ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಕ್ತಿ ಸುರಭಿ’ ಜೈವಿಕ ಇಂಧನ ಸ್ಥಾವರ ಯೋಜನೆ

Last Updated 13 ಡಿಸೆಂಬರ್ 2017, 6:58 IST
ಅಕ್ಷರ ಗಾತ್ರ

ಉಡುಪಿ: ಸುಲಭವಾಗಿ ಅಳವಡಿಸಲು ಹಾಗೂ ಬೇರೊಂದು ಕಡೆಗೆ ತೆಗೆದುಕೊಂಡು ಹೋಗಲು ಅನುಕೂಲಕರವಾಗಿರುವ ‘ಶಕ್ತಿ ಸುರಭಿ’ ಜೈವಿಕ ಇಂಧನ ಸ್ಥಾವರವನ್ನು ಜೈವಿಕ ಇಂಧನ ಬಳಕೆ ಯೋಜನೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪರಿಚಯಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹೇಳಿದರು. ಮಂಗಳವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಮನೆಯಲ್ಲಿ ಉತ್ಪಾದನೆ ಆಗುವ ತ್ಯಾಜ್ಯವನ್ನು ಇದರಲ್ಲಿ ಬಳಸಿ ಕೊಳ್ಳಬಹುದು. ಇದರಿಂದಾಗಿ ಇಂಧನ ಲಭ್ಯವಾಗುತ್ತದೆ ಹಾಗೂ ತ್ಯಾಜ್ಯವನ್ನೂ ವಿಲೇವಾರಿ ಮಾಡಬಹುದಾಗಿದೆ. ಉಭಯ ಜಿಲ್ಲೆಗಳಲ್ಲಿ 200 ಫಲಾನು ಭವಿಗಳಿಗೆ ಇದನ್ನು ನೀಡಲು ಅವಕಾಶ ಇದೆ. ಶೇ 50ರಷ್ಟು ಸಬ್ಸಿಡಿ ಇದೆ. ಜಿಲ್ಲೆಯ ಫಲಾನುಭವಿಗಳ ಪಟ್ಟಿಯನ್ನು ಪಂಚಾಯಿತಿಗಳು ತಯಾರಿಸಬೇಕು ಎಂದು ಸೂಚನೆ ನೀಡಿದರು.

ಬಸವ ವಸತಿ ಯೋಜನೆ ಅಡಿ 2016–17ನೇ ಸಾಲಿನಲ್ಲಿ 2,493 ಗುರಿ ನೀಡಲಾಗಿದೆ. ಅದರಲ್ಲಿ ಈಗಾಗಲೇ 346 ಮನೆಗಳು ಪೂರ್ಣವಾಗಿವೆ. ದೇವರಾಜ ಅರಸು ವಸತಿ ಯೋಜನೆಯಡಿ ಒಟ್ಟು 253 ಮನೆ ನಿರ್ಮಾಣದ ಗುರಿ ಇದ್ದು, 34 ಪೂರ್ಣಗೊಂಡಿವೆ. ಅಂಬೇಡ್ಕರ್ ನಿವಾಸ್ ಯೋಜನೆಯ ಅಡಿ ಕ್ರಮವಾಗಿ 475 ಹಾಗೂ 525 ಗುರಿ ಹೊಂದಿದ್ದು, ಕ್ರಮವಾಗಿ 102 ಮತ್ತು 74 ಮನೆಗಳು ಸಂರ್ಪೂಣಗೊಂಡಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ನೀಡಿದರು.

ಅಂಗನವಾಡಿ ಕಟ್ಟಡಗಳ ಬೇಡಿಕೆ ಹಾಗೂ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಅವರು, ಏಳು ಅಂಗನವಾಡಿಗಳಲ್ಲಿ 5 ಸಂಪೂರ್ಣಗೊಂಡಿದ್ದು, ಉಳಿದ ಎರಡು ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.

ಒಟ್ಟು 116 ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ 43ಕ್ಕೆ ಪಿಒಎಸ್‌ ಯಂತ್ರ ಅಳವಡಿಸಲಾಗಿದೆ. ಖರೀದಿದಾರ ರೈತರ ಜೈವಿಕ ಗುರುತು ನೀಡುವುದು ಕಡ್ಡಾಯ. ಮಾರಾಟಗಾರರಿಗೆ ಈಗಾಗಲೇ ತರಬೇತಿ ನೀಡಲಾಗುತ್ತಿದೆ. ಜನವರಿ 1ರಿಂದ ದೇಶದಾದ್ಯಂತ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಂತೋನಿ ಮರಿಯಾ ಇಮ್ಯಾನುಯಲ್‌ ಹೇಳಿದರು.

ಈ ಸಂಬಂಧ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ಸಬ್ಸಿಡಿಯಲ್ಲಿ ವಿತರಿಸುವ ರಸಗೊಬ್ಬರ ದುರುಪಯೋಗ ತಡೆಗೆ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು. ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಾರ್ಶ್ವನಾಥ್ ಮಾತನಾಡಿ, ಒಖಿ ಚಂಡಮಾರುತರದ ಪರಿಣಾಮ ಜಿಲ್ಲೆಯ ದೋಣಿಗಳು ಸಮುದ್ರಕ್ಕಿಳಿಯದೆ ನಷ್ಟ ಅನುಭವಿಸಿವೆ. ಆದರೆ ಯಾವುದೇ ಜೀವ ಹಾನಿ ಮತ್ತು ಬೋಟ್‌ಗಳಿಗೆ ಹಾನಿಯಾಗಿಲ್ಲ ಎಂದು ಅವರು ಸಭೆಯಲ್ಲಿ ಹೇಳಿದರು.

‘ವಾರಾಹಿ ನೀರು ನೀಡಿ’

ಯಾವುದೇ ಸಬೂಬು ನೀಡದೆ ಕೃಷಿಕರಿಗೆ ವಾರಾಹಿ ನೀರು ನೀಡಿ. ಈ ಸಂಬಂಧ ಕುಂದಾಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರು ತಕ್ಷಣವೇ ಸಭೆ ಕರೆದು ರೈತ ಪರ ಕ್ರಮಗಳನ್ನು ಕೈಗೊಳ್ಳಲು ವಾರಾಹಿ ಎಂಜಿನಿಯರ್‌ಗಳಿಗೆ ಸೂಚನೆ ನೀಡಬೇಕು. ರೈತರಿಗೆ ಸಮರ್ಪಕವಾಗಿ ನೀರು ಲಭ್ಯವಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಹೇಳಿದರು.

* * 

ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹಾಗೂ ಸೇರ್ಪಡೆ ಸಂಬಂಧ ಸಮಗ್ರ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ.
ಶಿವಾನಂದ ಕಾಪಶಿ, ಜಿಪಂ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT