ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ನೀತಿ ಬಿಗಿಗೊಳಿಸಲು ಟ್ರಂಪ್‌ ಸೂಚನೆ

Last Updated 12 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ದೇಶದ ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ವಲಸೆ ನೀತಿಯನ್ನು ಬಿಗಿಗೊಳಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಬಾಂಗ್ಲಾದೇಶದ ನಿವಾಸಿ ಉಲ್ಲಾಹ್‌ ನ್ಯೂಯಾರ್ಕ್‌ನಲ್ಲಿ ಸ್ಫೋಟ ನಡೆಸಿದ ಬೆನ್ನಲ್ಲೇ ಈ ಆದೇಶ ಹೊರಡಿಸಿದ್ದಾರೆ.

‘ಕಳೆದ ಎರಡು ತಿಂಗಳಲ್ಲಿ ನ್ಯೂಯಾರ್ಕ್‌ನಲ್ಲಿ ಸಾಮೂಹಿಕ ಹತ್ಯೆ ನಡೆಸಲು ನಡೆದ ಎರಡನೇ ದಾಳಿ ಇದಾಗಿದೆ. ಹೀಗಾಗಿ, ಅಮೆರಿಕದ ನಾಗರಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಕಾನೂನಾತ್ಮಕ ಬದಲಾವಣೆ ತರಲು ಸಂಸತ್ತು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು’ ಎಂದು ಟ್ರಂಪ್‌ ತಿಳಿಸಿದ್ದಾರೆ.

‘ಐಎಸ್‌ ಪರ ನಿಷ್ಠೆ ಹೊಂದಿದ್ದ ದಾಳಿಕೋರ’
ನ್ಯೂಯಾರ್ಕ್‌ ವರದಿ: ಇಲ್ಲಿನ ಮೆಟ್ರೊ ನಿಲ್ದಾಣದಲ್ಲಿ ಸೋಮವಾರ  ಬಾಂಬ್‌ ಸ್ಫೋಟ ನಡೆಸಿದ್ದ ಬಾಂಗ್ಲಾದೇಶ ಮೂಲದ ದಾಳಿಕೋರ ಇಸ್ಲಾಮಿಕ್‌ ಸ್ಟೇಟ್‌ ಪರ ನಿಷ್ಠೆ ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬಂಧಿತನನ್ನು 27 ವರ್ಷದ ಅಕಾಯೆದ್‌ ಉಲ್ಲಾಹ್‌ ಎಂದು ಗುರುತಿಸಲಾಗಿದೆ. ದೇಹಕ್ಕೆ ವೈರ್‌ ಸುತ್ತಿಕೊಂಡು ಪೈಪ್‌ ಬಾಂಬ್‌ ಮೂಲಕ ಸ್ಫೋಟಿಸಲು ಮುಂದಾಗಿದ್ದ, ಆದರೆ ಆತ ಬಳಸಿದ್ದ ಉಪಕರಣವು ಅವಧಿಗೂ ಮುನ್ನವೇ ಸ್ಫೋಟಗೊಂಡಿತು, ಇದರಿಂದ ನಾಲ್ಕು ಮಂದಿ ಗಾಯಗೊಂಡರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ನಡೆಸಿದ ಕಾರ್ಯಾಚರಣೆ ಬಳಿಕ ತೀವ್ರ ಅಸಮಾಧಾನಗೊಂಡಿದ್ದ ಉಲ್ಲಾಹ್‌ ನ್ಯೂಯಾರ್ಕ್‌ನಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದನು. ಅಲ್ಲದೇ ಈತ ಇಸ್ಲಾಮಿಕ್‌ ಸ್ಟೇಟ್ ಪರ ನಿಷ್ಠೆ ಹೊಂದಿದ್ದ, ಆದರೆ ಯಾವ ಸಂಘಟನೆ ಜತೆಗೆ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನೂನುಬದ್ಧ ನಿವಾಸಿ: ‘ಉಲ್ಲಾಹ್‌ ಈಗ ಅಮೆರಿಕದ ಕಾನೂನುಬದ್ಧ ನಿವಾಸಿ. ಎಫ್‌43 ಕೌಟುಂಬಿಕ ವಲಸೆ ವೀಸಾದ ಅಡಿಯಲ್ಲಿ 2011ರಲ್ಲಿ ಭಾರತಕ್ಕೆ ಬಂದಿದ್ದನು. ಈ ವೀಸಾದಡಿ ಅಮೆರಿಕದ ನಾಗರಿಕರ ಸಹೋದರರ ಮಕ್ಕಳಿಗೆ ನೀಡಲಾಗುತ್ತದೆ. ಬಾಂಗ್ಲಾದೇಶದವನಾಗಿದ್ದ ಈತ ಈಗ ಬ್ರ್ಯೂಕ್ಲಿನ್‌ ನಿವಾಸಿಯಾಗಿದ್ದನು’ ಎಂದು ಆಂತರಿಕ ಭದ್ರತಾ ವಿಭಾಗದ ವಕ್ತಾರ ಟೈಲರ್‌ ಹ್ಯೂಲ್ಟನ್‌ ತಿಳಿಸಿದ್ದಾರೆ.

2012ರ ಮಾರ್ಚ್‌ 12ರಂದು ಟ್ಯಾಕ್ಸಿ ಹಾಗೂ ಲಿಮೋಷಿನ್‌ ಕಮೀಷನ್‌ನಿಂದ ವಾಹನ ಚಾಲನಾ ಅನುಮತಿಯನ್ನು ಪಡೆದಿದ್ದು, ನಂತರ ನವೀಕರಣ ಮಾಡಿಕೊಂಡಿರಲಿಲ್ಲ. ದಾಳಿಗೆ ಬಳಸಿದ ಸ್ಫೋಟಕವನ್ನು ಕೆಲಸದ ಸ್ಥಳದಿಂದಲೇ ಪಡೆದಿದ್ದನು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ದಾಳಿಕೋರ ಬಳಸಿದ ಸ್ಫೋಟಕವು ಕಡಿಮೆ ತೀವ್ರತೆ ಹೊಂದಿತ್ತು ಎಂದು ನ್ಯೂಯಾರ್ಕ್‌ನ ಗವರ್ನರ್‌ ಆ್ಯಂಡ್ರ್ಯೂ ಕುವೊಮೊ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT