡುತ್ತಾರಾ ಎನ್ನುವುದನ್ನು ವಿಚಾರಿಸಿರಿ ಹಾಗೂ ಬರಹದಲ್ಲಿ ಪಡೆಯಿರಿ. ಅದೇ ರೀತಿ ಅವರ ಗೃಹಸಾಲದ ಬಡ್ಡಿದರ ಕೂಡಾ ವಿಚಾರಿಸಿರಿ. ಎಲ್ಲಿ ಕಡಿಮೆ ಬಡ್ಡಿ ವಿಧಿಸುತ್ತಾರೋ ಅಲ್ಲಿಯೇ ಗೃಹಸಾಲ ಪಡೆಯಿರಿ.

ರಾಮಕುಮಾರ್‌, ಬೆಂಗಳೂರು

ನಾನು ಬಳ್ಳಾರಿಯವನು, ಬೆಂಗಳೂರಿನಲ್ಲಿ ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತೇನೆ. ನನ್ನ ತಿಂಗಳ ಸಂಬಳ ₹ 68,000. ಎಲ್‌ಐಸಿ ಹಾಗೂ ಕೋಟಕ್‌ ಮಹೀಂದ್ರಾ ವಿಮಾ ಕಂಪನಿಗೆ ತಿಂಗಳಿಗೆ ₹ 11,200 ತುಂಬುತ್ತೇನೆ. ನಾನು ವಿವಾಹಿತ, ಹೆಂಡತಿ ಗೃಹಿಣಿ. ತಂದೆ ತಾಯಿ ನಮ್ಮೊಡನಿದ್ದಾರೆ. ನನಗೆ ಒಂದೂವರೆ ವರ್ಷದ ಗಂಡು ಮಗು ಇದ್ದು,  ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ. ಮನೆ ಬಾಡಿಗೆ ₹ 16,000 ತಾಯಿಯ ಔಷಧ ₹ 2,500, ವಿದ್ಯುತ್‌ ಬಿಲ್‌ ₹ 700, ಪೆಟ್ರೋಲ್‌ ₹ 500 ಮನೆ ಖರ್ಚು ₹ 20,000. ಒಟ್ಟಿಗೆ ₹ 51,000 ಖರ್ಚು ಬರುತ್ತದೆ. ನಾನು ಉಳಿಸಬಹುದಾದ ₹ 16,000 ರಲ್ಲಿ ₹ 10,000 ಕಿಸಾನ್‌ ಪತ್ರ ಪ್ರತೀ ತಿಂಗಳೂ ಕೊಳ್ಳುತ್ತೇನೆ ಹಾಗೂ ಉಳಿದ ₹ 6,000 ನನ್ನ ಹೆಂಡತಿ ಖಾತೆಗೆ ಜಮಾ ಮಾಡುತ್ತೇನೆ. ಬಾಡಿಗೆ ಕೊಟ್ಟು ಬೇಸರವಾಗಿದೆ. ನನಗೆ ಸ್ವಂತ ಮನೆ ಮಾಡಲು ಸಾಧ್ಯವೇ. ನನಗೆ ನಿವೃತ್ತಿ ನಂತರ ಕನಿಷ್ಠ ₹ 30,000–40,000 ಪಡೆಯಲು ಒಂದು ಉತ್ತಮ ಪ್ಲ್ಯಾನ್‌ ಹಾಕಿಕೊಡಿ?

ಉತ್ತರ: ನಿಮ್ಮ ಎಲ್ಲಾ ಹೂಡಿಕೆ ಹಾಗೂ ಖರ್ಚು ಗಮನಿಸಿದಾಗ, ನೀವು ಗೃಹಸಾಲ ಮಾಡಿ, ಕನಿಷ್ಠ ಒಂದು ಫ್ಲ್ಯಾಟ್‌ ಕೊಂಡುಕೊಳ್ಳುವುದಾದರೂ ₹ 50 ಲಕ್ಷ ಬೇಕಾಗುತ್ತದೆ. ಗೃಹಸಾಲ ₹ 50 ಲಕ್ಷ ಪಡೆದಲ್ಲಿ, ಸುಮಾರು ₹ 50,000 ಮಾಸಿಕ ಸಮಾನ ಕಂತು (ಇಎಂಐ) ಕಟ್ಟಬೇಕಾತ್ತದೆ. ಇದು ಸದ್ಯಕ್ಕೆ ಸಾಧ್ಯವಾಗಲಾರದು. ವಿಮಾ ಕಂತು ಸ್ವಲ್ಪ ಹೆಚ್ಚಾದರೂ ಅದನ್ನು ನಿಲ್ಲಿಸಬೇಡಿ. ಮಧ್ಯದಲ್ಲಿ ಪಡೆದರೆ, ಸರೆಂಡರ್‌ ವ್ಯಾಲ್ಯೂ ಅಂತ ಕಟ್ಟಿದ ಹಣದ 1/3 ಭಾಗ ಕೂಡಾ ಬರಲಾರದು. ನಿಮ್ಮ ಎಲ್ಲಾ ಖರ್ಚು ವೆಚ್ಚ ಕಡಿಮೆ ಮಾಡಲು ಸಾಧ್ಯವಿಲ್ಲ. ಸಾಧ್ಯವಾದರೆ ₹ 20,000 ಮನೆ ಖರ್ಚು ಸ್ವಲ್ಪ ಕಡಿಮೆ ಮಾಡಬಹುದು.

ಈಗ ನೀವು ₹ 10,000 ಕಿಸಾನ್‌ ಪತ್ರ ಹಾಗೂ ₹ 6,000 ನಿಮ್ಮ ಹೆಂಡತಿ ಖಾತೆಗೆ ಜಮಾ ಮಾಡುತ್ತೀರಿ. ₹ 10,000 ಬ್ಯಾಂಕಿನಲ್ಲಿ 10 ವರ್ಷಗಳ ಆರ್‌.ಡಿ. ಮಾಡಿ ಸಮೀಪದಲ್ಲಿ ₹ 20 ಲಕ್ಷ ಪಡೆಯುವಿರಿ. ಹಾಗೂ ನೀವು ನಿಮ್ಮ ಹೆಂಡತಿ ಖಾತೆಗೆ ₹ 6,000 ಕಟ್ಟುವ ಬದಲಾಗಿ ಅವರ ಹೆಸರಿನಲ್ಲಿ 10 ವರ್ಷಗಳ ಆರ್‌.ಡಿ. ಬ್ಯಾಂಕಿನಲ್ಲಿ ಮಾಡಿ.

ಈ ಎರಡು ಆರ್‌.ಡಿ. ಅವಧಿ ಮುಗಿಯುತ್ತಲೇ ಬರುವ ಹಣ ಹಾಗೂ ಸ್ವಲ್ಪ ಸಾಲ ಮಾಡಿ 30X40 ನಿವೇಶನ ಕೊಳ್ಳಿರಿ. ಅಷ್ಟರಲ್ಲಿ ನಿಮ್ಮ ಸಂಬಳ ₹ 1 ಲಕ್ಷ ವಾಗಿರುತ್ತದೆ. ಆರ್‌.ಡಿ. ಪ್ರಕ್ರಿಯೆ ನಿರಂತರವಾಗಿ ಮುಂದುವರಿಸಿದರೆ ನಿಮ್ಮ ನಿವೃತ್ತ ಜೀವಿನದಲ್ಲಿ ₹ 30,000–40,000 ತಿಂಗಳಿಗೆ ಬಡ್ಡಿ ರೂಪದಲ್ಲಿ ಪಡೆಯುವುದು ದೊಡ್ಡ ವಿಚಾರವಲ್ಲ. ನಿಮ್ಮ ತಂದೆ ತಾಯಿಗಳು ಹಿರಿಯ ನಾಗರಿಕರಾಗಿದ್ದರಿಂದ, ಅವರಿಗೆ ಹಾಗೂ ನಿಮ್ಮ ಕುಟುಂಬ ಒಟ್ಟಿನಲ್ಲಿ ಸಿಂಡಿಕೇಟ್‌ ಬ್ಯಾಂಕಿನಲ್ಲಿ ‘ಸಿಂಡ್‌ ಆರೋಗ್ಯ’ ಎನ್ನುವ ಆರೋಗ್ಯ ವಿಮೆ ₹ 5 ಲಕ್ಷ ಮಾಡಿ. ಇದು ಆಪತ್ತಿನಲ್ಲಿ ಸಂಪತ್ತಾಗುತ್ತದೆ. ನಿಮಗೆ ಉತ್ತಮ ಭವಿಷ್ಯ ಹಾರೈಸುತ್ತೇನೆ.

ನವೀನ್‌. ಎಸ್‌.ಜಿ., ಬೆಂಗಳೂರು

ನಾನು ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತೇವೆ. ಸಂಬಳ ₹ 1.2 ಲಕ್ಷ ತಿಂಗಳಿಗೆ. (₹ 5500 ಪಿಎಫ್‌+ಆದಾಯ ತೆರಿಗೆ ₹ 15,000 ಕಳೆದು) ನಾನು ₹ 35 ಲಕ್ಷ ಗೃಹಸಾಲ ಪಡೆದಿದ್ದೆ, ಇಎಂಐ ₹ 32,000, ವೈಯಕ್ತಿಕ ಸಾಲ ₹ 24 ಲಕ್ಷ, ಇಎಂಐ ₹ 52,000 ಎಸ್‌.ಬಿ.ಐ. ಲೈಫ್‌ ಇನ್ಶುರೆನ್ಸ್‌ ₹ 5,000 ತಿಂಗಳಿಗೆ ಕಟ್ಟುತ್ತೇವೆ. ನನ್ನ ಹೆಂಡತಿ ಹೆಸರಿನಲ್ಲಿ 30X40 ನಿವೇಶನ ಇದೆ. ನನ್ನ ಹೆಸರಿನಲ್ಲಿ 1.2 ಎಕರೆ ಕೃಷಿ ಜಮೀನಿದೆ. ನನ್ನ ಹೆಂಡತಿ ಕರ್ನಾಟಕ ಸರ್ಕಾರದ ನೌಕರಳು. ಸಂಬಳ ₹ 20,000. ಈ ವರ್ಷ ತೆರಿಗೆ ₹ 2.2 ಲಕ್ಷ ಬಂದಿದೆ. ತೆರಿಗೆ ಉಳಿಸಲು ದಾರಿ ಇದೆಯೇ. 80ಸಿ ಅಡಿಯಲ್ಲಿ ಪಿಎಫ್‌ ₹ 60,000 ಹಾಗೂ ಮನೆ ಸಾಲದ ಕಂತು ₹ 1 ಲಕ್ಷ ಇರುತ್ತದೆ. ಮನೆ ಸಾಲದ ಬಡ್ಡಿ ₹ 2.50 ಲಕ್ಷವಿದೆ. ಎಸ್‌ಬಿಎಂನಲ್ಲಿ ಗೃಹಸಾಲ ಪಡೆದಿದ್ದು, ಎಸ್‌ಬಿಐ ಆದ ನಂತರ, ಗೃಹಸಾಲದ ಬಡ್ಡಿ ಬದಲಾಗಲಿಲ್ಲ. ಎಲ್ಲಾ ವಿಚಾರಗಳಿಗೆ ಮಾರ್ಗದರ್ಶನ ಮಾಡಿ.

ಉತ್ತರ: ಸೆಕ್ಷನ್‌ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಪ್ರಯೋಜನ ಪಡೆದಿರುವುದರಿಂದ ಅಲ್ಲಿ ಉಳಿತಾಯಕ್ಕೆ ಎಡೆ ಇರುವುದಿಲ್ಲ. ಸೆಕ್ಷನ್‌ 80 ಸಿಸಿಡಿ (1ಬಿ) ಆಧಾರದ ಮೇಲೆ ಎನ್‌ಪಿಎಸ್‌ ನಲ್ಲಿ ಗರಿಷ್ಠ ₹ 50,000 ಹಣ ಹೂಡಿ, ಸೆಕ್ಷನ್‌ 80ಸಿ ಹೊರತುಪಡಿಸಿ ಹೀಗೆ ಉಳಿಸಿದ ಹಣದ ಮೇಲೆ ತೆರಿಗೆ ವಿನಾಯತಿ ಪಡೆಯಿರಿ.

ಚೇತನ್‌, ಬೆಂಗಳೂರು

ನಾನು ಕಾರು ಲೋನ್‌ ಮಾಡಲು ಬ್ಯಾಂಕಿಗೆ ವಿಚಾರಿಸಿದಾಗ, ಅಲ್ಲಿ I.T. Return ಕೇಳುತ್ತಾರೆ. I.T. Return ಹೇಗೆ ಮಾಡಿಸುವುದು ಎಂದು ಹೇಳ್ತಿರಾ ಸಾರ್‌? ನನ್ನ ವಾರ್ಷಿಕ ಆದಾಯ ₹ 1.60 ಲಕ್ಷ.

ಉತ್ತರ: ನಿಮ್ಮ ವಾರ್ಷಿಕ ಆದಾಯ ₹ 2.50 ಆಗುವ ತನಕ ಐ.ಟಿ. ರಿಟರ್ನ್‌ ತುಂಬಲು ಬರುವುದಿಲ್ಲ. ಈ ಮಿತಿಯೊಳಗಿರುವವರು ಆದಾಯ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಅಂದ ಮೇಲೆ ರಿಟರ್ನ್‌ ತುಂಬುವ ಸಾಧ್ಯತೆ ಎಲ್ಲಿದೆ?

ಬ್ಯಾಂಕಿನವರು ಐಟಿ ರಿಟರ್ನ್‌ ತುಂಬಿದ ಪುರಾವೆ ಕೇಳುವುದು ನಿಮಗೆ ಸರಿಯಾದ ಆದಾಯವಿದೆಯೇ, ಸಾಲ ಕೊಟ್ಟರೆ ಕಂತು ಬಡ್ಡಿ ಕಟ್ಟಲು ನಿಮಗೆ ಸಾಮರ್ಥ್ಯವಿದೆಯೇ, ಎನ್ನುವುದನ್ನು ಖಚಿತಪಡಿಸಿಕೊಳ್ಳಲು. ಬ್ಯಾಂಕಿನಲ್ಲಿ ಕಳೆದ ಮೂರು ವರ್ಷಗಳ ಐ.ಟಿ. ರಿಟರ್ನ್‌ ಕೇಳುತ್ತಾರೆ. ಒಟ್ಟಿನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ನೀವು ಐ.ಟಿ. ರಿಟರ್ನ್‌ ತುಂಬಲು ಬರುವುದಿಲ್ಲ.

ಜಗನ್ನಾಥ, ಮೈಸೂರು

ನಾನು ಗಲ್ಫ್‌ನಿಂದ ವಾಪಸು ಬಂದು ಮೈಸೂರಿನಲ್ಲಿ ವಾಸವಾಗಿದ್ದೇನೆ. ಸದ್ಯ ಕೆಲಸವಿಲ್ಲ. ಕೆಲಸ ಹುಡುಕುತ್ತಿದ್ದೇನೆ. 30’X40’ ಯಲ್ಲಿ ಸ್ವಂತ ಮನೆ ಇದೆ. ನನ್ನ ವಯಸ್ಸು 37. ಇಬ್ಬರು ಹೆಣ್ಣು ಮಕ್ಕಳು (4–10 ವರ್ಷ) ₹ 10 ಲಕ್ಷ ಬ್ಯಾಂಕ್ ಎಫ್.ಡಿ. ಮಾಡಿದ್ದೇನೆ. ನನ್ನ ಹೆಂಡತಿ ಗೃಹಿಣಿ. ಕೆಲಸ ಅಥವಾ ಏನಾದರೂ ವ್ಯವಹಾರ ಮಾಡಬೇಕೆಂದಿದ್ದೇನೆ. ನನಗೆ ಸರಿಯಾದ ಮಾರ್ಗದರ್ಶನ ಮಾಡಿ?

ಉತ್ತರ: ನಿಮ್ಮ ವಿದ್ಯಾರ್ಹತೆ ಪ್ರಶ್ನೆಯಲ್ಲಿ ತಿಳಿಸಿಲ್ಲ. ನೀವು ಗಲ್ಫ್‌ನಲ್ಲಿ ಯಾವ ಕೆಲಸ ಮಾಡುತ್ತಿದ್ದೀರಿ ಎನ್ನುವದರ ಮೇಲೆ, ಅದೇ ಅನುಭವ ಹಂಚಿಕೊಂಡು, ಸ್ವಂತ ಉದ್ಯೋಗ ಮಾಡುವಲ್ಲಿ ಮುದ್ರಾ ಯೋಜನೆ ಅಡಿಯಲ್ಲಿ ಬ್ಯಾಂಕಿನಲ್ಲಿ ಸಾಲ ದೊರೆಯುತ್ತದೆ. ಇದೇ ವೇಳೆ ಕೆಲಸ ಸಿಕ್ಕಿದರೆ ಸೇರಿಕೊಳ್ಳಿ. ನಿಮಗೆ 37 ವರ್ಷವಾದ್ದರಿಂದ ಇನ್ನೂ ಒಂದೆರೆಡು ವರ್ಷ ಕಾದರೆ ಕೆಲಸ ಸಿಗಲಿಕ್ಕಿಲ್ಲ. ಹೆಣ್ಣು ಮಕ್ಕಳ ಸಲುವಾಗಿ ಬ್ಯಾಂಕ್ ಅಥವಾ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಲಾ ₹ 1000 ತಿಂಗಳಿಗೆ ತುಂಬಿ. ನಿಮಗೆ ಉತ್ತಮ ಭವಿಷ್ಯ ಹಾರೈಸುತ್ತೇನೆ.

ಶಿವಾನಂದ, ರಾಯಭಾಗ

ವಯಸ್ಸು 28, ಅವಿವಾಹಿತ, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ, ವೇತನ ₹ 14,550–26,700. ಕೆಜಿಐಡಿಗೆ ₹ 1550, ಎನ್.ಪಿ.ಎಸ್.ಗೆ ₹ 2000, ನನ್ನ ಖರ್ಚು ₹ 5000. ಉಳಿತಾಯದ ಬಗ್ಗೆ ತಿಳಿಸಿ?

ಉತ್ತರ: ನೀವು ಬೇಸಿಕ್ ಸಂಬಳ 14,550–26,700 (Pay Scale) ತಿಳಿಸಿರಬೇಕು. ಇದಕ್ಕೆ ಡಿ.ಎ. ಇರುತ್ತದೆ. ಒಟ್ಟಿನಲ್ಲಿ ಕೆ.ಜಿ.ಐ.ಡಿ., ಎನ್.ಪಿ.ಎಸ್., ಸಂಬಳದಲ್ಲಿ ಕಳೆದು, ಉಳಿದ ಮೊತ್ತದಲ್ಲಿ ನಿಮ್ಮ ಖರ್ಚಿಗೆ ಮದುವೆ ತನಕ ಗರಿಷ್ಠ ₹ 3,000 ಬಳಸಿ. ಉಳಿದ ಮೊತ್ತವನ್ನೂ ಸದ್ಯ 1 ವರ್ಷಕ್ಕೆ ಆರ್.ಡಿ. ಮಾಡಿರಿ. ಅಷ್ಟರಲ್ಲಿ ನಿಮಗೆ ಮದುವೆಯಾಗಬಹುದು. ಮದುವೆ ನಂತರವೂ ಎಷ್ಟಾದರಷ್ಟು ಆರ್.ಡಿ.ಗೆ ಮುಡುಪಾಗಿಡಿ. ಹಾಗೆ ಆರ್.ಡಿ. ಮಾಡುವಾಗ 10 ವರ್ಷಗಳ ಅವಧಿಗೆ ಮಾಡಿರಿ.

ಕುಸುಮಾ. ಕೆ.ಎಚ್., ಊರು ಬೇಡ

ನನ್ನ ಸಹೋದರ ರೈಲ್ವೆಯಲ್ಲಿ TRACKMAN ಆಗಿ ಕೆಲಸ ಮಾಡುತ್ತಿದ್ದ. ಅವನಿಗೆ ರೈಲ್ವೆ ವ್ಹೀಲ್ ಫ್ಯಾಕ್ಟರಿಯಲ್ಲಿ ಕೆಲಸ ಸಿಕ್ಕಿ ಸೇರಿ ಕೊಂಡಿದ್ದಾನೆ. ಹೀಗೆ ಸೇರುವಾಗ ಹಿಂದೆ ಕೆಲಸ ಇರಲಿಲ್ಲ ಎಂದು ತಿಳಿಸಿದ್ದಾನೆ. ಇದು ಏನಾದರೂ ಅಪಾಯಕಾರಿಯಾಗಬಹುದೇ?

ಉತ್ತರ: ನಿಮ್ಮ ತಮ್ಮ ಹಿಂದೆ ಹಾಗೂ ಈಗ ಕೆಲಸ ಮಾಡುತ್ತಿರುವುದು ಒಂದೇ ರೈಲ್ವೆ ಇಲಾಖೆಯಾಗಿದ್ದು, ವಿಭಾಗ (Department) ಮಾತ್ರ ವ್ಯತ್ಯಾಸವಿದೆ. ನನ್ನ ಅಭಿಪ್ರಾಯದಲ್ಲಿ ನಿಮ್ಮ ತಮ್ಮ ಈಗ ಕೆಲಸ ಮಾಡುವ ವಿಭಾಗಕ್ಕೆ ಅಂದರೆ ಅವರ ಮೇಲಾಧಿಕಾರಿಗಳಿಗೆ ಮಾತಿನಲ್ಲಿ ವಿಷಯ ತಿಳಿಸಿ, ಅವರು ಏನು ಹೇಳುತ್ತಾರೋ ಹಾಗೆ ನಡೆದುಕೊಳ್ಳಲಿ. ನಿಮ್ಮ ತಮ್ಮನಿಗೆ ಏನೂ ತೊಂದರೆಯಾಗಲಾರದು.

ಸುಬ್ರಹ್ಮಣ್ಯ ಪ್ರಸಾದ, ಬೆಂಗಳೂರು

ನಾನು ಸ್ಥಿರ ಆಸ್ತಿ ಮಾರಾಟ ಮಾಡಿ ಬಂದಿರುವ ಲಾಭ ಎನ್.ಎಚ್.ಎ.ಐ.– ಆರ್.ಇ.ಸಿ. ಬಾಂಡ್‌ಗಳಲ್ಲಿ ತೊಡಗಿಸಬೇಕೆಂದಿದ್ದೇನೆ. ಆದರೆ ಈ ಹಣ ಬ್ಯಾಂಕಿನಲ್ಲಿ ಇಡಬಹುದು ಹಾಗೂ ಹೆಚ್ಚಿನ ಬಡ್ಡಿ ಪಡೆಯಬಹುದು ಎಂದು ನನ್ನ ಮಿತ್ರರು ಹೇಳುತ್ತಾರೆ. ಎನ್.ಎಚ್.ಎ.ಐ.– ಆರ್.ಇ.ಸಿ.  ಬಾಂಡ್‌ನಲ್ಲಿ ತೊಡಗಿಸಿದ ಹಣ ವಾಪಸು ಪಡೆದ ನಂತರ, ಆ ಹಣ ಪುನಃ ಸ್ಥಿರ ಆಸ್ತಿಯಲ್ಲಿಯೇ ತೊಡಗಿಸಬೇಕೇ?

ಉತ್ತರ: ಎನ್.ಎಚ್.ಎ.ಐ.–ಆರ್.ಇ.ಸಿ. ಬಾಂಡ್‌ಗಳಲ್ಲಿ 3 ವರ್ಷಗಳ ತನಕ ಬಂಡವಾಳ ವೃದ್ಧಿ ಲಾಭ ತೊಡಗಿಸಿ ಸೆಕ್ಷನ್ 54ಇಸಿ ಆಧಾರದ ಮೇಲೆ ತೆರಿಗೆ ವಿನಾಯ್ತಿ ಪಡೆಯಬಹುದು. 3 ವರ್ಷಗಳ ನಂತರ ಇಲ್ಲಿ ಬರುವ ಮೊತ್ತ ಸ್ಥಿರ ಆಸ್ತಿಯಲ್ಲಿ ಹೂಡಬೇಕೆನ್ನುವ ಕಾನೂನು ಇರುವುದಿಲ್ಲ. ಈ ಹಣ ಹೇಗೆ ಬೇಕಾದರೂ ವಿನಿಯೋಗಿಸುವ ಅಧಿಕಾರ ನಿಮಗಿರುತ್ತದೆ.

ಇದೇ ವೇಳೆ ಬಂಡವಾಳ ವೃದ್ಧಿಯಿಂದ ಬರುವ ಹಣ ಕ್ಯಾಪಿಟಲ್ ಗೇನ್ 1988 ರಂತೆ ಬ್ಯಾಂಕುಗಳಲ್ಲಿ ತೊಡಗಿಸಿದರೆ, 3 ವರ್ಷದೊಳಗೆ ಸ್ಥಿರ ಆಸ್ತಿಯಲ್ಲಿಯೇ ಹೂಡಬೇಕೆನ್ನುವ ಕಾನೂನು ಇದೆ. ಇದೇ ವೇಳೆ 3 ವರ್ಷಗಳ ತನಕ ಕ್ಯಾಪಿಟಲ್ ಗೇನ್ 1988ರ ಪ್ರಕಾರ ಬ್ಯಾಂಕ್‌ನಲ್ಲಿ ತೊಡಗಿಸಿದ ಹಣ ಅವಧಿಯಲ್ಲಿ ಮುಟ್ಟುವಂತಿಲ್ಲ. ಮುಂದೆ ಅಂದರೆ 3 ವರ್ಷಗಳೊಳಗೆ ಮನೆ ಕಟ್ಟಿಸುವ ಉದ್ದೇಶವಿದ್ದರೆ ಮಾತ್ರ ಬ್ಯಾಂಕ್ ಠೇವಣಿ ಮಾಡಿರಿ. ಈ ಉದ್ದೇಶವಿಲ್ಲವಾದಲ್ಲಿ ಎನ್.ಎಚ್.ಎ.ಐ.– ಆರ್.ಇ.ಸಿ.  ಬಾಂಡಿನಲ್ಲಿ ಇರಿಸಿ ನಿಶ್ಚಿಂತರಾಗಿರಿ.

***

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು (ದೂರವಾಣಿ ಸಂಖ್ಯೆ ಸಹಿತ) ಪತ್ರದಲ್ಲಿ ಬರೆದು ಕಳುಹಿಸಿ.ಪರಿಣತರಿಂದ ಸೂಕ್ತ ಉತ್ತರ ಪಡೆಯಬಹುದು. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ,
ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001.

ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT