ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

17 ಹಳ್ಳಿಗಳಿಗೆ ಬರುವ ತಿಂಗಳಲ್ಲೇ ಕಾವೇರಿ ನೀರು

Last Updated 12 ಡಿಸೆಂಬರ್ 2017, 19:47 IST
ಅಕ್ಷರ ಗಾತ್ರ

ಬೆಂಗಳೂರು: ‘110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಲು ₹1,886 ಕೋಟಿ ಯೋಜನೆಗೆ ಅನುಮೋದನೆ ಸಿಕ್ಕಿದೆ. ಗುರುತ್ವಾಕರ್ಷಣ ಬಲದಿಂದ ನೀರು ಹರಿಸಲು ಸಾಧ್ಯವಿರುವ 17 ಹಳ್ಳಿಗಳಿಗೆ ಬರುವ ಜನವರಿಯಿಂದಲೇ ಕಾವೇರಿ ನೀರು ಪೂರೈಸಲಾಗುವುದು’ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ತಿಳಿಸಿದರು.

ಬಿಬಿಎಂಪಿಯಲ್ಲಿ ಮಂಗಳವಾರ ನಡೆದ ಮುಂದುವರಿದ ವಿಶೇಷ ಸಭೆಯಲ್ಲಿ ಪಾಲಿಕೆ ಸದಸ್ಯ ಎಂ.ಕೆ.ಗುಣಶೇಖರ್‌ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು.

‘ಕಾವೇರಿ 5ನೇ ಹಂತದ ಯೋಜನೆಯಡಿ 10 ಟಿಎಂಸಿ ಅಡಿ ನೀರನ್ನು ನಗರಕ್ಕೆ ತರಲಾಗುವುದು. 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜು ಮಾಡುವ ಯೋಜನೆ ಅನುಷ್ಠಾನಕ್ಕೆ ಜಪಾನಿನ ಜೈಕಾ ಸಂಸ್ಥೆ ಜತೆಗೆ ಒಡಬಂಡಿಕೆ ಮಾಡಿಕೊಳ್ಳಲಾಗುತ್ತಿದೆ. ನಗರದ ಹೃದಯ ಭಾಗದಲ್ಲಿ ಸೋರಿಕೆಯಾಗುತ್ತಿರುವ ನೀರು ಉಳಿಸಿ, ಈ ಹಳ್ಳಿಗಳಿಗೆ ಒದಗಿಸುವುದು ಈ ಯೋಜನೆಯಲ್ಲಿತ್ತು. ಆದರೆ, ಇದು ಶಾಶ್ವತ ಪರಿಹಾರವಲ್ಲವೆಂದು, ಶಾಶ್ವತ ಯೋಜನೆಗಾಗಿ ₹1,500 ಕೋಟಿಯಲ್ಲಿ ಪೈಪ್‌ಲೈನ್‌, ಪಂಪಿಂಗ್‌ ಸ್ಟೇಷನ್‌ ಸ್ಥಾಪಿಸಲಾಗುತ್ತಿದೆ. ನೀರಿನ ಸೋರಿಕೆ ತಡೆಗಟ್ಟಲು ₹386 ಕೋಟಿ ವಿನಿಯೋಗಿಸಲಾಗುತ್ತಿದೆ. ಈ ಹಳ್ಳಿಗಳ ವ್ಯಾಪ್ತಿಯಲ್ಲಿ ಕೆರೆಗಳು ಮಲಿನವಾಗುವುದನ್ನು ತಡೆಯಲು 14 ಎಸ್‌ಟಿಪಿ ಕಟ್ಟಲಾಗುತ್ತಿದೆ’ ಎಂದು ತಿಳಿಸಿದರು.

‘ಗುರುತ್ವಾಕರ್ಷಣೆಯಿಂದ 17 ಹಳ್ಳಿಗಳಿಗೆ ನೀರು ಕೊಡುವ ಕಾಮಗಾರಿಯನ್ನು ಜನವರಿಯೊಳಗೆ ಮುಗಿಸುವುದಾಗಿ ಸರ್ಕಾರಕ್ಕೆ ಮಾತು ಕೊಟ್ಟಿದ್ದೇವೆ. ಅದರಂತೆ ಜನವರಿಯಲ್ಲೇ ಈ ಹಳ್ಳಿಗಳಿಗೆ ನೀರು ಕೊಡುತ್ತೇವೆ. 2018ರ ಸೆಪ್ಟೆಂಬರ್‌ ಒಳಗೆ ಇನ್ನೂ 33 ಹಳ್ಳಿಗಳಿಗೆ ಗುರುತ್ವಾಕರ್ಷಣೆ ಮೂಲಕ ಕಾವೇರಿ ನೀರು ಕೊಡುತ್ತೇವೆ. ರಾಜರಾಜೇಶ್ವರಿ ನಗರ, ಬ್ಯಾಟರಾಯನಪುರ, ಬೊಮ್ಮನಹಳ್ಳಿ, ಮಹದೇವಪುರ ಭಾಗದಲ್ಲಿ 5 ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಪೈಪ್‌ಲೈನ್‌ ಮತ್ತು ಒಳಚರಂಡಿ ಕಾಮಗಾರಿ ಆರಂಭವಾಗಿದೆ. ಐದೂ ಪ್ಯಾಕೇಜ್‌ ಕಾಮಗಾರಿಗಳನ್ನೂ 2019ರ ಮೇ ಒಳಗೆ ಪೂರ್ಣಗೊಳಿಸುತ್ತೇವೆ’ ಎಂದು ತಿಳಿಸಿದರು.

‘ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ಶೇ 49ರಿಂದ ಶೇ 40ಕ್ಕೆ ತಗ್ಗಿದೆ. ನೀರಿನ ಸೋರಿಕೆ ಭೌತಿಕವಾಗಿ ಶೇ 20ರಷ್ಟಿದೆ. ಈ ಬಾರಿ ಮಳೆ ಚೆನ್ನಾಗಿ ಆಗಿರುವುದರಿಂದ ಮುಂದಿನ ಜೂನ್‌ವರೆಗೂ ಕುಡಿಯುವ ನೀರಿನ ಅಭಾವ ತಲೆದೋರುವ ಸಾಧ್ಯತೆ ಇಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ.  ನೀರಿನ ಮಿತ ಬಳಕೆಗೆ ಮತ್ತು ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿಕೊಳ್ಳಲು ಗಮನ ಕೊಡಬೇಕು’ ಎಂದು ಮನವಿ ಮಾಡಿದರು.

ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಪ್ರಶ್ನೆಗೆ ಉತ್ತರಿಸಿದ ಅವರು, ‘2020 ಅಥವಾ 2021ರ ವೇಳೆಗೆ ಎತ್ತಿನಹೊಳೆ ಯೋಜನೆ ಪೂರ್ಣವಾಗುವ ನಿರೀಕ್ಷೆ ಇದೆ. ಈ ಯೋಜನೆಯಿಂದ ಹೆಸರಘಟ್ಟಕೆರೆ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಒಟ್ಟು 2.5 ಟಿಎಂಸಿ ಅಡಿ ನೀರು ಸಿಗಲಿದೆ. ಈ ಎರಡೂ ಕೆರೆಗಳಿಗೆ ಕೊಳಚೆ ನೀರು ಸೇರದಂತೆ ಹತ್ತಿರದಲ್ಲಿ ಎಸ್‌ಟಿಪಿ ಘಟಕಗಳನ್ನು ಅಳವಡಿಸಲಾಗುವುದು. ಕಲುಷಿತಗೊಂಡಿರುವ ತಿಪ್ಪಗೊಂಡನಹಳ್ಳಿ ಕೆರೆ ನೀರನ್ನು ಈಗಾಗಲೇ ಶುದ್ಧೀಕರಿಸಿ ಹೊರ ಬಿಡುತ್ತಿದ್ದೇವೆ ’ ಎಂದರು.

ಎಸ್‌ಟಿ‍ಪಿ ಅಳವಡಿಸಿಕೊಳ್ಳದ 1,096 ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ನೋಟಿಸ್‌ ನೀಡಲಾಗಿದೆ. ಇದರಲ್ಲಿ 752 ಅಪಾರ್ಟ್‌ಮೆಂಟ್‌ ಸಮುಚ್ಚಯಗಳು 2017ರಲ್ಲಿ ನಿರ್ಮಿಸಿದಂತಹವು. ಉಳಿದ 344 ಕಟ್ಟಡಗಳು ಹಳೆಯವು ಎಂದು ಜಲಮಂಡಳಿ ಅಧ್ಯಕ್ಷರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT