ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಂಡರು, ಕಾಮಣ್ಣರ ವಿರುದ್ಧ ಕಠಿಣ ಕ್ರಮ

Last Updated 13 ಡಿಸೆಂಬರ್ 2017, 6:54 IST
ಅಕ್ಷರ ಗಾತ್ರ

ತುಮಕೂರು: ಶಾಲಾ ಮತ್ತು ಕಾಲೇಜು ಆವರಣಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಪುಂಡರ ಹಾವಳಿ ಹೆಚ್ಚಿದೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್‌.ಪಿ) ದಿವ್ಯಾ ವಿ.ಗೋ‍ಪಿನಾಥ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದಾರೆ. ಇದನ್ನು ತಡೆಯಲು ನಗರದ ಕಾಲೇಜುಗಳ ಪ್ರಾಂಶುಪಾಲರನ್ನು ಒಳಗೊಂಡ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಲಾಗಿದೆ ಎಂದರು.

ಚುಡಾಯಿಸುವ ಅಥವಾ ಇತರ ಚಟುವಟಿಕೆಯಲ್ಲಿ ತೊಡಗುವ ಪುಂಡರ ಫೋಟೊ ತೆಗೆದು ವಾಟ್ಸ್‌ಆ್ಯಪ್‌ ಸಂಖ್ಯೆ:  9480802900 ಗೆ ಕಳುಹಿಸಲು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಎಎಸ್‌ಐ ಹಾಗೂ ಮಹಿಳಾ ಸಿಬ್ಬಂದಿ ನೇತೃತ್ವದಲ್ಲಿ ಒಂದು ತಂಡ ರಚಿಸಲಾಗಿದೆ. ಇವರು ಶಾಲೆ ಮತ್ತು ಕಾಲೇಜಿನ ಸುತ್ತ ಬೆಳಿಗ್ಗೆ ಮತ್ತು ಸಂಜೆ ಗಸ್ತು ತಿರುಗುತ್ತಾರೆ. ಇವರೂ ಪುಂಡರ ವಿರುದ್ಧ ಕ್ರಮ ತೆಗೆದುಕೊಳ್ಳುವರು ಎಂದು ತಿಳಿಸಿದರು.

ವಾಹನ ಸವಾರರು ಅಶೋಕ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇಲ್ಲಿ ಪ್ರಿಪೇಯ್ಡ್ ಆಟೊ ನಿಲ್ದಾಣ ಮಾಡಬೇಕು ಎನ್ನುವ ಆಲೋಚನೆ ಇದೆ. ಪರವಾನಗಿ ಇಲ್ಲದೆಯೇ ಕೆಲವರು ಆಟೊ ಓಡಿಸುತ್ತಿದ್ದಾರೆ. ಈ ಎರಡು ವಿಷಯವಾಗಿ ಆರ್‌ಟಿಒ ಅಧಿಕಾರಿಗಳ ಜತೆ ಚರ್ಚಿಸುತ್ತೇವೆ ಎಂದು ಹೇಳಿದರು.

ನಕಲಿ ಬ್ಯಾಡ್ಜ್ ಬಂಧನ: ನಕಲಿ ಬ್ಯಾಡ್ಜ್‌ ಮಾಡಿಕೊಟ್ಟ ಆರೋಪದ ಮೇಲೆ ನಗರದ ಚಿಕ್ಕಪೇಟೆ ನಿವಾಸಿ ಜಗದೀಶ್ ಬಸವಂತಪ್ಪ ಪೂಜಾರ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಆಟೊಗಳ ದಾಖಲಾತಿ ಪರಿಶೀಲಿಸುತ್ತಿದ್ದ ವೇಳೆ ಮೆಳೆಕೋಟೆ ವಾಸಿ ಸಲೀಂ ಪಾಷಾ ಅವರ ಚಾಲನಾ ಪರವಾನಗಿಯಲ್ಲಿ ನಕಲಿ ಬ್ಯಾಡ್ಜ್ ನಂಬರ್ ಹಾಕಿರುವುದು ಕಂಡು ಬಂದಿತು. ಅವರು ಬ್ಯಾಡ್ಜ್ ಮಾಡಿಕೊಟ್ಟವರ ವಿರುದ್ಧ ದೂರು ದಾಖಲಿಸಿದರು. ಆಗ ಆರೋಪಿ ಜಗದೀಶ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು ಎಂದರು.

ಶ್ರೀಕಾಂತ್ ಎಂಬುವವರು ಚಾಲನಾ ಪರವಾನಗಿ ಪತ್ರಗಳನ್ನು ನೀಡುತ್ತಿದ್ದು ಅವರ ಜತೆ ಸೇರಿ ಡಿಎಲ್‌ಗಳ ಮೇಲೆ ಡಿಟಿಪಿ ಮೂಲಕ ನಕಲಿ ಬ್ಯಾಡ್ಜ್ ನಂಬರ್ ಮುದ್ರಿಸಿಕೊಡುತ್ತಿದ್ದಾಗಿ ಆರೋಪಿಯು ಒಪ್ಪಿಕೊಂಡಿದ್ದಾರೆ ಎಂದು ವಿವರಿಸಿದರು.

ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಪಿ.ಗಂಗಲಿಂಗಯ್ಯ, ಕೆ.ಸಿ.ವಿಜಯಕುಮಾರ್, ಆರ್‌.ಪಿ.ಮಂಜುನಾಥ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಇದ್ದರು ಎಂದು ಹೇಳಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್‌ಪಿ ನಾಗರಾಜು ಗೋಷ್ಠಿಯಲ್ಲಿ ಇದ್ದರು.

* * 

ಚುನಾವಣಾ ಸಮಯ ಹತ್ತಿರ ಬರುತ್ತಿದೆ. ಈಗಾಗಲೇ ರೌಡಿ ಪಟ್ಟಿಯಲ್ಲಿ ಇರುವವರ ಮೇಲೆ ಕಟ್ಟುನಿಟ್ಟಿನ ನಿಗಾ ಇಟ್ಟಿದ್ದೇವೆ. ಅಗತ್ಯ ಕ್ರಮಗನ್ನು ತೆಗೆದುಕೊಳ್ಳುತ್ತೇವೆ.
ದಿವ್ಯಾ ಗೋಪಿನಾಥ್, ಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT