ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದುರ್ಗೋತ್ಸವಕ್ಕಿಂತ ದುರ್ಗದ ರಸ್ತೆಗಳು ಅಭಿವೃದ್ಧಿಯಾಗಲಿ’

Last Updated 13 ಡಿಸೆಂಬರ್ 2017, 9:56 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ದುರ್ಗೋತ್ಸವ ಆಚರಣೆಗಿಂತ ಮೊದಲು ದುರ್ಗದ ರಸ್ತೆ ಕಾಮಗಾರಿಗಳು ಪ್ರಾರಂಭವಾಗಿ ಅಭಿವೃದ್ಧಿಯಾಗಬೇಕು’ ಎಂದು ಒತ್ತಾಯಿಸಿ ವಿವಿಧ ಸಂಘ, ಸಂಸ್ಥೆಗಳ ಮುಖಂಡರು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಮುಖಂಡ ಲೀಲಾಧರ್ ಠಾಕೂರ್ ಮಾತನಾಡಿ, ‘ಶಾಲೆಗೆ ಹೋಗುವವರು, ಪಾದಚರಿಗಳು, ವಯೋ ವೃದ್ಧರು ರಸ್ತೆಗಳಲ್ಲಿ ದಿನನಿತ್ಯ ನೆಮ್ಮದಿಯಿಂದ ಓಡಾಡುವ ಪರಿಸ್ಥಿತಿ ನಗರದಲ್ಲಿ ಖಂಡಿತ ಇಲ್ಲ. ಸಿಕ್ಕಾಪಟ್ಟೆ ದೂಳು. ಇದರಿಂದಾಗಿ ರೋಗ ರುಜಿನಗಳಿಗೆ ಜನ ತುತ್ತಾಗುತ್ತಿದ್ದಾರೆ’ ಎಂದು ದೂರಿದರು.

ಸ್ಥಳೀಯ ಶಾಸಕರು ಹೋರಾಟ ಮಾಡಿ ಅನುದಾನ ತಂದರೂ ಇಲ್ಲಿನ ರಾಜಕೀಯ ವ್ಯವಸ್ಥೆಯಿಂದ ರಸ್ತೆ, ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಇದನ್ನು ಅರಿಯದ ಸಾರ್ವಜನಿಕರು ಶಾಸಕರನ್ನು ದೂಷಿಸುತ್ತಾರೆ. ಇದು ಉತ್ತಮ ಬೆಳವಣಿಗೆ ಅಲ್ಲ. ಇಂತಹ ಪರಿಸ್ಥಿತಿಯಲ್ಲಿ ದುರ್ಗೋತ್ಸವದ ಅಗತ್ಯವಿಲ್ಲ ಎಂದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ‘ಚಿತ್ರದುರ್ಗ ಉತ್ಸವಕ್ಕಿಂತ ಮುನ್ನ ನಗರೋತ್ಥಾನ ಯೋಜನೆಯ ಬಾಕಿ ಮತ್ತು ಹಾಲಿ ಕಾಮಗಾರಿ ಪ್ರಾರಂಭಿಸಬೇಕು ಎಂಬುದು ಜನರ ಒತ್ತಾಯವಾಗಿದೆ. ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ನೂತನ ರಸ್ತೆಗಳ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಆಗ್ರಹಿಸಿದರು.

‘ಬೆಳಿಗ್ಗೆಯಿಂದಲೇ ನಮ್ಮ ಮನೆಯ ಹತ್ತಿರ ಅನೇಕ ಸಂಘ, ಸಂಸ್ಥೆಗಳ ಮುಖಂಡರು ಕೂತಿದ್ದರು. ಊರಲ್ಲಿ ಏನಿದೆ ಅಂತ ದುರ್ಗೋತ್ಸವ ಮಾಡಬೇಕು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ. ಈಚೆಗೆ ನಡೆದ ಸಭೆಯಲ್ಲೂ ಕೂಡ ಮೊಟ್ಟಮೊದಲು ರಸ್ತೆ ಅಭಿವೃದ್ಧಿ ಆಗಲಿ ಎಂಬ ವಿಚಾರವನ್ನು ನಾನೂ ಸಚಿವರ ಮುಂದೆಯೇ ಪ್ರಸ್ತಾಪಿಸಿದ್ದೇನೆ’ ಎಂದರು.

‘ಸಾರ್ವಜನಿಕರ ಅಭಿಪ್ರಾಯ ಪಡೆಯಿರಿ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಾನೂ ಮಾತನಾಡುತ್ತೇನೆ. ನೀವು ಜಿಲ್ಲೆಯ ಪ್ರತಿನಿಧಿಯಾಗಿ ಜಿಲ್ಲಾಧಿಕಾರಿ ಆಗಿದ್ದೀರಿ. ಉತ್ಸವಕ್ಕೂ ಮುನ್ನ ನೂತನ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗಲಿ ಎಂಬುದು ಅನೇಕರ ಒತ್ತಾಯವಾಗಿದೆ’ ಎಂದು ಡಿಸಿಗೆ ತಿಳಿಸಿದರು.

ನಗರೋತ್ಥಾನ ಎರಡರಲ್ಲಿ ಆರೇಳು ರಸ್ತೆ ಕಾಮಗಾರಿಗಳು ಬಾಕಿ ಇವೆ. ಒಂದೂವರೆ ವರ್ಷದ ಕೆಳಗೆ ನಾನೂ ಕಳಪೆ ಕಾಮಗಾರಿ ಆಗಿರುವ ಕುರಿತು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೆ. ಆ ರಸ್ತೆಗಳ ಕಾಮಗಾರಿ ಹೊಸದಾಗಿ ಆಗಬೇಕಿದೆ. ಒಂದೊಂದು ರಸ್ತೆ ₹ 1 ಕೋಟಿ ಮೊತ್ತದ ಕಾಮಗಾರಿಯಾಗಿದ್ದು, ಕೂಡಲೇ ಪ್ರಾರಂಭಿಸಿ ಎಂದು ಒತ್ತಾಯಿಸಿದರು.

ನಗರೋತ್ಥಾನ ಮೂರರ ಕಾಮಗಾರಿ ಪ್ರಾರಂಭಕ್ಕೆ ಅನುಮತಿ ನೀಡಬಹುದಲ್ಲ ಎಂದು ಶಾಸಕರು ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರು. ಟೆಂಡರ್ ಪ್ರಕ್ರಿಯೆಯಲ್ಲಿ ಒಂದೇ ಕಂಪನಿ ಬಂದಿರುವ ಕಾರಣ ಪ್ರಾರಂಭಿಸಿಲ್ಲ. ಇನ್ನೂ 15 ದಿನದೊಳಗೆ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಡಿಸಿ ಭರವಸೆ ನೀಡಿದರು. ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರಾದ ಅರುಣ್‌ಕುಮಾರ್, ಡಾ.ಯೋಗೇಂದ್ರ, ಜಗದೀಶ್, ದೀಪಕ್ ಇನ್ನೂ ಅನೇಕ ಪದಾಧಿಕಾರಿಗಳೂ ಇದ್ದರು.

‘ದುರ್ಗೋತ್ಸವಕ್ಕೆ ಕೆಲವರ ವಿರೋಧ’
‘ಚಿತ್ರದುರ್ಗ ಬಂದ್ ಮಾಡಿ ದುರ್ಗೋತ್ಸವ ವಿರೋಧಿಸೋಣ ಎಂದು ಕೆಲವರು ಒತ್ತಾಯಿಸಿದರು. ಆದರೆ, ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳೋಣ ಎಂಬುದಾಗಿ ಮನವೊಲಿಸಿ ನಿಮ್ಮ ಹತ್ತಿರ ಕರೆದುಕೊಂಡು ಬಂದಿದ್ದೇನೆ.

ಇದಕ್ಕೆ ನೀವೇನು ಹೇಳುತ್ತೀರಿ’ ಎಂದು ಶಾಸಕರು ಪ್ರಶ್ನಿಸಿದಾಗ, ‘ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ನಡೆದುಕೊಳ್ಳಲಿದೆ’ ಎಂದು ಡಿ.ಸಿ ಪ್ರತಿಕ್ರಿಯಿಸಿದರು. ಸಾರ್ವಜನಿಕರು ಬೇಡ ಎಂದರೆ ತಮ್ಮ ಅಭಿಪ್ರಾಯವನ್ನು ಮನವಿ ಪತ್ರದ ಮೂಲಕ ಸಲ್ಲಿಸಿದರೆ, ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

* * 

ದುರ್ಗೋತ್ಸವ ರಾಜಕೀಯ ಪ್ರೇರಿತವಾಗಿದ್ದು, ಚುನಾವಣಾ ಪ್ರಚಾರವಾಗಿ ಇದನ್ನೂ ಬಳಸಿಕೊಳ್ಳಲು ಮುಂದಾಗಿರುವುದು ಮೇಲ್ನೋಟಕ್ಕೆ ಎಲ್ಲರಿಗೂ ಅರ್ಥವಾಗುತ್ತದೆ.
ಜಿ.ಎಚ್.ತಿಪ್ಪಾರೆಡ್ಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT