ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26 ಟನ್‌ ಅನ್ಯಭಾಗ್ಯ ಯೋಜನೆ ಅಕ್ಕಿ ವಶ

Last Updated 13 ಡಿಸೆಂಬರ್ 2017, 9:13 IST
ಅಕ್ಷರ ಗಾತ್ರ

ಕುಷ್ಟಗಿ: ಅನ್ನಭಾಗ್ಯ ಪಡಿತರ ಯೋಜನೆಗೆ ಸೇರಿದ ಸುಮಾರು 26 ಟನ್‌ ಅಕ್ಕಿ ಮೂಟೆಗಳನ್ನು ಕೇರಳದ ಕಾಸರಗೋಡಿಗೆ ಸಾಗಣೆ ಮಾಡಲಾಗುತ್ತಿದ್ದ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ. ಕೆಲ ಸಂಘಟನೆ ಪದಾಧಿಕಾರಿಗಳು ಅಕ್ಕಿ ಸಾಗಿಸುತ್ತಿದ್ದ ಲಾರಿ ಪತ್ತೆ ಮಾಡಿ ಕಂದಾಯ ಮತ್ತು ಆಹಾರ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ಎಂ.ಗಂಗಪ್ಪ ಮತ್ತು ಆಹಾರ ಇಲಾಖೆ ಉಪನಿರ್ದೇಶಕಿ ಸಿ.ಡಿ.ಗೀತಾ ಮತ್ತು ಸಿಬ್ಬಂದಿ ಲಾರಿಯಲ್ಲಿನ ಮೂಟೆಗಳಲ್ಲಿದ್ದ ಅಕ್ಕಿ ಅನ್ನಭಾಗ್ಯ ಯೋಜನೆಗೆ ಸೇರಿದ್ದು ಎಂಬುದನ್ನು ಖಚಿತಪಡಿಸಿಕೊಂಡರು. ನಂತರ ಆಹಾರ ಶಿರಸ್ತೆದಾರ ರಾಜು ಪಿರಂಗಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾವರಗೇರಾ ಎಪಿಎಂಸಿ ವ್ಯಾಪಾರಿ ವೀರಭದ್ರಪ್ಪ ನಾಲತ್ವಾಡ ಮಾಲೀಕತ್ವದ ಗುರುಕೃಪಾ ಎಂಟರ್‌ಪ್ರೈಸೆಸ್‌ ಅಂಗಡಿ ಮೇಲೆ ಮತ್ತು ಲಾರಿ ಮಾಲೀಕ ಯಲಬುರ್ಗಾ ತಾಲ್ಲೂಕು ಯೆರೆಹಂಚಿನಾಳ ಗ್ರಾಮದ ಮಹೇಶ ಉಳ್ಳಾಗಡ್ಡಿ, ಚಾಲಕ ರಮೇಶ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಅಕ್ಕಿ ಮೂಟೆಗಳ ಸಹಿತ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.

ನಕಲಿ ಬಿಲ್‌ ಶಂಕೆ: ಲಾರಿ ಚಾಲಕನ ಬಳಿ ಇದ್ದ ಬಿಲ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವು ನಕಲಿ ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. 506 ಬೇರೆ ಚೀಲಗಳಲ್ಲಿ ಅಕ್ಕಿ ಭರ್ತಿಮಾಡಿ ಲಾರಿ ಮೂಲಕ ರಾಯಚೂರು ಜಿಲ್ಲೆ ಮಸ್ಕಿಯಿಂದ ಕಾಸರಗೋಡಿಗೆ ಸಾಗಿಸಲಾಗುತ್ತಿತ್ತು. ಅಕ್ಕಿ ಮೂಟೆಗಳು ಲಾರಿಗೆ ಭರ್ತಿಯಾಗಿದ್ದು ಕೊಪ್ಪಳ ಜಿಲ್ಲೆ ತಾವರಗೇರಾದಲ್ಲಿ. ಬಿಲ್‌ಗಳ ಮೇಲೆ ಹಳೆಯ ಟಿನ್‌ ಸಂಖ್ಯೆ ಇದ್ದರೆ ಜಿಎಸ್‌ಟಿ ನಮೂದಿಸಿಲ್ಲ. ಬಿಲ್‌ಗಳ ಮೇಲೆ ಹಾಕಲಾಗಿರುವ ಎಪಿಎಂಸಿಯ ಮೊಹರು ನಕಲಿಯಾಗಿರುವ ಸಾಧ್ಯತೆ ಇದೆ, ಈ ಬಗ್ಗೆ ಪರಿಶೀಲಿಸುವುದಾಗಿ ಸಮಿತಿ ಕಾರ್ಯದರ್ಶಿ ಮರಿಬಸಪ್ಪ ಸಜ್ಜನ ತಿಳಿಸಿದರು.

ರಾಜಕೀಯ ಒತ್ತಡ: ಅಕ್ಕಿ ಲಾರಿ ವಶಕ್ಕೆ ಪಡೆಯುತ್ತಿದ್ದಂತೆ ಪೊಲೀಸ್‌ ಠಾಣೆಯ ಬಳಿ ಜಮಾಯಿಸಿದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಪ್ರಕರಣ ದಾಖಲಿಸಿದಂತೆ ಪೊಲೀಸರ ಮೇಲೆ ಒತ್ತಡ ಹೇರಲು ಯತ್ನಿಸಿದರೆ  ಬಿಜೆಪಿ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಯಿತು. ತಹಶೀಲ್ದಾರ್‌ಗೆ ಲಿಖಿತ ಮನವಿ ಸಲ್ಲಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಳ್ಳಸಾಗಣೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.

‘ಅನ್ನಭಾಗ್ಯ’ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು ನಾಳೆ (ಡಿ.14) ಮುಖ್ಯಮಂತ್ರಿ ಪಟ್ಟಣಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲೇ ಈ ಪ್ರಕರಣ ಬೆಳಕಿಗೆ ಬಂದಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

* * 

ಈಗ ಪತ್ತೆಯಾಗಿರುವ ಅಕ್ಕಿ ಪಡಿತರ ಯೋಜನೆಯದ್ದು, ಗೋದಾಮುಗಳಲ್ಲಿ ಅಕ್ರಮ ದಾಸ್ತಾನು ಇರುವ ಸಾಧ್ಯತೆಯಿದ್ದು ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ.
ಸಿ.ಡಿ.ಗೀತಾ
ಆಹಾರ ಇಲಾಖೆ ಉಪನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT