ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದುಳಿದವರು ಕೀಳರಿಮೆ ಬಿಡಲಿ’

Last Updated 13 ಡಿಸೆಂಬರ್ 2017, 6:41 IST
ಅಕ್ಷರ ಗಾತ್ರ

ಮಾಗಡಿ: ‘ಎಲ್ಲಾ ಪಕ್ಷಗಳ ರಾಜಕಾರಣಿಗಳು ಹಿಂದುಳಿದವರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡದೆ ಮೊಸಳೆ ಕಣ್ಣೀರು ಸುರಿಸಿದ್ದಾರೆ’ ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಂಸ್ಕೃತಿಕ ವಿಚಾರ ವೇದಿಕೆಯ ಗೌರವಾಧ್ಯಕ್ಷ ಎ.ಎಚ್‌.ಬಸವರಾಜು ವಿಷಾದಿಸಿದರು. ವೇದಿಕೆ ವತಿಯಿಂದ ಮಂಗಳವಾರ ಸಿದ್ದಾರೂಢಾಶ್ರಮದಲ್ಲಿ ನಡೆದ 24 ಸಮುದಾಯಗಳ ಪ್ರತಿನಿಧಿಗಳ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

‘ಮನೆಯಲ್ಲಿ ಕೈಕಟ್ಟಿಕೊಂಡು ಕುಳಿತರೆ ಯಾರೂ ಮನೆಯ ಬಾಗಿಲಿಗೆ ಬಂದು ಸವಲತ್ತು ನೀಡುವುದಿಲ್ಲ. ಹಿಂದುಳಿದ ಸಮುದಾಯದವರು ಸಂಘಟಿತರಾಗುವ ಮೂಲಕ ಸಮಾಜದ ಮುಖ್ಯ‌ವಾಹಿನಿಗೆ ಬರಬೇಕು. ತಾಲ್ಲೂಕಿನಲ್ಲಿ ಶೇ60 ರಷ್ಟು ಹಿಂದುಳಿದ ವರ್ಗಗಳ 24 ಸಮುದಾಯದವರು ಕಡು ಬಡತನದಲ್ಲಿ ಜೀವಿಸುತ್ತಿದ್ದಾರೆ. ಸಂಘಟನೆ ಕೊರತೆಯಿಂದ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ’ ಎಂದರು.

ಮಾಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎನ್.ಮಂಜುನಾಥ್ ಮಾತ ನಾಡಿ, ಹಿಂದುಳಿದ ಸಮುದಾಯಗಳಿಗೆ ಸರ್ಕಾರಿ ಸವಲತ್ತು ಒದಗಿಸುತ್ತಿದ್ದರೂ ಈ ಬಗ್ಗೆ ಸಮುದಾಯದವರಿಗೆ ಮಾಹಿತಿ ಇಲ್ಲ. ಹಿಂದುಳಿದವರು ಎಂಬ ಕೀಳರಿಮೆ ಹೆಚ್ಚಾಗಿ ಇರುವುದರಿಂದ ನಿವೇಶನ ಪಡೆಯಲು ಕೂಡ ಬಹಳಷ್ಟು ಮಂದಿ ಇನ್ನೂ ಸಹ ಅರ್ಜಿ ಸಲ್ಲಿಸಿಲ್ಲ ಎಂದರು.

ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಸಮುದಾಯ ಭವನ ನಿರ್ಮಿಸಿ ಕೊಳ್ಳಲು ನಿವೇಶನ ಹಾಗೂ ಸಮುದಾಯದವರಿಗೆ ₹ 25 ಲಕ್ಷ ಅನುದಾನ ನೀಡಿದ್ದಾರೆ. ಅವರಿಗೆ ಹಿಂದುಳಿದ ಸಮುದಾಯಗಳ ವೇದಿಕೆಯಿಂದ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.

ವೇದಿಕೆಯ ಅಧ್ಯಕ್ಷ ಪಿ.ವಿ.ಸೀತಾರಾಂ ಮಾತನಾಡಿ, ಹಿಂದುಳಿದ ಸಮುದಾಯದವರ ಕುಂದು ಕೊರತೆ ಬಗ್ಗೆ ಅಧಿಕಾರಿಗಳು ಸಭೆ ಕರೆಯದೆ ನಿರ್ಲಕ್ಷಿಸುತ್ತಾರೆ. ಅಲ್ಲದೆ, ಸರ್ಕಾರದಿಂದ ಬರುವ ಸೌಲಭ್ಯ ಬೇಕಾದ ರೀತಿ ಮಾರ್ಪಡಿಸಿಕೊಳ್ಳುವ ಅಧಿಕಾರಿಗಳು ಉಳ್ಳವರಿಗೆ ಸೌಲಭ್ಯ ಸಿಗುವಂತೆ ನೋಡಿಕೊಳ್ಳುವುದರಿಂದ ಹಿಂದುಳಿದ ಸಮುದಾಯದ ಅಭಿವೃದ್ಧಿ ಇಂದಿಗೂ ಸಾಧ್ಯವಾಗುತ್ತಿಲ್ಲ. ಹಿಂದುಳಿದ ಸಮುದಾ ಯದವರು ಸಂಘಟಿತರಾಗುವ ಮೂಲಕ ಎಲ್ಲಾ ಸಮುದಾಯದ ಬೆಳವಣಿಗೆಗೆ ಜೊತೆ ಜೊತೆಯಾಗಿ ಸಹಕರಿಸಬೇಕು. ಪಕ್ಷಾತೀತವಾಗಿ, ವಿದ್ಯಾರ್ಥಿ, ಮಹಿಳಾ, ಯುವಕರ ಘಟಕಗಳನ್ನು ಪ್ರಾರಂಭಿಸುವ ಮೂಲಕ ಸಂಘಟನೆ ಮಾಡುವುದಾಗಿ ತಿಳಿಸಿದರು.

ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ. ಗೋಪಾಲ್ ಮಾತನಾಡಿ,  ಹಿಂದುಳಿದ ಸಮುದಾ ಯಗಳಿಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ.  ಸರ್ಕಾರದ ರೂಪಿಸುವ ಯೋಜನೆ ಒಂದಾದರೆ, ಅಧಿಕಾರಿಗಳು ಅನುಷ್ಠಾನಕ್ಕೆ ತರುವುದು ಮತ್ತೊಂ ದಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಹಿಂದುಳಿದ ಸಮುದಾಯದಲ್ಲಿ ನಾಯಕರ ಕೊರತೆ ಇರುವುದರಿಂದ ಎಲ್ಲ ರಂಗಗಳಲ್ಲಿಯೂ ಮೇಲ್ವರ್ಗದವರ ದರ್ಪ, ದಬ್ಬಾಳಿಕೆಗೆ ಈಡಾಗುತ್ತಿದ್ದಾರೆ. ಸಂಘಟಿತರಾದಾಗ ಮಾತ್ರ ದಬ್ಬಾಳಿಕೆ ತಡೆಯಲು ಸಾಧ್ಯ ಎಂದರು.

ತಿಗಳ ಸಮುದಾಯದ ಯಜಮಾನರಾದ ರಂಗಯ್ಯ, ನಾರಾಯಣಪ್ಪ, ನರಸಿಂಹಮೂರ್ತಿ, ವೇದಿಕೆ ಕಾರ್ಯಾಧ್ಯಕ್ಷ ಎಂ.ಸಿ,ರಾಜಣ್ಣ, ಖಜಾಂಚಿ ಎಂ.ಎನ್‌,ವೇಣುಗೋಪಾಲ್‌, ಕಾನೂನು ಸಲಹೆಗಾರ ರಾಜಯ್ಯ, ಸವಿತಾ ಸಮಾಜದ ಜಿಲ್ಲಾ ಘಟಕದ ಉಪಾಧ್ಯಕ್ಷ ಮುನಿಕೃಷ್ಣ, ತಿಗಳ ಸಮುದಾಯದ ಮುಖಂಡ ರಾಮು, ತಾಲ್ಲೂಕು ಮಡಿವಾಳ ಸಮು ದಾಯದ ಮುಖಂಡರಾದ ಎಂ.ಟಿ.ಶಿವಣ್ಣ, ಟಿ.ಎಂ.ಶ್ರೀನಿವಾಸ್‌, ಯಾದವ ಸಮಾಜದ ಮುಖಂಡ ಮಾರುತಿ ಯಾದವ್‌, ಕಾಡುಗೊಲ್ಲರ ಸಂಘದ ಕರಿಯಪ್ಪ, ಚಿಕ್ಕಣ್ಣ,ಆಲಯ್ಯ, ಬೆಸ್ತರ ಸಂಘದ ಟಿ.ಎಸ್‌.ಗಂಗಯ್ಯ ತಾಲ್ಲೂಕು ಅಂಗನವಾಡಿ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಯಶೋಧಮ್ಮ , ದೊಂಬಿದಾಸರ ಸಂಘದ ಅಧ್ಯಕ್ಷ ಮಾರಪ್ಪ, ದೇವಾಂಗ ಸಂಘದ ಎಸ್‌.ಮಹೇಶ್‌, ಚಂದ್ರಶೇಖರ್‌, ಉಪಾಪತಿ, ಕುರುಹಿನಶೆಟ್ಟಿ ಸಂಘದ ಗಂಗರಾಜು ಮಾತನಾಡಿದರು.

ಕುರುಬರ ಸಂಘದ ಕಾರ್ಯದರ್ಶಿ ಎಚ್‌.ಶಿವಕುಮಾರ್‌, ಬಣಜಿಗರ ಸಂಘದ ನರಸಿಂಹ ಶೆಟ್ಟಿ, ವಿಶ್ವಕರ್ಮ ಸಂಘದ ಮಂಜುನಾಥ್‌, ಬೆಸ್ತರ ಸಂಘದ ಅಧ್ಯಕ್ಷ ಜಯರಾಮು, ಗಾಣಿಗ ಸಮಾಜದ ಶಿವಕುಮಾರ್‌, ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಸುರೇಶ್‌, ಕುರುಬರ ಸಂಘದ ನಿರ್ದೇಶಕ ತೇಜಸ್‌ ಕುಮಾರ್‌, ಪದ್ಮಶಾಲಿ ಸಂಘದ ದಯಾನಂದ್‌, ಆರ್‌.ನಾಗೇಶ್‌, ಭಟರಾಜರು ಸಂಘದ ಲಕ್ಷ್ಮೀಪತಿರಾಜು ಮಾತನಾಡಿದರು.

ಪುರಸಭಾ ಸದಸ್ಯರಾದ ಶಿವಶಂಕರ್‌, ಎಸ್‌.ಮಹದೇವ್‌,ಜಯಲಕ್ಷ್ಮೀ ರೇವಣ್ಣ, ಎಂ.ಬಿ.ಮಹೇಶ್, ಶಿವಕುಮಾರ್‌, ಅಶ್ವಿನಿ ಚಂದ್ರಣ್ಣ, ಹೊಸಪೇಟೆ ಅಶ್ವಥ್‌, ಚನ್ನಕೇಶವ, ರಂಗಪ್ರಕಾಶ್, ಗಂಗಾಧರ್ ಹಾಗೂ ಹಿಂದುಳಿದ ವರ್ಗಗಳ 24 ಸಮುದಾಯಗಳ ಮುಖಂಡರು ಇದ್ದರು.

ಈಡಿಗ ಸಮಾಜದ ಕಾರ್ಯದರ್ಶಿ ಆರ್.ಚಂದ್ರಶೇಖರ್ ಸ್ವಾಗತಿಸಿದರು. ಕುದೂರಿನ ರಮೇಶ್‌ ವಂದಿಸಿದರು. ಅಶ್ವತ್ಥ್ ನಿರೂಪಿಸಿದರು. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಂಸ್ಕೃತಿಕ ವಿಚಾರ ವೇದಿಕೆ ಪದಾಧಿಕಾರಿಗಳು ಸಭೆಯಲ್ಲಿ ಇದ್ದರು.

ಒಡೆದು ಆಳುವ ನೀತಿ

ಮುಖಂಡ ಎ.ಎಚ್‌.ಬಸವರಾಜು ಆಕ್ರೋಶ ವ್ಯಕ್ತಪಡಿಸಿ, ‘ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಸರ್ಕಾರ ಹಲವಾರು ಸವಲತ್ತು ನೀಡುತ್ತಿದ್ದಾರೂ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪದೆ ಸರ್ಕಾರದ ಮುಂದೆ ಭಿಕ್ಷೆ ಬೇಡುವುದು ಇನ್ನೂ ಸಹ ತಪ್ಪಿಲ್ಲ’ ಎಂದರು.

ಮೇಲ್ವರ್ಗದವರು ಹಿಂದುಳಿದವರನ್ನು ಕೇವಲ ಮತ ಬ್ಯಾಂಕ್‌ಗೆ ಮಾತ್ರ ಸೀಮಿತ ಮಾಡಿಕೊಂಡಿದ್ದಾರೆ. ರಾಜಕಾರಣಿಗಳು ಹಿಂದು ಳಿದವರನ್ನು ಒಡೆದು ಆಳುವ ನೀತಿ ಅನುಸರಿಸಿ ಎಲ್ಲಾ ರಂಗದಲ್ಲಿಯೂ ತುಳಿಯಲಾಗುತ್ತಿದೆ ಎಂದರು.

* * 

ಸಮಾಜ ಕಟ್ಟುವಲ್ಲಿ ತಳಸಮುದಾಯದ ಕಸುಬುದಾರರ ಶ್ರಮ ಅನನ್ಯವಾದುದು, ಮಡಿವಾಳ, ಸವಿತಾ ಇತರೆ ಸಮಾಜದ ಸೇವೆಯನ್ನು ಬಳಸಿಕೊಳ್ಳುವ ಮೇಲುವರ್ಗದವರು ಅವರ ಅಭಿವೃದ್ದಿಗೆ ಕಿಂಚಿತ್ತೂ ಗಮನ ಕೊಡಲಿಲ್ಲ
ಎ.ಎಚ್‌.ಬಸವರಾಜು , ವೇದಿಕೆಯ ಗೌರವಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT