ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಿಸೆಂಬರ್ ಅಂತ್ಯಕ್ಕೆ ಸರ್ಕಾರಕ್ಕೆ ವರದಿ’

Last Updated 13 ಡಿಸೆಂಬರ್ 2017, 8:54 IST
ಅಕ್ಷರ ಗಾತ್ರ

ಕೂಡಲಸಂಗಮ (ಬಾಗಲಕೋಟೆ): ‘ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದಲ್ಲಿ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಏಕರೂಪದ ಬೆಲೆ ನಿಗದಿಪಡಿಸಲು ಸಂತ್ರಸ್ತರ ಅಹವಾಲು ಆಲಿಸಿ ಡಿಸೆಂಬರ್ ಅಂತ್ಯದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಹುನಗುಂದ ತಾಲ್ಲೂಕು ಕೂಡಲಸಂಗಮದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಕೊಪ್ಪಳ ಜಿಲ್ಲೆಗಳ ಸಂತ್ರಸ್ತರ ಅಳಲು ಆಲಿಸಿದ ಸಂಪುಟ ಉಪಸಮಿತಿಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಸಂತ್ರಸ್ತರ ಬೇಡಿಕೆಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸ್ಪಂದಿಸಲು ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಎಲ್ಲಾ ತಾಲ್ಲೂಕುಗಳಿಗೂ ಇನ್ನೊಂದು ವಾರದಲ್ಲಿ ಅಧಿಕಾರಿಗಳ ತಂಡ ಕಳುಹಿಸಲಾಗುವುದು. ಅವರು ಸಂತ್ರಸ್ತರೊಂದಿಗೆ ಸಭೆ ನಡೆಸಿ ಅವರ ಅಳಲು ಆಲಿಸಿ ವರದಿ ನೀಡಲಿದ್ದಾರೆ. ಅಧಿಕಾರಿಗಳ ತಂಡ ಹಾಗೂ ಅವರು ತಾಲ್ಲೂಕು ಕೇಂದ್ರಕ್ಕೆ ಬರುವ ದಿನಾಂಕವನ್ನು ಬುಧವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮಿತಿಯ ಸಭೆಯಲ್ಲಿ ಅಂತಿಮಗೊಳಿಸಲಾಗುವುದು.

ಏಕರೂಪದ ಬೆಲೆ ನಿಗದಿಗೊಳಿಸಿ: ಸಭೆಯಲ್ಲಿ ಪ್ರತ್ಯೇಕವಾಗಿ ಬೇಡಿಕೆ ಮಂಡಿಸಿದ ಸಂತ್ರಸ್ತರ ಹಿತರಕ್ಷಣಾ ಸಮಿತಿಗಳ ಅಧ್ಯಕ್ಷರಾದ ಅಜಯಕುಮಾರ ಸರನಾಯಕ ಹಾಗೂ ಅದೃಶ್ಯಪ್ಪ ದೇಸಾಯಿ, ಎಲ್ಲಾ ಸಂತ್ರಸ್ತರಿಗೂ ಏಕರೂಪದ ದರ ನಿಗದಿಯಾಗಲಿ. ಅದರಂತೆ ಪ್ರತಿ ಎಕರೆ ಒಣ ಭೂಮಿಗೆ ₹30 ಲಕ್ಷ ಹಾಗೂ ನೀರಾವರಿ ಜಮೀನಿಗೆ ₹40 ಲಕ್ಷ ನಿಗದಿಪಡಿಸಲು ಆಗ್ರಹಿದರು.

ಸಂತ್ರಸ್ತರ ಹಿತ ಕಾಯಲು ಈ ಹಿಂದೆ ಜೆ.ಎಚ್.ಪಟೇಲ್ ಹಾಗೂ ಎಸ್‌.ಎಂ.ಕೃಷ್ಣ ಅವಧಿಯಲ್ಲಿ ಕೈಗೊಂಡಿದ್ದ ಕ್ರಮಗಳನ್ನು ಒಳಗೊಂಡ ಸಮಗ್ರ ಭೂಸ್ವಾಧೀನ ಹಾಗೂ ಪುನರ್ವಸತಿ ನೀತಿ ರೂಪಿಸುವಂತೆ ಒತ್ತಾಯಿಸಿದ ಅದೃಶ್ಯಪ್ಪ ದೇಸಾಯಿ, ಜೆ.ಎಚ್.ಪಟೇಲ್ ಸರ್ಕಾರದ ಮಾದರಿಯಲ್ಲಿ ಈಗಲೂ ಪ್ರತ್ಯೇಕ ಬೆಲೆ ನಿಗದಿ ಸಮಿತಿ ರಚಿಸುವಂತೆ ಆಗ್ರಹಿಸಿದರು.

ಪುನರ್ವಸತಿಗೆ ಭೂಮಿಸ್ವಾಧೀನ ವೇಳೆ ಸರ್ಕಾರಿ ಭೂಮಿಗೆ ಮೊದಲು ಆದ್ಯತೆ ನೀಡಿ ಸಾಗುವಳಿ ಭೂಮಿ ಉಳಿಸುವಂತೆ ಮನವಿ ಮಾಡಿದ ಅಜಯಕುಮಾರ ಸರನಾಯಕ, ಪಹಣಿಯಲ್ಲಿ ಭಾಗಾಯತ (ಖುಷ್ಕಿ) ಎಂದು ನಮೂದಾಗಿ ವಾಸ್ತವವಾಗಿ ಅದು ನೀರಾವರಿ ಭೂಮಿಯಾಗಿದ್ದರೆ ಅದಕ್ಕೆ ನೀರಾವರಿಗೆ ಕೊಡುವ ಪರಿಹಾರವನ್ನೇ ವಿತರಿಸುವಂತೆ ಒತ್ತಾಯಿಸಿದರು.

ಮುಳುಗಡೆಯಾಗುವ ಕಟ್ಟಡಗಳ ಮೌಲ್ಯನಿರ್ಧರಣೆ ಮಾಡಲು ಈಗ ಲೋಕೋಪಯೋಗಿ ಇಲಾಖೆಯ ಎಸ್ಆರ್ ದರ ಪರಿಗಣಿಸಲಾಗುತ್ತಿದೆ. ಅದರ ಬದಲು ಮಾರುಕಟ್ಟೆ ಬೆಲೆ ಆಧರಿಸಿ ಪ್ರತ್ಯೇಕ ಮಾನದಂಡ ನಿಗದಿಪಡಿಸುವಂತೆ ಕೋರಿದ ಸರನಾಯಕ, ಬಾಗಲಕೋಟೆ ನಗರವನ್ನು ಪೂರ್ಣಪ್ರಮಾಣದಲ್ಲಿ ಸ್ಥಳಾಂತರಿಸಲು ಮುಂದಿನ 50 ವರ್ಷಗಳ ಬೆಳವಣಿಗೆಯನ್ನಾಧರಿಸಿ ನವನಗರಕ್ಕೆ ಸವಲತ್ತುಗಳನ್ನು ಕಲ್ಪಿಸುವಂತೆ ಹಾಗೂ ಸಂತ್ರಸ್ತರಿಗೆ ಈಗ ಗುಂಟೆಗಳ ಲೆಕ್ಕದಲ್ಲಿ ನೀಡುತ್ತಿರುವ ನಿವೇಶನಗಳ ಅಳತೆಯನ್ನು ದುಪ್ಪಟ್ಟುಗೊಳಿಸುವಂತೆ ಒತ್ತಾಯಿಸಿದರು.

ಹಿಂದೂ ಉತ್ತರಾಧಿಕಾರ ಕಾಯ್ದೆ ಅನ್ವಯ ಕುಟುಂಬದ ಎಲ್ಲಾ ಮಕ್ಕಳಿಗೂ ನಿವೇಶನ ಅಭಿವೃದ್ಧಿಪಡಿಸಿಕೊಡಬೇಕು. ಸರ್ಕಾರಿ ನೌಕರಿಯಲ್ಲಿ ಈಗ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಮಾತ್ರ ಇರುವ ಸಂತ್ರಸ್ತರ ಮೀಸಲಾತಿಯನ್ನು ಗೆಜೆಟೆಡ್ ಹುದ್ದೆಗಳಿಗೆ ನೇಮಕಾತಿ ವೇಳೆಯೂ ಪರಿಗಣಿಸುವಂತೆ ಕೋರಿದರು.

ಅಭಿವೃದ್ಧಿಗೆ ಅವಕಾಶ ನೀಡಿ: ಬಸವನಬಾಗೇವಾಡಿ ತಾಲ್ಲೂಕು ವಂದಾಲದ ಪ್ರಮೋದ ಕುಲಕರ್ಣಿ ಮಾತನಾಡಿ,‘ಮೂರನೇ ಹಂತದ ಯೋಜನೆಗಾಗಿ ವಿಜಯಪುರ ಜಿಲ್ಲೆಯಲ್ಲಿ ವಂದಾಲ ಸೇರಿದಂತೆ ಮೂರು ಗ್ರಾಮಗಳನ್ನು ಮೂರು ವರ್ಷಗಳ ಹಿಂದೆ ಆಯ್ಕೆ ಮಾಡಲಾಗಿದೆ. ಆದರೆ ಆಗಿನಿಂದಲೂ ಊರಿನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಮುಳುಗಡೆಯಾಗಲಿರುವ ಗ್ರಾಮ ಎಂಬ ಕಾರಣಕ್ಕೆ ಎಲ್ಲಾ ನಾಗರಿಕ ಸೌಲಭ್ಯಗಳಿಂದಲೂ ವಂಚಿತಗೊಂಡಿದೆ. ಮಳೆಗಾಲದಲ್ಲಿ ಬಿದ್ದ ಮನೆಯನ್ನು ಮತ್ತೆ ಕಟ್ಟಿಕೊಳ್ಳಲು, ಹೊಸ ಕಟ್ಟಡ ಕಟ್ಟಿಕೊಳ್ಳಲು ಅವಕಾಶ ನೀಡುತ್ತಿಲ್ಲ. ಇದರಿಂದ ಸಂತ್ರಸ್ತರ ಬದುಕು ಯಾತನಾಮಯವಾಗಿ ಪರಿಣಮಿಸಿದೆ. ಈ ನಿರ್ಬಂಧಗಳನ್ನು ತೆಗೆಯಿರಿ’ ಎಂದು ಆಗ್ರಹಿಸಿದರು.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ‘ಸಂತ್ರಸ್ತರ ಅಳಲು ಆಲಿಸಿ ಅವರಿಗೆ ಶೀಘ್ರ ನ್ಯಾಯದಾನಕ್ಕಾಗಿ ತಾಲ್ಲೂಕಿಗೊಂದು ನ್ಯಾಯಾಲಯ ಸ್ಥಾಪಿಸುವಂತೆ ಹಾಗೂ ಪರಿಹಾರ ನಿಗದಿ ವಿಚಾರದಲ್ಲಿ ಸರ್ಕಾರ ಎಲ್ಲಾ ರೈತರಿಗೂ ಉಂಡೆಯನ್ನೇ ಕೊಡಲಿ. ಒಬ್ಬರಿಗೆ ಉಂಡೆ ಮತ್ತೊಬ್ಬರಿಗೆ ಕಡುಬು ಕೊಡುವುದು ಸಲ್ಲ’ ಎಂದು ಹೇಳಿದರು. ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ‘ ಸಂತ್ರಸ್ತರ ಪರ ಜನಪ್ರತಿನಿಧಿಗಳು, ರೈತ ಮುಖಂಡರ ವಿಶೇಷ ಸಭೆ ಕರೆದು ಚರ್ಚಿಸುವಂತೆ’ ಕೋರಿದರು.

ಸಭೆಯಲ್ಲಿ ಸಚಿವರಾದ ಎಚ್.ಕೆ.ಪಾಟೀಲ, ಬಸವರಾಜ ರಾಯರಡ್ಡಿ, ಶರಣಪ್ರಕಾಶ ಪಾಟೀಲ, ಉಮಾಶ್ರೀ, ಶಾಸಕರಾದ ಎಚ್.ವೈ.ಮೇಟಿ, ಸಿದ್ದು ನ್ಯಾಮಗೌಡ, ವಿಜಯಾನಂದ ಕಾಶಪ್ಪನವರ, ಶಿವಾನಂದ ಪಾಟೀಲ, ಅಪ್ಪಾಜಿ ನಾಡಗೌಡ, ವಿಧಾನಪರಿಷತ್ ಸದಸ್ಯರಾದ ಎಸ್‌.ಆರ್.ಪಾಟೀಲ, ಹನುಮಂತ ನಿರಾಣಿ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕರಾದ ಎಸ್.ಜಿ.ನಂಜಯ್ಯನಮಠ, ಪಿ.ಎಚ್.ಪೂಜಾರ, ನಾರಾಯಣ ಸಾ ಭಾಂಡಗೆ, ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಪುನರ್‌ವಸತಿ ಆಯುಕ್ತ ಶಿವಯೋಗಿ ಕಳಸದ, ಮಹಾವ್ಯವಸ್ಥಾಪಕ ನಳಿನಿ ಅತುಲ್ ಪಾಲ್ಗೊಂಡಿದ್ದರು.

ಸಂತ್ರಸ್ತನ ಆಕ್ರೋಶ, ಗದ್ದಲ..
ಅಹವಾಲು ಸಲ್ಲಿಕೆ ವೇಳೆ ಹುನಗುಂದ ತಾಲ್ಲೂಕು ಬಿಸನಾಳಕೊಪ್ಪದ ರೈತ ಮಹಾಂತಪ್ಪ ವಾಲೀಕಾರ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ 24 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ತಮ್ಮೊಬ್ಬರದ್ದೇ ಅಷ್ಟೊಂದು ಜಮೀನು ಯಾಕೆ ಸ್ವಾಧೀನಪಡಿಸಿಕೊಂಡಿದ್ದೀರಿ. ಊರಿನಲ್ಲಿ ಬೇರೆಯವರ ಜಮೀನು ಇರಲಿಲ್ಲವೇ ಎಂದು ಏರಿದನಿಯಲ್ಲಿ ಪ್ರಶ್ನಿಸಿದ ಅವರು, ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಈ ವೇಳೆ ಸಭಾಂಗಣದಲ್ಲಿ ಗದ್ದಲ ಕೂಡ ಉಂಟಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ವೇದಿಕೆಯಲ್ಲಿ ಮಂಗ್ಯಾನಾಟ; ಸಭೆಯ ನಡುವೆ ಮುಖ್ಯವೇದಿಕೆಗೆ ಲಗ್ಗೆ ಇಟ್ಟ ಎರಡು ಮಂಗಗಳು ಅಲ್ಲಿ ಟೇಬಲ್‌ ಮೇಲೆ ಅತಿಥಿಗಳಿಗೆ ಇಡಲಾಗಿದ್ದ ಬಿಸ್ಕತ್ತು, ಚಿಪ್ಸ್ ಹಾಗೂ ಗೋಡಂಬಿ ಕೊಂಡೊಯ್ದವು. ವೇದಿಕೆಯ ಮೇಲೆ ಅತ್ತಿಂದಿತ್ತ ಅಡ್ಡಾಡಿ ನೆರೆದವರಿಗೆ ಮನರಂಜನೆ ಒದಗಿಸಿದವು. ಪೊಲೀಸರು ಲಾಠಿ ತೋರಿಸಿದರೂ ಅವು ಸೊಪ್ಪು ಹಾಕಲಿಲ್ಲ. ಸ್ವತಃ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಮಂಗನಿಗೆ ಚಿಪ್ಸ್ ಕೊಟ್ಟು ಸಮಾಧಾನಪಡಿಸಿ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT