ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಗತವಾಗದ ಕರಕುಚ್ಚಿ ಯೋಜನೆ!

Last Updated 13 ಡಿಸೆಂಬರ್ 2017, 9:44 IST
ಅಕ್ಷರ ಗಾತ್ರ

ದಾದಾಪೀರ್ ತರೀಕೆರೆ

ತರೀಕೆರೆ: ಫ್ಲೋರೆಡ್‌ಯುಕ್ತ ನೀರಿನ ಬದಲಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ರಾಜ್ಯ ಸರ್ಕಾರ ರೂಪಿಸಿದ್ದ ರಾಜೀವ ಗಾಂಧಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಒಂದಾಗಿರುವ ಕರಕುಚ್ಚಿ ಯೋಜನೆಯು ದಶಕಗಳಾದರೂ ಕಾರ್ಯಗತವಾಗದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2008ರಲ್ಲಿ ರೂಪುಗೊಂಡ ಈ ಯೋಜನೆಯಲ್ಲಿ ಕರಕುಚ್ಚಿ, ಹಲಸೂರು, ಕೆಂಚಿಕೊಪ್ಪ, ಮುಡುಗೋಡು, ಬರಗೇನಹಳ್ಳಿ, ಬಾವಿಕೆರೆ ಹಾಗೂ ಸಿದ್ದರಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಈ ಯೋಜನೆ ವ್ಯಾಪ್ತಿಗೆ ಸರ್ಕಾರ ಸೇರಿಸಿ, ಅಂದಾಜು ವೆಚ್ಚ ₹ 5.15 ಕೋಟಿ ಅನುದಾನ ನಿಗದಿ ಮಾಡಿತ್ತು. ತದನಂತರ ಹೆಚ್ಚುವರಿಯಾಗಿ ಈ ಯೋಜನೆಗೆ ಒಟ್ಟು ಸುಮಾರು ₹ 7ಕೋಟಿ ನೀಡಿದೆ.

ಯೋಜನೆ ಪೂರ್ಣ ಕಾರ್ಯಗತವಾಗಿಲ್ಲ ಎಂದು ಆರೋಪಿಸಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆಯು ಗುತ್ತಿಗೆದಾರನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿತ್ತಲ್ಲದೇ ಅಂತಿಮ ಬಿಲ್‌ ಪಾವತಿಸಿರಲಿಲ್ಲ. ಇದನ್ನು ಆಕ್ಷೇಪಿಸಿ ಗುತ್ತಿಗೆದಾರ ಕಾಮಗಾರಿ ಪೂರ್ಣಗೊಂಡಿದೆ ಎಂದು ವಾದಿಸಿದ್ದರಿಂದ ಎರಡು ಕಡೆಯಿಂದಲೂ ಪ್ರಕರಣವು ಹೈಕೋರ್ಟ್ ಅಂಗಳದಲ್ಲಿದೆ.

ಯೋಜನೆಯ ಸ್ವರೂಪ: ಗುರುತ್ವಾಚಲನೆ ಮೂಲಕ ನೀರು ಸರಬರಾಜು ಮಾಡುವ ಈ ಯೋಜನೆಗೆ ಮೊದಲ ಹಂತವಾಗಿ ನೀರು ಸಂಗ್ರಹಕ್ಕಾಗಿ ಬಾವಿಕೆರೆಯಲ್ಲಿ 1ಲಕ್ಷ ಲೀ. ನೀರು ಸಂಗ್ರಹ ಸಾಮರ್ಥ್ಯವುಳ್ಳ ಒಂದು ಓವರ್ ಹೆಡ್ ಟ್ಯಾಂಕ್‌ನ ಜತೆ 50 ಸಾವಿರ ಲೀ. ನೀರು ಸಂಗ್ರಹ ಸಾಮರ್ಥ್ಯವುಳ್ಳ ತಲಾ 8 ಹಳೆಯ ಹಾಗೂ ಹೊಸ ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಭದ್ರಾ ಬಲದಂಡೆಯ ನೀರನ್ನು ಕರಕುಚ್ಚಿ ಬಳಿಯ ಸೊಪ್ಪಿನಮಟ್ಟಿ ಗುಡ್ಡದಲ್ಲಿ ನಿರ್ಮಿಸಿರುವ 5ಲಕ್ಷ ಲೀ. ಸಂಗ್ರಹ ಸಾಮರ್ಥ್ಯದ ಸಂಗ್ರಹಗಾರಕ್ಕೆ ತುಂಬಿಸಲು 50 ಎಚ್.ಪಿ.ಮೋಟರ್‌ಗಳನ್ನು ಅಳವಡಿಸಲಾಗಿದೆ.

ಅದೇ ರೀತಿ ಕರಕುಚ್ಚಿ ಎ ಕಾಲೋನಿಯಲ್ಲಿ ಎರಡು ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿಂದ ನೀರು ಪೂರೈಸಲು ಸಿದ್ದೇಗೌಡ ಸರ್ಕಲ್‌ನಲ್ಲಿ, ಹಲಸೂರು, ಕೆಸರುಗೊಪ್ಪ, ಕೆಂಚಿಕೊಪ್ಪ, ಮಾಳಿಕೊಪ್ಪದಲ್ಲಿ ತಲಾ ಒಂದು ಓವರ್‌ಹೆಡ್ ಟ್ಯಾಂಕ್‌ಗೆ ನೀರು ತುಂಬಿಸಲು ಪೈಪ್‌ಲೈನ್ ಅಳವಡಿಸಲಾಗಿದೆ. ಮುಡುಗೋಡಿನಲ್ಲಿ 3ಲಕ್ಷ ಲೀ. ಸಂಗ್ರಹ ಸಾಮರ್ಥ್ಯದ ಬೂಸ್ಟರ್‌ ಸಂಪ್ ನಿರ್ಮಿಸಲಾಗಿದ್ದು, ಅಲ್ಲಿಂದ ಬಾವಿಕೆರೆಯ ಎರಡು ಓವರ್‌ ಹೆಡ್ ಟ್ಯಾಂಕ್‌ಗಳಿಗೆ ನೀರು ತುಂಬಿಸಬೇಕು. ಕರಕುಚ್ಚಿ ಸಮೀಪದ ಸೋಂಪುರದಲ್ಲಿ ಒಂದು ಬೂಸ್ಟರ್ ಸಂಪ್ ನಿರ್ಮಿಸಲಾಗಿದೆ. ಇಲ್ಲಿಂದ ಬರಗೇನಹಳ್ಳಿ, ದುಗ್ಲಾಪುರ, ಸಿದ್ದರಹಳ್ಳಿಯ ಓವರ್‌ಹೆಡ್ ಟ್ಯಾಂಕ್‌ಗೆ ಗ್ರಾವೀಟಿ ಫ್ಲೋ ಮೂಲಕವೇ ನೀರು ತುಂಬಿಸುವುದು ಯೋಜನೆಯ ಉದ್ದೇಶವಾಗಿದೆ.

ಯೋಜನೆ ಕಾರ್ಯಗತವಾಗಲೂ ಸಂಪೂರ್ಣ ವಿದ್ಯುತ್ ಶಕ್ತಿಯನ್ನು ಅವಲಂಬಿಸಿದ್ದು, ದಿನದ 24 ಗಂಟೆಯೂ 11 ಕಿ.ಲೋ ವ್ಯಾಟ್ ವಿದ್ಯುತ್ ಬೇಕಾಗುತ್ತದೆ. ಮೆಸ್ಕಾಂ ಯೋಜನೆಗಾಗಿ ಹೆಚ್ಚುವರಿ ಲೈನ್ ಮಂಜೂರು ಮಾಡಿತ್ತು. ಯೋಜನೆಗೆ ಬಳಕೆಯಾಗುವ ವಿದ್ಯುತ್ ಶುಲ್ಕವನ್ನು ಆಯಾ ಗ್ರಾಮ ಪಂಚಾಯಿತಿಗಳೇ ಭರಿಸಬೇಕಾಗಿರುವುದರಿಂದ ಯೋಜನೆಯನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆಯಾಗಿದೆ.

ಯೋಜನೆ ಅವೈಜ್ಞಾನಿಕ: ರೈತರ ಆರೋಪ

ಯೋಜನೆಗಾಗಿ ಜಾಕ್‍ವೆಲ್ ನಿರ್ಮಿಸಿರುವ ಸೊಪ್ಪಿನಮಟ್ಟಿ ಪ್ರದೇಶವು ಭೂಮಟ್ಟದಿಂದ ಸುಮಾರು 500 ಅಡಿಗಿಂತ ಎತ್ತರದಲ್ಲಿದೆ. ಟ್ಯಾಂಕ್‌ಗಳನ್ನು ನಿರ್ಮಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿದ ನಂತರ ಪೈಪ್‌ಲೈನ್ ಅಳವಡಿಸಬೇಕಿತ್ತು. ಆದರೆ, ಯೋಜನೆಯ ಕಾಮಗಾರಿ ಆರಂಭವಾದ ತಕ್ಷಣವೇ ಭೂಮಿಯೊಳಗೆ ಪೈಪ್‌ಲೈನ್ ಅಳವಡಿಸಲಾಗಿದೆ. ಹೀಗಾಗಿ ಪೈಪ್‌ಗಳು ಒಡೆದು ನೀರು ಸೋರಿವೆ. ಟ್ಯಾಂಕ್‌ಗಳಿಗೆ ಕಬ್ಬಿಣದ ಬದಲು ಎರಕದ ಪೈಪ್‌ಗಳನ್ನು ಅಳವಡಿಸಲಾಗಿದೆ ಎಂಬುದು ಈ ಭಾಗದ ರೈತರ ಆರೋಪವಾಗಿದೆ. ಪ್ರಕರಣ ಕೋರ್ಟ್‌ನಲ್ಲಿದೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಉತ್ತರಿಸಲು ಹಿಂದೇಟು ಹಾಕುತ್ತಾರೆ.

* * 

ಯೋಜನೆ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದು, ಕಾಮಗಾರಿ ಕುರಿತ ವರದಿಯನ್ನು ನೀಡಲಾಗಿದೆ. ಮತ್ತೆ ಟೆಂಡರ್ ಕರೆಯುವಂತೆ ಒತ್ತಾಯಿಸಲಾಗಿದೆ.
ಜಿ.ಎಚ್.ಶ್ರೀನಿವಾಸ್
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT