ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದು ಹಿಂಸೆ, ಎಲ್ಲಿದೆ ಕ್ರೌರ್ಯ

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಗಲ್ಲಾಪೆಟ್ಟಿಗೆಯ ಜೊತೆಗೆ ಜನರ ಮನಸನ್ನೂ ಸೂರೆಗೊಂಡ ತಮಿಳು ಸಿನಿಮಾ ‘ವಿಕ್ರಂ ವೇದ’. ಪ್ರಧಾನ ಪಾತ್ರಗಳಾಗಿ ವಿಕ್ರಂ (ಮಾಧವನ್) ಮತ್ತು ವೇದ (ವಿಜಯ್ ಸೇತುಪತಿ) ಎದ್ದು ಕಂಡರೂ ಚಿತ್ರದ ಭಾಗವಾಗಿರುವ ಪ್ರತಿ ಪಾತ್ರದ ಒಳಗನ್ನೂ ಶೋಧಿಸಲು ನಿರ್ದೇಶಕರು (ಪುಷ್ಕರ್–ಗಾಯತ್ರಿ) ಯತ್ನಿಸಿರುವುದು ಚಿತ್ರಮಂದಿರದಲ್ಲಿ ಬೆಳಕು ಮೂಡಿದ ನಂತರ ಪ್ರೇಕ್ಷಕರಿಗೆ ಅರಿವಾಗುತ್ತದೆ.

ಚಿತ್ರ ನೋಡಿ ತಿಂಗಳುಗಳು ಕಳೆದರೂ ಕೆಲ ಸನ್ನಿವೇಶಗಳು ಹಿನ್ನೆಲೆ ಸಂಗೀತದೊಂದಿಗೇ ಮನಸಿನ ಪರದೆಯ ಮೇಲೆ ತೆರೆದುಕೊಳ್ಳುತ್ತವೆ. ಅಷ್ಟರಮಟ್ಟಿಗೆ ಬೆಳಕು, ಸಂಗೀತವನ್ನೂ ನಿರ್ದೇಶಕರು ಕಥೆಯ ಭಾಗವಾಗಿಸಿದ್ದಾರೆ.

ಚಿತ್ರದ ಆರಂಭದಲ್ಲಿ ಒಳಿತು–ಕೆಡಕು, ಕಪ್ಪು–ಬಿಳುಪು, ಬಡವ–ಶ್ರೀಮಂತ, ಕ್ಲಾಸ್–ಮಾಸ್, ಹಿಂಸೆ–ಶಾಂತಿ ಇಂಥ ಹಲವು ವೈರುಧ್ಯಗಳನ್ನು ವ್ಯಕ್ತಿಗಳಿಗೆ ಆರೋಪಿಸಲು ಯತ್ನಿಸಿದಂತೆ ಕಾಣುತ್ತದೆ. ಈ ಕಪ್ಪು–ಬಿಳುಪಿನ ನಡುವಿನ ಅಗಾಧ ಅಂತರಕ್ಕೆ ಚಿತ್ರ ಭಾಷ್ಯ ಬರೆಯುತ್ತದೆ. ಸಿನಿಮಾ ಕಟ್ಟಿರುವ ಕೌಶಲ ಮತ್ತು ಸಿನಿಬಂಧ ಅಚ್ಚುಕಟ್ಟಾಗಿದ್ದು ಎಲ್ಲಿಯೂ ಚಿತ್ರ ಬೋರ್ ಹೊಡೆಸುವುದಿಲ್ಲ.

ಗಟ್ಟಿ ಆಶಯಗಳನ್ನೂ ಸಿನಿಮಾಟಿಕ್ ಆಗಿಯೇ ಪ್ರೇಕ್ಷಕರಿಗೆ ಸುಲಲಿತವಾಗಿ ದಾಟಿಸಿಬಿಡುವ ಸವಾಲನ್ನು ನಿರ್ದೇಶಕರು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಮಾಧವನ್ ಮತ್ತು ವಿಜಯ್‌ ಸೇತುಪತಿ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ. ಕನ್ನಡಿಗರಾದ ಅಚ್ಯುತ್‌ಕುಮಾರ್, ಶ್ರದ್ಧಾ ಶ್ರೀನಾಥ್‌ ಅವರ ನಟನೆಯನ್ನು ಪಾತ್ರಗಳಿಂದ ಬೇರ್ಪಡಿಸಿ ನೋಡಲು ಆಗುವುದಿಲ್ಲ.

ನಿಷ್ಠಾವಂತ ಪೊಲೀಸ್ ಅಧಿಕಾರಿ ವಿಕ್ರಂ, ರೌಡಿಗಳ ಜೀವತೆಗೆಯುವ ಎನ್‌ಕೌಂಟರ್ ಸ್ಪೆಷಲಿಸ್ಟ್. ವೇದ (ವಿಜಯ್‌ ಸೇತುಪತಿ) ಭೂಗತ ದೊರೆ. ಸಣ್ಣವಯಸ್ಸಿನ ತಮ್ಮನ ಮೇಲೆ ಹಲ್ಲೆ ನಡೆದ ಸೇಡಿಗಾಗಿ ಕೊಲೆಗಾರನಾದವ. ಪರಿಸ್ಥಿತಿಯ ಒತ್ತಡದಲ್ಲಿ ಒಂದಾದಮೇಲೆ ಒಂದರಂತೆ ಕೊಲೆಗಳನ್ನು ಮಾಡುತ್ತಾ ಭೂಗತದೊರೆಯಾಗಿ ಮೆರೆದವ. ಇವರಿಬ್ಬರ ನಡುವಣ ಸಂವಾದರೂಪಿ ಸಂಘರ್ಷಗಳು ಇಬ್ಬರ ಕಥೆಯನ್ನೂ, ಮುಖವಾಡಗಳನ್ನೂ ನಾಜೂಕಾಗಿ ಅನಾವರಣ ಮಾಡುತ್ತವೆ.

ಬಹುತೇಕ ದೃಶ್ಯಗಳಲ್ಲಿ ಬಿಳಿಬಟ್ಟೆ ಹಾಕಿಕೊಂಡಿರುವ ವಿಕ್ರಂ ಶ್ರೀಮಂತರ ಮನೆಗಳಲ್ಲಿ ಬಳಸುವ ಸಂಸ್ಕೃತ–ಇಂಗ್ಲಿಷ್ ಬೆರಕೆಯ ತಮಿಳು ಮಾತನಾಡುತ್ತಾನೆ.

ಕಪ್ಪುಬಟ್ಟೆಯನ್ನೇ ಧರಿಸಿರುವ ವೇದನದ್ದು ಬಡವರ ಮನೆಯಲ್ಲಿ ಮಾತ್ರ ಕೇಳಿಬರುವ ಮಣ್ಣಿನವಾಸನೆಯ ಅಚ್ಚ ತಮಿಳು. ಚಿತ್ರ ಶುರುವಾದ ಅರ್ಧಗಂಟೆಯಲ್ಲಿಯೇ ಬಹುತೇಕ ಪ್ರೇಕ್ಷಕರು ತಮ್ಮ ವ್ಯಕ್ತಿತ್ವಗಳ ಕೆಲಭಾಗಗಳನ್ನು ಇವರಿಬ್ಬರ ಜೊತೆಗೂ ಹೋಲಿಸಿಕೊಳ್ಳಲು ಆರಂಭಿಸುತ್ತಾರೆ.

ಒಳ್ಳೆ ಸಿನಿಮಾ ಅಂದ್ರೆ ಹೀಗೆ ಪ್ರೇಕ್ಷಕರ ಮನಸನ್ನು ಹಿಡಿದಿಟ್ಟುಕೊಳ್ಳಬೇಕು, ತೆರೆಯ ಮೇಲಿನ ಚಿತ್ರವು ಮನದೊಳಗಿನ ದೃಶ್ಯಗಳೊಂದಿಗೆ ಸಂವಾದಿಸಬೇಕು ಅಲ್ವಾ?

‘ನನ್ನ ತಮ್ಮನ ಕೈ ತೂತು ಮಾಡಿದವನನ್ನು ಕೊಲ್ಲಬೇಕೋ? ಕೈ ತೂತು ಮಾಡಲು ಐಡಿಯಾ ಕೊಟ್ಟವನನ್ನು ಕೊಲ್ಲಬೇಕೋ?’ ಇದು ವೇದ ಕೇಳುವ ಪ್ರಶ್ನೆ. ಈ ಪ್ರಶ್ನೆಗೆ ಕೊಡುವ ಉತ್ತರದಿಂದ ವಿಕ್ರಂನ ಒಳತೋಟಿ ಬಿಚ್ಚಿಕೊಳ್ಳುತ್ತದೆ. ಮೂರ್ನಾಲ್ಕು ಬಾರಿ ಪೊಲೀಸರಿಂದ ತಪ್ಪಿಸಿಕೊಳ್ಳುವ ವೇದ ಕೇಳುವ ಪ್ರತಿಪ್ರಶ್ನೆಗಳೂ ವ್ಯವಸ್ಥೆಯಲ್ಲಿ ಅಹಿಂಸೆಯ ಸೋಗಿನಡಿ ಅಡಗಿರುವ ಹಿಂಸೆಯನ್ನೂ, ಪ್ರಾಮಾಣಿಕತೆಯ ಸೋಗಿನಡಿ ಅಡಗಿರುವ ಅಪ್ರಾಮಾಣಿಕತೆಯನ್ನೂ, ಮುಗ್ಧತೆಯ ಸೋಗಿನಡಿ ಅಡಗಿರುವ ಕ್ರೌರ್ಯವನ್ನೂ ವಿಕ್ರಂಗೆ ಮನಗಾಣಿಸುತ್ತದೆ.

‘ನೀವು ಈ ತುಪಾಕಿಯಿದ್ದಂತೆ. ನಿಮ್ಮನ್ನು ಯಾರ ಮೇಲೆ ಬೇಕಾದರೂ ಗುರಿ ಇಡಬಹುದು, ನಿಮ್ಮನ್ನು ಬಳಸಿ ಯಾರನ್ನು ಬೇಕಾದರೂ ಕೊಲ್ಲಬಹುದು’ ಎನ್ನುವ ವೇದನ ಮಾತು ನೆನಪಿನಲ್ಲಿ ಉಳಿಯುವಷ್ಟು ಸರಾಗವಾಗಿ, ವಿಕ್ರಂ ಪಾತ್ರಧಾರಿಯ ಯಾವುದೇ ಸಂಭಾಷಣೆ ಮನಸಿಗೆ ನಾಟುವುದಿಲ್ಲ.

‘ತನ್ನ ಮೇಲಧಿಕಾರಿಯೇ ಲಂಚ ಪಡೆದು ತನ್ನಿಂದ ನಿರ್ದಿಷ್ಟ ಗುಂಪಿಗೆ ಸೇರಿದ ರೌಡಿಗಳನ್ನು ಕೊಲ್ಲಿಸುತ್ತಿದ್ದಾನೆ, ತನ್ನ ಗೆಳೆಯ ಇದೇ ಕಾರಣಕ್ಕೆ ಖಿನ್ನನಾಗುತ್ತಿದ್ದಾನೆ, ಅವನಿಂದ ಗುಟ್ಟು ಬಯಲಾಗಬಹುದು ಎಂದು ಹೆದರಿದ ಇತರ ಗೆಳೆಯರೇ ಅವನನ್ನು ಮುಗಿಸಿದ್ದಾರೆ’ ಇದು ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ವಿಕ್ರಂಗೆ ಅರಿವಾಗುವ ಸತ್ಯ.

ಪೊಲೀಸರನ್ನು ಒಳಿತಿಗೆ, ರೌಡಿಗಳನ್ನು ಕೆಡುಕಿಗೆ ಹೋಲಿಸುತ್ತಿದ್ದ ವಿಕ್ರಂ ಕೊನೆಗೆ ಪೊಲೀಸರನ್ನೇ ಕೊಂದುಹಾಕುತ್ತಾನೆ. ವಿಕ್ರಂ–ವೇದ ಪಾತ್ರಧಾರಿಗಳು ರಿವಾಲ್ವಾರ್ ಹಿಡಿದು ಎದುರುಬದುರು ನಿಲ್ಲುವ ದೃಶ್ಯದೊಂದಿಗೆ ಚಿತ್ರ ಮುಗಿಯುತ್ತದೆ.

‘ಯಾರು ಯಾರನ್ನು ಕೊಂದಿರಬಹುದು’ ಎಂಬ ಪ್ರಶ್ನೆಯೊಂದಿಗೆ ಚಿತ್ರದ ಮುಂದಿನ ದೃಶ್ಯಗಳು ಪ್ರೇಕ್ಷಕನ ಮನಸಿನಲ್ಲಿ ಬೆಳೆಯುತ್ತಾ ಹೋಗುತ್ತವೆ. ಚಿತ್ರಮಂದಿರದಲ್ಲಿ ಬೆಳಕು ಮೂಡಿದ ತಕ್ಷಣ ಚಿತ್ರ ಮುಗಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT