ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೃಷ್ಟಿ ಕಸಿದ ಪವರ್‌ ಕಟ್‌; ಬಾಳು ಬೆಳಗಿದ ಕ್ರಿಕೆಟ್‌

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪವರ್ ಕಟ್‌ ಆಗಿ ಫ್ಯಾನ್ ತಿರುಗುವುದು ನಿಂತಾಗ ತಂಗಾಳಿಯ ಹಿತ ಬಯಸಿ ಹೊರಗೆ ಬಂದ ಅಜಯ್‌ ಕುಮಾರ್‌ ರೆಡ್ಡಿ ಅಂದು ಕಳೆದುಕೊಂಡದ್ದು ಕಣ್ಣು ಮಾತ್ರವಲ್ಲ; ಬದುಕು ಕೂಡ. ಆದರೆ ಕ್ರಿಕೆಟ್‌ ಅವರ ಕೈ ಹಿಡಿಯಿತು; ಮುನ್ನಡೆಸಿತು. ಭಾರತ ಅಂಧರ ಕ್ರಿಕೆಟ್ ತಂಡದ ನಾಯಕನಾಗಿ ಬೆಳೆಸಿತು.

ಅಜಯ್‌ ಕುಮಾರ್ ರೆಡ್ಡಿ ಕಳೆದ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಅಂಧರ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದರು. ಮುಂದಿನ ವರ್ಷದ ಜನವರಿಯಲ್ಲಿ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ ಟೂರ್ನಿಯಲ್ಲೂ ಅವರೇ ಭಾರತ ತಂಡದ ನಾಯಕ. ಅವರೀಗ ತಂಡದೊಂದಿಗೆ ಬೆಂಗಳೂರಿನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾದ ಅಜಯ್‌ ಹುಟ್ಟು ಅಂಧ ಅಲ್ಲ. ನಾಲ್ಕನೇ ವಯಸ್ಸಿನಲ್ಲಿ ನಡೆದ ಅವಘಡವೊಂದು ಅವ ರನ್ನು ಕತ್ತಲ ಲೋಕಕ್ಕೆ ತಳ್ಳಿತು. ಆ ಅವಘಡವನ್ನು ಅವರು ‘ಪ್ರಜಾವಾಣಿ’ಗೆ ವಿವರಿಸಿದ್ದು ಹೀಗೆ:
ಮುಂಜಾನೆ ಸವಿ ನಿದ್ದೆಯಲ್ಲಿದ್ದೆ. ಅಷ್ಟರಲ್ಲಿ ಪವರ್ ಕಟ್‌ನಿಂದಾಗಿ ಫ್ಯಾನ್ ತಿರುಗುವುದು ನಿಂತಿತು. ಶೆಕೆ ತಡೆಯಲಾಗದೆ ನಾನು ಮನೆಯಿಂದ ಹೊರಗೆ ಹೋಗಲು ಪ್ರಯತ್ನಿಸಿದೆ. ಬಾಗಿಲು ತೆಗೆಯುವಷ್ಟರಲ್ಲಿ ಎಡವಿ ಬಿದ್ದೆ. ಬಾಗಿಲಿನ ಚಿಲಕ ನನ್ನ ಎಡಕಣ್ಣಿಗೆ ಚುಚ್ಚಿತು. ಇದರಿಂದಾಗಿ ದೃಷ್ಟಿ ಕಳೆದುಕೊಂಡೆ. ಸೋಂಕಿನಿಂದಾಗಿ ದಿನಗಳೆದಂತೆ ಬಲಗಣ್ಣು ಕಣ್ಣು ಕೂಡ ಮಂಜಾಗುತ್ತ ಹೋಯಿತು. ಎರಡು ಮೀಟರ್‌ಗಿಂತ ದೂರದ ವಸ್ತುಗಳನ್ನು ನೋಡುವುದು ಕಷ್ಟವಾಯಿತು. ಹೀಗಾಗಿ ಅಂಧರ ಶಾಲೆಗೆ ಹೋಗುವಂತೆ ವೈದ್ಯರು ಸಲಹೆ ನೀಡಿದರು.

ಹೊಸ ಆಯಾಮ ನೀಡಿದ ಕ್ರಿಕೆಟ್‌
ಐದನೇ ತರಗತಿ ವರೆಗೆ ಸಾಮಾನ್ಯ ಶಾಲೆಯಲ್ಲಿ ಕಲಿತ ರೆಡ್ಡಿ 2002ರಲ್ಲಿ ಗುಂಟೂರು ಜಿಲ್ಲೆ ನರಸರಾವ್ ಪೇಟದ ಲೂಥ್ರನ್ ಅಂಧರ ಶಾಲೆಗೆ ಸೇರಿದರು. ತರಗತಿಯಲ್ಲಿ ಕುಳಿತಿದ್ದಾಗ ಅಂಧರ ಕ್ರಿಕೆಟ್‌ ಚೆಂಡಿನ ‘ಕಿಣಿ ಕಿಣಿ’ ಸದ್ದು ಕೇಳಿತು. ಅಲ್ಲಿಂದ ಅವರ ಬದುಕು ಹೊಸ ಆಯಾಮ ಪಡೆದುಕೊಂಡಿತು. ಕ್ರಿಕೆಟ್‌ ಮೇಲೆ ಮೊದಲೇ ಆಸಕ್ತಿ ಇದ್ದ ಅವರಿಗೆ ಅಂಧರು ಕೂಡ ಕ್ರಿಕೆಟ್ ಆಡುವುದು ತಿಳಿದಾಗ ರೋಮಾಂಚನವಾಯಿತು.

‘ಅಂಧರ ಕ್ರಿಕೆಟ್ ಚೆಂಡಿನ ಜಾಡು ಹಿಡಿದು ಶಾಲಾ ಮೈದಾನಕ್ಕೆ ಇಳಿದ ನನಗೆ ಅವಕಾಶಗಳ ಬಾಗಿಲು ತೆರೆಯಿತು. 2002ರಲ್ಲಿ ಶಾಲಾ ತಂಡಕ್ಕೆ ಆಯ್ಕೆಯಾದೆ. ಅಂತರ ಶಾಲೆ ಮತ್ತು ಅಂತರ ಜಿಲ್ಲಾ ಮಟ್ಟದ ಟೂರ್ನಿಗಳಲ್ಲಿ ಆಡಿದೆ. 2006ರಲ್ಲಿ ಆಂಧ್ರಪ್ರದೇಶ ರಾಜ್ಯ ಅಂಧರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದೆ’ ಎಂದು ಅವರು ವಿವರಿಸಿದರು.

ಕನಸು ನನಸು ಮಾಡಿದ ಬೆಂಗಳೂರು
ವಲಯ ಮಟ್ಟ ಮತ್ತು ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ ಬಲಗೈ ಬ್ಯಾಟ್ಸ್‌ಮನ್‌ ಮತ್ತು ಬಲಗೈ ವೇಗಿ ಅಜಯ್‌ ಕುಮಾರ್‌ ಅವರ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವ ಕನಸು ನನಸಾದದ್ದು ಬೆಂಗಳೂರಿನಲ್ಲಿ. ಭಾರತೀಯ ಅಂಧರ ಕ್ರಿಕೆಟ್‌ ಸಂಸ್ಥೆ (ಕ್ಯಾಬಿ) 2010ರಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಜಯ್‌ ಕುಮಾರ್‌ ಆಯ್ಕೆ ಸಮಿತಿಯವರ ಗಮನ ಸೆಳೆದರು; ಸುಲಭವಾಗಿ ತಂಡಕ್ಕೆ ಆಯ್ಕೆಯಾದರು.

ಅವರು ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯ ಆಡಿದ್ದು ಇಂಗ್ಲೆಂಡ್‌ನಲ್ಲಿ. ಮೊದಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದರಿಂದ ಆತ್ಮವಿಶ್ವಾಸ ಹೆಚ್ಚಿತು.
‘ಕ್ರಿಕೆಟ್‌ನಿಂದಾಗಿ ನನಗೆ ಗೌರವ, ಹಣ, ಬ್ಯಾಂಕ್‌ನಲ್ಲಿ ಉದ್ಯೋಗ ಎಲ್ಲವೂ ಸಿಕ್ಕಿದೆ. ಪಾಲಕರನ್ನು ಆರ್ಥಿಕ ಸಮಸ್ಯೆಯಿಂದ ಪಾರು ಮಾಡಲು ಸಾಧ್ಯವಾಗಿದೆ. ಅಂಧರಿಗೆ ಹೀಗೊಂದು ಕ್ರೀಡೆ ಇಲ್ಲದೇ ಇರುತ್ತಿದ್ದರೆ ನನ್ನಂಥ ಅನೇಕ ಮಂದಿ ‘ಕತ್ತಲಲ್ಲೇ’ ಬದುಕು ಕಳೆಯಬೇಕಾಗಿತ್ತು’ ಎಂದು ಹೇಳುವಾಗ ಅವರು ಭಾವುಕರಾದರು.

ಬೆಂಗಳೂರಿನಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿರುವ ಅವರು ತಂಡಕ್ಕೆ 50 ಓವರ್‌ಗಳ ವಿಶ್ವಕಪ್‌ ಪ್ರಶಸ್ತಿಯನ್ನು ಕೂಡ ಗಳಿಸಿಕೊಡುವ ಭರವಸೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT