ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯಕ್ಕಾಗಿ ಸಹಸ್ರಾರು ಮಂದಿ ಹೆಜ್ಜೆ

Last Updated 13 ಡಿಸೆಂಬರ್ 2017, 6:17 IST
ಅಕ್ಷರ ಗಾತ್ರ

ಮಂಗಳೂರು: ಜಾತ್ಯತೀತರ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳ ಸಾವಿ ರಾರು ಮಂದಿ ಕಾರ್ಯಕರ್ತರು ಮಂಗಳವಾರ ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯಿಂದ ಮಾಣಿವರೆಗೆ 24 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯ ವೃದ್ಧಿ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ನಡೆಸಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾದ ‘ಸಾಮರಸ್ಯ ನಡಿಗೆ’ ಸಂಜೆ 6 ಗಂಟೆಗೆ ಮಾಣಿ ಸಮೀಪದ ನೇರಳಕಟ್ಟೆ ಮೈದಾ ನವನ್ನು ತಲುಪಿತು. ಕಾಂಗ್ರೆಸ್‌, ಸಿಪಿಎಂ, ಸಿಪಿಐ, ಜೆಡಿಎಸ್‌ ಪಕ್ಷಗಳು, ರೈತ ಸಂಘ, ಡಿವೈಎಫ್‌ಐ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಸಾಮರಸ್ಯಕ್ಕಾಗಿ ಹೆಜ್ಜೆ ಹಾಕಿದರು.

ರಮಾನಾಥ ರೈ, ಬಹುಭಾಷಾ ಸಿನಿಮಾ ನಟ ಪ್ರಕಾಶ್ ರೈ, ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ, ಸಿಪಿಐ ಮುಖಂಡ ಡಾ.ಸಿದ್ದನಗೌಡ ಪಾಟೀಲ ಮತ್ತು ಜೆಡಿಎಸ್‌ ಹಿರಿಯ ಮುಖಂಡ ಕೆ.ಅಮರನಾಥ ಶೆಟ್ಟಿ ಪಾರಿವಾಳಗಳು ಹಾಗೂ ಬಣ್ಣ ಬಣ್ಣದ ಬಲೂನುಗಳನ್ನು ಆಗಸಕ್ಕೆ ಹಾರಿಬಿಡುವ ಮೂಲಕ ನಡಿಗೆಗೆ ಚಾಲನೆ ನೀಡಿದರು.

ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಐವನ್‌ ಡಿಸೋಜ, ಶಾಸಕ ರಾದ ಕೆ.ವಸಂತ ಕೆ.ಅಭಯಚಂದ್ರ ಜೈನ್, ಜೆ.ಆರ್‌.ಲೋಬೊ, ಸಿಪಿಎಂ ಜಿಲ್ಲಾ ಮಂಡಳಿ ಕಾರ್ಯದರ್ಶಿ ಕೆ.ವಸಂತ ಆಚಾರಿ, ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ವಿ.ಕೆ.ಕುಕ್ಯಾನ್‌, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೆ.ಹರೀಶ್‌ಕುಮಾರ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್‌, ಕಾರ್ಯದರ್ಶಿ ಮಮತಾ ಡಿ.ಗಟ್ಟಿ, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವಿಕಿರಣ್‌ ಪುಣಚ, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ, ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಘಟನಾ ಸಂಚಾಲಕ ಎಂ.ದೇವದಾಸ್‌, ಜಿಲ್ಲಾ ಸಂಚಾಲಕ ರಘು ಎಕ್ಕಾರ್‌, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ವಿಭಾಗೀಯ ಸಂಚಾಲಕ ಚಂದು ಎಲ್‌. ಸೇರಿದಂತೆ ಹಲವು ಮುಖಂಡರು ಪಾದ ಯಾತ್ರೆಯಲ್ಲಿ ಭಾಗಿಯಾದರು.

ಅಲ್ಲಲ್ಲಿ ಸೇರಿದ ಜನ: ಫರಂಗಿಪೇಟೆ ಯಿಂದ ಹೊರಟ ನಡಿಗೆ ತುಂಬೆ, ಬಿ.ಸಿ.ರೋಡ್‌ ಮಾರ್ಗವಾಗಿ ಮೆಲ್ಕಾರ್‌ ತಲು ಪಿತು. ಅಲ್ಲಿ ಮಧ್ಯಾಹ್ನದ ಊಟದ ವಿರಾಮದ ಬಳಿಕ ಮತ್ತೆ ಪಾದಯಾತ್ರೆ ಆರಂಭವಾಯಿತು. ಕಲ್ಲಡ್ಕ, ಮಾಣಿ ಮಾರ್ಗವಾಗಿ ಸಂಜೆ 6 ಗಂಟೆಗೆ ನೇರಳಕಟ್ಟೆ ಮೈದಾನ ತಲುಪಿತು. ದಾರಿಯುದ್ದಕ್ಕೂ ಅಲ್ಲಲ್ಲಿ ಗುಂಪು ಗುಂಪಾಗಿ ಪಾದಯಾತ್ರೆಯ ತಂಡವನ್ನು ಸೇರಿಕೊಂಡರು.

ಯುವಕರು ಹುಮ್ಮಸ್ಸಿನಿಂದ ವೇಗವಾಗಿ ನಡೆಯುತ್ತ ಬೇಗನೆ ಗುರಿ ತಲುಪಿದರು. ರಮಾನಾಥ ರೈ ಸೇರಿದಂತೆ ಹಲವು ಮಂದಿ ಹಿರಿಯರು ನಿಧಾನವಾಗಿ ನಡೆಯುತ್ತಿದ್ದರು. ಖಾದರ್‌, ಅಭಯ ಚಂದ್ರ ಜೈನ್‌, ಶಕುಂತಳಾ ಶೆಟ್ಟಿ ಮತ್ತಿತ ರರು ಕೆಲವು ದೂರದವರೆಗೆ ರೈ ಜೊತೆ ಹೆಜ್ಜೆ ಹಾಕಿದರು. ನಂತರ ವಾಹನದಲ್ಲಿ ತೆರಳಿದರು.

ಘೋಷಣೆಗಳಿಲ್ಲದ ನಡಿಗೆ: ಸಾಮರಸ್ಯ ನಡಿಗೆಯುದ್ದಕ್ಕೂ ಯಾವುದೇ ಘೋಷಣೆ ಗಳನ್ನು ಕೂಗಲಿಲ್ಲ. ಯಾವುದೇ ಪಕ್ಷ ಅಥವಾ ಸಂಘಟನೆಯ ಬಾವುಟಗಳನ್ನೂ ಬಳಕೆ ಮಾಡಲಿಲ್ಲ. ‘ಸಾಮರಸ್ಯ ನಡಿಗೆ’ ಎಂದು ಮುದ್ರಿಸಲಾಗಿದ್ದ ಟೋಪಿಗಳನ್ನು ಧರಿಸಿದ್ದ ಬಹುತೇಕರು ಬಿಳಿ ಬಣ್ಣದ ಬಟ್ಟೆಗಳನ್ನೇ ಧರಿಸಿ ಬಂದಿದ್ದು ವಿಶೇಷ ವಾಗಿತ್ತು.

‘ಜೊತೆ ಜೊತೆಯಾಗಿ ಸಾಗೋಣ’, ‘ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲಾ ಒಂದೇ’ ಎಂಬ ಭಿತ್ತಿ ಫಲಕಗಳನ್ನು ಹಿಡಿದು ಪಾದಯಾತ್ರಿಗಳು ಸಾಗಿದರು. ಮಾರ್ಗದುದ್ದಕ್ಕೂ ಅಂಗಡಿ ಮುಂಗ ಟ್ಟುಗಳ ಮಾಲೀಕರು, ಸಿಬ್ಬಂದಿ, ಸಾರ್ವ ಜನಿಕರು ಸಾಮರಸ್ಯ ನಡಿಗೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದ ದೃಶ್ಯ ಕಂಡುಬಂತು.

ಬಿಗಿ ಪೊಲೀಸ್ ಭದ್ರತೆ: ಸಾಮರಸ್ಯ ನಡಿಗೆಯ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿತ್ತು. ಸೂಕ್ಷ್ಮ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ವಿಶೇಷ ಪಹರೆ ವ್ಯವಸ್ಥೆ ಮಾಡಲಾಗಿತ್ತು. ಬಿ.ಸಿ.ರೋಡ್‌ ಜಂಕ್ಷನ್‌, ಕಲ್ಲಡ್ಕ ರಾಮ ಮಂದಿರ, ಮಸೀದಿಗಳ ಸುತ್ತ ನೂರಾರು ಸಂಖ್ಯೆಯ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ಪಾದಯಾತ್ರಿಕರ ಜೊತೆಯಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜ್ಯ ಮೀಸಲು ಪೊಲೀಸ್‌ ಪಡೆಯ ತಂಡದವರು ಸಾಗಿದರು. ಈ ಸಮ ಯದಲ್ಲಿ ರಾಷ್ಟ್ರೀಯ ಹೆದ್ದಾರಿಯ ಒಂದು ಮಾರ್ಗವನ್ನು ನಡಿಗೆಗೂ ಇನ್ನೊಂದು ಮಾರ್ಗವನ್ನು ವಾಹನ ಸಂಚಾರಕ್ಕೂ ಬಳಕೆ ಮಾಡಲಾಯಿತು.

ಕಲ್ಲಂಗಡಿ, ನೀರು, ಮಜ್ಜಿಗೆ

ಪಾದಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಅಲ್ಲಲ್ಲಿ ಕುಡಿಯುವ ನೀರು, ತಂಪು ಪಾನೀಯ, ಮಜ್ಜಿಗೆ, ಕಲ್ಲಂಗಡಿ ಹಣ್ಣು ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮಾರ್ಗದ ನಡುವೆ ವಾಹನಗಳಲ್ಲೂ ನೀರಿನ ಬಾಟಲಿಗಳನ್ನು ತಂದಿದ್ದು, ಬಾಯಾರಿದವರಿಗೆ ವಿತರಿಸಲಾಯಿತು.

ಸ್ವಚ್ಛತೆಗೂ ವ್ಯವಸ್ಥೆ

ನಡಿಗೆಯ ಮಾರ್ಗದಲ್ಲಿ ಬಿದ್ದ ಕುಡಿಯುವ ನೀರಿನ ಬಾಟಲಿಗಳು, ಮಜ್ಜಿಗೆ ಪ್ಯಾಕೆಟ್‌ ಮತ್ತಿತರ ತ್ಯಾಜ್ಯವನ್ನು ಸಂಗ್ರಹಿಸಿ, ಕೊಂಡೊಯ್ಯುವುದಕ್ಕೂ ಆಯೋಜಕರು ವ್ಯವಸ್ಥೆ ಮಾಡಿದ್ದರು. ನಡಿಗೆ ಸಾಗುತ್ತಿದ್ದಂತೆ ಹಿಂದೆಯೇ ನಾಲ್ಕು ವಾಹನಗಳಲ್ಲಿ ಬಂದವರು ತ್ಯಾಜ್ಯವನ್ನು ಎತ್ತಿಕೊಂಡು ಹೋಗುತ್ತಿದ್ದರು.

ಜಿಲ್ಲಾಧಿಕಾರಿ, ಎಸ್‌ಪಿ ಮೊಕ್ಕಾಂ

ಸಾಮರಸ್ಯ ನಡಿಗೆ ಆರಂಭದಿಂದ ಮುಗಿಯುವವರೆಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ ಮತ್ತು ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್‌ ರೆಡ್ಡಿ ಬಂಟ್ವಾಳದಲ್ಲೇ ಮೊಕ್ಕಾಂ ಹೂಡಿದ್ದರು. ಬಿ.ಸಿ.ರೋಡ್‌ ಜಂಕ್ಷನ್‌ ಮತ್ತು ಕಲ್ಲಡ್ಕ ಪಟ್ಟಣದಲ್ಲಿ ಪಾದಯಾತ್ರೆ ಸಾಗಿದಾಗ ಇಬ್ಬರೂ ಖುದ್ದು ಸ್ಥಳದಲ್ಲಿದ್ದು ಪರಿಸ್ಥಿತಿ ಅವಲೋಕಿಸಿದರು.

ಜಿಲ್ಲಾ ಪೊಲೀಸ್‌ ಅಧಿಕಾರಿಗಳೊಂದಿಗೆ ಮಂಗಳೂರು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ಅವರನ್ನೂ ಹೆಚ್ಚುವರಿಯಾಗಿ ಭದ್ರತಾ ಉಸ್ತುವಾರಿಗೆ ನಿಯೋಜಿಸಲಾಗಿತ್ತು. ಬಂಟ್ವಾಳ ಉಪ ವಿಭಾಗದ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೂ ಸ್ಥಳದಲ್ಲಿದ್ದರು.

* * 

ನಾವು ಚುನಾವಣೆಯನ್ನು ಪ್ರತ್ಯೇಕವಾಗಿ ಎದುರಿಸುತ್ತೇವೆ. ಆದರೆ, ಜಿಲ್ಲೆಯಲ್ಲಿ ಸಾಮರಸ್ಯ ಮೂಡಿಸುವುದಕ್ಕೆ ಒಟ್ಟಾಗಿದ್ದೇವೆ. ಜಿಲ್ಲೆಯ ಘನತೆಯನ್ನು ಎತ್ತಿ ಹಿಡಿಯುವುದು ನಮ್ಮ ಗುರಿ. ಇದರಲ್ಲಿ ಯಾವುದೇ ರೀತಿಯ ರಾಜಕೀಯವೂ ಇಲ್ಲ.
ಬಿ.ರಮಾನಾಥ ರೈ
ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT