ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೇಷ್ಮೆ ಸೀರೆಗಳ ಕಣಜ ಈ ನಗರ’

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕೋಲ್ಕತ್ತಾ ಮೂಲದ ಸೂಪರ್‌ ಮಾಡೆಲ್‌ ಜೆಸಿಕಾ ಗೋಮ್ಸ್‌ ಸುರಾನಾ, ಪುಟಾಣಿ ರೂಪದರ್ಶಿಗಳ ಪಾಲಿನ ನೆಚ್ಚಿನ ಮಾರ್ಗದರ್ಶಕಿ. ಫ್ಯಾಷನ್‌ ಜಗತ್ತಿನ ಪಟ್ಟುಗಳನ್ನು ಮಕ್ಕಳಿಗೆ ಕಲಿಸುತ್ತ, ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡುವುದು ಅವರಿಗಿಷ್ಟ. ಕಳೆದ ವಾರಾಂತ್ಯದಲ್ಲಿ ನಗರದಲ್ಲಿ ನಡೆದ ‘ಜೂನಿಯರ್‌ ಫ್ಯಾಷನ್‌ ವೀಕ್‌’ನಲ್ಲಿ ಅವರು ಮಾಡಿದ್ದೂ ಇದೇ ಕೆಲಸವನ್ನು. ಮಕ್ಕಳಿಗೆ ಗ್ರೂಮಿಂಗ್‌ ಕುರಿತ ಕಾರ್ಯಾಗಾರವನ್ನೂ ನಡೆಸಿಕೊಟ್ಟ ಅವರು ‘ಮೆಟ್ರೊ’ ಜತೆಗೆ ಮಾತನಾಡಿದರು

* ಮಕ್ಕಳ ಫ್ಯಾಷನ್‌ ಸಪ್ತಾಹದ ಪ್ರಾಮುಖ್ಯ ಏನು?
ಇದು ಕೇವಲ ಫ್ಯಾಷನ್‌ ಶೋಗೆ ಸೀಮಿತವಾದುದಲ್ಲ. ಚಿಕ್ಕ ವಯಸ್ಸಿನಿಂದಲೇ ಮಕ್ಕಳನ್ನು ಅಂದಗೊಳಿಸುವುದು, ಜನರ ಮಧ್ಯೆ ನಡೆಯಲು, ಬೆರೆಯಲು ಆತ್ಮವಿಶ್ವಾಸ ಮೂಡಿಸುವುದು, ಸ್ವತಂತ್ರರಾಗಿರುವಂತೆ ಮಾಡುವುದು... ಹೀಗೆ ಕಾರ್ಯಾಗಾರಗಳ ಮೂಲಕ ಮಕ್ಕಳ ವೈಯಕ್ತಿಕ ಬೆಳವಣಿಗೆಗೆ ಇಲ್ಲಿ ಹೆಚ್ಚು ಅವಕಾಶ ನೀಡಲಾಗುತ್ತದೆ. ಬೆಂಗಳೂರಿನಿಂದ ಪ್ರಾರಂಭವಾಗಿ ಕೋಲ್ಕತ್ತ, ಚೆನ್ನೈ, ಮುಂಬೈ ಮತ್ತು ದೆಹಲಿಯಲ್ಲಿ ಈ ಸಪ್ತಾಹದ ಕಾರ್ಯಕ್ರಮ ನಡೆದಿದೆ. ಎಲ್ಲ ಕಡೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ.

* ಮುಂದೆ ಇವರಿಗೆ ಅವಕಾಶಗಳಿವೆಯೇ?
ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಮಕ್ಕಳ ಫ್ಯಾಷನ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಬೇರೆ ಬೇರೆ ರಾಜ್ಯದ ಮಕ್ಕಳು ನನ್ನೊಂದಿಗೆ ಪ್ರಯಾಣ ಬೆಳೆಸಿದ್ದಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಬೇರೆ ಊರು ನೋಡುವುದು, ಇತರ ಫ್ಯಾಷನ್‌ ಶೋಗಳಲ್ಲಿ ಭಾಗವಹಿಸುವುದು ಸೇರಿದಂತೆ ಅವಕಾಶಗಳ ಮಹಾಪೂರವೇ ಅವರ ಮುಂದಿದೆ.

* ಎಳವೆಯಲ್ಲಿ ನಿಮ್ಮ ಕನಸು ಏನಿತ್ತು?

ಚಿಕ್ಕಂದಿನಲ್ಲಿ ಶಿಕ್ಷಕ ವೃತ್ತಿ ಬಗೆಗೆ ಆಕರ್ಷಣೆ ಇತ್ತು. ಮನೆಯಲ್ಲಿ ಎಲ್ಲರನ್ನೂ ಕೂರಿಸಿ ನಾನು ಪಾಠ ಮಾಡುವ ಆಟ ಆಡುತ್ತಿದ್ದೆ. ಬೆಳೆಯುತ್ತಾ ನನಗೆ ಗಗನಸಖಿಯರು ಎಂದರೆ ವಿಶೇಷ ಎನಿಸಿತು. ತೆಳ್ಳಗೆ, ಬೆಳ್ಳಗೆ ಮುದ್ದುಮುದ್ದಾಗಿರುವ ಅವರು ನನಗೆ ರೋಲ್‌ ಮಾಡೆಲ್‌ ಆದರು. ಆದರೆ ಕನಸೇ ಕಾಣದ ಫ್ಯಾಷನ್‌ ಜಗತ್ತಿಗೆ ಆಕಸ್ಮಿಕವಾಗಿ ಬಂದೆ. ಹಾಗಂತ ಕ್ಷಣದ ಬಗೆಗೆ ನಿರ್ಲಕ್ಷ್ಯ ವಹಿಸಲಿಲ್ಲ. ಜಿಯಾಗ್ರಫಿಯಲ್ಲಿ ಎಂಎಸ್‌ಸಿ ಮಾಡಿ ಪದಕ ಕೂಡ ಗೆದ್ದಿದ್ದೇನೆ. ಫ್ಯಾಷನ್‌ ಹಾಗೂ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಬೇಕಾದ ಸಂದರ್ಭ ಬಂದಾಗ ನನ್ನ ಆಯ್ಕೆ ಶಿಕ್ಷಣವೇ ಆಗಿತ್ತು.

* ವಿಭಿನ್ನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸುತ್ತಿದ್ದೀರಿ?
ಜನರು ಯಾವಾಗಲೂ ನೆಪ ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ನಾನು ಹಾಗೆ ಮಾಡುವುದಿಲ್ಲ. ನನ್ನೆಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತೇನೆ. ಮನಸು ಬಯಸಿದ ಎಲ್ಲವನ್ನೂ ನಾವು ಮಾಡಬಹುದು. ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ಎಂಬುದನ್ನು ನಿರ್ಧರಿಸುವುದರ ಜೊತೆಗೆ ಸಮಯ ನಿರ್ವಹಣೆ ಮಾಡಿದರೆ ಎಲ್ಲವೂ ಸುಲಭ.

* ದಿನದ ಹೆಚ್ಚು ಭಾಗ ಮಕ್ಕಳೊಂದಿಗೆ ಕಳೆಯುತ್ತೀರಲ್ವೇ?
ಮಕ್ಕಳೊಂದಿಗೆ ಕಾಲ ಕಳೆಯುವುದು ನನಗೆ ತುಂಬಾ ಇಷ್ಟ. ಶಾಲಾ ಶಿಕ್ಷಕಿಯಾಗುವ ಮನಸು ಮಾಡಿದ್ದೂ ಇದೇ ಕಾರಣಕ್ಕೆ. ಅವರೊಂದಿಗೆ ಇದ್ದರೆ ಸ್ವಚ್ಛಂದ ಮನಸುಗಳೊಂದಿಗೆ ಇದ್ದ ಖುಷಿ ಸಿಗುತ್ತದೆ. ಪುಟಾಣಿಗಳಿಗೆ ಫ್ಯಾಷನ್‌ ಕೊರಿಯೊಗ್ರಫಿ ಮಾಡುವ ಯೋಚನೆಯ ಹಿಂದಿರುವುದೂ ಇದೇ ಉದ್ದೇಶ. ಇಂದಿನ ಮಕ್ಕಳು ಬಹಳ ಚುರುಕು. ನಾನು ಒಂದು ದಿನದಲ್ಲಿ ಹೇಳಿಕೊಟ್ಟಿದ್ದನ್ನು ರ‍್ಯಾಂಪ್‌ ಮೇಲೆ ಯಥಾವತ್ತಾಗಿ ಒಪ್ಪಿಸುವುದನ್ನು ಕಂಡು ಬೆರಗುಗೊಂಡಿದ್ದೇನೆ.

* ಫ್ಯಾಷನ್‌ ಕುರಿತು ನಿಮ್ಮ ನಿಲುವು?
ಫ್ಯಾಷನ್‌ ಜಗತ್ತಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮುಖ್ಯವಾಗಿ ಕಾಲಕ್ಕೆ ತಕ್ಕಂತೆ ಫ್ಯಾಷನ್‌ ಬದಲಾಗುತ್ತದೆ. ಈಗ ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿಡುವ ಬಟ್ಟೆಗಳಿಗೆ ನಾವು ಆದ್ಯತೆ ಕೊಡಬೇಕು. ಫ್ಯಾಷನ್‌ನ ಅಂಧಾನುಕರಣೆ ಸಲ್ಲ. ಫ್ಯಾಷನ್‌ನಿಂದ ಸ್ಫೂರ್ತಿ ಪಡೆದು ನಿಮಗೆ ಸರಿಹೊಂದುವ ದಿರಿಸುಗಳಿಗೆ ಆದ್ಯತೆ ಕೊಡಿ.

* ನೀವು ಯಾವ ಬಗೆಯ ಉಡುಪು ಧರಿಸಲು ಹೆಚ್ಚು ಇಷ್ಟಪಡುತ್ತೀರಿ?
ಸೀರೆ ನನಗೆ ಅಚ್ಚುಮೆಚ್ಚು. ನಿಮಗೆ ಗೊತ್ತಲ್ಲ, ನಾನು ಕೋಲ್ಕತ್ತದ ಲೊರೆಂಟೊ ಕಾನ್ವೆಂಟ್‌ ಎಂಟಲಿಯಲ್ಲಿ ಮುಖ್ಯೋಪಾಧ್ಯಾಯಿನಿ ಆಗಿದ್ದೇನೆ. ಶಾಲೆಗೆ ದಿನಾ ಸೀರೆ ಉಡುತ್ತೇನೆ. ಸಮಾರಂಭಗಳಿಗೂ ಸೀರೆಯೇ ಆಗಬೇಕು. ಪ್ರಯಾಣ, ಕಾರ್ಯಾಗಾರ, ಪಾರ್ಟಿಗಳಿಗಾದರೆ ಅಲ್ಲಿಗೆ ಒಪ್ಪುವ ದಿರಿಸು ತೊಡುವೆ. ನನ್ನ ಪ್ರಕಾರ ಅತ್ಯಾಧುನಿಕ, ಮಹಿಳೆಯರಿಗೆ ಗೌರವ, ಚೆಲುವನ್ನು ತಂದುಕೊಡುವ ಹಾಗೂ ಸೆಕ್ಸಿ ನೋಟ ನೀಡುವ ದಿರಿಸು ಎಂದರೆ ಸೀರೆಯೇ. ಯಾವುದೇ ಪ್ರದೇಶಕ್ಕೇ ಹೋಗಲಿ ಸೀರೆ ಖರೀದಿಸಲೆಂದೇ ಸಮಯ ಮೀಡಲಿಡುತ್ತೇನೆ. ಬೆಂಗಳೂರಿಗೆ ಬರಲು ಖುಷಿ ಎನಿಸುವುದೂ ಇಲ್ಲಿರುವ ರೇಷ್ಮೆ ಅಂಗಡಿಗಳಿಂದಾಗಿ. ನಲ್ಲಿ ಸಿಲ್ಕ್ಸ್‌ನನಗೆ ಅಚ್ಚುಮೆಚ್ಚು. ಬಣ್ಣಬಣ್ಣದ ಹತ್ತು ಸೀರೆಗಳನ್ನು ಖರೀದಿಸಿರುವೆ. ಈ ಸಿಟಿ ರೇಷ್ಮೆ ಸೀರೆಗಳ ಕಣಜ.

* ಮಹಿಳೆಯರಿಗೆ ನೀವು ನೀಡುವ ಸಲಹೆ?
ಕಡಿಮೆ ಸಮಯದಲ್ಲಿ ವಿಭಿನ್ನ ಕೆಲಸಗಳನ್ನು ಮಾಡುವ ತಾಕತ್ತಿರುವ ಹೆಣ್ಣುಮಕ್ಕಳು ಎಂದಿಗೂ ಪಲಾಯನವಾದಿಗಳಾಗಬಾರದು. ಎಷ್ಟೇ ಕಷ್ಟ ಬಂದರೂ ಮನೆ ಹಾಗೂ ವೃತ್ತಿ ಬದುಕನ್ನು ತೂಗಿಸಿಕೊಂಡು ಹೋಗಬೇಕು. ನಾನೆಲ್ಲೇ ಹೋಗಲಿ ಏನೇ ಮಾಡಲಿ, ಮನೆಗೆ ಬಂದು ಅಡುಗೆ ಕೆಲಸ ನಾನೇ ಮಾಡುವೆ. ಇಬ್ಬರು ಮಕ್ಕಳಿಗಾಗಿ ಅಡುಗೆ ಮಾಡಿ ಕೈಯಾರೆ ತಿನಿಸಿದರೇ ಮನಸ್ಸಿಗೆ ತೃಪ್ತಿ. ನಗುನಗುತ್ತಾ ಎಲ್ಲವನ್ನೂ ಮಾಡುತ್ತೇನೆ. ದೇವರು ಹೆಣ್ಣುಮಕ್ಕಳನ್ನು ಸೃಷ್ಟಿ ಮಾಡಿರುವುದೇ ಹೀಗೆ.

* ಯುವ ರೂಪದರ್ಶಿಗಳಿಗೆ ನೀವು ನೀಡುವ ಸಲಹೆ?
ಫ್ಯಾಷನ್‌ ಜಗತ್ತಿಗೆ ಹಲವು ಮಜಲುಗಳಿವೆ. ಫ್ಯಾಷನ್‌ನ ಯಾವ ಕ್ಷೇತ್ರಕ್ಕೆ ನೀವು ಹೋಗುತ್ತೀರಿ ಎಂಬುದನ್ನು ಮೊದಲು ನಿರ್ಧರಿಸಿಕೊಳ್ಳಿ. ಇಲ್ಲಿ ಎತ್ತರದ ನಿಲುವು, ಫಿಟ್‌ನೆಸ್‌  ಜೊತೆ ತ್ವಚೆಯ ಚೆಲುವು ಕಾಪಾಡಿಕೊಳ್ಳುವುದೂ ಮುಖ್ಯ. ಮಾಡೆಲಿಂಗ್‌ಅನ್ನು ಎಂದಿಗೂ ಪ್ರಾಥಮಿಕ ವೃತ್ತಿಯನ್ನಾಗಿ ಆಯ್ದುಕೊಳ್ಳಬೇಡಿ. ಈ ಕ್ಷೇತ್ರದಲ್ಲಿ ಎಲ್ಲರಿಗೂ ಯಶಸ್ಸು ಸಿಗುವುದಿಲ್ಲ. ಅದೃಷ್ಟವಂತ ಕೆಲವೇ ಕೆಲವರು ಮಾತ್ರ ಇಲ್ಲಿ ನಿರಂತರವಾಗಿ ಸಲ್ಲುತ್ತಾರೆ. ಇದೇ ಕಾರಣಕ್ಕಾಗಿ ಅನೇಕರು ಖಿನ್ನತೆಗೆ ಒಳಗಾಗಿದ್ದಿದೆ. ಹೀಗಾಗಿ ಈ ಕ್ಷೇತ್ರ ಅಭಿರುಚಿ ತಣಿಸುವ ಹವ್ಯಾಸವಾಗಿರಲಿ ಅಷ್ಟೆ.

* ನಿಮ್ಮ ಫಿಟ್‌ನೆಸ್‌ ಮಂತ್ರ ಏನು?
ನಾನೆಂದೂ ಕಟ್ಟುನಿಟ್ಟಿನ ನಿಯಮ ಪಾಲಿಸಿಲ್ಲ. ಮುಂಜಾನೆ ಗ್ರೀನ್‌ಟೀಗೆ ಜೇನುತುಪ್ಪ ಸೇರಿಸಿ ಕುಡಿಯುತ್ತೇನೆ. ಬಾದಾಮಿ, ಬೇಯಿಸಿದ ಮೊಟ್ಟೆ, ಒಂದು ಬಾಳೆಹಣ್ಣು ಸೇವಿಸುತ್ತೇನೆ. ಮಧ್ಯಾಹ್ನ ಊಟಕ್ಕೆ ಪಕ್ಕಾ ಭಾರತೀಯ ಊಟ ಇರಲೇಬೇಕು. ಅನ್ನ, ದಾಲ್‌, ನಾನ್‌ವೆಜ್‌ ಕರಿ, ಹಸಿ ತರಕಾರಿಗಳನ್ನು ಸೇವಿಸುತ್ತೇನೆ.  ರಾತ್ರಿ ರೋಟಿ ಅಥವಾ ಪರೋಟ. ಅಂದಹಾಗೆ ಮಹಿಳೆಯರು ನಿತ್ಯ ಒಂದು ಗ್ಲಾಸ್‌ ಹಾಲು ಕುಡಿಯಲೇಬೇಕು. ಜೊತೆಗೆ ಯೋಗಾಭ್ಯಾಸ ಮಾಡಬೇಕು. ದೇಹ ಸೌಂದರ್ಯಕ್ಕಾಗಿ ಅಲ್ಲ, ಮಾನಸಿಕ ಸ್ಥಿಮಿತ ಕಾಯ್ದುಕೊಳ್ಳಲು.

*ನಿಮ್ಮ ಇಷ್ಟದ ಹವ್ಯಾಸ?
ನೃತ್ಯ ಮಾಡಲು ಹೆಚ್ಚು ಇಷ್ಟ. ಸಂಗೀತ ಕೇಳುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT