ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಏಕ ಸಂಸ್ಕೃತಿ ಹೇರಿಕೆ ಸಲ್ಲದು’

Last Updated 13 ಡಿಸೆಂಬರ್ 2017, 10:08 IST
ಅಕ್ಷರ ಗಾತ್ರ

ಧಾರವಾಡ: ‘ವೈವಿಧ್ಯತೆಯಲ್ಲಿ ಏಕತೆ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕ. ಆದರೆ ಹಲವು ಜನಾಂಗ, ಭಾಷೆಗಳನ್ನು ಹೊಂದಿದ ನಮ್ಮ ದೇಶದಲ್ಲಿ ಇತರರ ಮೇಲೆ ಏಕಾಕಾರ ಸಂಸ್ಕೃತಿ ಹೇರುವುದು ಸಲ್ಲದು’ ಲೇಖಕ ಡಾ. ಬಾಳಣ್ಣ ಶೀಗಿಹಳ್ಳಿ ಅಭಿಪ್ರಾಯಪಟ್ಟರು. ಸಮಾನ ಮನಸ್ಕರ ವೇದಿಕೆ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂಸ್ಕೃತಿ ಎನ್ನುವುದು ಜೀವನದ ವಿಧಾನ. ಸಂಸ್ಕೃತಿಯಲ್ಲಿ ವೈವಿಧ್ಯ ಇದ್ದರೂ ಇತರರ ನಡವಳಿಕೆ, ರೂಢಿ, ನಂಬಿಕೆ, ವಿಶ್ವಾಸವನ್ನು ಗೌರವಿಸುವುದಾಗಿದೆ. ಸಾಹಿತ್ಯ ನಮ್ಮ ಜೀವನದ ಪ್ರತಿಬಿಂಬ. ಅದು ಚಲನಶೀಲತೆಯ ಪ್ರಕ್ರಿಯೆ. ಇದನ್ನು ಇಡೀ ಕನ್ನಡ ಸಾಹಿತ್ಯದುದ್ದಕ್ಕೂ ಕಾಣಬಹುದಾಗಿದೆ. ಇತರರ ಭಾಷೆ, ಜೀವನ ಪದ್ಧತಿಯನ್ನು ನಾವು ಪ್ರೀತಿಸಿ ಅದಕ್ಕೆ ಆದ್ಯತೆ ನೀಡಬೇಕಾದ ಅರಿವು ನಮ್ಮಲ್ಲಿರಬೇಕು’ ಎಂದರು.

ಕನ್ನಡ ಪ್ರಾಧ್ಯಾಪಕ ಡಾ. ಸಂಗಮನಾಥ ಲೋಕಾಪೂರ, ‘ಸಂಸ್ಕೃತಿ ಮನುಕುಲದ ಸಂಪ್ರದಾಯಗಳಿಗೆ, ಮನುಷ್ಯನ ಅಂತರಂಗದ ವಿಕಾಸಕ್ಕೆ ಸಂಬಂಧಪಟ್ಟಿದ್ದು. ನುಡಿದಂತೆ ನಡೆಯುವುದೇ ಸಂಸ್ಕೃತಿ. ಬದುಕಿನಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸಹಬಾಳ್ವೆ, ಸಹನೆ, ಅಂತಃಕರಣದಿಂದ ಬದುಕಿ ಇತರರನ್ನು ಬದುಕಿಸುವುದು ಕನ್ನಡ ಸಂಸ್ಕೃತಿಯಾಗಿದೆ. ನಂಬಿಕೆಗಳೂ ಸಂಸ್ಕೃತಿಯ ಭಾಗ. ವ್ಯಕ್ತಿ ಸಂಸ್ಕೃತಿಯ ತಂದೆಯೂ ಹೌದು ಮಗುವೂ ಹೌದು’ ಎಂದರು.

‘ಭಾರತೀಯ ಸಂಸ್ಕೃತಿ ಶ್ರೀಮಂತ ಸಂಸ್ಕೃತಿಯಾಗಲು ಅನ್ಯ ಸಂಸ್ಕೃತಿಯ ಸಮ್ಮಿಳಿತವೂ ಇದೆ. ಸದ್ವಿಚಾರಗಳು ನಮ್ಮ ಸಂಸ್ಕೃತಿಯ ಪ್ರತೀಕ. ಪಶು, ಪಕ್ಷಿಗಳಲ್ಲಿಯೂ ಸಂಸ್ಕೃತಿ, ಕರುಳುಬಳ್ಳಿಯ ಸಂಬಂಧ, ಸಹಬಾಳ್ವೆ, ಒಗ್ಗಟ್ಟನ್ನು ಕಾಣುತ್ತೇವೆ. ಮನುಷ್ಯರಾದ ನಾವು ನಮ್ಮ ಹೃದಯವನ್ನು ಹದಗೊಳಿಸಿಕೊಂಡಾಗ ಸಂಸ್ಕೃತಿಗೆ ಒಂದು ನೆಲೆ ಹಾಗೂ ಬೆಲೆ ಸಿಕ್ಕಂತಾಗುತ್ತದೆ. ಇಂದು ಹುಟ್ಟಿಕೊಂಡ ಸಮಾನ ಮನಸ್ಕರ ವೇದಿಕೆ ‘ಸಮವೇ’ ಸಸಿಯಾಗಿದ್ದು ಮುಂಬರುವ ದಿನಗಳಲ್ಲಿ ಹೆಮ್ಮರವಾಗಿ ಬೆಳೆದು ಕನ್ನಡ ನಾಡಿಗೆ ನೆರಳಂತಾಗುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ವೆಂಕಟೇಶ ಮಾಚಕನೂರ ಮಾತನಾಡಿ, ‘ಕನ್ನಡ ಸಂಸ್ಕೃತಿ ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದ್ದು, ಜಾಗತೀಕರಣದಿಂದ ಕನ್ನಡ ಭಾಷೆಗೆ ಕುತ್ತು ಬಂದಿದ್ದು, ಇಂದು ಕನ್ನಡ ಕಲಿಕೆ ಕ್ಷೀಣವಾಗುತ್ತಿದೆ. ಕನ್ನಡ ಉಳಿಸಿಕೊಳ್ಳುವ ದಿಸೆಯಲ್ಲಿ ಪ್ರಾಥಮಿಕ ಹಂತದಿಂದ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸುವುದಕ್ಕೆ ಸರ್ಕಾರ ಹಾಗೂ ಸಂಘ, ಸಂಸ್ಥೆಗಳು ಕನ್ನಡವನ್ನು ಉಳಿಸಿ, ಬೆಳೆಸುವ ದಿಸೆಯಲ್ಲಿ ದಿಟ್ಟ ಹೆಜ್ಜೆ ಇಡಬೇಕಾಗಿದೆ’ ಎಂದರು.

ಸಮಾನ ಮನಸ್ಕ ವೇದಿಕೆಯ ನಿಂಗಣ್ಣ ಕುಂಟಿ, ಡಾ. ಡಿ.ಎಂ. ಹಿರೇಮಠ, ಡಾ. ಸಂಜೀವ ಕುಲಕರ್ಣಿ, ಶಂಕರ ಹಲಗತ್ತಿ, ಬಸವಪ್ರಭು ಹೊಸಕೇರಿ, ಮಲ್ಲಿಕಾರ್ಜುನ ಎಂ. ಚಿಕ್ಕಮಠ, ವಿ.ಎನ್. ಕೀರ್ತಿವತಿ, ಶ್ರೀಶೈಲ ರಾಚಣ್ಣವರ, ಶಿವಾನಂದ ಭಾವಿಕಟ್ಟಿ, ಗುರು ಹಿರೇಮಠ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT